Thursday, December 01, 2011

ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ, ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..


JP --power of youth--*


ಇನ್ನೂ ಮುಗಿದಿಲ್ಲ ಕಷ್ಟದ ಕಲ್ಲು-ಮುಳ್ಳುಗಳ ಹಾದಿ,
ಎಲ್ಲಿ ನೋಡಿದರೂ ನನ್ನ ಕಡೆಯೇ ನಗುವ ಜನರ ಬೀದಿ..
ಅವರಿಗಿನ್ನೂ ಗೊತ್ತಿದ್ದಂತಿಲ್ಲ ಎಲ್ಲರ ಸಾವು-ನೋವು,
ತಿಳಿಯಲಿಲ್ಲ ಇನ್ನೂ ಎಲ್ಲರ ಬದುಕೂ ಇಷ್ಟಿಷ್ಟು ಬೇವು-ಬೆಲ್ಲ..

ಎಲ್ಲ ಕಡೆಯೂ ಎಲ್ಲರದ್ದೂ ನಾನಾ ವಿಧದ ಕಷ್ಟಗಳದ್ದೇ ಸಾಲು ಸಾಲು ಸಂತೆ,
ಮತ್ತೆ ಅವರಿಗೆ ಗೊತ್ತಿದ್ದಂತಿಲ್ಲ ಕಷ್ಟದ ತೆರೆಗೆ ಪರಿಹಾರ ನೋಟಿನ ಕಂತೆ ಕಂತೆ..
ಎಲ್ಲಿ ನೋಡಿದರಲ್ಲಿ ಅಪಹಾಸ್ಯ, ಕೊಲೆ, ಭ್ರಷ್ಟಾಚಾರ..
ತಿಳಿಯಲಿಲ್ಲ ಇನ್ನೂ ಈಗಾದರೂ ಸ್ವಲ್ಪ  ಕಲಿಯಲು ಶಿಷ್ಟಾಚಾರ..

ಎಲ್ಲ ಕಡೆ ಎಲ್ಲರ ಜೋರಾದ ತೋರ್ಪಡಿಕೆಯ ಭರ್ಜರಿ  ಕಾರು ಬಾರು..
ಜನಸಾಮಾನ್ಯರಿಗೆ ಇದೆಯಲ್ಲ ಮೊದಲಿನ ಹಳೆಯದೇ ''ಕಾರು''-''ಬಾರು''
ಇನ್ನಾದರೂ ನಿಲ್ಲಿಸಿ ದುಡ್ಡಿನ, ಕುಡಿತದ ಆಸೆಯ, ಬಟ್ಟೆಯ ಸಲುವಾಗಿ ವೋಟು,
ತಿಳಿಯಲಿ ಇನ್ನಾದರೂ, ಬರಲಿ ಓದಿದವರ ಹೊಸ ಬುದ್ಧಿವಂತ ತರುಣರ ಕೋಟು...!

Saturday, November 12, 2011

ಅದು ನಿಜವಾಗದಿರಲಿ ಭಗವಂತ...

Jay bhat.

ಬಹಳ ದಿನಗಳಿಂದ ಹಪಹಪಿಸುತ್ತಿದ್ದೆ,
ಅವಳ ಬರುವಿಕೆಗಾಗಿ.,
ಅವಳು ಅಂದು ಬಂದಳು,
ಕಾಣದ ನೆರಳಾಗಿ, ತಾಕದ ಗಾಳಿಯಾಗಿ..

ಮತ್ತೆಲ್ಲೋ ನೋಡುತ್ತಾ ಕುಳಿತಿದ್ದಾಗ,

ಮತ್ತೆ ಬಂದಳು ಕಣ್ಣೀರ ನೆನಪಾಗಿ,
ಎಲ್ಲ ಖುಷಿಯ ಸೊಗಡಾಗಿ, ಮನದ ಹಾಡಾಗಿ..
ನೆನಪಿನಂಗಳದ ಚಿಲುಮೆಯಾಗಿ, ಚೈತನ್ಯವಾಗಿ...

ಇಂದು ಮತ್ತೇಕೋ ನನ್ನಲ್ಲೇ ನೋವು, ಮೌನ,.

ಮತ್ತೆ ಅವಳೇ ಸುಮ್ಮನೇ ನೆನಪಾಗುತ್ತಿದ್ದಾಳೆ...
ನನ್ನ ಕನಸಲ್ಲೂ ಸಹ, ಅದು ನಿಜವಾಗದಿರಲಿ ಭಗವಂತ...
ಕಂಡಿತು ಯಾಕೋ ಭಯದ ನೆರಳು, ಬೇರೆಯವನ ಜೊತೆ ಇಂದೇ ಅವಳ ಮದುವೆಯಂತ...

Friday, September 16, 2011

ನನ್ನಲ್ಲಿ ನಾನಿಲ್ಲದಿದ್ದಾಗ ನೀನಾದೆ ನಾನು, ನೀನೇ ನಾನಾದರೆ ಆಗ ನೀನು ಯಾರು?

JEPEE BHAT.
 ನನ್ನ ಜೀವನದ ಸ್ಪೂರ್ತಿ ನೀನು,
ನನ್ನ ಚೈತನ್ಯದ ಚಿಲುಮೆ ನೀನು,
ನನ್ನ ಮೊಗದ ನಗುವಿನ ನಗು ನೀನು,
ನನ್ನ ಎಲ್ಲ ಭಾವನೆಗಳ ಭಾವಗಳ ಮೆರುಗು ನೀನು..

