Wednesday, April 29, 2020

ಇರ್ಫಾನ್ ಖಾನ್ : ಮಿನುಗುವುದನ್ನು ಅರ್ಧಕ್ಕೇ ನಿಲ್ಲಿಸಿದ ನಕ್ಷತ್ರ!

Irrfan Khan :) 


ಒಬ್ಬ
ಒಳ್ಳೆಯ ನಟನಾಗಲು, ಅಧ್ಬುತ ಕಲಾವಿದನಾಗಲು ನೂರು ಸಿನಿಮಾಗಳನ್ನೇ ಮಾಡಬೇಕೆಂದೇನಿಲ್ಲ. ಮಾಡಿದ ಸೂಪರ್ ಹಿಟ್ ಬೆರಳೆಣಿಕೆಯ ಸಿನಿಮಾಗಳಲ್ಲಿ ತನ್ನ ತಾಕತ್ತು, ಅಭಿನಯ ಸಾಮರ್ಥ್ಯ ಏನೆಂಬುದನ್ನು ತೋರಿಸಿದ ಕೆಲವೇ ನಟರುಗಳಲ್ಲಿ ಒಬ್ಬ ''ಇರ್ಫಾನ್ ಖಾನ್''

ಇರ್ಫಾನ್ ರಾಜಸ್ಥಾನದ ಜೈಪುರದಲ್ಲಿ ಖಜೂರಿಯ ಎಂಬ ಹಳ್ಳಿಯಲ್ಲಿ 1967 ಜನವರಿ 7 ರಂದು ದಂಪತಿಗಳಾದ ಬೇಗಂ ಖಾನ್ ಮತ್ತು ಜಗೀರ್ದಾರ್ ಖಾನ್ ಗೆ ಜನಿಸುತ್ತಾರೆ. ಇರ್ಫಾನ್ ಖಾನ್ ತಂದೆ ಒಂದು ಸಣ್ಣ ಟೈರ್ ಅಂಗಡಿಯನ್ನು ಹೊಂದಿರುತ್ತಾರೆ.

ಬಾಲ್ಯದಲ್ಲಿ ಸಿ.ಕೆ ನಾಯುಡು ಕ್ರಿಕೆಟ್ ಟೂರ್ನ್ಮೆಂಟ್ ಗೆ ಆಯ್ಕೆಯಾದರೂ ಅದರಲ್ಲೇ ಮುಂದೆ ಸಾಗಲು ಹಣದ ಕೊರತೆಯಿರುವುದರಿಂದ ಖಾನ್ ಗೆ ಕ್ರಿಕೆಟ್ ಜಗತ್ತಲ್ಲಿ ಮುಂದೆ ಸಾಗಲು ಆಗುವುದೇ ಇಲ್ಲ. ಮೊದಲಿಂದಲೂ ಅಭಿನಯದ ಹುಚ್ಚು ಇದ್ದ ಖಾನ್ 1984 ರಲ್ಲಿ ನವ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಲ್ಲಿ ಎಂ. ಮಾಡಲು ಸೇರುತ್ತಾರೆ ಹಾಗೂ ವಿದ್ಯಾರ್ಥಿ ವೇತನವನ್ನೂ ಗಳಿಸುತ್ತಾರೆ.

ಅಲ್ಲಿಂದ ಮುಂದೆ ಮುಂಬೈ ಗೆ ಬಂದ ಖಾನ್ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಲು ಶುರು ಮಾಡುತ್ತಾರೆ. 1985-1986 ಸಮಯದಲ್ಲಿ ಶ್ರೀಕಾಂತ್, ಭಾರತ್ ಏಕ್ ಖೋಜ್, ಚಾಣಕ್ಯ, ಚಂದ್ರಕಾಂತ, ಡರ್ , ಟೋಕಿಯೋ ಟ್ರಯಲ್ ಮುಂತಾದ ಸೀರಿಯಲ್ ಗಳಲ್ಲಿ ನಟನೆ ಮಾಡಿ ಹೆಸರು ಮಾಡುತ್ತಾರೆ. 1988 ರಲ್ಲೇ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದರೂ ಟಿವಿ ಗಳಲ್ಲಿ ಅಭಿನಯ 2016 ವರೆಗೂ ಮುಂದುವರೆಯಿತ್ತದೆ.

ಕೆಲವು ಬ್ರಿಟಿಷ್ ಸಿನಿಮಾ ಮತ್ತು ಇಂಗ್ಲಿಷ್ ಸಿನಿಮಾ, ಹಲವು ಹಿಂದಿ ಸಿನಿಮಾಗಳಲ್ಲಿನ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ನಟನಿಗೆ ಸಂದಿವೆ. ಎಲ್ಲ ಪ್ರಶಸ್ತಿಗಳಿಗೂ ನಟ ಖಂಡಿತ ಅರ್ಹ.

1988 ರಲ್ಲಿ ಮೊದಲು ಸಲಾಂ ಬಾಂಬೆ ಇಂದ ಆರಂಭವಾದ ಸಿನಿಮಾ ಜಗತ್ತು ಇತ್ತೀಚಿನ (2020) ಅಂಗ್ರೇಜಿ ಮೀಡಿಯಂ ವರೆಗೂ ನಿಲ್ಲದೇ ಸಾಗುತ್ತ ಬರುತ್ತದೆ. 2002 ರಲ್ಲಿ ಬಂದ ಬೋಕ್ಷು ದಿ ಮಿಥ್ ಎಂಬ ಇಂಡಿಯನ್ ಇಂಗ್ಲಿಷ್ ಸಿನಿಮಾ (ಅದರಲ್ಲಿನ ತಾಂತ್ರಿಕ ಪಾತ್ರ), 2007 ರಲ್ಲಿನ ಲೈಫ್ ಇನ್ ಮೆಟ್ರೋ, 2008 ರಲ್ಲಿನ ಸ್ಲಂ ಡಾಗ್ ಮಿಲ್ಲೇನಿಯರ್ (ಪೊಲೀಸ್ ಪಾತ್ರ ) 2012 ಪಾನ್ ಸಿಂಗ್ ತೋಮರ್ ಹಾಗೂ ಲೈಫ್ ಆಫ್ ಪೈ 2013 ಡೀ ಡೇ ಮತ್ತು ಲಂಚ್ ಬಾಕ್ಸ್ 2015 ಪೀಕು 2017 ರಲ್ಲಿ ಬಂದ ಹಿಂದಿ ಮೀಡಿಯಂ ಹಾಗೂ ವರ್ಷದ ಅಂಗ್ರೇಜಿ ಮೀಡಿಯಂ ವರೆಗಿನ ಖಾನ್ ಅಭಿನಯವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ ? ಕೋಟಿಗಟ್ಟಲೆ ಹೃದಯಗಳನ್ನು ನಗಿಸಿ ಅಳಿಸಿ ಹೋದ ಅಭಿನಯ ಚತುರನಿಗೆ ಶೃದ್ಧಾಂಜಲಿಗಳನ್ನು ಅರ್ಪಿಸುತ್ತೇನೆ.

