Sunday, March 13, 2011

ಕೈ ಬರೆದಿದ್ದು, ಮನಸು ಅತ್ತಿದ್ದು- 1, Boyz Hostel:)

ಹಿಂಗೇ ಸುಮ್ನೆ... ಕಂಡಿದ್ದು, ಕೇಳಿದ್ದು, ಮತ್ತು ಹೇಳಿದ್ದು...

 

''
ಲೋ, ಮಚ್ಚಾ ಒಂದರ್ಧಾ ಸೋಪಿದ್ರೆ ಕೊಡೋ..........?!..''
''
ಉಹುಂ, ಇಲ್ಲಾ ಮಗಾ...''
''
ಹೋಗ್ಲೀ, ಶಾಂಪೂನಾದ್ರೂ ಇಟ್ಟೀದೀಯಾ?....ಶೀಗೆಕಾಯಿ....??...''
''
ಉಹುಂ..ಇಲ್ಲಾ, ಸುಮ್ನೆ ನಿದ್ದೆ ಹಾಳು ಮಾಡಿದ್ರೆ ಒದೆ ತಿಂತೀಯಾ........!!''
''
ಲೋ, ಶಾಂಪೂ ಚಿಕ್ದೂ ಇಲ್ವೇನೋ? ಮೊನ್ನೆ ಕೀ ಬೋರ್ಡ್ ಕೆಳಗಡೆ ನೋಡ್ದಂಗೆ ಇತ್ತು.........''
''
ಏನೂ ಇಲ್ಲಾ ಅಂದ್ರೆ ಗೊತ್ತಾಗಲ್ವಾ, ಕಿವಿ ಕೇಳಲ್ವಾ, ಅಥ್ವಾ ಕನ್ನಡ ಬರೋಲ್ವಾ?''
''
ಲೋ ಪ್ಲೀಸ್ ಕೊಡೋ, ಆಮೇಲ್ ತಂದು ಕೊಡ್ತೀನೋ, ನಂಗೆ ಬೇಗ ಕ್ಲಾಸ್ ಇದೆ, ಹೋಗ್ಬೇಕು ಮಚ್ಚಾ....''
''
ನೀನ್ ಹೋಗೋದಾದ್ರೆ ಹೋಗು, ನನ್ ನಿದ್ದೆ ಈಗ ಹಾಳು ಮಾಡಿದ್ರೆ ನೀನ್ ಹೋಗೋದ್ ಕಾಲೇಜ್ ಗೆ ಅಲ್ಲಾ, ಆಸ್ಪತ್ರೆಗೆ ನೋಡ್ತಾ ಇರು............''
                                 -----------
ಥರದ ಜಗಳ/ಸಂಭಾಷಣೆಗಳಿಂದ ಆರಂಭವಾಗುವ ದಿನ ಶುರುವಾಗುತ್ತದೆ ಎಲ್ಲರ ನಿದ್ದೆಯನ್ನೂ ಹಾಳು ಮಾಡುವ ಮೂಲಕ... ನಾನ್ ಹೇಳ್ತಾ ಇರೋದು ಎಲ್ಲೀದು ಅಂತ ಗೊತ್ತಾಯ್ತಾ? ಹಾಸ್ಟೆಲ್, ಬಾಯ್ಸ್ ಹಾಸ್ಟೆಲ್ ಬಗ್ಗೆನೇ! ಇದೆ ಒಂಥರಾ ವಿಚಿತ್ರ ಲೋಕ, ನರಕ, ಹಿಂಸೆ, ಆನಂದ, ಮತ್ತು ಭೂಮಿ ಮೇಲಿನ ಸ್ವರ್ಗ..!!
                                   -----------

ಹ್ಮ್ಮ್,
''
ಹಾಸ್ಟೆಲ್ ಅಂದ್ರೆ ಹೆದ್ರಿಕೆ, ನಾನ್ ಅಲ್ಲಿಗೆ ಹೋಗಲ್ಲಮ್ಮಾ....''
''
ಏನೂ ಆಗಲ್ಲ, ಅಲ್ಲಿರೋರೆಲ್ಲಾ ನಿನ್ನ ಥರಾನೇ, ಆಮೇಲಾಮೇಲೆ ಫ್ರೆಂಡ್ಸ್ ಆಗ್ತಾರೆ ಕಣೋ...''
''
ಆದ್ರೂ.........''
''
ಆದ್ರೂ ಇಲ್ಲ, ಗೀದ್ರೂ ಇಲ್ಲಾ, ನಾಳೇನೇ ಹೊರಡ್ಬೇಕು, ಈಗ ಲೇಟಾಯ್ತು.. ಮಲ್ಕೋ...''
''
ಅಮ್ಮಾ, ಪ್ಲೀಸ್ ಬೇಡಮ್ಮಾ, ನಾನ್ ಅಲ್ಲಿಗೆ ಹೋಗಲ್ಲಮ್ಮ... ಪ್ಲೀಸ್ ಅಮ್ಮಾ....., ಅಮ್ಮಾ................''
''
ಲಗೇಜ್ ಎಲ್ಲಾ ಪ್ಯಾಕ್ ಆಗಿದೆ, ಸ್ವಲ್ಪಾ ತಿಂಡಿ ಕೂಡ ಹಾಕಿಟ್ಟಿದೀನಿ, ಪಪ್ಪನ್ ಜೊತೆ ಹೊರ್ಡು..., ನಂಗೆ ಬರಕಾಗಲ್ಲ, ಆಫೀಸಿದೆ....''
ಅತ್ತ ಅಮ್ಮನ ಮಾತಿನ ಸುರಿಮಳೆ ಮುಂದುವರಿಯುತ್ತಲೇ ಇತ್ತು...
ಇತ್ತ ಕಣ್ಣೀರು ನೆಲಕ್ಕೆ ಸೇರಿ ಇನ್ನೇನು ಹೊಳೆಯಾಗಿ ಹರಿಯಲು ಅಣಿಯಾಗುತ್ತಿತ್ತು...
ಅಂತೂ ಇಂತೂ ಮಗರಾಯನನ್ನು ಒತ್ತಾಯ ಮಾಡಿ ಹಾಸ್ಟೆಲ್ ನಲ್ಲಿ ಇರೋಕೆ / ಇಡೋಕೆ ಒಪ್ಸಿದ್ದಾಯ್ತು..
ಅವನು ಏನಾಗ್ತಾನೋ ಏನೋ, ಇನ್ನಾದ್ರೂ ಉದ್ಧಾರ ಆದ್ರೆ ಸಾಕಿತ್ತಪ್ಪಾ ದೇವ್ರೆ!.. ದೇವ್ರೇ ನೀನೇ ಅವ್ನ ಕಾಪಾಡ್ಬೇಕು... ಕಡಿಮೆ ಅಂಕಗಳನ್ನು ತೆಗೆದುಕೊಂಡ ಮಗನ ಮುಖವನ್ನೇ ನೆನೆಯುತ್ತ ಅಮ್ಮ ಗೋಡೆಯ ಮೇಲಿನ ದೇವರ ಫೋಟೋವನ್ನೇ ದಿಟ್ಟಿಸುತ್ತ, ವಂದಿಸುತ್ತಾ ಹೇಳುತ್ತಿದ್ದರೆ...
''
ಹೂಂ, ವಟಗುಟ್ಟಿದ್ದು  ಸಾಕು., ಅಲ್ಲಿರೋ ಸ್ವಿಚ್ ನಾ ಆಫ್ ಮಾಡಿ ಬಿದ್ಕೋ....''
''
ಬೆಳಿಗ್ಗೆ ಬೇಗ ಎದ್ದು ತಿಂಡಿ ಮಾಡು, ನಿಂಗೂ ಆಫೀಸ್ ಇದೆ ಅಲ್ವಾ? ಅವ್ನ್ ಹೋಗಿ ಬಿಟ್ಟು ಬರೋದು ಬೇಡ್ವಾ..?? ಅಪ್ಪನ ಆಜ್ಞೆ ಅಮ್ಮನಿಗೆ....
ಮನೆಯವರಿಗೆಲ್ಲಾ ಟಾಟಾ ಮಾಡಿ, ಏರ್ ಬ್ಯಾಗ್ ಹೆಗ್ಲಿಗ್ ಹಾಕ್ಕೊಂಡು ರೆಡಿ ಆಗು, ಸೂಟ್ ಕೇಸ್ ಪಪ್ಪಾ ಹಿಡ್ಕೋತಾರೆ.. ನಾನು 2 ಜೊತೆ ಚಪ್ಲಿ, ಒಂದು ಲೋಟ, ತಟ್ಟೆ, ಬಕೆಟ್, ಮಗ್, ಸೋಪು, ಬ್ರಶ್ಹು, ಟವೆಲ್, ಬಟ್ಟೆ ಇಷ್ಟು ಹಾಕಿಟ್ಟಿದೀನಿ ಸಾಕಲ್ವ? ಮಿಕ್ಕಿದ್ದು ನೀನು ಹಾಕ್ಕೊಂಡಿದೀಯ ಅಲ್ವೇನೋ..??
''ಹೂಂ ಅಮ್ಮಾ.....''