ನನ್ನ ಖುಷಿಯ ಸಂಕೇತ ನೀನು,
ನನ್ನ ವಿಜಯದ ಸಂಭ್ರಮದ ಭಾಗ ನೀನು,
ನನ್ನ ಜೀವನದ ಜೀವದ ಗೆಳತಿ ನೀನು,
ನನ್ನ ಉಸಿರಾಟದ ಉಸಿರು ನೀನು..

ನನ್ನ ಪ್ರತಿಯೊಂದು ಕಾರ್ಯಕ್ಕೂ ಕಾರಣ ನೀನು,
ನನ್ನ ಏಳಿಗೆಯ ಎತ್ತರದ ಏಣಿ ನೀನು,
ನನ್ನಲ್ಲಿ ನಾನಿಲ್ಲದಿದ್ದಾಗ ನೀನಾದೆ ನಾನು,
ನೀನೇ ನಾನಾದರೆ ಆಗ ನೀನು ಯಾರು?

Wednesday, August 17, 2011

ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ...... ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(

Jepee Bhat..
ಎಷ್ಟು ದೇವರ ನೋಡಿದರೇನು, ಹುಂಡಿಗೆ ಹಾಕಿದರೇನು ಕಂತೆ,
ಯಾರೂ ಕಣ್ಣು ಬಿಟ್ಟಿಲ್ಲ, ಮತ್ತದೇ ಕೆಟ್ಟ ಹಳೆಯ ಚಿಂತೆ,
ಎಲ್ಲ ದಾರಿಯೂ ಎಲ್ಲೆಡೆ ವಿಫಲ....
ನಾನು ಎಲ್ಲಿಯೂ ಆಗುವುದಿಲ್ಲ  ಸಫಲ...

ಎಲ್ಲ ದಾರಿ, ಬಾಗಿಲುಗಳೂ ಮುಚ್ಚಿವೆ..
ನನ್ನ ಕಣ್ಣುಗಳೂ ಸದ್ದಿಲ್ಲದೇ ಮುಚ್ಚಲಿವೆ....
ಆಕಾಶದಲ್ಲಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಿವೆ,
ನನ್ನ ಆತ್ಮ ಶಾಂತಿಯಿಲ್ಲದೇ ತೇಲಿವೆ..

ಎಷ್ಟೆಂದರೂ ಅಷ್ಟೇ, ಹುಟ್ಟಿದರೂ ಸತ್ತರೂ..
ಅತ್ತರೂ ನಕ್ಕರೂ ಬಿದ್ದರೂ ಎದ್ದರೂ.....
ಜೀವನವೇ ಹಾಗೆ, ಬಣ್ಣ ಬಣ್ಣದ ಹಾಳೆ......
ನನಗೆ ಮಾತ್ರ ಎಂದಿಗೂ ಕಪ್ಪು ಬಿಳುಪು ನಾಳೆ!!:(:(

Saturday, August 13, 2011

ಎಂದೋ ಕಂಡ ಈ ಸಿಹಿಯಾದ ಕನಸು, ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

©Jepee Bhat!

ಮೆಲ್ಲ ಮೆಲ್ಲನೆ ಕೈ ಹಿಡಿದು ನಡೆಯುತಿರಲು,
ಅವಳ ಮುಖ ರಾತ್ರಿಯಲ್ಲೂ ಹೊಳೆಯುತ್ತಿತ್ತು.
ಇಬ್ಬರ ಮನಸಲ್ಲೂ ಖುಷಿಯ ಅಲೆ ಎದ್ದಿರಲು,
ಅವಳ ಕೈ ಹಿಡಿದ ನನ್ನ ಕೈ ಸಣ್ಣಗೆ ಹೆದರುತಿತ್ತು.

ಚಳಿಯ ರಾತ್ರಿಯಲೂ ಆ ಚಂದಿರನ ಕೆಳಗೆ,
ಮೈ ಮನವೆಲ್ಲಾ ಅರಳಿ ಕಟ್ಟು ಪಾಡು ಕಡೆಗೆ ಸರಿದಿತ್ತು.
ಹಗಲಿನಲ್ಲಿ ಹಚ್ಹ ಹಸುರಾಗಿ ಕಂಡ ಗಿಡ ಮರಗಳು,
ಕಪ್ಪು ಕಪ್ಪಾಗಿ ತಾವು ಇಲ್ಲವೆಂಬ ಸೂಚನೆ ನೀಡಿತ್ತು.

ಇಷ್ಟಾಗಿ ಮತ್ತೆ ಹಿಂದಿರುಗಿ ಬರಲು,
ಕತ್ತಲು ಸರಿದು ಬೆಳಕು ಹರಿದಿತ್ತು.
ಎಂದೋ ಕಂಡ ಈ ಸಿಹಿಯಾದ ಕನಸು
ನಿನ್ನೆ ರಾತ್ರಿಯೇ ನಿಜವಾಗಲೂ ನನಸಾಗಿತ್ತು:)

Monday, August 01, 2011

ನನ್ನ ಅನಾಮಿಕ!

Jepee Bhat's!
 