2005 ರಲ್ಲಿ ಬಂದ ಖಾನ್ ಲೀಡ್ ರೋಲ್ ನಲ್ಲಿ ಮಾಡಿದ ರೋಗ್ ಕ್ರಿಟಿಕ್ಸ್ ನಲ್ಲಿ ಬಹಳ ಹೆಸರು ಮಾಡುತ್ತದೆ. ಖಾನ್ ಅಭಿನಯಕ್ಕೆ ಸಾಕ್ಷಿ ಕ್ರಿಟಿಕ್ಸ್ ಅವರು ಬರೆದ ಒಂದು ಸಾಲು : ''ಇರ್ಫಾನ್ ಕಣ್ಣುಗಳು ಆತನ ಮಾತಿಗಿಂತ ಹೆಚ್ಚು ಮಾತನಾಡುತ್ತವೆ'' ಆತ ಫ್ರೇಮ್ ನಲ್ಲಿದ್ದರೆ ಆತನನ್ನು ನೋಡುವುದು ಹಾಗೂ ಕೇಳುವುದೇ ಒಂದು ಖುಷಿ.

ಇವೆಲ್ಲವುಗಳ ಮಧ್ಯ 1995 ಫೆಬ್ರವರಿ 23 ರಂದು  ಇರ್ಫಾನ್ ಗೆ ಸುತಪಾ ಸಿಕ್ದರ್ ಎನ್ನುವವರ ಜೊತೆ ವಿವಾಹವಾಗುತ್ತದೆ. ಅವರಿಗೆ ಬಬಿಲ್ ಮತ್ತು ಅಯನ್ ಎಂಬ ಇಬ್ಬರು ಮಕ್ಕಳು.

ಲೈಫ್ ಇನ್ ಮೆಟ್ರೋ ಗೆ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ , ಬೆಸ್ಟ್ ಕಮೇಡಿಯನ್, ಸ್ಲಂ ಡಾಗ್ ಮಿಲೇನಿಯರ್ ಗೆ ಬೆಸ್ಟ್ ಔಟ್ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್ , 2011 ರಲ್ಲಿ ಭಾರತದ ನಾಲ್ಕನೇ ದೊಡ್ಡ ಪ್ರಶಸ್ತಿಯಾದ ''ಪದ್ಮ ಶ್ರೀ'' , ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್, CNN-IBN ಇಂಡಿಯನ್ ಆಫ್ ದಿ ಇಯರ್ , ಪಾನ್ ಸಿಂಗ್ ತೋಮರ್ ಗೆ ನ್ಯಾಷನಲ್ ಫಿಲಂ ಅವಾರ್ಡ್, ಲಂಚ್ ಬಾಕ್ಸ್ ಗೆ ಬೆಸ್ಟ್ ಆಕ್ಟರ್ ಅವಾರ್ಡ್ , ಪೀಕು ಗೆ ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋರ್ನ್ ಬೆಸ್ಟ್ ಆಕ್ಟರ್ ಅವಾರ್ಡ್ ಹೀಗೆ ಸಾಕಷ್ಟು ಅವಾರ್ಡ್ ಗಳನ್ನು ಪಡೆದ ಪ್ರಸಿದ್ಧ ಅಪ್ರತಿಮ ನಟ ಬಹುಬೇಗ ತನ್ನ ಜೀವನಕ್ಕೆ ಶುಭಂ ಹೇಳಿದ್ದು ಮಾತ್ರ ವಿಪರ್ಯಾಸ.

2018 ಫೆಬ್ರವರಿ ಯಲ್ಲೇ ಹಲವು ಮಾಧ್ಯಮಗಳು ಈತನಿಗೆ ಬ್ರೈನ್ ಕ್ಯಾನ್ಸರ್ ಇದೆಯೆಂದು ಹೇಳಿದ್ದರು ಆದರೆ ಖಾನ್ ತನ್ನ ಟ್ವಿಟ್ಟರ್ ನಲ್ಲಿ ಎಲ್ಲ ಕಥೆಯನ್ನೂ ಸಂಪೂರ್ಣವಾಗಿ ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಬರೆದುಕೊಳ್ಳುತ್ತಾರೆ. ಮಾರ್ಚ್ 16 2018 ರಲ್ಲಿ ಖಾನ್ ಖುದ್ದಾಗಿ ತನಗೆ ನ್ಯೂರೋಎಂಡೋಕ್ರಯ್ನ್ ಕ್ಯಾನ್ಸರ್ ಎಂಬ ವಿಚಿತ್ರ ಕ್ಯಾನ್ಸರ್ ಇರುವುದಾಗಿಯೂ ಇದು ದೇಹದ ಎಲ್ಲ ಭಾಗಗಳಿಗೂ ಹಬ್ಬುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆಯುತ್ತಾರೆ, ಇದರ ಸಲುವಾಗಿ ಲಂಡನ್ ಗೂ ಹೋಗಿ ಡಾಕ್ಟರ್ ಬಳಿ ಸಲಹೆ ತೆಗೆದುಕೊಳ್ಳುತ್ತಾರೆ.

ಮುಂಬೈ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಕೊಂಡರೂ, ಚಿಕಿತ್ಸೆ ಫಲಕಾರಿಯಾಗದೆ 29 ಏಪ್ರಿಲ್ 2020 ರಂದು 53 ವರ್ಷಗಳ ಜೀವನ, 32 ವರ್ಷಗಳ ಕಲಾ ಜೀವನ ಮುಗಿಸಿ ಲೆಕ್ಕವಿಲ್ಲದಷ್ಟು ಅವಾರ್ಡ್ ಗಳನ್ನೂ ತನ್ನ ಖಾತೆಗೆ ಸೇರಿಸಿ ನೆಮ್ಮದಿಯಾಗಿ ಕಣ್ಣು ಮುಚ್ಚಿದ್ದಾರೆ.

ಮತ್ತೊಂದು ದುಃಖದ ಸಂಗತಿಯೆಂದರೆ ಕೇವಲ ನಾಲ್ಕು ದಿನದ ಹಿಂದೆಯಷ್ಟೇ ಅವರು ಅವರ ಅಮ್ಮನನ್ನು ಕಳೆದುಕೊಂಡಿದ್ದರು. ಅಮ್ಮನ ಹಿಂದೆಯೇ ಮಗ ಹೋಗಿದ್ದು ಮತ್ತೊಂದು ಸೋಜಿಗದ ಹಾಗೂ ಆಶ್ಚರ್ಯದ ವಿಷಯವೇ ಸರಿ.

ಇಷ್ಟು ಅದ್ಭುತವಾದ ನಟ ಕೇವಲ 32  ವರ್ಷಕ್ಕೆ ಇಷ್ಟು ಸಾಧನೆ ಮಾಡಿ, ಇನ್ನು ಹಲವು ವರ್ಷಗಳು ಬದುಕಿದ್ದರೆ ನಮಗೆ ಇನ್ನೂ ಎಂತೆಂಥ ಸಿನಿಮಾಗಳನ್ನು ಕೊಡುತ್ತಿದ್ದರು ಎಂದು ನೆನೆಸಿಕೊಂಡರೇನೇ ದುಃಖವಾಗುತ್ತದೆ.