ಅಂತೂ ಅಷ್ಟೂ ಬ್ಯಾಗ್ ಮತ್ತು ಎಲ್ಲ ದೊಡ್ಡ ಬ್ಯಾಗುಗಳನ್ನೂ ಮೀರಿದ ನೆನಪುಗಳನ್ನು ಹೊತ್ತು ಒಂದು ಕಡೆ ಬಂದು ಸೇರಿದ್ದಾಯ್ತು..
''ಹ್ಮ್, ಉಸ್ಸಪ್ಪಾ... ಅಂತೂ ಇಂತೂ ಬಂದು ತಲುಪ್ದ್ವಿ.. ಏನಾದ್ರೂ ತಿಂತೀಯೇನೋ..??
''ಬೇಡಪ್ಪಾ...."
''ಸರೀ, ಹಾಗಾದ್ರೆ ಹಾಸ್ಟೆಲ್ ಗೆ ಹೋಗೋಣ್ವಾ?
''ಹೂಂ............''
                  -----------------------

''ಯಾವ್ ಜಾತಿ..?''
''ಬ್ರಾಹ್ಮಣ''
''ನೀವ್ ಏನ್ ಮಾಡ್ತಾ ಇದೀರಿ?''
''ಊರಲ್ಲಿ ಸಣ್ಣ ನಂದೊಂದು ಆಫೀಸ್ ಇದೆ ಸರ್, ಚಿಕ್ಕ ಪುಟ್ಟ ವ್ಯವಹಾರ...''
''ಮಗ................?''
''ಈಗ ಎಸ್.ಎಸ್.ಎಲ್.ಸೀ ಮುಗ್ದಿದೆ, ಪೀ.ಯೂ.ಸೀ ಮಾಡ್ತಾನಂತೆ...''
''ಯಾಕ್ರೀ ಎಲ್ಲಾದಕ್ಕೂ ನೀವೇ ಅಂತೀರಾ, ಮಗಾ ಏನ್ ಮೂಗಾನ..?''
'', ಅಲ್ಲಾ .....ಸಾ......ರ್....., ಏಯ್ ಮಾತಾಡೋ, ತಲೆ ಮೇಲೆ ಮೆಲ್ಲಗೆ ಮಗನಿಗೆ ಮೊಟಕುತ್ತಾ ಅಪ್ಪ ಹೇಳಿದ'...''
''ಅಪ್ಪಾ, ಸಾರ್. ಅದು..ಅದು...ಏನನ್ನೋ ಹೇಳಲು ಹೊರಟ ಅವನು ಮತ್ತೇನನ್ನೋ ಹೇಳಿದ.. ಪಾಪ ಅವನ ಮನಸ್ಸು ಮನೆಯ ಬಗ್ಗೇ, ಅಮ್ಮನ ಬಗ್ಗೇ, ಮತ್ತು ಬಿಟ್ಟು ಬಂದ ಹಳೆಯ ನೆನಪುಗಳು, ತನ್ನನ್ನು ಇಲ್ಲಿಯತನಕ ಕರೆದುಕೊಂಡು ಬಂದ ಜೀವನದ ಹಾಗೂ ಬಸ್ಸಿನ ದಾರಿಯ ಬಗ್ಗೇ ಚಿಂತಿಸುತ್ತಿದ್ದವು..! ಅಪ್ಪನು ಮೊಟಕಿದ ಮೇಲೆಯೇ ಅವನು ಲೋಕಕ್ಕೆ ಬಂದಿದ್ದು, ಅಪ್ಪ ಮೊಟಕಿ ಆದ ಮೇಲೆಯೇ ಅವನ ಕಣ್ಣಲ್ಲಿದ್ದ ಎರಡು-ಮೂರು ಕಣ್ಣ ನೀರಿನ ಹನಿಗಳು ಅವನಿಗೇ ಗೊತ್ತಿಲ್ಲದಂತೆ ಅವನ ಕೈ ಮೇಲೆ ಬಿದ್ದಿದ್ದು...
''ಅವನ ಕಣ್ಣಂಚಿನ ನೀರನ್ನು ಯಾರೂ ನೋಡಲೇ ಇಲ್ಲ, ನೋಡಿಯೂ ಇಲ್ಲ...
ಮೇಲಿನ ಮನೆಯ ಮೆತ್ತಿಯ ಮೇಲೆ ಅತ್ತಾಗಲೂ ಸಮಾಧಾನ ಮಾಡಲೂ ಯಾರೂ ಬಂದಿಲ್ಲ,.
ಆಗಲೇ ಇಲ್ಲದಿದ್ದುದು ಅವನಿಗೆ ಈಗ ಅದು ಯಾವುವೂ ಬೇಕಾಗಿಲ್ಲ..
ಒಂದರ್ಥದಲ್ಲಿ ಅವರ್ಯಾರೂ ಈಗ ಅವನಿಗೆ ಬೇಡವೂ ಬೇಡ...
ಅವರಿಗೂ ಇವನು ಬೇಕೋ ಬೇಡವೋ , ದೇವರೇ ಬಲ್ಲ!''
''ಹೂಂ, ರಿಸೀಟ್ ನಾ ನಾಳೆ ನಿಮ್ ಹುಡ್ಗನ್ ಕೈಲೇ ಕೊಡ್ತೀನಿ, ಚೇಂಜ್ ಕೂಡ ಅವ್ನಿಗೇ ಕೊಡ್ತೀನಿ.. ನೀವಿನ್ನು ಹೊರಡ್ಬಹ್ದು..'' ವಾರ್ಡನ್ ಗಂಟಲಿನಿಂದ ಆಜ್ಞೆ ಬೆರೆತ ಧ್ವನಿ ಹೊರಗೆ ಬಿತ್ತು..
''ಧನ್ಯವಾದಗಳು, ಬರ್ತೀನಿ ಸರ್..''
                           *****
''ನೋಡು ಮಗಾ, ಇನ್ಮೇಲಿಂದಾ ನಿನ್ನದು ಇದೇ ಮನೆ.. ಚೆನ್ನಾಗಿ ಓದು.. ಒಳ್ಳೇ ಹೆಸರು ತಗೋ.. ಉದ್ಧಾರ ಆಗು, ದುಡ್ಡನ್ನು ನೀರಿನ ಥರ ಖಾಲಿ ಮಾಡ್ಬೇಡ, ಮತ್ತೆ ಫೋನ್ ಮಾಡ್ತಾ ಇರು.. ಬೇಜಾರಾದಾಗ ನಾನೇ ಬರ್ತೀನಿ.. ಮುಂದಿನ ತಿಂಗ್ಳು ಅಮ್ಮನ್ನಾ ನಿನ್ನ ನೋಡೋಕ್ ಕಳ್ಸ್ತೀನಿ ಆಯ್ತಾ? ನೂರರ ಎರಡು ಗರಿ ಗರಿಯಾದ ನೋಟನ್ನು ಆಗ ತಾನೇ ಮಾಡಿಸಿಕೊಂಡು ಬಂದ ಹೊಸ ಬಿಸಿ ಬೀಗದ ಕೈ ಕೆಳಗಿಟ್ಟು ಅಪ್ಪ ಹೊರಟೇಬಿಟ್ಟ. ಇತ್ತ ಮಗ ಎಲ್ಲವನ್ನೂ ಕೇಳಿಸಿಕೊಂಡು ಏನೂ ಅರ್ಥವಾಗದೇ ತನ್ನ ಕಣ್ಣಿನಿಂದ ಎಲ್ಲವನ್ನೂ ಒಮ್ಮೆಲೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ,
''ಲೋ ಮಗಾ, ಆ ರೂಮ್ ಗೆ ಯಾವನೋ ಹೊಸಾ ಹುಡ್ಗ ಬಂದಿದಾನಂತೆ.. ಅವ್ನಾ ಕರೀ, ಸ್ವಲ್ಪಾ ಮಜಾ ತಗೊಳೋಣಾ.,'' ಎಂಬ ಧ್ವನಿ ಅತ್ತಲಿಂದ ಆದೇಶವಾಗಿದ್ದು ಈ ಹುಡುಗನಿಗೆ ಸ್ಪಷ್ಟವಾಗಿ ಇಲ್ಲಿಂದಲೇ ಕೇಳಿತ್ತು.
''ಇಲ್ಲಪ್ಪಾ, ನಾನ್ ಬರೋಲ್ಲಾ...''
''ಏಯ್ ಬಾರೋ, ಏನ್ ಗಾಂಚಾಲಿ ಮಾಡ್ತೀಯ, ಕರೀತಿರೋದು ಈ ಹಾಸ್ಟೆಲ್ ನ ಟಾಪ್ ಮೋಸ್ಟ್ ಸೀನಿಯರ್ ಓಕೆ, ಅದೇಕೆ, ಅದ್ ಹೆಂಗ್ ಬರಲ್ಲಾ ನೀನು, ನಾನೂ ನೋಡ್ತೀನಿ ಮಗ್ನೆ...'' ಅಲ್ಲಿ ಚಿಕ್ಕ ಸೀನಿಯರ್ ಅನ್ನಿಸಿಕೊಂಡವನ ಧ್ವನಿ ಮುಗಿಲಿಗೇ ಕಿಚ್ಚು ಹಚ್ಚುವಷ್ಟು ಜೋರಾಗಿ ಅದರ ಜೊತೆ ಅವನ ರಕ್ತವೂ ಬಿಸಿಯಾಗಿ ಕುದಿಯುತ್ತಿತ್ತು..