ಪ್ರೀತಿಯ ಅನಾಮಿಕ...,
ಯಾರೂ ನನ್ನ ಸನಿಹವಿಲ್ಲದಿದ್ದಾಗ,
ಯಾರೂ ನನ್ನ ನೋಡದಿದ್ದಾಗ,
ಯಾರೂ ನನ್ನ ಜೊತೆ ನಗದಿದ್ದಾಗ,
ಯಾರೂ ನನ್ನ ಜೊತೆ ಮಾತನಾಡದಿದ್ದಾಗ,
ಯಾರೂ ನನ್ನ ಲೆಕ್ಕಿಸದೇ ಇದ್ದಾಗ,
ಯಾರೂ ನನ್ನ ಕಣ್ಣೀರನ್ನು ನೋಡಿಯೂ ಸಹ ನೋಡದಂತಿದ್ದಾಗ,
ಯಾರೂ ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳದಿದ್ದಾಗ,
ಯಾರೂ ನನ್ನ ಅಳುವಿಗೂ ಬೆಲೆ ಕೊಡದಿದ್ದಾಗ,
ಹೃದಯದ ದುಃಖದ ಕಟ್ಟೆ ಒಡೆದು ಅಳುವೇ ಬಂದಂತಾಗಿ ಕೊನೆಗೆ ಅಳುವೂ ಬರದಿದ್ದಾಗ,
ನನ್ನ ಬದುಕಿನ ಪ್ರತೀ ಕ್ಷಣದಲ್ಲೂ, ಪ್ರತೀ ನಿಮಿಷದಲ್ಲೂ, ನನ್ನ ಪ್ರತೀ ದಿನದ ಪ್ರತಿ ಹೃದಯದ ಬಡಿತದಲ್ಲಿ ಕಾಡುವ ನಿನಗೆ..,
ಈ ಕಾಡುವಿಕೆ ದಯವಿಟ್ಟು ಹೀಗೆಯೇ ನನಗೆ ನಿರಂತರವಾಗಿರಲಿ.
ಪ್ರೀತಿಯಿಂದ ನಿನ್ನವನೇ,
-ಜೇಪೀ ಭಟ್!

Tuesday, July 26, 2011

ಬೇಸಿಗೆಯಲ್ಲೂ ಕಾರಣವಿಲ್ಲದೇ ಹೊರಗಡೆ ಮಳೆ ಹೊಯ್ದಿದೆ!

Jepee Bhat's!
 
ಜಗದಲ್ಲಿ ಯಾವುದೂ ಶಾಶ್ವತ ಅಲ್ಲ,
ನನ್ನ ಎಂದಿನ  ಅಳು, ಅಥವಾ ನಿನ್ನ ಸುಖ,
ಅದು ಏನಾಗಬೇಕೋ ಅದ ದೇವರೇ ಬಲ್ಲ,
ನಾನು ಮೌನಿಯಾಗಿರಬೇಕೇ ಈಗಲೂ ಕಂಡು ನಿನ್ನ ದುಃಖ?

ಆಗ ಆಡಿದ ಆಟ, ನೆನಪು ಈಗ ಬರೀ ನೆನಪೇ?
ನೆನಪೇ ನೆನಪಾದಾಗ ನೆನಪೇ ನೆಪವಾಯಿತೇಕೆ?
ನಿನ್ನನೇ ನೆನೆದು ನೆನೆದು ಕಣ್ಣುಗಳು ತೋಯ್ದಿವೆ,
ಬೇಸಿಗೆಯಲ್ಲೂ ಕಾರಣವಿಲ್ಲದೇ ಹೊರಗಡೆ ಮಳೆ ಹೊಯ್ದಿದೆ!

ಇದಕ್ಕೆಲ್ಲಾ ಕಾರಣ ನೀನಾ? ಅವನಾ?? ನಾನಾ???
ಅವನಿಗೆ ನಿನ್ನ ಮೇಲಿದ್ದ ಮೋಹವಾ? ನಿಜವಾದ ಪ್ರೀತಿಯಾ??
ನನಗೆ ಹೀಗಾಗಲು ನೀನೇ ಆದಿನ ಮೂಲನಾದೆ!
ಆದರೆ ಈದಿನ  ನಾನು ನಗುವುದನ್ನು ನೀನೇ ಕಾಣದಾದೆ!!

Sunday, June 19, 2011

ಮತ್ತೆ ಏನನ್ನಾದರೂ ಸಾಧಿಸಲೇ ಬೇಕು ಎಂದಾದರೆ ಉಳಿದ ಸ್ಪೂರ್ತಿಯ ಚಿಲುಮೆಯೇ ಸಾಕಲ್ಲಾ...

Jepee Bhat

ನಾ ಒಂಟಿಯಾಗಿ ಕಾಡಲ್ಲಿ ಪಯಣಿಸುತ್ತಿದ್ದೆ,
ಅದ್ಯಾವಾಗಲೋ ನೀ ಮನದಲ್ಲಿ ಬಂದು ಕೂತಿದ್ದೆ.,
ಹಳೆಯ ನೆನಪುಗಳೆಲ್ಲವೂ ಓಲಾಡಿ ಜೀಕುತಲಿದ್ದವು,
ಮನದ ಮೂಲೆಯಲ್ಲೆಲ್ಲೋ ಖುಷಿಯ ಮೂಟೆ ನಗುತಿದ್ದವು..