ಇನ್ನೂ ಯಾರೂ ಇರ್ಫಾನ್ ಖಾನ್ ಗೆ ಲೈಟ್ಸ್ ಕ್ಯಾಮೆರಾ ಆಕ್ಷನ್ ರೋಲಿಂಗ್ ಎಂದು ಹೇಳುವವರಿಲ್ಲ, ಆತನ ಜೀವನದ ಸಿನಿಮಾ ಅರ್ಧಕ್ಕೆ ನಿಂತು ಇಂಟರ್ವಲ್ ಗೆ ಹಾಗೆ ಸುಮ್ಮನೇ  ಎದ್ದು ಹೋದ ನಟನನ್ನು ಕಳೆದುಕೊಂಡ ಬೇಜಾರು ನನ್ನಂಥ ಸಿನಿಮಾ ಪ್ರೇಮಿಗೆ ಯಾವತ್ತೂ ಇದ್ದೆ ಇರುತ್ತದೆ.

ಆತನ ಆತ್ಮ ತಣ್ಣಗಿರಲಿ. ಖಾನ್ ಅಭಿನಯಿಸಿದ ಸಿನಿಮಾಗಳಿಂದ ನಮ್ಮನ್ನೂ ಯಾವತ್ತೂ ಹೀಗೆಯೇ ರಂಜಿಸುತ್ತಿರಲಿ...

#JepeeBhat
#IrrfanKhan

Wednesday, July 06, 2016

ಈ ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.



ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.
ಇವತ್ತೂ ಸಹ ಹಾಗೆಯೇ ಆಯಿತು.
ನಾನು ಮಾಮೂಲಿಯಾಗಿ ಒಂದ್ ಟೀ ಷರ್ಟ್, ಒಂದ್ ಥ್ರೀ ಫೋರ್ಥ್ ಹಾಕ್ಕೊಂಡು ಕಿವೀಲೀ ಈಯರ್ ಫೋನ್ಸ್ ಇಟ್ಕೊಂಡು ಹಾಡು ಕೇಳ್ಕೊಂಡು ಹೋಗ್ತಾ ಇದ್ದೆ. ತಿಂಡಿ ತಿನ್ನೋಣ ಅಂತನಿಸಿ ಒಂದು ಚಿಕ್ ಕ್ಯಾಂಟೀನ್ ಒಳಗೆ ಹೋದೆ. ಅಲ್ಲಿ ಒಬ್ಬ ಸುಮಾರು ಮೂವತ್ತು ಮೂವತ್ತೆರಡು ಪ್ರಾಯದ ಗಂಡಸಿದ್ದ. ಸುಕ್ಕು ಸುಕ್ಕಾದ ಬಟ್ಟೆ, ಸರಿಯಾದ ಬಣ್ಣ, ಇಸ್ತ್ರಿ ಕೂಡ ಇಲ್ಲದೇ ಮಂಕಾಗಿದ್ದ ಬಿಳೀ ಷರ್ಟು ಕಪ್ಪು ಬಣ್ಣದ ಸಾಧಾರಣ ಪ್ಯಾಂಟ್ ಹಾಕ್ಕೊಂಡು ಹಲ್ ಕಿಸ್ಕೊಂಡ್ ಸಾರ್... ಏನ್ ಕೊಡ್ಲೀ ಅಂದ...
ನಾನ್ ಏನೇನಿದೆ ಅಂದೆ..
ಇಡ್ಲೀ ವಡೆ ಪುಲಾವ್ ಫಡ್ಡು .. ದೋಸೆ ಖಾಲಿ ಸಾರ್ ಅಂದ.
ನಂಗ್ ಫೋನ್ ಬಂತು.. ನಾನ್ ಆಚೆ ಬಂದು ಇಂಗ್ಲೀಷಿನಲ್ಲಿ ಮಾತಾಡಿ ಮುಗಸ್ದೆ. ಇವನು ಅದ್ಯಾವ ಮಾಯದಲ್ಲಿ ನಾನು ಮಾತಾಡಿದ್ದು ಕೇಳಿಸಿಕೊಂಡನೋ ಗೊತ್ತಿಲ್ಲ. ನಾನ್ ವಾಪಾಸ್ ಬರೋದ್ರೊಳ್ಗೆ ಸಾರ್ ಯು ಹ್ಯಾವಂಟ್ ಗಿವನ್ ಯುವರ್ ಆರ್ಡರ್ ಯೆಟ್, ವಾಟ್ ವುಡ್ ಯು ಲೈಕ್ ಟು ಹ್ಯಾವ್ ಸರ್ ಅಂದ...
ನಾನು ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ.
ನಿಂತುಕೊಂಡ ಮೆಟ್ಟಿಲುಗಳಿಂದ ಜಾರಿ ಬಿದ್ದಿಲ್ಲವಷ್ಟೇ.
ಮನಸಲ್ಲೇ ಲೆಕ್ಕಾಚಾರ ಹಾಕ್ತಾ ಇದ್ದೆ. ಮನೆ ಬಿಟ್ಟು ಓಡಿ ಬಂದಿರ್ತಾನೆ, ಹೆಚ್ಚು ಅಂದ್ರೆ ಹತ್ತನೇ ತರಗತಿ ಓದಿರ್ತಾನೆ. ಸ್ವಲ್ಪ ಇಂಗ್ಲೀಷ್ ಟಚ್ ಇರತ್ತೆ. ಅದ್ಕೆ ಮಾತಾಡ್ದಾ ಅಂದ್ಕೊಂಡೆ. ಅದ್ರೆ ಇಷ್ಟೊಂದು ವ್ಯಾಕರಣಬದ್ಧವಾಗಿ.. ಉಹೂಂ..!!
ಸರಿ ತಿಂಡಿ ತಿಂತಾ ತಿಂತಾ ತಡ್ಕೊಳ್ಳೋಕಾಗ್ದೇ ಕೇಳೇಬಿಟ್ಟೆ.
ಅವ್ನು ಚಟ್ನಿ ಖಾಲಿ ಆಗಿದೆ ಅಂತಾ ರುಬ್ತಾ ಇದ್ದಾ.
ಏನ್ ಓದಿರೋದು ನೀವು ಅಂದೆ. ಅವ್ನಿಗೆ ಕೇಳ್ಸಿಲ್ಲಾ.
ಮತ್ತೆ ಏನ್ ಓದಿದೀರಾ ನೀವು ಅಂದೆ.
ಅವ್ನು ಮಿಕ್ಸಿ ಆಫ್ ಮಾಡಿ ಯಾಕ್ಸಾರ್ ಅಂದಾ..
ನಾನ್ ಹಿಹಿಹಿ ಯಾಕೂ ಅಲ್ಲಾ ಸುಮ್ನೇ ಅಂದೇ..
ಚಟ್ನೀನಾ ಹಾಕ್ಬುಟ್ಟು ಈಗ್ ಮಾಡಿದ್ದು ಹೆಂಗಿದೆ ಹೇಳಿ ಅಂದಾ.. ಸೂಪರ್ ಅಂದೆ.
ಅವನೇ ಮುಂದುವರೆದು ಸಾರ್ ನಾನು ರೆಗ್ಯೂಲರ್ ಎಂಬೀಏ ಇನ್ ಫಿನಾನ್ಸ್ ಅಂದಾ.
ನಾನ್ ಷಾಕ್ ಆದೆ.
ಮತ್ತೆ ಇಲ್ಲಿ ಹೆಂಗೆ ಥರಾ ಅಂದೆ.
ಸಾರ್ ನಮ್ಮಪ್ಪಂದೇ ಹೊಟೆಲ್ ಹೆಲ್ಪ್ ಮಾಡೋದ್ರಲ್ಲೇನು ತಪ್ಪು ಅಂದಾ.
ನಾನು ಮೂಕನಾಗಿ ನಿಂತಿದ್ದೆ.
ನೀವ್ ಬೇರೆ ಎಲ್ಲೂ ಕೆಲ್ಸಾ ಮಾಡಲ್ವಾ ಅಂದೆ.
ಯಾಕ್ ಸಾರ್ ಮಾಡ್ತೀನಲ್ಲಾ..
ನಾನು ವಿಪ್ರೋದಲ್ಲಿ ಟೀಂ ಲೀಡ್ ಅಂದ.
ನಾನು ಉಗುಳು ನುಂಗಿಕೊಂಡೆ.
ಪ್ಯಾಕೇಜ್ ಚೆನ್ನಾಗಿರ್ಬೇಕಲ್ವಾ ಅಂದೆ. ಟೇಕ್ ಹೋಂ ಸ್ಯಾಲರಿ ಕೂಡಾ ಹೇಳ್ದಾ. ನಂಗೆ ಅಬ್ಬಾ ಅನಿಸ್ತು.
ಮುಂದಿನ ಹತ್ತು ನಿಮಿಷದಲ್ಲಿ ಸರ್ವರ್ ಡೇಟಾಬೇಸ್ ಷೇರ್ ಮಾರ್ಕೇಟ್, ರಿಮೋಟ್ ಸೆಸ್ಷನ್ಸ್ ಸಾಫ್ಟ್ವೇರ್ ಡೆವಲಪಿಂಗ್, ನೆಟ್ವರ್ಕಿಂಗ್, ಜಾವಾ ಕೋರ್ ವಿಂಡೋಸ್ ಎಲ್ಲದರ ಎಲ್ಲ ವಿಷಯಗಳ ಟೆಕ್ನಿಕಲ್ ಥಿಂಗ್ಸ್ ಬಗ್ಗೆ ಮಾತಾಡಿದ್ವಿ.
ನೀವ್ ಎಲ್ಲಿ ಕೆಲ್ಸಾ ಮಾಡೋದು ಅಂದಾ..
ಸಾರ್ ವಿಪ್ರೋಗ್ ಬರ್ತೀರಾ ಅಂದ್ರೆ ಹೇಳಿ ಪಕ್ಕಾ ರೆಫರ್ ಮಾಡ್ತೀನಿ ಅಂದಾ...
ಸರಿ ಲೇಟಾಯ್ತು, ಈಗ್ ಕ್ಯಾಬ್ ಬರತ್ತೆ ಮನೆಗೆ ಹೋಗಿ ಡ್ರೆಸ್ ಛೇಂಜ್ ಮಾಡಿ ಹೊರಡ್ಬೇಕು ಸಾರ್ ಆಫೀಸಿಗೆ, ಇಟ್ಸ್ ನೈಸ್ ಟು ಮೀಟ್ ಯು ಸಾರ್ ಅಂತಾ ಹೇಳಿ ಹೊಂಟೋದ ಆಸಾಮಿ....
ಆಗಷ್ಟೇ ಹೊಟೆಲ್ಗೆ ಬಂದ ಅವರ ಅಪ್ಪ ಅಮ್ಮ ನಮ್ ಮಗಾ ಸಾರ್ ಅಂದ್ರು, ಅವರ ಕಣ್ಣಲ್ಲಿ ಮಗನ ಬಗೆಗಿದ್ದ ಹೆಮ್ಮೆ ಹೊಳೆಯುತ್ತಿತ್ತು.
ಇಡ್ಲೀ ಚಟ್ನೀ ಹಾಕ್ಕೊಟ್ಟ, ಶಾಲೆಗೆ ಹೋಗಿರದ ಮುಖವನ್ನು ಹೊಂದಿದ ಒಬ್ಬ ವ್ಯಕ್ತಿಯ ಹಿಂದೆ ಮತ್ತು ಒಳಗೆ ಇಷ್ಟೊಂದು ಗುಟ್ಟಿವೆಯಾ ಅಂತಾ ತಲೆ ಕೆರ್ಕೊಂಡು ನನ್ ಹಳೇ ಥ್ರೀ ಫೋರ್ಥ್ ಗೆ ಕೈ ಉಜ್ಕೊಂಡ್ ಮನೆ ಕಡೆ ಬಂದೆ..
ಜಗತ್ತು ನಮ್ಮೆದೆರು ಪ್ರತೀ ಕ್ಷಣವೂ ವಿಸ್ಮಯಗಳನ್ನು ಎಸೆಯುತ್ತಿರುತ್ತೆ.
ನಮಗದನ್ನು ಸೂಕ್ಷ್ಮ ಕಣ್ಣುಗಳಿಂದ ನೋಡುವ, ಪ್ರೀತಿಯಿಂದ ಅಪ್ಪಿಕೊಳ್ಳುವ, ಸ್ವೀಕರಿಸುವ ಮನೋಭಾವವಿರಬೇಕಷ್ಟೇ 😊

Friday, February 27, 2015

ಹಿಂಗಿಂದಾ ಹಂಗಾ?

JP BHAT
Life - Jp Bhat




ಇದ್ದಕ್ಕಿದ್ದಂಗೆ ಭಾವುಕರಾಗೋದು ಕೆಲವು ಸಲ ಇದಕ್ಕೇನಾ? ಅಥವಾ ಬೇರೇನೂ ಕಾರಣಗಳು ಇರಬಹುದಾ??