''ಅವ್ನು ಬರಲ್ಲಾ ಅಂದ...''
''ಅವ್ನಿಗೆ ಕೊಬ್ಬು ಸ್ವಲ್ಪಾ ಜಾಸ್ತೀನೇ ಅಂತ ಕಾಣುತ್ತೆ...'' ಇನ್ನೊಬ್ಬ ಪಿಸುಗುಟ್ಟಿದ..
''ಲೋ, ಅವ್ನ್ ಬರ್ದಿದ್ರೆ ಏನಾಯ್ತು? ನಾವೇ ಹೋಗೋಣ ತಡೀರಿ.. ಈ ಸಿಗರೆಟ್ ಅರ್ಧ ಇದೆ, ಪೂರ್ತಿ ಮುಗಿದು ಹೋಗ್ಲಿ.. ಕೈನಲ್ಲಿರುವ ಸಿಗರೆಟ್ ನ ಹೊಗೆಯನ್ನು ಬೀಳಿಸುತ್ತಾ ಅಪಹಾಸ್ಯದಲ್ಲಿ ನಗುತ್ತಾ ಸೀನಿಯರ್ ಎನಿಸಿಕೊಂಡ ಒಬ್ಬ ಹುಡುಗ ಅರಚುತ್ತಿದ್ದ...
''ಮಗಾ ಎಲ್ಲರ್ಗೂ ಮೆಸೇಜ್ ಹಾಕು, ಎಲ್ರೂ ಬರ್ಲೀ, ಮೆಸ್ಸ್ ಗೆ ಕರ್ಸೀ ಆ ಹುಡ್ಗನ್ನಾ... ಅವ್ನಜ್ಜಿ ಅವ್ನಿಗೆ ಇದೆ ಇವತ್ತು ಹಬ್ಬಾ, ಬಾ ಅಂದ್ರೆ ಬರೋಕಾಗಲ್ವಾ ಅವಂಗೆ, ಇವತ್ತು ಚೆನ್ನಾಗಿ ಅವ್ನ್ ಮೈನಲ್ಲಿ ಇರೋ ಎಲ್ಲಾ ಕೊಬ್ಬೂ ಇಳ್ಸೋಣಾ...'' ಒಬ್ಬೊಬ್ಬರು ತಲೆಗೊಂದು ಮಾತಿನಂತೆ ಆಡುತ್ತಿದ್ದರು...
                               ********
ಅನಿಸುತಿದೆ ಯಾಕೋ ಇಂದು, ನೀನೇನೆ... ಹೂಂ... ಹೂಂ....
ಇವನು ಬಾಯಲ್ಲಿ ಮುಂಗಾರು ಮಳೆಯ ಹಾಡನ್ನು ಗುನುಗಿಕೊಂಡು ತನ್ನ ಇರೋ ಬರೋ ಹಳೆಯ ಮತ್ತು ಹೊಸ ಬಟ್ಟೆಗಳನ್ನು ಮೂಲೆಯಿಂದ ಮೂಲೆಗೆ ಕಟ್ಟಿರುವ ತಿಳಿ ಹಳದಿ ಬಣ್ಣದ ಪ್ಲಾಸ್ಟಿಕ್ ದಾರಕ್ಕೆ ಇರುವ ಮೂರು ಹ್ಯಾಂಗರ್ ನಲ್ಲಿಯೇ ಚೆನ್ನಾಗಿ ಇಟ್ಟುಕೊಳ್ಳುವ ಹೊತ್ತಿಗೆ ಅವನು ಬಂದು ಮತ್ತೆ ಕೇಳಿದ..
''ಏಯ್ ಬರ್ತೀಯೋ, ಇಲ್ಲಾ ಈಗ ನಾವೇ ಎಳ್ಕೊಂಡು ಹೋಗ್ಲೋ..?''
''ಹೂಂ ಬರ್ತೀನಿ ಅಣ್ಣಾ....''
''ಅಣ್ಣಾ ಗಿಣ್ಣಾ ಎಲ್ಲ ಬ್ಯಾಡಾ ಮಗಾ, ಸಾರ್ , ಸಾರ್ ಅಂಥಾ ಹೇಳ್ಬೇಕು ಆಯ್ತಾ?''
ಅವನಿಗೆ ಆಗಲೇ ಬೆವರ ಹನಿಗಳು ಒಂದರ ಹಿಂದೆ ಒಂದು ಓಟಕ್ಕೆ ಬಿದ್ದವರಂತೆ ಓಡತೊಡಗಿದ್ದವು. ಕಣ್ಣಲ್ಲಿ ನೀರು ನಿಧಾನವಾಗಿ ನಡಿಗೆಯಲ್ಲಿದ್ದವು..
ಅವನು ಮೆಸ್ಸಿಗೆ ಬಂದ ತಕ್ಷಣ ಎಲ್ಲರೂ ಜೋರಾಗಿ ಒಮ್ಮೆಲೇ ನಕ್ಕು ಆಮೇಲೆ ಗಕ್ಕನೇ ನಿಲ್ಲಿಸಿಬಿಟ್ಟರು.. ಇವನು ಒಮ್ಮೆಲೇ ಅವಾಕ್ಕಾದ!
''ಲೋ ಹುಡ್ಗಾ ನಿನ್ ಪರಿಚಯ ಮಾಡ್ಕೋ..''
''ಪರಿಚಯ ಅಂದ್ರೆ...??!''
''ಪರಿಚಯ ಅಂದ್ರೆ ಪಿಚ್ಚರ್, ಪರಿಚಯ ಅನ್ನೋ ಪಿಚ್ಚರ್ ಬಂತಲ್ಲಾ ಅದು, ಆ ಫಿಲಮ್ಮು ನೋಡಿದೀಯಾ?''
''ಇಲ್ಲಣ್ಣಾ, ಸಾರೀ ಇಲ್ಲಾ 'ಸಾರ್'!..."
''ಓಹೋ, ಯಾಕೋ? ಫಿಲಮ್ಮು ಗಿಲಮ್ಮು ನೋಡೋ ಒಳ್ಳೆ ಅಭ್ಯಾಸ ನಿಂಗಿಲ್ವಾ..??'' ಹ್ಹಾ ಹ್ಹಾ, ಮೆಸ್ಸಿನ ತುಂಬಾ ಒಂದು ರೀತಿಯ ಉಸಿರುಗಟ್ಟಿಸುವ ಅವರ ಕೇಕೆ, ನಿಂದನೆ..
''ಹೋಗ್ಲೀ, ರೀಸೆಂಟ್ ಆಗಿ ಯಾವ್ ಪಿಚ್ಚರ್ ನೋಡಿದೀಯ?''
''ಮುಂಗಾರು ಮಳೆ ಸಾರ್...!''
''ಅದಲ್ದೇ ಮತ್ತೆ ಯಾವ್ದು? ಇವ್ನು ಇನ್ನೂ ಅಪ್ಡೇಟ್ ಆಗಿಲ್ಲ, ಆಗ ನಾನು ಕರ್ಯೋಕ್ ಹೋದಾಗ್ಲೂ ಅದ್ನೇ ಅರಚ್ತಿದ್ದಾ.... ಹ್ಹಾ ಹ್ಹಾ....!!'' ಮತ್ತೊಬ್ಬನ ನಗು ತೇಲಿಬಂತು...
''ಹ್ಹಾ ಹ್ಹಾ ನೋಡ್ರೋ ಮುಂಗಾರು ಮಳೆಯಂತೆ... ನೀನೂ ದೇವದಾಸ ಕಣೋ...''
''ಲೋ ದೇವದಾಸ ನಿಂಗೆ ಲವ್ವರ್ ಇದಾಳೇನೋ?'' 'ದೇವದಾಸ' ಇವ್ನಿಗೆ ಇದೇ ಅಡ್ಡ ಹೆಸ್ರು ಬಿದ್ದೋಯ್ತು.. ಹಾಸ್ಟೆಲ್ ಗಳಲ್ಲಿ ಹೀಗೆ ಅಡ್ಡ ಹೆಸ್ರು ಬೀಳೋದೇ ಇಂಥದ್ದೇ ಸಂಧರ್ಭಗಳಲ್ಲಿ..!!
''ಇಲ್ಲಾ ಸಾರ್...''
''ಹ್ಮ್ಮ್,?? ಹೋಗ್ಲೀ ಬಿಡು... ಗರ್ಲ್ ಫ್ರೆಂಡು?''
''ಅದೂ ಇಲ್ಲಾ ಸಾರ್...''
'' ಹ್ಹಾ ಹ್ಹಾ, ಮತ್ಯಾಕ್ ಭೂಮಿ ಮೇಲೆ ಬದ್ಕಿದೀಯ? ಹೋಗಿ ಯಾವ್ದಾರೂ ಮಠ ಸೇರ್ಕೋ..''
''ಈಗ ಮಠ ದಲ್ಲಿ ಇರೋರ್ಗೂ ಎಲ್ರೂ ಇರ್ತಾರೆ, ಆದ್ರೆ ಯಾರೂ ಓಪನ್ ಆಗಿ ಇರಲ್ಲಾ...'' ಗುಂಪಿನಿಂದ ಒಂದು ಮಾತು  ಹೀಗೆ ಬಂದಿದ್ದು ಯಾರಿಗೂ ಕೇಳಲಿಲ್ಲ...
''ಬಿಡು ಎಲ್ಲದೂ ಹಾಳಾಗೋಗ್ಲೀ... ಹಾಸ್ಟೆಲ್ ರೂಲ್ಸ್ ಗೊತ್ತಾ?''
''ಹಾಸ್ಟೆಲ್ ರೂಲ್ಸಾ? ಹಂಗಂದ್ರೆ?''
''ಲೋ ದೇವ್ದಾಸ, ನಾವ್ ನಿಂಗೆ ಪ್ರಶ್ನೆ ಕೇಳ್ತಾ ಇದೀವೋ? ಇಲ್ಲಾ ನೀನೇ ನಮ್ಗೆಲ್ಲ ರಾಗಿಂಗ್ ಮಾಡ್ತಾ ಇದೀಯೋ..?? ಉತ್ರಾ ಕೊಡೋ ಅಂದ್ರೆ ಆಗಿಂದಾ ಬರೀ ನಮ್ಗೆನೇ ಪ್ರಶ್ನೆ ಕೇಳ್ತಾ ಅವ್ನೆ!..''