ಮೇಲಿಂದ ಬೀಳುತಿದ್ದ ಮಳೆಯ ಹನಿಗಳು ನೆತ್ತಿಯನ್ನು ತಂಪಾಗಿಸಿದ್ದವು,

ಹೃದಯದ ಒಳಗೆ ಬೆಂಕಿಯ ಅಲೆಗಳು ಉರಿಯಲು ಶುರುವಾಗಿದ್ದವು,
ಹಳೆಯ ನೆನಪುಗಳು ಮತ್ತೊಮ್ಮೆ ಕೆಣಕಿ ನನ್ನನ್ನೂ ಅದರಲ್ಲಿ ತಳ್ಳಿದ್ದವು,
ಅದಾಗಲೇ ಮಳೆನೀರಿನ ಜೊತೆ ಜೊತೆಗೇ ಕಣ್ಣ ಹನಿಗಳೂ ಲೀನವಾಗಿದ್ದವು...

ಯೋಚನೆಯ ಹಾದಿಯಲ್ಲಿ ದಾರಿ ಮುಗಿದಿದ್ದೇ ಗೊತ್ತಾಗಲಿಲ್ಲ,

ಜೀವನವು ಏನೂ ಮಾಡದೇ ವ್ಯರ್ಥವಾಗಿ ಕಳೆದು ಹೋಯಿತಲ್ಲಾ,
  ಇನ್ನುಳಿದ ಬಾಳಿಗೆ ಹಳೆಯ ಗತಿಸಿ ಹೋದ ಸಿಹಿ ಕಹಿ ನೆನಪುಗಳೇ ಇವೆಯಲ್ಲಾ,
ಇನ್ನೇನಾದರೂ ಸಾಧಿಸಲೇಬೇಕೆಂದರೆ ಉಳಿದ ಸ್ಪೂರ್ತಿಯ ಚಿಲುಮೆಯೇ ಸಾಕಲ್ಲಾ...

Tuesday, June 14, 2011

''ರಾತ್ರಿ, ಟೆರೆಸ್, ನಾನು ಮತ್ತು ನನ್ನ ಕನಸು'' - 1


ಯಾಕೋ ಗೊತ್ತಿಲ್ಲ, ಬಹಳ ದಿನಗಳಿಂದ ಹೇಳಬೇಕು ಹೇಳಲೇ ಬೇಕು ಅಂದುಕೊಂಡು ಮನದಲ್ಲೇ ಬೆಳೆಯಲು ಬಿಟ್ಟು, ಅದನ್ನು ಅಲ್ಲೇ ಕೂಡಿಹಾಕಿ, ಅದಕ್ಕೆ ಅದರ ಮಿತಿಯನ್ನೂ ಗಡಿಯನ್ನೂ ದಾಟಲು ಬಿಟ್ಟು, ಸಿಹಿಗನಸನ್ನು ಕಾಣಲು ಸ್ವಾತಂತ್ರ್ಯ ಕೊಟ್ಟು, ಅದರದೇ ಆದ ಕಲ್ಪನೆಯ ಮೊಟ್ಟೆಗೆ ಕಾವನ್ನು ಕಾಯಲು ಕೊಟ್ಟು, ಮನಸ್ಸಿನಲ್ಲಿ ಹಾಗೆಯೇ ಬಿಟ್ಟಿದ್ದೆ.... ಇಂದು ಅದನ್ನು ಹೇಳಲೇ ಬೇಕು ಅಂತ ಅನ್ನಿಸದಿದ್ದರೂ ಯಾಕೋ ಅದು ತನ್ನಿಂದ ತಾನೇ ಹೊರಬರುತ್ತಿದೆ.. ಮಾತೇ ಮೌನವಾಗಿ, ಮೌನವೇ ಹಾಡಾಗಿ, ಹಾಡು ಮತ್ತೆ ರಾಗವಾಗಿ ಅದೇ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ, ಕೊಲ್ಲುತ್ತಿದೆ. ನೆನಪಿನಾಳದಲ್ಲಿ ನೂಕಿ, ಜೀಕಿ ಅದರದೇ ಆದ ಖುಷಿಯನ್ನು ನನ್ನ ನೋವಿನಲ್ಲಿ ಕಂಡುಕೊಳ್ಳುವ ಸಮರ್ಥ/ವ್ಯರ್ಥ ಪ್ರಯತ್ನ ಅದರದ್ದಿರಬಹುದೇ ಎಂಬ ಅನುಮಾನ ನನ್ನ ಕಾಡಿದ್ದಂತೂ ಸುಳ್ಳಲ್ಲ.  
Jepee Bhat