ಮೊದಲ ಸಲ ಶಾಲೆಗೆ ಸೇರಿದಾಗ ಅಪ್ಪನ ಬಿಡೋಕಾಗದೆ, ಅವನ ಮುಖವನ್ನು ನೋಡಲಾಗದೇ, ಅವನನ್ನು ಇಡೀ ದಿನ ನೋಡಲಾರದೇ ಇರಬೇಕೆಂಬ ಅನಿವಾರ್ಯ ಭಯದಿಂದ ಅತ್ತಿದ್ದೆ.  ಗೆಳೆಯರು ಸಿಕ್ಕರು. ಗೆಳೆತಿಯರು ಅವರು ತಂದಿದ್ದ ತಿಂಡಿಯನ್ನು ಕೊಟ್ಟರು. ಹುಡುಗರು ಹೊಡೆದಾಟಕ್ಕೆ ಬಂದರು. ಹುಡುಗಿಯರು ನನ್ನನ್ನು ತಬ್ಬಿಕೊಂಡು ಸಮಾಧಾನ ಮಾಡಿದರು. ಅಂದಿನಿಂದ ಅಪ್ಪ ದೂರವಾದ. ಗೆಳೆಯರು ಹತ್ತಿರ ಬರುವುದನ್ನು ಬಿಟ್ಟರು. ಗೆಳತಿಯರು ನನ್ನನ್ನು ಬಿಡೋಕಾಗದೆ ಬೇಜಾರು ಮಾಡಿಕೊಂಡರು.

ಹಾಗೇ ದೊಡ್ಡವನಾದೆ.

ಆಮೇಲೆ ಬಂದಿದ್ದೇ ಹೈ ಸ್ಕೂಲ್.
ಸ್ವಲ್ಪ ಮಟ್ಟಿಗೆ ಬಣ್ಣಗಳ ಲೋಕ; ಬುದ್ಧಿಯೂ ಸ್ವಲ್ಪ ಬೆಳೆದ ಕಾಲ. ಜೊತೆಗೆ ಕುರುಚಲು ಗಡ್ಡ ಮೀಸೆಯ ದರ್ಪ. ಹುಡುಗನಿಂದ ಗಂಡಸಾದೆ ಅನ್ನೋ ಭಾವ. ಧ್ವನಿಯಲ್ಲಿ ಏರು ಪೇರು. ಧ್ವನಿ ಪೆಟ್ಟಿಗೆಯಲ್ಲಿ ಬಿರುಕು. ಆಣೆ ಕಟ್ಟಿನಿಂದ ನೀರು ಹೊರಬಿಟ್ಟ ಹಾಗೆ ಬದುಕು. ಅಲ್ಲಿ ಇಲ್ಲಿ ಖರ್ಚಿಗೆ , ಕೆಟ್ಟ ಚಟಕ್ಕೆ ಒಳ್ಳೆಯ ಅಭ್ಯಾಸಕ್ಕೆ ಅಲ್ಪ ಸ್ವಲ್ಪ ದುಡ್ಡು ಸಿಗುತ್ತಿದ್ದ ಬಂಗಾರದ ದಿನಗಳವು.  ಅಪ್ಪನ ಕಲರ್ ಮೊಬೈಲ್ ನಲ್ಲಿ ಆಟ ಆಡೋದು, ಹಾಡು ಕೇಳೋದು, ವಾಲ್ ಪೇಪರ್ ಚೇಂಜ್ ಮಾಡೋದು ನನಗೆ ಹೆಮ್ಮೆಯ ವಿಷಯವಾಗಿತ್ತು. ಆಗಾಗ ಈ ಮೊಬೈಲ್ ನನ್ನ ಹತ್ತಿರವೂ ಎರಡು ಮೂರು ದಿನದ ಮಟ್ಟಿಗೆ ಇರುತ್ತಿತ್ತು; ಅಪ್ಪ ನನ್ನನ್ನು ನೋಡಲು ಬಂದಾಗ ಅಥವಾ ನಾನೇ ಊರಿಗೆ ಹೋದಾಗ ಈ ಮೊಬೈಲ್ ಮತ್ತೆ ಅಪ್ಪಂದು.

ಆಗ ಅಪ್ಪ ಕೇವಲ ದುಡ್ಡು ಕೊಡುವುದಕ್ಕೆ ಮಾತ್ರ ನನಗೆ ಬೇಕಾದ. ಬೇಜಾರಾದಾಗ, ಅಳಲೇ ಬೇಕು ಎನಿಸಿದಾಗ, ತಬ್ಬಿ ಸಮಾಧಾನ ಮಾಡಲು ಆ ಶಾಲೆಯಲ್ಲಿ ಇರುವಂಥಹ ಹುಡುಗಿಯರು ಇಲ್ಲಿ ಇರದೇ ಇದ್ದಾಗ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ದೂರವಿರುತ್ತಿದ್ದ ಕಾರಣ ಯಾವತ್ತಿನಂತೆಯೇ ಒಬ್ಬನೇ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದೆ.
ಅಮ್ಮ ಫೋನ್ ಮಾಡುತ್ತಿದ್ದಳು. ಅಪ್ಪ ದುಡ್ಡು ಹಾಕುತ್ತಿದ್ದ. ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಆಕಾಶ ನೋಡಿಕೊಂಡು ಒಬ್ಬನೇ ಧೋ ಎಂದು ಅಳುತ್ತಿದ್ದೆ.
ಅಮ್ಮ ಊಟ ಮಾಡು ಮಗನೇ ಎನ್ನುತ್ತಿದ್ದಳು. ಅಪ್ಪ ಮಾರ್ಕ್ಸ್ ಶೀಟ್ ಗೆ ಸಹಿ ಹಾಕುತ್ತಿದ್ದ.  ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಒಬ್ಬನೇ ಬಸ್ಸಿನ ಕಿಟಕಿಯ ಪಕ್ಕ ಕೂತು ಕಣ್ಣಲ್ಲೇ ನೀರಾಗುತ್ತಿದ್ದೆ.

ಮತ್ತೆ ಧುತ್ತನೇ ಎದುರಾದದ್ದು ಪೂರ್ತಿ ಬಣ್ಣಗಳ ಲೋಕ. ಎಲ್ಲೆಲ್ಲೂ ಚಿಟ್ಟೆಗಳ ಸಂಗೀತ. ಇದೇನಾ ಸ್ವರ್ಗ? ಕಾಲೇಜ್ ಲೈಫ್ ಇಷ್ಟು ಸುಂದರಾನಾ? ಇನ್ನು ಡಿಗ್ರಿ ಕಾಲೇಜ್ ಹೆಂಗಿರಬಹುದಪ್ಪಾ ಎಂಬ ಕಲ್ಪನೆಯಲ್ಲೇ ಅರ್ಧ ಈ ಚಿಕ್ಕ ಕಾಲೇಜು ಮುಗಿದುಹೋಯ್ತು. ನನಗೆ ಈಗ ನನ್ನದೇ ಸ್ವಂತ ಮೊಬೈಲ್ ಬಂದಿತ್ತು. ಹುಡುಗಿಯರ ನಂಬರ್ ನಿಧಾನವಾಗಿ ಸೇವ್ ಆಗುತ್ತಿತ್ತು ; ಟೆಕ್ಸ್ಟ್ ಮೆಸೇಜ್ ಗಳು ಬೇಕಾಬಿಟ್ಟಿ ಹರಿದಾಡುತ್ತಿದ್ದವು.
ಅಪ್ಪ ಅಮ್ಮ ಇಬ್ಬರೂ ಫೋನ್ ಮಾಡುತ್ತಿದ್ದರು. ತಮ್ಮ ಮತ್ತೂ ಚೆನ್ನಾಗಿ ಓದುತ್ತಿದ್ದ. ನಾನು ರೂಮಿನಲ್ಲಿ ಕತ್ತಲೆಯಲ್ಲಿ ಒಬ್ಬನೇ ಕೂತು ಅಳುತ್ತಿದ್ದೆ ಮತ್ತು ಆಗಾಗ ನಗುತ್ತಿದ್ದೆ.