''______________________'' ಅವನ ಕಡೆಯಿಂದ ಯಾವ ಉತ್ತರವೂ ಬಂದಿಲ್ಲ..
''ಮಾತಾಡೋ, ಮಾತಾಡೋ ನಿನ್...., ಲೋ ಹುಚ್ನನ್ಮಗ್ನೆ....'' ಆ ಕಡೆಯಿಂದ ಇವನು ಕೇಳದೇ ಇರೋ ಶಬ್ಧಗಳ ಬೈಗುಳ ಶುರುವಾಗಿತ್ತು...
''ಇವ್ನು ಮಾತಂತೂ ಆಡಲ್ಲಾ, ಎಲ್ರೂ ಸೇರಿ ಇವ್ನಿಗೆ ಟ್ರೀಟ್ ಕೊಡೋಣ್ವಾ?? ಲೈಟ್ ಆಫ್ ಮಾಡ್ರೋ....'' ಯಾವುದೋ ಧ್ವನಿ ಆ ನಡು ರಾತ್ರಿಯಲ್ಲಿ ಒಂದು ತರಹದ ವಿಚಿತ್ರವಾದ ಮುಖದೊಂದಿಗೆ ವಿಲಕ್ಷಣ ಸಂತೋಷವನ್ನು ಹೊತ್ತು ಮೆರೆಯುತ್ತಿತ್ತು..
ಒಬ್ಬನೇ ಒಬ್ಬನಿಗೆ ಗಡದ್ದಾಗಿ ತಿಂದ  ಐವತ್ತು ಜನ ಸೇರಿ ಹಸಿದ ಹೊಟ್ಟೆಯಲ್ಲಿ ಇದ್ದ ದೇವದಾಸನಿಗೆ ಕತ್ತಲಲ್ಲಿ ಸರಿಯಾಗಿ ಟ್ರೀಟ್ ಕೊಟ್ಟರು... ಟ್ರೀಟ್ ಕೊಡೋದು ಅಂದ್ರೆ ಸರಿಯಾಗಿ ಹಿಗ್ಗಾ ಮುಗ್ಗಾ ಥಳಿಸೋದು, ಮುಖಾ ಮೂತಿ ನೋಡದೇ ಯಾರು ಎಲ್ಲಿಗೆ ಎಷ್ಟು ಹೊತ್ತು ಬೇಕಾದರೂ ಥಳಿಸಬಹುದು...!!
ಆ ರಾತ್ರಿ ಅವನು ಅವರ ಟ್ರೀಟ್ ಮತ್ತು ಅವನ ಕಣ್ಣೀರಿನೊಂದಿಗೇ ಬೆಳಗು ಮಾಡಿದ..
ಹಾಸಿಗೆಯೆಲ್ಲಾ ಕಣ್ಣೀರಿನೊಂದಿಗೆ ಒದ್ದೆ,
ಮನಸು ಹಸಿ ಬಿಸಿ ನೆನಪುಗಳಿಂದ.......
                                --------------
ಮನೆಯಲ್ಲಿ ಫೋನ್ ಘಂಟೆ ಮೊಳಗಿಳಸಲು ಶುರುವಿಟ್ಟುಕೊಂಡಿತು..
ಮಗಂದೇ
ಫೋನ್, ಅಮ್ಮ ಉಸುರಿದಳು.
''ಹ್ಮ್, ಮಗ ಅಂತೆ ಮಗಾ, ಯಾಕ್ ಅವ್ನಿಗೆ ಬೇರೆ ಕೆಲ್ಸಾ ಇಲ್ವಾ ಮಾಡೋಕೆ? ಕಾಲೇಜ್ ಇಲ್ವಾ? ಹೊತ್ನಲ್ಲಿ ಅವ್ನ್ ಯಾಕೆಫೋನ್ ಮಾಡ್ತಾನೆ? ಅಪ್ಪ ಹೇಳಿದ.
''ಹೆಲೋ, ಅಪ್ಪಾ ನಾನಪ್ಪಾ........''
''ಹೂಂ, ಹೇಳೋ,. ಎನ್ಮಾಡ್ತಿದೀಯಾ? ಓದ್ತೀದೀಯ? ಎಗ್ಸಾಮ್ ಆಯ್ತಾ? ''
ಕಡೆಯಿಂದ ಏದುಸಿರು, ಒಂದೇ ಸಮನೆ ಅಳು.. ಕೈನಲ್ಲಿರೋ ಕರ್ಚೀಫ್ ಒದ್ದೆ-ಮುದ್ದೆ!
''ಲೋ, ಏನಾಯ್ತೋ ಹೇಳೋ? ಯಾಕ್ ಅಳ್ತೀದೀಯ?''
''ಅಪ್ಪಾ,,,.... ಅಪ್ಪಾ, ನಾನು ಇಲ್ಲಿ ಇರೋಲ್ಲಾಪಾ, ಇಲ್ಲಿರೋ ಹುಡುಗ್ರು ಸರೀ ಇಲ್ಲ.. ತುಂಬಾ ಹೊಡೀತಾರೆ, ಬೈತಾರೆ, ಮಧ್ಯರಾತ್ರಿ ಎಬ್ಸಿ ಎಲ್ಲೆಲ್ಲೋ ಕರ್ಕೊಂಡು ಹೋಗಿ ಏನೇನೋ ಪ್ರಶ್ನೆ ಬೆಳಗಿನವರೆಗೂ ಕೇಳ್ತಾರಪ್ಪಾ..  ಕೇಳ್ತಾನೇ ಇರ್ತಾರಪ್ಪಾ... ಅಪ್ಪಅಪ್ಪಾ ಪ್ಲೀಸ್ ನನ್ನ ಇಲ್ಲಿಂದಾ ಕರ್ಕೊಂಡು ಹೋಗಪ್ಪಾ ಪ್ಲೀಸಪ್ಪಾ....!!''
''ಏನ್ ಕರ್ಕೊಂಡು ಹೋಗೋದು? ಅಲ್ಲಿ ಬಿಟ್ಟಿರೋದು ಓದೋಕೆ ಅಂಥಾ, ಮನೆಯಿಂದ ಅಲ್ಲಿಗೆ, ಅಲ್ಲಿಂದಾ ಮತ್ತೆ ಮನೆಗೆಓಡಾಡೋಕಲ್ಲ ತಿಳೀತಾ? ಬರೀ ಊರಿಂದಾ ಮತ್ತೊಂದು ಊರಿಗೆ ಸುತ್ತೋದೇ ಜೀವನ ಅಂದ್ಕೊಂಡ್ಯಾ? ಹ್ಮ್, ಮಾತಾಡೋ.. ನಿನ್ ಮಾರ್ಕ್ಸ್ ನೋಡೋ.. ಅಲ್ಲಿ ಹೇಗೋ ಸೀಟ್ ಸಿಕ್ತು.. ಅಲ್ಲೂ ಬಿಟ್ ಬಂದು ಎಲ್ಲಿಗೆ ಹೋಗ್ತೀಯೋ? ಅಲ್ಲೇ ಅಡ್ಜಸ್ಟ್ಮಾಡ್ಕೊಂಡು ಇರು.. ಈಗ ಇಡು ಫೋನ್ ನಾ....., ಅಂದಂಗೆ ಚೆನ್ನಾಗೇ ಇದ್ದೀಯ ತಾನೇ? ಮತ್ತೇನೂ ತೊಂದ್ರೆ ಇಲ್ಲಾತಾನೇ? ಊಟ ಆಯ್ತಾ? ಹಾಸ್ಟೆಲ್ ಊಟ ಹೆಂಗಿದೆ?..''
''ಅತ್ತ ಅವನು ಅಪ್ಪನ ಮೊದಲ ವಾಕ್ಯ 'ಅಲ್ಲಿ ಬಿಟ್ಟಿರೋದು ಓದೋಕೆ ಅಂತ'............ ಅಂತಾ  ಕೋಪದ ಧ್ವನಿಯಲ್ಲಿಹೇಳುತ್ತಿದ್ದಾಗಲೇ ಇವನು ಫೋನ್ ಅನ್ನು ಇರಿಸಿಯಾಗಿತ್ತು.... ಅಪ್ಪನ ತರಹದ ಮಾತುಗಳನ್ನು ಕೇಳಿ ಅವನು ಅಲ್ಲೇ ಕುಸಿದುಬಿದ್ದಿದ್ದ... ಅವನ ಮನಸ್ಸು ಏನನ್ನೋ ಮಾಡಲು ನಿರ್ಧಾರ ಮಾಡಿತ್ತು...!
ಆಕಾಶದಲ್ಲಿರುವ
ನಕ್ಷತ್ರ ಫಳ ಫಳನೇ ಹೊಳೆಯುತ್ತಾ ಕನವರಿಸಿತ್ತು...
ಹುಚ್ಚು
ಮನಸು ಭಾವನೆಗಳ ಕಡಲ ಕವಲಲ್ಲಿ ಹಾಗೂ ಕತ್ತಲಲ್ಲಿ,
ಹುಡುಕುತ್ತಿವೆ
ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ.....
 To be continued......................:
ಇದರ ಮುಂದಿನ (ಎರಡನೇ ಭಾಗವನ್ನು) ನೀವು ಇಲ್ಲಿ ಓದಬಹುದು:
 




Friday, March 11, 2011

ತಣ್ಣನೆಯ ಕನಸಿನ ಲೋಕದಲ್ಲಿ ಪಯಣಿಸುತ್ತಿದ್ದಾಗ, ಅವಳ ಬಿಸಿಯುಸಿರು ಬಂದು ನನ್ನ ತಾಕಿತು..

Jepee BHAT@ Bored:(

ತಣ್ಣನೆಯ ಕನಸಿನ ಲೋಕದಲ್ಲಿ ಪಯಣಿಸುತ್ತಿದ್ದಾಗ,
ಅವಳ ಬಿಸಿಯುಸಿರು ಬಂದು ನನ್ನ ತಾಕಿತು..
ಮನದಲ್ಲಿ ಎಂದೋ ಸತ್ತ ಭಾವನೆಗಳು ನಿದ್ರಿಸುತ್ತಿದ್ದಾಗ,
ನೂರಾರು ಮೈಲಿ ವೇಗದಲ್ಲಿ ಸುಮ್ಮನೇ ಮನಸು ಕದಡಿತು..

ಮನಸಿಗೆ ಎಷ್ಟೇ ತಡೆಗೋಡೆ ಹಾಕಿದರೂ,

ಕಣ್ಣು ಮುಚ್ಚಿ ಸುಮ್ಮನೇ ಕೂತಿದ್ದರೂ,
ಕೈ-ಕಾಲುಗಳನ್ನು ಅವಷ್ಟಕ್ಕೇ ಬಿಟ್ಟಿದ್ದರೂ,
ಅವಳು ಮಾತ್ರ ನನ್ನನ್ನೇ ದಿಟ್ಟಿಸುತ್ತಿದ್ದಳು..

ಯಾಕೆ ಹೀಗೆಂದು ಅವಳನ್ನೇ ಕೇಳೋಣವೆಂದುಕೊಂಡೆ,

ಮೈಯಲ್ಲಿ ಇನ್ನಿಲ್ಲದ ಧೈರ್ಯ ತಂದುಕೊಂಡೆ,
ಮನಸ್ಸಿನಲ್ಲಿ ಯಾವುದೋ ಶಕ್ತಿ ಬರಮಾಡಿಕೊಂಡೆ,
ಕೇಳುವಷ್ಟರಲ್ಲಿ ನಾನೇ ಸತ್ತು ಮಲಗಿಕೊಂಡೆ......:(

Monday, March 07, 2011

ದಿನವೂ ಅವಳಿಗಾಗಿಯೇ ಕಣ್ಣೀರಲ್ಲೇ ಜಳಕ, ಆದರೂ ಮೈ ತುಂಬಾ ಅವಳದೇ ಪುಳಕ....!

TO HER!

ನಿದ್ದೆಯನ್ನೇ ಧಾರೆ ಎರೆದು,
ನಡುರಾತ್ರಿಯ ಕನಸನ್ನೇ ತೊರೆದು,
ಮೈ ಮನಸ್ಸನ್ನು ಕೊರೆದು,
ಉಸಿರು ಮತ್ತು ಕನಸನ್ನೇ ಹರಿದು..........

ಮಧ್ಯಾನ್ನದ ನಿದ್ದೆಯಲ್ಲೂ ಕಾಡಿ,

ಜೀವನದ ಲೆಕ್ಕಗಳನ್ನೇ ಕಳೆದು, ಕೂಡಿ,
ಅಳುವನ್ನೂ ನಗುವನ್ನೂ ರಾಗವಾಗಿ ಹಾಡಿ,
ನಿಂತಲ್ಲಿಯೇ ಎಲ್ಲವನ್ನೂ ಮಾತಾಡಿ.....

ಎಲ್ಲಿ ಹೋದರೂ ಕಾಡುವ ಅವಳು,

ಬರುವಳು ನನ್ನ ಹಿಂದೆಯೇ ಯಾವಾಗಲೂ..
ದಿನವೂ ಅವಳಿಗಾಗಿಯೇ ಕಣ್ಣೀರಲ್ಲೇ ಜಳಕ,
ಆದರೂ ಮೈ ತುಂಬಾ ಅವಳದೇ ಪುಳಕ....!

Thursday, March 03, 2011

ಭಾವಗಳು ಬೆಳಕಲ್ಲಿ ಮಿಂದಾಗ:

ಭಾವಗಳು ಬೆಳಕಲ್ಲಿ ಮಿಂದಾಗ

ಮೌನವೇ ಮಾತಾಗಿ,
ಮಾತೇ ಕುತ್ತಾಗಿ,
ನಗುವೇ ಅಳುವಾಗಿ,
ಅಳುವೇ ಸಾವಾಗಿ...

ಭಾವಗಳೇ ಹೊಳೆಯಾಗಿ,

ಹೊಳೆಯೇ ನದಿಯಾಗಿ,
ನದಿ ಸಾಗರವಾಗಿ,
ಸಾಗರವೇ ಕಣ್ಣೀರಾಗಿ...

ಕಣ್ಣೀರೇ ಮಾತಾಗಿ,

ಮಾತೇ ಮನಸಾಗಿ,
ಮನಸೇ ಮಗುವಾಗಿ,
ಮಗುವೇ ಅಳುವಾಗಿ....

ಈ ಭಾವವೇ ಹಾಗೆ...

ಈ ಜೀವವೇ ಹೀಗೆ.....!!