ಗೆಳತೀ,
ಇಂದು ನಿನ್ನ ನೆನಪಾಗಿ, ನಿನ್ನದೇ ನೆನಪಿಗೋಸ್ಕರ ಅಲ್ವೇ ಅಲ್ಲ,.. ಯಾವಾಗಲೂ ಟೆರೆಸ್ ಮೇಲೆ ಬರುವ ನನಗೆ ಇಂದು ಯಾಕೋ ನನ್ನ, ನಮ್ಮ ಮನೆಯ ಟೆರೆಸ್ಸೇ ನನಗೆ ವಿಶೇಷವಾಗಿ, ಜಗತ್ತಿನ ಅತೀ ಖುಷಿಯ ಮತ್ತು ಅಷ್ಟೇ ದುಃಖದ ಸ್ಥಳವಾಗಿ ಕಾಣುತ್ತಿದೆ. ಮತ್ತದೇ ಉತ್ತರ ಯಾಕೋ ಗೊತ್ತಿಲ್ಲ. ವಾತಾವರಣವಂತೂ ಅತ್ಯದ್ಭುತ. ಅಲ್ಲಿ ಈಗ ನೀನು ನನ್ನ ಜೊತೆ ಇದ್ದಿದ್ದರೆ ಹೇಗಿರಬಹುದಿತ್ತು ಎಂಬ ಕಲ್ಪನೆಯೇ ಸಾಕು ನನಗೆ ಮತ್ತಷ್ಟು ಸಿಹಿ ಸಿಹಿ ಮೂಟೆಯ ಕನಸನ್ನು ನನ್ನ ಜೀವನವಿಡೀ ಕಲ್ಪಿಸಿಕೊಳ್ಳಲು..
ಬಹುಶಃ ಮಳೆ ಬಂದು ನಿಂತು ಅರ್ಧ-ಮುಕ್ಕಾಲು ಘಂಟೆ ಆಗಿರಬಹುದು.. ಈಗ ಇಲ್ಲಿಯ ವಾತಾವರಣ, ಪರಿಸರ ನೀನು ಇಲ್ಲದೆಯೂ ಸಹ ಘಮ ಘಮಿಸುತ್ತಿದೆ.. ಆಗ ತಾನೇ ಮಳೆಯ ಹನಿಯನ್ನು ಕುಡಿದು ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡ ಭೂಮಿ, ಅದರ ಮಣ್ಣಿನಿಂದ ಹೊರಸೂಸುತ್ತಿರುವ ಆಗ ತಾನೇ ಮಳೆ ನಿಂತು, ಮಳೆ ನೀರನ್ನು ಕುಡಿದ ಮಣ್ಣು ಬೀರುತ್ತಿರುವ ಅದರದೇ ಆದ ವಿಶೇಷವಾದ ಪರಿಮಳ.., ಅದರ ಸವಿಯನ್ನು ಸವಿಯುವುದೇ ಒಂದು ಚಂದ. ಹೂವಿನ ಗಿಡಗಳು, ಯಾವುದೋ ಜಾತಿಯ ಕಾಡು ಮರಗಳು, ತನ್ನೆಲ್ಲ ಭುಜಗಳ ಮೇಲೆ, ನೆತ್ತಿಯ ಮೇಲೆ, ಅಂಗಾಂಗಗಳ ಮೇಲೆ ಆಕಾಶದ ಅಮೃತ ಹನಿಗಳನ್ನು ತುಂಬಿಕೊಂಡು, ಅದರಲ್ಲೇ ನೆನೆಯುತ್ತಾ, ತೇಲಾಡುತ್ತಾ ಆರಾಮಾಗಿ ಆಚೆಯಿಂದ ಈಚೆ, ಈಚೆಯಿಂದ ಮತ್ತೆಲ್ಲೋ ಬಾಗುತ್ತಾ ನಲಿಯುತ್ತಿದ್ದವು. ಆಗ ತಾನೇ ಮೇಯ್ದುಕೊಂಡು ಬಂದ ಹಸುಗಳು, ಅವುಗಳ ಕರುಗಳು ಚಿಗುರಿದ ಹಸಿ ಗರಿಕೆ ಹುಲ್ಲನ್ನು ತಿನ್ನುತ್ತಾ, ಅವನ್ನೇ ಮೆಲುಕು ಹಾಕುತ್ತಾ ಅವರದೇ ಆದ ಖುಷಿಯನ್ನು ಅನುಭವಿಸುತ್ತಿದ್ದವು. ಶಾಲೆ ಬಿಟ್ಟು ಬಂದ ಮಕ್ಕಳು, ಅವರನ್ನು ಕರೆದೊಯ್ಯಲು ಬಂದ ಅವರ ಅಪ್ಪ ಅಮ್ಮಂದಿರು ಎಲ್ಲರೂ ಅಚಾನಕ್ಕಾಗಿ ಬಂದ ಮಳೆಗೆ ಸಿಕ್ಕಿ ತತ್ತರಿಸಿ ಹೋಗಿದ್ದರು.. ಕೆಲವರಂತೂ ಮಳೆಗೆ ಶಪಿಸಿ ಬಯ್ಯುತ್ತಿದ್ದರೆ, ಪ್ರೇಮಿಗಳು ಮಳೆಯಲ್ಲೇ ಮನೆಯ ಹಿಂದಿನ ಪಾರ್ಕಿನಲ್ಲಿ ತಂ ತಮ್ಮ ಕನಸುಗಳನ್ನು ಕಾಣುತ್ತಾ, ಭವಿಷ್ಯದ ಚಿಂತೆಯಲ್ಲಿ ಮತ್ತಿನ್ನೇನೋ ಮಾಡುತ್ತಾ ಮೈ ಮರೆತಿದ್ದರು.. ಆಫೀಸಿನಿಂದ ಆಗಷ್ಟೇ ಹೊರಗೆ ಬಂದ ನೌಕರರು ಹೇಗೆ ಹೋಗುವುದು ಎಂದು ಚಿಂತಿಸುತ್ತಾ ಕೂತಿದ್ದರು. ಕಾರಿದ್ದವರು ಕಾರಿನಲ್ಲಿ, ಬೈಕ್ ಇದ್ದವರು ಅದರಲ್ಲಿ, ಏನೂ ಇಲ್ಲದೇ ಇದ್ದವರು ಎದುರಿನ ಚಹದ ಅಂಗಡಿಯಲ್ಲಿ ಅರ್ಧ ಕಪ್ ಚಹದೊಂದಿಗೆ ಮಳೆರಾಯನನ್ನೇ ನೋಡುತ್ತಾ, ದೊಡ್ಡ ಕಣ್ಣುಗಳನ್ನು ಬಿಡುತ್ತಾ, ಕೈನಲ್ಲಿ ಇರೋ ಬೀಡಿಯ ಹೊಗೆಯನ್ನು ಉಂಗುರ ಉಂಗುರವಾಗಿ ಮಾಡಿ ಬಿಡುತ್ತಾ, ಶೂನ್ಯ ದೃಷ್ಟಿಯಿಂದ ಆಕಾಶವನ್ನೇ ದಿಟ್ಟಿಸುತ್ತಿದ್ದರು. ಇನ್ನು ತರಕಾರಿ ಸಂತೆಯಲ್ಲೋ ಅದರ ಗೌಜು-ಗಲೀಜು-ಗೋಜಲು-ಗದ್ದಲವನ್ನು ಹೇಳದಿದ್ದರೇನೆ ಚಂದ. ಅಲ್ಲಿಯ ಟೆಂಟ್, ಅರ್ಧಂಬರ್ಧ ಹರಿದು ಕಟ್ಟಿರುವ ಗೋಣಿಚೀಲ, ಗೋಣಿಚೀಲವನ್ನೇ ಗೋಡೆಯಾಗಿ ಮಾಡಿಕೊಂಡು, ಅಲ್ಲೇ ಅದರಲ್ಲೇ ಜಾಗವನ್ನು ಭಾಗಮಾಡಿ, ವ್ಯಾಪಾರ ಮಾಡುವ ಬುದ್ಧಿವಂತ ವ್ಯಾಪಾರಸ್ಥರು, ಅಲ್ಲಿಯ ಗಲೀಜು ಕೊಳಕ ನಡುವೆಯೇ ಅರ್ಧ ಕೇಜಿ, ಒಂದೂ ವರೆ ಕೇಜಿ ತೆಗೆದುಕೊಳ್ಳುವ, ಆಗ ತಾನೇ ಮದುವೆಯಾದ ಇನ್ನೂ ತರಕಾರಿ, ಅಡುಗೆ ಎಂದರೇನೆ ಗೊತ್ತಿಲ್ಲದ ಶ್ರೀಮಂತರ ಮನೆಯ ಹೆಣ್ಣು ಮಗಳು, ಯಾವಾಗಲೂ .ಸೀ ಕಾರಿನಲ್ಲಿಯೇ ಓಡಾಡುವ ಅವರು ಮಳೆಗೆ ಗಲೀಜು ನೆಲದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿ......,.,  ಇವೆಲ್ಲವನ್ನೂ ನಿನ್ನೊಟ್ಟಿಗೇ ನಿನ್ನ ಜೊತೆಗೇ ಒಂದೆರಡು ಹೆಜ್ಜೆ ಹಾಕಿ ಕೈ ಕೈ ಹಿಡಿದುಕೊಂಡು ಓಡಾಡಿಕೊಂಡು ನೋಡಿದರೇನೇ ಎಷ್ಟು ಚಂದ ಅಲ್ವೇನೆ...?? ಇವಿಷ್ಟೂ ಮತ್ತಷ್ಟೂ ಆಗಿದ್ದು ಇಳಿ ಸಂಜೆಯ ಹೊತ್ತಲ್ಲಿ ಇವತ್ತಿನ ಮೊದಲನೇ ಮಳೆ ಯಾರಿಗೂ ಹೇಳದೇ ಕೇಳದೇ ಒಂಚೂರೂ ಸೂಚನೆ ಕೊಡದೇ ಬಂದಾಗ.. ಈಗ ಇವತ್ತಿನ ಎರಡನೇ ಮಳೆ ಬಂದು ನಿಂತಿದೆ.. ಆದರೆ ಈಗ ಯಾಕೆ ಇವೆಲ್ಲ ನೆನಪಾಗಿವೆ?, ಮತ್ತೂ ಮತ್ತೂ ನೆನಪಾಗುತ್ತಲೇ ಇವೆ ಎಂಬುದಕ್ಕೆ ಮತ್ತೊಮ್ಮೆ ನನ್ನಲ್ಲಿ ಉತ್ತರವಿಲ್ಲ.. ಮುಗುಳ್ನಗೆಯ ಸಹಿತ ಮೌನದ ಹಾಗೆ ಸುಮ್ಮನೆಯೇ ಉತ್ತರವಿದ್ದಿರಬಹುದು... ನೀನು ನನ್ನ ಜೊತೆ ಈಗ ಇದ್ದಿದ್ದರೆ ಅದಕ್ಕೆ ಮೌನದ ಹೊರತಾಗಿಯೂ ಮಾತಿನ ಉತ್ತರ ಸಿಗುತ್ತಿತ್ತೇನೋ?! ಗೊತ್ತಿಲ್ಲ.. ಇರಲಿ ಬಿಡು..
Jepee Bhat.2