ಹಾಯ್ ಫೋಕ್ಸ್ ಡ್ಯೂಡ್ ; ದಿಸ್ ಈಸ್ ರಿಯಲ್ಲಿ ಹೆವೆನ್ ; ಏನ್ ಕಲರ್ಸೊ, ಆ ಚೂಡಿ ನೋಡೋ, ಜೀನ್ಸು ಸ್ಕರ್ಟು ನೋಡೋ - ಆಹ್ ; ಡಿಗ್ರಿ -
ಕೈ ನಲ್ಲಿ ಮೊದಲಿಗಿಂತಾ ಹೆಚ್ಚು ದುಡ್ಡು, ಮೊಬೈಲ್, ದೊಡ್ಡ ಪಟ್ಟಣ; ಹೆಂಗೆ ಅಷ್ಟೂ ದಿನಗಳು ವ್ಯಥಾ ಪೋಲಿಯಾಗಿ ಕಳೆದು ಹೋದವು? ನಿದ್ದೆಯಲ್ಲೇ ಕಳೆದು ಬಿಟ್ಟೆನಾ?
ಅಮ್ಮ ಅಪ್ಪ ಫೋನ್ ಮಾಡಿದ್ದರಾ? ತಮ್ಮ ಚೆನ್ನಾಗಿ ಓದುತ್ತಿದ್ದನಾ? ನಾನು ಅಳುತ್ತಿದ್ದೆನಾ, ನಗು , ಸಿನಿಮಾ , ಹುಡುಗಿ, ಕುಡಿತ , ಸಿಗರೇಟು ? ಉಹುಂ , ಒಂದೂ ಗೊತ್ತಿಲ್ಲ. ನೆನಪಿಲ್ಲಾ... ನೆನೆಸಿಕೊಳ್ಳಲೂ ಇಷ್ಟವಿಲ್ಲ... ಹರುಕು ಜೀನ್ಸ್ ಉದ್ದ ಗಡ್ಡ ಒಂದು ದೊಗಲೆ ಅಂಗಿ ಹಸಿವಾದಾಗ ಒಂದು ಹಿಡಿ ಅನ್ನ ಅದಕ್ಕೆ ಒಂದಷ್ಟು ತಿಳಿ ಸಾರು ಮೊಸರು, ಕೇಳಲು ನನ್ನದೇ ಆದ ಒಂದಿಷ್ಟು ಹಾಡುಗಳು; ಜೀವ ಸೋತಾಗ ತಲೆ ಕೊಟ್ಟು ಮಲಗಲು ಒಂದು ಚಿಕ್ಕ ಸೂರು. ಇಷ್ಟೇ ನನಗೆ ನೆನಪು ಇರುವಂತಹ ಕಲೆಗಳು.
ನನಗೇ ಅಂತಾ ಮಾಡಿಕೊಟ್ಟ ಸೂರಿಗೆ ಹೋಗುತ್ತಿದ್ದೆನಾ? ಉಹೂಂ ಅದೂ ಗೊತ್ತಿಲ್ಲ. ಏನೇ ಮಾಡಿಕೊಂಡರೂ ಇವತ್ತಿನ ತನಕ ಜೀವ ಗಟ್ಟಿಯಾಗಿ ಹಿಡಿದುಕೊಂಡು ಬದುಕಿದ್ದೇನೆ ಅಷ್ಟೇ.


ಮೊದಲಿಂದಾನೂ ಹಳ್ಳಿ ಪೇಟೆ ಎರಡರಲ್ಲೂ ಬೆಳೆದ ನನಗೆ ; ಎರಡರ ವಾತಾವರಣ ಎರಡೂ ಕಡೆಯ ನಡೆ ನುಡಿ; ಒಳಗು ಹೊರಗು ಗೊತ್ತಿರುವುದರಿಂದ ನನಗೆ ಪೇಟೆ ಜೀವನ ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದರೆ ಇದು ಹಳೆಯ ಪೇಟೆಗಿಂತ ಕೊಂಚ ದೊಡ್ದದಾದುದರಿಂದ ಇಲ್ಲಿಯ ಜನರ ವೇಷ ಭೂಷಣ, ಹಾವ ಭಾವ, ಆಹಾರ ಪಧ್ಧತಿ, ಜೀವನವನ್ನು ಅನುಭವಿಸುವ ಅನುಭೋಗಿಸುವ, ಅದನ್ನು ಬದುಕುವ ರೀತಿಯ ಜೀವನ ಶೈಲಿಗೆ ಅಚ್ಚರಿ ಪಟ್ಟಿದ್ದೆ.

ದಿನಗಳು ಹೀಗೆಯೇ ಸಾಗುತ್ತಿತ್ತು.

ಆಮೆಲಿಂದಾ ಬಂದಿದ್ದೇ ಹೊಟ್ಟೆಗೆ ಬಟ್ಟೆಗೆ ದಾರಿ ಕಂಡುಕೊಳ್ಳುವ ಯೋಚನೆ ಮತ್ತು ಯೋಜನೆ. ರೆಸ್ಯೂಮ್ ಮಾಡಿ ಪ್ರಿಂಟ್ ಔಟ್ ತೆಗೆದು ಸಿಕ್ಕ ಮಿಕ್ಕ ವೆಬ್ಸೈಟ್ ಗಳಿಗೆಲ್ಲಾ ಅಪ್ಲೋಡ್ ಮಾಡಿಯಾಯ್ತು. ಬರೀ ಸಿಂಗಲ್ಲೋ ಡಬಲ್ಲೋ ಡಿಗ್ರಿಯಿದ್ದರೆ ಸಾಲಲ್ಲಾ ಅಂತಾ ಬೇರೆ ಹಾಳು ಮೂಳು ಅಡಿಷನಲ್ ಕೋರ್ಸ್ ಕೂಡ ಮಾಡಿದ್ದಾಯ್ತು, ಲಕ್ಷಗಟ್ಟಲೆ ಸುರಿದಿದ್ದೂ ಆಯ್ತು.
ಬಂಡವಾಳ ಹೋಯ್ತು, ಲಾಭಾ ?!
ಉಹುಂ , ಅವನ್ನೆಲ್ಲಾ ಕೇಳಬಾರ್ದು , ನಮ್ ಕನ್ನಡ ಕಮರ್ಷಿಯಲ್ ಪಿಚ್ಚರ್ ಥರಾ, ಕಥೆಗೂ ಲೋಕೇಶನ್ ಗೂ, ಹೀರೋ ಹೀರೋಯಿನ್ ಗೂ ಸಂಬಂಧಾ ಇದೆ ಇಲ್ಲಾ ಅನ್ನೋ ತರಹ....