Monday, February 28, 2011

ಸುಳ್ಳು ಸತ್ಯದ ನಡುವಿನಲ್ಲಿ, ಮಡಿದಿದೆ ಹೃದಯ ಮಡುವಿನಲ್ಲಿ!


ಸುಳ್ಳು ಸತ್ಯದ ನಡುವಿನಲ್ಲಿ, ಮಡಿದಿದೆ ಹೃದಯ ಮಡುವಿನಲ್ಲಿ!


ಅವಳು ಹೇಳುತ್ತಿದ್ದುದು ಬರೀ ಸುಳ್ಳುಗಳ ಕಂತೆ,

ಅದು ತೋರಿಕೆಗೆ ಮಾತ್ರ ನಿಜವಾದ ಸತ್ಯದ ಸಂತೆ.
ಅವಳ ರಾಶಿ ರಾಶಿ ಸುಳ್ಳನ್ನೇ ನಂಬಿ ನಾನು ಖುಷಿಯಾಗಿರುತ್ತಿದ್ದೆ ದಿನವೂ..
ಆದರೆ ಈಗ ಅದೇ ಸುಳ್ಳು ಮುಳ್ಳಾಗಿ ಅಳುತ್ತಿದ್ದೇನೆ ಪ್ರತೀ ಕ್ಷಣವೂ...

ಅವಳಿಗೆ ಪದೇ ಪದೇ ಮನಸ್ಸಾದರೂ ಹೇಗೆ ಬಂತು?

ಸುಳ್ಳನ್ನೇ ಸತ್ಯದ ತರಹ ಹೇಳಲು ಎದುರಿಗೇ ನಿಂತು?
ಅದೇ ಸಿಹಿಯಾದ  ಸುಳ್ಳು ನನ್ನ ಕಣ್ಣಲ್ಲಿ ನೀರನ್ನು ತಂತು..
ಅವಳಿಂದಾಗಿಯೇ ಈ ಹೃದಯ ಸಾಯಲಿದೆ ಈಗ ನಿಂತು-ನಿಂತು..

ಆ ಮನಸ್ಸಿನಲ್ಲಿ, ಹೊಟ್ಟೆಯಲ್ಲಿ ಇನ್ನೆಷ್ಟು ರಹಸ್ಯಗಳಿವೆಯೋ?

ಹೇಳಿರದ ಇನ್ನೆಷ್ಟು ಕಥೆಗಳು, ಘಟನೆಗಳಿವೆಯೋ?
ನೀನು ನಿಜವಾಗಿ  ಹೇಳುವುದು ಯಾವಾಗ ಅವನ್ನೆಲ್ಲ?
ನಾನು ಬದುಕುವೆನಾ ಕೇಳಿಯೂ ಅವನ್ನು ಇನ್ನು ಮುಂದೆಲ್ಲಾ....??

Wednesday, February 23, 2011

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಹೃದಯದಿಂದ ರಕ್ತ!

ಸುಮ್ಮನೇ ಕುಳಿತಿದ್ದೆ, ಕೊರಳ ಸೆರೆ ಉಬ್ಬಿ ಬಂತು..
ಚೆನ್ನಾಗಿದ್ದ ಹೃದಯದಿಂದ ರಕ್ತವೇ ಹರಿದು ಬಂತು..
ಹೊಳೆಯುತ್ತಿದ್ದ ಕಣ್ಣುಗಳಲ್ಲಿ ಧಾರಾಕಾರ ನೀರು..
ಚೆನ್ನಾಗಿದ್ದ ಮನಸು, ಕನಸು  ಈಗ ಬರೀ ಕೆಸರು...

ನೆನಪುಗಳು ಸುಮ್ಮ ಸುಮ್ಮನೇ ಒಟ್ಟೊಟ್ಟಿಗೇ ಬಂದು ಸತಾಯಿಸುತ್ತಿವೆ..

ಬೇಡವೆಂದರೂ ಬಂದು ಬಂದು ಹಳೆಯ ಬೇಡದ ನೆನಪನ್ನೇ ಕೆದಕುತ್ತಿವೆ...
ಸಿಹಿಯಾದದ್ದೋ, ಕಹಿಯಾದದ್ದೋ, ಎಲ್ಲರ ಎಲ್ಲ ನೆನಪುಗಳೇ ಹಾಗೆ...
ಸುಮ್ಮನೇ ಬಂದು ಚೂಪಾದ ಚೂರಿಯ ತರಹ ಇರಿಯುತ್ತಿರುತ್ತವೆ ಹೀಗೆ...

ಆ ಎಲ್ಲ ನೆನಪುಗಳನ್ನೇ ಮರೆಯೋಣವೆಂದು ಬಹಳಷ್ಟು ಪ್ರಯತ್ನಪಟ್ಟೆ..

ಆಗದೇ ಸೋತು ಸುಮ್ಮನೇ ಕೈ ಕಟ್ಟಿ ಮಂಕಾಗಿ ಕುಳಿತುಬಿಟ್ಟೆ...
ಅವಳನ್ನೇ ಮಾತನಾಡಿಸೋಣವೆಂದು ಕೂತಲ್ಲಿಂದ  ಎದ್ದು ಹೊರಟೇಬಿಟ್ಟೆ...
ಏತಕ್ಕೆ ಎಲ್ಲಿ ಹೇಗೆ ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ.....!!:(

Tuesday, February 22, 2011

ಅಳುವೇ ಜೀವನದ ಮುಖವಾ? ಜೀವನದಲ್ಲಿ ಅಳುವೇ ಸುಖವಾ?

Broken Heart:(
 
ಹುಟ್ಟುವಾಗ ಅಮ್ಮನನ್ನು ಅಳಿಸಿ,
ಹುಟ್ಟಿದಮೇಲೆ ನಾವೂ ಅತ್ತು,
ಬದುಕಿ ಮುಗಿದಮೇಲೆ ನಾವೂ ಸತ್ತು,
ಹೋಗುತ್ತೇವೆ ಮತ್ತೊಮ್ಮೆ ಎಲ್ಲರನ್ನೂ ಅಳಿಸಿ..

ಅಳುವೇ ಜೀವನದ ಮುಖವಾ?
ಜೀವನದಲ್ಲಿ ಅಳುವೇ ಸುಖವಾ?
ಭೂಮಿ ಮೇಲಂತೂ ಇಷ್ಟು ದಿನ ಬದುಕಿದ್ದಾಗ ಬರೀ ದುಃಖದ ಕಣ್ಣೀರು,
ಸತ್ತ ಮೇಲಾದರೂ ಗೋರಿಯಲ್ಲಿ ಸಿಗಬಹುದಾ ಸಂತೋಷದ ಪನ್ನೀರು?

ದಿನವಿಡೀ, ವರ್ಷವಿಡೀ, ಜೀವನ ಕಂಡಿದೆ ಬರೀ ಕಷ್ಟ, ದುಃಖ, ಕಣ್ಣೀರನ್ನ,
ಸತ್ತ ಮೇಲಾದರೂ ಜನ ಕಾಣುವರಾ ನನ್ನ ನಗು ಮೊಗವನ್ನ..........??

Monday, February 21, 2011

ಆಲಸಿಯಾಗಿ ಬಿದ್ದುಕೊಂಡಿರುವೆ, ಕಲ್ಲಾಗಿ, ರಸ್ತೆ ಬದಿಯ ಯಾವತ್ತೂ ಕಸವಾಗಿ....

JePee BhAt;)

ಸೂರ್ಯ ಚಂದ್ರರಿಬ್ಬರೂ ಒಂದೊಂದು ಸಲ ಒಟ್ಟಿಗೇ ಆಕಾಶದಲ್ಲಿ ಬರುವಂತೆ,
ಚೆನ್ನಾಗಿರುವ ದಿನವೇ ಗುಡುಗು, ಸಿಡಿಲುಮಳೆ, ಒಟ್ಟಿಗೇ ಬರುವಂತೆ..
ನೆಟ್ಟಗೆ ಚೆನ್ನಾಗಿ ನಿಂತಿರುವ ಮನೆಗೆ ಭೂಕಂಪ ಬಂದು ಬಡಿದಂತೆ,
ಎಲ್ಲರೂ ನಗುತ್ತಾ ಚೆನ್ನಾಗಿ ಬಾಳುತ್ತಿದ್ದಾಗ ಒಮ್ಮೆಲೇ ಸುನಾಮಿ ಬಂದಂತೆ....

ಆಕಾಶವನ್ನೇ
ಹಾಳೆಯಾಗಿಸಿ, ಅಲ್ಲಿರುವ ನಕ್ಷತ್ರವನ್ನೇ ಲೇಖನಿಯಾಗಿಸಿ,
ರಸ್ತೆಯನ್ನೇ ಮಂಚವಾಗಿಸಿ, ಮಂಜಿನ ಹನಿಗಳನ್ನೇ ಅದರ ಮೇಲೆ ಮಲಗಿಸಿ..
ಹೂವಿನ ಗಿಡಗಳನ್ನೇ ರೆಕ್ಕೆಯಾಗಿಸಿ, ದುಂಬಿಗಳ ಹತ್ತಿರ ಜೋಗುಳ ಹಾಡಿಸಿ,
ಆಲಸಿಯಾಗಿ ಬಿದ್ದುಕೊಂಡಿರುವೆ, ಕಲ್ಲಾಗಿ, ರಸ್ತೆ ಬದಿಯ ಯಾವತ್ತೂ ಕಸವಾಗಿ....

ಒಬ್ಬಂಟಿಯಾಗಿದ್ದಾಗ
ಒಮ್ಮೊಮ್ಮೆ ತೀರಾ ಹೀಗೆನ್ನಿಸಿಬಿಡುತ್ತೆ,....
ಯಾಕೋ ಮನಸ್ಸು ಸುಮ್ಮ ಸುಮ್ಮನೆ ತೊಳಲಾಟದಲ್ಲಿ ಮಿಂದೇಳುತ್ತೆ...
ಹೃದಯ ತೀರಾ ಚಿಕ್ಕ ಮಗು ಥರ ಅಳುತ್ತೆ....
ಮನಸ್ಸು ಮತ್ತೆ ಅದೇ ಸಮಾಧಾನಗೊಳ್ಳುತ್ತೆ...

ಇಷ್ಟೆಲ್ಲಾ
ಆದರೂ ಹೀಗೆನ್ನಿಸುವುದು ಸುಳ್ಳಲ್ಲ.
ಹೀಗೆಲ್ಲಾ ಆದರೂ ಇದು ಕಹಿಯಲ್ಲ...
ಜೀವನವೆಂದರೆ ಬರೀ ಸಿಹಿಯಲ್ಲ..
ಜಗತ್ತಿನಲ್ಲಿ ಎಲ್ಲವೂ ಇದೆಯಲ್ಲ..!!:):)

Thursday, February 17, 2011

ಈಗಲೂ ನೀ ಹೇಳುವೆ ನನ್ನೇ ಪ್ರೀತಿಸುವೆ ಎಂದು, ನಾ ಅದನ್ನು ನಂಬಬೇಕೆ ಇನ್ನು ಮುಂದೂ..?

Jepee BHAT:):)

ಸುಮ್ಮನೆ ನಾನು ಕುಳಿತಿದ್ದೆ ಬಾಳಿನಲ್ಲಿ ಒಂಟಿಯಾಗಿ,
ನೀನು ನನಗೇ ಗೊತ್ತಾಗದಂತೆ ಬಂದು ಕುಳಿತೆ ಜಂಟಿಯಾಗಿ..
ಅದು ಬೆಳೆಯುತ್ತಾ ಹೋಯಿತು ನಮ್ಮ ಸ್ನೇಹದ ತಂತಿಯಾಗಿ,
ಈಗ ಕಾರಣ ಹೇಳದೇ ಹೋದೆ ನನ್ನ ಮಾಡಿ ಒಬ್ಬಂಟಿಯಾಗಿ..

ನೀನು ಆ ದಿನ ನನ್ನ ನೋಡಿದ ರೀತಿ,

ಅದು ನನ್ನೆಡೆಗೆ ಇರದ ಪ್ರೀತಿ..
ಈಗಲೂ ನೀ ಹೇಳುವೆ ನನ್ನೇ ಪ್ರೀತಿಸುವೆ ಎಂದು,
ನಾ ಅದನ್ನು ನಂಬಬೇಕೆ ಇನ್ನು ಮುಂದೂ..?

ನಿನ್ನ ಪ್ರೀತಿ,ಮಾತನಾಡುವ ಆ ರೀತಿ ಕಂಡು ದಂಗಾಗಿದ್ದೆ ಆ ದಿನ,

ನೀ ಇಂದು ಮಾಡುತ್ತಿರುವ ರೂಪ ನೋಡಿ ಅಳುತ್ತಿದ್ದೇನೆ ಈ ದಿನ..
ಬೇಡ ಬೇಡವೆಂದರೂ ಯಾಕೆ ನೆನಪಾಗುತ್ತಿದ್ದೀಯಾ...?
ಈಗ ನನಗನ್ನಿಸುತ್ತಿದೆ ನೀನು ನಿಜವಾಗಲೂ ನನ್ನ ಬಿಟ್ಟು ಹೋಗಿದ್ದೀಯಾ..??

Thursday, February 10, 2011

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ, ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

Life cried loudly!

ಖುಷಿಯಿಂದ ಆಚೀಚೆ ಓಲಾಡಿ  ನಿಂತಿರುವ ಮರಗಳಂತೆ,
ಎಲ್ಲರಿಗೂ ಎಲ್ಲೆಡೆ ಅವಶ್ಯವಾದ  ತಂಪಾದ ಜೀವಜಲ ನೀಡುವ ನದಿಯಂತೆ,
ಎಲ್ಲರನ್ನೂ ಉಸಿರಾಡಿಸಿ ಬದುಕಿಸುತ್ತಿರುವ ಶುದ್ಧ ಗಾಳಿಯಂತೆ,
ಪುಣ್ಯವಂತರನ್ನೂ,ಪಾಪಿಗಳನ್ನೂ ತನ್ನ ಮಡಿಲಲ್ಲಿ ಹೊತ್ತು ನಿಂತಿರುವ ಮಹಾತಾಯಿ ಭೂಮಾತೆಯಂತೆ..

ನೋವುಗಳಿವೆ ಯಾವಾಗಲೂ ಎಲ್ಲರಲ್ಲಿಯೂ,
ಅದರಲ್ಲಿ ನೀನು ಬದುಕು ಹುಡುಕಿ ಖುಷಿಯನ್ನು,
ಈ ಜಗತ್ತಿನಲ್ಲಿ ಯಾರೂ ಪರಮ ಸುಖಿಗಳಲ್ಲ,
ಆದ್ದರಿಂದ ಖುಷಿಯಾಗಿರಿಸು ಯಾವಾಗಲೂ ನಿನ್ನ ಮನವನ್ನು..

ಅವರವರ ಕಷ್ಟ-ಸುಖ ಅವರಿಗೆ ಇದ್ದೇ ಇರುತ್ತೆ,
ನೋವಲ್ಲೂ ಖುಷಿ ಒಮ್ಮೊಮ್ಮೆ ಎದ್ದು ಬರುತ್ತೆ!
ಎಲ್ಲರೊಂದಿಗೂ ನಗುನಗುತ್ತಾ ಬಾಳು ಒಂದಾಗಿ,
ಆಗ ಬದುಕು ಸಾಗುತ್ತೆ ನೀ ಅಂದುಕೊಂಡಂತೆ ಚೆಂದಾಗಿ!

ಎಲ್ಲರ ಬದುಕಲ್ಲಿ ಇರುವಂತೆ ಕಷ್ಟ ಸುಖದ ಹೂರಣ,
ಎಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಬರದೇ ಇದ್ದೀತೆ ಆಶಾಕಿರಣ??

Tuesday, February 08, 2011

"ಪ್ರೇಮಿಗಳ ಪ್ರೀತಿಯ ದಿನ"---- ನಾನು ಅವಳು ಮತ್ತು ಈ ಜಗತ್ತು, ನಮಗಾಗಿ ಎಷ್ಟು ಹೊತ್ತು ....??


nanDu1.
"ಪ್ರೇಮಿಗಳ ಪ್ರೀತಿಯ ದಿನ"

ಅವಳ ಹೆಸರೇ ಅಷ್ಟು ಚೆನ್ನ, ಚಿನ್ನ. ನನ್ನ ಕಲ್ಪನೆಯ ಕೂಸು, ಎಂದೋ ಮನದಲ್ಲಿ ಮಾಡಿದ ಕನಸು! ಎಂದೋ ಬಿತ್ತಿದ ಬೀಜ ಇಂದು ಮರವಾಗಿ, ಕಾಯಾಗಿ, ಹಣ್ಣಾಗಿ, ಹೆಣ್ಣಾಗಿ ನಿಂತಿದೆ.. ಯಾವಾಗ ಏನಾಗುವುದೋ ಗೊತ್ತಿಲ್ಲ:(


nanDu2!