ಇಂದು ನೆನಪಿನಾಳದ ಕಡಲಲ್ಲಿ ಸಾಗುತ್ತಿದ್ದ ದೋಣಿಗೆ ಒಮ್ಮೆಲೇ ಸಮುದ್ರದ ಅಲೆಗಳು ಯಾಕೋ ಎಂದಿನಂತೆ ಸ್ನೇಹಿತರಂತೆ ವರ್ತಿಸುತ್ತಿಲ್ಲ., ಅವುಗಳಿಗೂ ಅವುಗಳ ಮೇಲೆ ದಿನವೂ ಸಾಗುವ ದೋಣಿಯ ಮೇಲೆ ಯಾಕೋ ಮುನಿಸು. ಅಲೆಗಳ ಮುಖಾಂತರ ದೋಣಿಯನ್ನು ನೆಮ್ಮದಿಯಾಗಿ ತೇಲಿಸಲು ಬಿಡದೇ, ಅವುಗಳಿಗೂ ತೊಂದರೆಯನ್ನು ಕೊಡುತ್ತಿವೆ.. ಕಡಲಿನ ದೋಣಿ ಸಾಗದೇ ನಲುಗಿದರೆ ಪಾಪ ಅದರ ಚಾಲಕನ ಪರಿಸ್ಥಿತಿ, ಮನಸ್ಥಿತಿ, ಅವನ ಹೃದಯದ ಭಾವನೆಗಳೂ ನಲುಗಿ, ಅಲುಗಿ ಅತ್ತು ಅತ್ತೂ ಅವೂ ಕಣ್ಣೀರಿನ ಸಾಗರವಾಗಿ ಹರಿದು ಮತ್ತೆ  ಅದೇ ಸಮುದ್ರಕ್ಕೆ ಸೇರಬಹುದೆಂಬ ಘೋರ ಬೆತ್ತಲೆ ಸತ್ಯ ಅವಕ್ಕೆ ಗೊತ್ತಿದ್ದಂತಿಲ್ಲ ಪಾಪ. ಅವಾದರೂ ಏನು ಮಾಡಿಯಾವು ಅಲ್ಲವೇ?
ಶುಭ್ರ ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಮ್ಮೆಲೇ ಮೋಡ ಕವಿದು ನಾನು ನೆಮ್ಮದಿಯಿಂದ ನೋಡುತ್ತಿರುವ ಪೂರ್ಣ ಚಂದಿರನನ್ನು ಮುಚ್ಚಿದಂತೆ, ಆರಾಮವಾಗಿ ಸಾಗುತ್ತಿರುವ ಬಾಳಿನಲ್ಲಿ ಯಾರೋ ಒಮ್ಮೆಲೇ ಪ್ರವೇಶ ಮಾಡಿ ಇಡೀ ಬಾಳನ್ನೇ ತಿರುಗಿ ಮುರುಗಿಸಿ, ಮಗುಚಿ, ಹೊರಳಾಡಿಸಿ, ತಿರುಚಿ ಆಮೇಲೆ ನಮ್ಮನ್ನೇ ಮಗುವಂತೆ ಮರುಗಿಸುವ ಈ ನೆನಪುಗಳು ಎಲ್ಲಿಯೂ ಯಾರನ್ನೂ ಬಿಡುವುದಿಲ್ಲವೇನೋ ಎಂಬುದು ನಾನು ಇಲ್ಲಿ ಈಗ ನೋಡುತ್ತಲೇ ಅಳುತ್ತಲೇ ನಗುತ್ತಲೇ ದಿನವೂ ಕಂಡುಕೊಂಡ ಮತ್ತು ಕಾಣುತ್ತಿರುವ 'ಕಹಿ-ಸತ್ಯ'....
ಇಂದಿನ ಈ ಕಾಲದಲ್ಲಿ ಎಷ್ಟೋ ಕಷ್ಟ ಪಟ್ಟು, ಇಷ್ಟ ಪಟ್ಟು., ಎಷ್ಟೋ ಸಾವಿರ ಕನಸಿನ ಮೂಟೆ ಹೊತ್ತು, ಏನೇನೋ ಆಗಲು ಬಯಸಿ ಬಂದವರಿರುತ್ತಾರೆ. ಆದರೆ ಏನೋ ಮಾಡಲು ಹೋಗಿ ಏನೋ ಆಗಿ, ಆಮೇಲೆ ಅದೂ ಆಗದೇ ಮತ್ತೊಂದೇನೋ ಆಗಿರುತ್ತದೆ. ಆಗ ತಾನೇ ಹುಟ್ಟಿದ ಮಗು ಅಳುವುದನ್ನೇ ನಿಲ್ಲಿಸಿ ಚಿರನಿದ್ರೆಗೆ ಶರಣಾಗಿ ಈ ಲೋಕವೇ ಬೇಡವೆಂದು ಕಣ್ಣನ್ನು ತೆರೆಯುವ ಮೊದಲೇ ಮುಚ್ಚಿರುತ್ತದೆ. ಅದು ಮಾಡಿರುವ ಪಾಪವಾದರೂ ಏನು? ಅಥವಾ ಅದರ ಪಾಲಕರು, ಮುಂದೆ ಅದನ್ನು ಪಾಲಿಸಿ ಪೋಷಿಸಿ ಬೆಳೆಸಿ ವಿಧ್ಯಾಭ್ಯಾಸ ಮಾಡಿಸಿ ಅದಕ್ಕೆ ಮುಂದೊಂದು ದಿನ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕಾದ ಅಪ್ಪ ಅಮ್ಮ ಪಡೆದುಕೊಂಡು ಬಂದಿರುವ ಪುಣ್ಯವೇ ಅಷ್ಟಾ? ಇವೆಲ್ಲಾ ನೋಡುತ್ತಾ ಕುಳಿತರೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇಡೀ ಪ್ರಪಂಚ ನಶ್ವರ, ಯಾರಿಗೂ ಏನಕ್ಕೂ ಎಲ್ಲಿಯೂ ಸಂಬಂಧವೇ ಇಲ್ಲವೇನೋ ಅನ್ನಿಸಿಬಿಡುತ್ತದೆ.. ಹುಟ್ಟುತ್ತಾ ಅಪ್ಪ ಅಮ್ಮನ ಮುದ್ದಿನ ಮಕ್ಕಳಾಗಿ ಬೆಳೆಯುತ್ತಾ ಶತ್ರುಗಳಾಗಿ ಚಿಕ್ಕ ಭೂಮಿ ಆಸೆಗೋ, ಚಿನ್ನಕ್ಕೋ, ಅಥವಾ ಹೆಂಡತಿಯ ಮಾತು ಕೇಳಿಯೋ ಹೆತ್ತವರನ್ನೇ ದೂರ ಮಾಡುವ ಮಕ್ಕಳು... ಇವೆಲ್ಲವನ್ನೂ ನೋಡುತ್ತಿದ್ದರೆ ಮತ್ತೆ ನನಗೆ ಹಾಗನ್ನಿಸಿವುದು ಸುಳ್ಳಲ್ಲ...
ಯಾವುದೋ ಮತ್ತಿನಲ್ಲಿ, ಯಾರೊಟ್ಟಿಗೋ ಜಗಳವಾಡಿ, ಬಸ್ಸನ್ನು ಚಲಿಸುತ್ತಿರುವ ಚಾಲಕ ಅವನ ತಪ್ಪಿನಿಂದ, ಅವನ ನಿದ್ರೆಯಿಂದ, ಅಮಾಯಕ ನಲವತ್ತು-ಐವತ್ತು ಜನರ ಪ್ರಾಣ ತೆಗೆಯುವಾಗ, ಐವತ್ತು ಜನ ಯಾವ ತಪ್ಪೂ ಮಾಡದೇ ಅಮಾಯಕ ಅನ್ಯಾಯದ  ಸಾವು ಕಾಣುತ್ತಾರಲ್ಲಾ.., ಇದೂ ತಪ್ಪಾ? ಇದೂ ಕೂಡ ಯಾರ ಪಾಪಕ್ಕೋ ಯಾರೋ ಹೊಣೆ! ಯಾರೋ ಒಬ್ಬರ ತಪ್ಪಿಗೆ ಬರೋಬ್ಬರಿ ಐವತ್ತು ಜನರಿಗೆ ಸಂಪೂರ್ಣ ಶಿಕ್ಷೆ!! ಸುಮ್ಮನೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಯಾರೋ ವೃದ್ಧನಿಗೆ ಬಂದು ಗುದ್ದುವ ಲಾರಿ ರೂಪದ ಯಮನೋ, ಅಥವಾ ಅರ್ಧ ತೆಗೆದಿಟ್ಟ ಗುಂಡಿಯಲ್ಲಿ ಹೋಗಿ ಬೀಳುವ ಪುಟ್ಟ ಮಗುವೋ, ಅದೇ ಕೆಲಸದಲ್ಲಿ ಪಳಗಿರುವ ಮರ ಕುಯ್ಯುವ ಕೆಲಸಗಾರನಿಗೆ ಅದೇ ಮರ ಅವನ ತಲೆ ಮೇಲೆಯೇ ಬಿದ್ದು ಅವನು ಸಾಯುವ ಸಂದರ್ಭವೋ, ಇವೆಲ್ಲ ಯಾರ ಆಟವೋ? ಭಗವಂತ ನಮ್ಮ ತಾಳ್ಮೆ ಪರೀಕ್ಷಿಸಲು, ನಮ್ಮ ಬುದ್ಧಿಮತ್ತೆಯನ್ನು ಅಳೆಯಲು ಇಟ್ಟ ಪರೀಕ್ಷೆಗಳೋ ಒಂದೂ ಗೊತ್ತಿಲ್ಲಾ..
ಮತ್ತೆ ಮತ್ತೆ ನನಗೆ ಅನ್ನಿಸುವ, ಪದೇ ಪದೇ ಕಾಡುವ ವಿಷಯಗಳು ಹಲವಾರು. ಈ ಮಳೆಗೆ ಏನೇನೆಲ್ಲಾ ನೆನಪಿಸುವ ಶಕ್ತಿ ಇದೆ ಅಲ್ವಾ? ಎಲ್ಲೋ ಯಾವುದೋ ದಾರಿ ಹಿಡಿದು ಹೊರಟರೆ ಮುಂದೆ ಕಾಣುವ ದಾರಿ ನೂರಾರು, ಅದು ಟಿಸಿಲೊಡೆಯುವ ಪರಿ ಸಾವಿರಾರು, ನಮಗೆ ತಲೆ ಕೆಟ್ಟು ಅದು ತೋರುವ, ಮುಂಬೆಳಕು ಯಾವುದೆಂದೇ ಗೊತ್ತಾಗದೆ, ನಮಗೇ ನಮ್ಮಲ್ಲೇ ನಾವು ಹಲವಾರು ಬಾರಿ ಕಳೆದು ಹೋಗುತ್ತೇವೆ., ನಾನಂತೂ ಲೆಕ್ಕವಿಲ್ಲದಷ್ಟು ಬಾರಿ ಕಳೆದುಹೋಗಿದ್ದೇನೆ. ಇದು ಸತ್ಯ.
ಮುಂದುವರೆಯುವುದು, ಇನ್ನೂ ಇದೆ :):)
ಸದ್ಯದಲ್ಲೇ ಎರಡನೇ ಭಾಗದೊಂದಿಗೆ ಮತ್ತೆ ಬರುತ್ತೇನೆ!