ಆಹಾ ಜೀವನದ ಮೊದಲ ಜಾಬ್ ಅನ್ನೋ ಕೆಲಸ ಸಿಕ್ತು. ಹೇಳಿಕೊಳ್ಳೋಕೆ ನನ್ನ ಹೆಸರೂ ಇಲ್ಲದ, ಕನಿಷ್ಠ ನನ್ನ ಮುಖವನ್ನು ಅಂಟಿಸಿ ಅದರ ಕೆಳಗೆ ನನ್ನ ಹೆಸರನ್ನು ಕೈನಲ್ಲಿ ಬರೆದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕತ್ತಿನ ಪಟ್ಟಿಗೆ ಹಾಕಿಕೊಳ್ಳೋ ದಾರವೂ ಇಲ್ಲದ ಕಂಪನಿಯಲ್ಲಿ ಕೆಲಸ, ಸಂಬಳ ಕೈಗೆ , ಹಾರ್ಡ್ ಕ್ಯಾಶ್. ಅರ್ಧ ಮಾತ್ರವೇ.  ಮಿಕ್ಕಿದ ಅರ್ಧ ಸಂಬಳ ಮತ್ತೆ ಎರಡು ತಿಂಗಳಾದಮೇಲೆ, ಆ ತಿಂಗಳ ಸಂಬಳವೂ ಮತ್ತೆ ಮುಂದಿನ ತಿಂಗಳಿಗೆ. ಕೆಲಸ ಮಾತ್ರ ದಿನಕ್ಕೆ ಬರೋಬ್ಬರಿ ಹದಿಮೂರು ಹದಿನಾಲ್ಕು ಘಂಟೆಗಳು ಅಷ್ಟೇ.
ದಿನಕ್ಕೆ ಎಂಟರಿಂದ ಹತ್ತು BMTC ಬಸ್ ಗಳನ್ನು ಹತ್ತಿ ಇಳಿದು, ಪ್ರಯಾಣಿಸಿ ಆಫೀಸ್ ಅನ್ನೋ ನರಕಕ್ಕೆ ಹೋಗಬೇಕಾದ ಸ್ಥಿತಿ!!

ಆಮೇಲಾಮೇಲೆ ಜೀವನ ನನಗೇ ಆಶ್ಚರ್ಯವಾಗುವಂತೆ ಬದಲಾಯ್ತು, ಸಣ್ಣ ಬೋರ್ಡೆ ಇಲ್ಲದ ಕಂಪನಿಯಿಂದ ಎಂ ಎನ್ ಸೀ ಗಳೆಂದು ಕರೆಸಿಕೊಳ್ಳುವ ಊಟಕ್ಕೂ ನಿದ್ರೆಗೂ ಸಮಯವಿಲ್ಲದ ಸಮಯ ಕೊಡದ ಗಾಜಿನ, ಹವಾನಿಯಂತ್ರಿತ ನರಕದೊಳಕ್ಕೆ ಜೀವನ ಶುರುವಾಯ್ತು; ನಾನು ಬಂದು ಹೋಗಿ ಮಾಡುತ್ತಿದ್ದ BMTC ಬಸ್ಸುಗಳು ಪಾಪ ನನ್ನ ಆಫೀಸಿನ ಏಸೀ ಕಾರಿನ ಧೂಳಿನ ಹಿಂದೆಯೇ ಮರೀಚಿಕೆಯಾಗಿ ಬಿಡುತ್ತಿದ್ದವು; ನಾನು ಬಸ್ಸುಗಳಿಗೆ ಹತ್ತಿ ಯಾವುದೋ ಕಾಲವಾಗುತ್ತಾ ಬಂದಿತ್ತು.

ಹೈ ಫೈ ಐ ಡೀ ಕಾರ್ಡು, ಸ್ವೈಪ್ ಮಾಡದೇ ಒಳಗಡೆ ಹೋಗುವ ಹಾಗಿಲ್ಲ, ಮೊದಲ ದಿನ ಕಾರ್ಡ್ ಕೈಗೆ ಬಂದಾಗ ಆಶ್ಚರ್ಯ ಪಟ್ಟಿದ್ದೆ, ನನಗೂ ಇಂತಹ ಸೌಭಾಗ್ಯ ಬಂತಲ್ಲ ಎಂದು. ಸಂಬಳಕ್ಕೆ ಹಳೆಯ ಕಂಪನಿಯ ತರಹ ಕೇಳುವ ಪ್ರಮೇಯವೂ ಇಲ್ಲ, ನಿಗದಿತ ದಿನಾಂಕಕ್ಕೆ ನಮ್ಮದೇ ಆದ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು, ದುಡ್ಡು ತೆಗೆಯುವ ಪ್ರಸಂಗವೂ ಇಲ್ಲ, ಮನೆಯಲ್ಲೇ ನೆಟ್ ಬ್ಯಾಂಕಿಂಗ್ ವ್ಯವಹಾರ ಶುರು ಆಯ್ತು; ಅಂಗಡಿಗೆ ಹೋದರೂ ಕಾರ್ಡನ್ನು ನೀಡಿ ಸಹಿಯನ್ನು ಮಾಡಿ ಅಭ್ಯಾಸ ಆಯ್ತು. .
ಕ್ರೆಡಿಟ್ಟು , ಡೆಬಿಟ್ಟು , ಫ್ಯೂಯೆಲ್ಲು, ಡಿನ್ನರ್ ಎಲ್ಲಾ ಕಾರ್ಡುಗಳನ್ನು ತೆಗೆದುಕೊಂಡು ಕೊಟ್ಟು ಕ್ಲೋಸ್ ಮಾಡಿಸಿ ಎಲ್ಲಾ ಆಯ್ತು..
ಮೊದ ಮೊದಲು ಹಳೆ ಕಂಪನಿಯಲ್ಲಿದ್ದ ಕಾಲದಲ್ಲಿ ಬರೀ ಕನಸೇ ಆಗಿದ್ದ ದೊಡ್ಡ ಫೋನುಗಳು, ಟ್ಯಾಬ್ಲೆಟ್ಟುಗಳು, ಒಳ್ಳೆಯ ಬಟ್ಟೆ ಎಲ್ಲವೂ ಈಗ ಬೇಜಾರು, ಐ ಫೋನ್ ಕೂಡ ಮನೆಯಲ್ಲಿ ಎಲ್ಲೋ ಬಿದ್ದಿರುತ್ತದೆ. ಲಿವೈಸ್, ಅಡಿಡಾಸ್ , ನೈಕಿ, ರೀಬಾಕ್,  ಲೂಯಿ ಫಿಲಿಪ್, ಪ್ಯಾನ್ ಅಮೇರಿಕಾ, ಜಾನ್ಸ್ ಪ್ಲೇಯರ್, ಫ್ಲೈಯಿಂಗ್ ಮಶೀನ್ ಗಳು ಕೂಡ ಬೇಜಾರು.  ಚಿಕ್ಕವನಾಗಿದ್ದಾಗ ಅಪ್ಪ ಹೊಲಿಸಿ ಕೊಡುತ್ತಿದ್ದ ನೀಲಿ ಬಿಳಿಯ ಪ್ಯಾಂಟು ಅದರ ಮೇಲೊಂದು ಮ್ಯಾಚಿಂಗೇ ಆಗದ ಬಣ್ಣದ ಶರ್ಟು, ಅದೇ ಈಗ ಪ್ರೀತಿಯಾಗಿ ಆಪ್ತವೆನಿಸುತ್ತದೆ. ಅದರನ್ನು ಹಾಕಿಕೊಂಡರೆ ಕೆಲವರಿಗೆ ಅದು ಈಗ ಹುಚ್ಚು, ಅಥವಾ ಹೊಸಾ ಫ್ಯಾಶನ್!

ಅದಾದ ಮೇಲೆ ಎಷ್ಟೋ ಕಂಪನಿಗಳು ಬದಲಾದವು; ಎಷ್ಟೋ ಜನರ ಪರಿಚಯವಾಯ್ತು; ಮೊದಲು ಖಾತೆ ತೆರೆದ ಬ್ಯಾಂಕ್ ಅಕೌಂಟ್ ಎಲ್ಲೋ ಸತ್ತು ಹೋಗಿತ್ತು, ಅದಕ್ಕೂ ನೆಟ್ ಬ್ಯಾಂಕಿಂಗ್ ಬಂದು ಜೀವ ಬಂತು, ಈಗ ಇರೋ ಕಾರ್ಡ್ ಗಳಿಗೆ ಬೇರೆ ಬೇರೆ ಕಡೆ ಫೋನಿನ ಪಾಸ್ಬುಕ್ಕಲ್ಲೋ, NFC ಯಲ್ಲೋ ಹಾಕಿಡಬೇಕಾದ ಪರಿಸ್ಥಿತಿ.
ಇಷ್ಟಪಟ್ಟು ಮಾತನಾಡುತ್ತಿದ್ದ ಗೆಳೆಯರೆಲ್ಲಾ ದೂರವಾದರು, ಈ ಕೆಲಸದ ಒತ್ತಡದ ಮಧ್ಯೆ ಬರೀ ಫೇಸ್ಬುಕ್ ಚ್ಯಾಟ್ ಗಳಿಗಷ್ಟೇ ಸೀಮಿತವಾದರು, ಅವರ ಮುಖಗಳೆಲ್ಲಾ ಮರೆಯುತ್ತ ಬಂದಿದ್ದವು. ಇವನ್ನೆಲ್ಲಾ ನೆನೆಸಿಕೊಂಡರೆ ಹಳೆಯ ಆ ಕಂಪನಿ ಆ ಸುಖದ ದಿನಗಳೇ ಬೇಕೆನಿಸುತ್ತವೆ.

ಊರಿಗೆ ಹೋಗಿ ಬರುವುದೂ ಕಡಿಮೆಯಾಗುತ್ತಾ ಬಂದಿತ್ತು, ಅಮ್ಮನ ಅಡುಗೆಯ ರುಚಿ ಇಲ್ಲದೆ ನಾಲಿಗೆಯೂ ಸತ್ತಿತ್ತು ; ಹಬ್ಬ ಹರಿದಿನಗಳು ಆಫೀಸಿನ ಇಂಗ್ಲೀಶ್ ಕ್ಯಾಲೆಂಡರಿನಲ್ಲಿ ಮರೆಯಾಗಿದ್ದವು. ಸೋಶಿಯಲ್ ಸೈಟ್ ನಲ್ಲಿ ಹಬ್ಬದ ಬಗ್ಗೆ ಬಂದಾಗ ಕಣ್ಣುಗಳು ಮಾತ್ರ ಅಳುತ್ತಿದ್ದವು, ಹೃದಯ ಮಾತ್ರ ಗಟ್ಟಿ ಗಟ್ಟಿ. ಹೃದಯವೂ ನೀರಾದರೆ ಬದುಕುವ ಶಕ್ತಿ ಜೀವಕ್ಕೆಲ್ಲಿತ್ತು?

ಇಷ್ಟೆಲ್ಲಾ ಈಗ ಅರ್ಧ ಮರ್ಧ ನೆನಪಾಗಲು ಕಾರಣ ಏನೋ ಕ್ಲೀನ್ ಮಾಡಿ ಏನೋ ಹುಡುಕುತ್ತಿದ್ದೆ, ಆಗ ಹಳೆಯ ವ್ಯಾಲೆಟ್ ನಲ್ಲಿ ಐನೂರರ ಒಂದು ನೋಟು, ನೂರರ ಮೂರು, ಐವತ್ತರ ಎರಡು, ಇಪ್ಪತ್ತರ ನಾಲ್ಕು, ಐದರ ಎರಡು, ಹತ್ತರ ಒಂದು ನೋಟುಗಳು ಮುದುಡಿ ಈಗಲೋ ಆಗಲೋ ಎಂದು ಅಳುತ್ತಾ ನಡುಗುತ್ತಾ ಕೂತಿವೆ, ಯಾವ ಕಾಲದಲ್ಲಿ ಯಾವಾಗ ನಾನೇ ಇಟ್ಟಿದ್ದೆನೋ ನನಗಂತೂ ನೆನಪಿಲ್ಲ; ಅದನ್ನು ನೋಡಿ ನನ್ನ ಕಣ್ಣೆಲ್ಲಾ ಫಳ ಫಳ ಹೊಳೆಯಲು ಶುರು ಮಾಡಿಬಿಟ್ಟಿತ್ತು!!

ಏನೇ ಮಾಡಿದರೂ ಎಷ್ಟೇ ದುಡಿದರೂ ಆ ದುಡ್ಡಿಗೆ ಸಮನಾದ ದುಡ್ಡಿಲ್ಲ, ಅದೇ ಪ್ರೀತಿಯಲ್ಲಿ ಅದನ್ನು ಖರ್ಚು ಮಾಡಲು ಮನಸೇ ಬರುತ್ತಿಲ್ಲ, ಆದರೂ ಅದರಿಂದ ನೂರೈವತ್ತು ರೂಪಾಯಿ ತೆಗೆದು ಈಗಷ್ಟೇ ತಣ್ಣಗೆ ಐಸ್ ಕ್ರೀಂ ತಿಂದು ಬಂದೆ :)

ದುಡ್ಡು ತಣ್ಣಗೆ ಐಬ್ಯಾಕೊ ದಲ್ಲಿನ ಕ್ಯಾಶ್ ಬಾಕ್ಸ್ ನಲ್ಲಿ ನಗುತ್ತಿದ್ದರೆ ಯಾವಾಗಲೂ ಸಪ್ಪೆಯಿಂದಿರುತ್ತಿದ್ದ ನನ್ನ ಹೃದಯ ಮತ್ತು ಮುಖದಲ್ಲಿ ಏನೋ ಗೆದ್ದ, ಸಾಧಿಸಿಧ ಧನ್ಯತಾಭಾವದ ಮುಗುಳ್ನಗೆ ತೇಲುತ್ತಿತ್ತು.