ಪ್ರೇಮಿಗಳಿಗೆ ಪ್ರೀತಿ ಮಾಡೋಕೆ ಇಂಥಾ ದಿನಾನೇ ಆಗ್ಬೇಕಾ? ನನ್ ಪ್ರಕಾರ ಹಂಗೇನೂ ಇಲ್ಲ.. ಯಾಕೆಂದ್ರೆ ಅವರು ನಿಜವಾದ ಪ್ರೇಮಿಗಳೇ ಆಗಿದ್ದಲ್ಲಿ, ವರ್ಷವೆಲ್ಲಾ, ದಿನವೆಲ್ಲಾ, ತಿಂಗಳೆಲ್ಲಾ, ಪ್ರತೀ ಸೆಕೆಂಡುಗಳಲ್ಲಿಯೂ, ಮೈ-ಮನಗಳಲ್ಲಿಯೂ, ಕಣ್ಣಿನಲ್ಲಿ ಮತ್ತು ಹೃದಯದಲ್ಲಿ, ದೇಹದ ಪ್ರತೀ ಜೀವಕೋಶದಲ್ಲಿಯೂ ಪ್ರೀತಿಯನ್ನು ತುಂಬಿಕೊಂಡೇ ಇರುತ್ತಾರೆ ಮತ್ತು ಅದೇ ಪ್ರೀತಿಯನ್ನು ಹಾಗೇ ಅಷ್ಟೇ ಚೆನ್ನಾಗಿ ಸಿಹಿಯಾಗಿ ಹಂಚಿಕೊಂಡು ಬದುಕಿರ್ತಾರೆ, ಬದುಕನ್ನು ನಡೆಸಿಕೊಂಡು ಹೋಗ್ತಿರ್ತಾರೆ..! ಫೆಬ್ರವರಿ 14  ಪ್ರೇಮಿಗಳ ದಿನ, ಎಲ್ಲರಿಗೂ ಏನೋ ಒಂಥರಾ ಕುತೂಹಲ, ಆಕರ್ಷಣೆ, ಆಸಕ್ತಿ. ಹುಡುಗಿಯರಿಗೆ ಎಷ್ಟೋ ಪ್ರಪೋಸಲ್ಗಳು ಬರುವ ಸಂಭವ, ಹುಡುಗರಿಗೆ ಇನ್ನೆಷ್ಟೋ! ಎಷ್ಟೋ ದಿನದಿಂದ ಪ್ರೀತಿಸುತ್ತಿರುವ ಆದರೆ ಹೇಳಲಾಗದೇ ಮನದಲ್ಲೇ ಒದ್ದಾಡುತ್ತಿರುವ ಭಾವನೆಯನ್ನು ಹೊರಹಾಕಲು ಸಿಗುವ ಸಂಧರ್ಭ, ಇದೊಂದು ರೀತಿಯ ಅಮೃತ ಘಳಿಗೆ, ಎಲ್ಲ ಪ್ರೇಮಿಗಳ ಪಾಲಿಗೆ!

nanDu3!

ಈ ದಿನವೇ ಹಾಗೆ..
ಹುಡುಗಿಯರಿಗೆ ಅವನನ್ನು ತಿರಸ್ಕರಿಸಿದ ಜಂಭ ಒಂದೆಡೆಯಾದರೆ, ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಮತ್ತು ಮತ್ತೂ ನೋಡಲಿ ಎಂಬ ಅಹಂ ಇನ್ನೊಂದೆಡೆ.. ಇತ್ತ ತಿರಸ್ಕೃತಗೊಂಡ ಹುಡುಗನೋ ಪಾಪ ಅತ್ತು ಅತ್ತು ಸಾಕಾಗಿ ಕಣ್ಣೀರೆಲ್ಲ ಬತ್ತು ಹೋಗಿ ಬಚ್ಚಲು ಮನೆಯ ಅಡ್ಡ ಚಿಕ್ಕ ಗೋಡೆಯೋ, ಹಿತ್ತಲ ಸಂದಿಯೋ, ನೀರೇ ಇಲ್ಲದ ಬಾವಿ ಕಟ್ಟೆಯ ಮೇಲೋ ಕುಳಿತು ತನ್ನ ಫ್ರೆಂಡಿಗೆ ಅತ್ತು ಅತ್ತು ಅದನ್ನೇ ನಗುವಿನ ರೀತಿಯಲ್ಲಿ ಹೇಳುತ್ತಿರುತ್ತಾನೆ.. ಆದ್ರೆ ಆಲ್ಲಿ ಆ ಹುಡುಗಿ ದುಡ್ಡಿದ್ದೋನ ಜೊತೆ ಪಾರ್ಟಿ ಮೋಜು ಮಸ್ತಿ, ಅವನು ಕೊಟ್ಟ ಗಿಫ್ಟ್ ಅನ್ನು ನೋಡುವುದರಲ್ಲಿ ಬಹಳ ಬ್ಯುಸಿ...:(:( ಇವನ ನಿಜವಾದ ಪ್ರೀತಿಯನ್ನು ಕಣ್ಣಿದ್ದೂ ನೋಡಲಾರದೆ ಕುರುಡಾದ ನತದೃಷ್ಟ ಹುಡುಗಿ, ಕಣ್ಣಿದ್ದೂ ಅತ್ತು ಅತ್ತು ಕಣ್ಣೇ ಕಿತ್ತು ಬರುವಂತೆ ಅಳುತ್ತಿರುವ ಬಡಪಾಯಿ ಹುಡುಗ!
ಇನ್ನೊಂದೆಡೆ  ಈತ ತನ್ನ ಲವ್ ಸಿಕ್ಕಿದುದರ ಖುಷಿಯಲ್ಲಿ ಅದಕ್ಕೆ ಕಾರಣರಾದ ತನ್ನ ಸ್ನೇಹಿತರನ್ನೂ ಮರೆತು ಅವಳಿಗೆ I Love You ಅಂತ ಮೆಸೇಜ್ ಮಾಡುವುದರಲ್ಲಿ ಬಹಳ ತಲ್ಲೀನ. ಅವಳೂ ಖುಷ್, ಇವನೂ ಖುಷ್.. ಆದ್ರೆ ಅದ್ಕೆ ಕಾರಣರಾದೋರು ಮಾತ್ರ, ಅವರನ್ನು, ಅವರ ಸ್ಥಿತಿಯನ್ನು ಕೇಳೋರ್ ಮಾತ್ರ ಯಾರೂ ಇಲ್ಲ ಇಲ್ಲಿ...
ಈ ದಿನವೇ ಹಾಗೆ, ಪ್ರೀತಿ ಮುತ್ತುಗಳ, ಶುಭಾಶಯಗಳ, ಚಾಕೊಲೇಟ್ ಗಳ, ಗ್ರೀಟಿಂಗ್ಸ್ ಗಳ, ಮತ್ತು ತರ ಥರಹದ ಗಿಫ್ಟ್ ಗಳ ಮಹಾಪೂರದ ದಿನ.. ಪ್ರೀತಿಯ ಹಸಿ ಬಿಸಿ ಅಪ್ಪುಗೆಗಳ, ಪ್ರೇಮ ನಿವೇದನೆಗಳ, ರಾಶಿ ರಾಶಿ ಕೆಂಗುಲಾಬಿಗಳ, ಮತ್ತು ತುಂಬಿ ತುಳುಕುತ್ತಿರುವ ಹೋಟೆಲ್, ಕಾಫೀ ಡೇ, ಸಿನೇಮಾ ಹಾಲ್ ಗಳ, ಮತ್ತು ಪಾರ್ಕ್ ನ ಬೆಂಚುಗಳ ದಿನ:)


nanDu4.

ಪ್ರೀತಿಯ ಮಾಯೆಯೇ ಹಾಗೆ, ಯಾರನ್ನೂ ಬಿಟ್ಟಿಲ್ಲ.. ಯಾರನ್ನೂ ಬಿಡುವುದೂ ಇಲ್ಲ, ಎಲ್ಲಿ ಯಾರಿಗೆ ಹೇಗೆ ಯಾವ ರೂಪದಲ್ಲಿ, ಯಾರ ರೂಪದಲ್ಲಿ ಪ್ರೀತಿ ಸಿಗುತ್ತದೆ ಎಂಬುದನ್ನು ಆ ದೇವರೇ ಬಲ್ಲ..! ಇದರಲ್ಲಿ ಯಾರೂ ಬೀಳದವರಿಲ್ಲ ನನ್ನ ಹೊರತಾಗಿಯೂ... ನಾನೂ ಬಿದ್ದಿದ್ದೇನೆ, ಎದ್ದಿದ್ದೇನೆ, ನಗುತ್ತಿದ್ದೇನೆ, ಅಳುತ್ತಿದ್ದೇನೆ, ಮತ್ತು ಏನೇನನ್ನೋ ಹೇಳುತ್ತಿದ್ದೇನೆ, ಎಲ್ಲೆಲ್ಲೂ ಯಾವಾಗಲೂ ಅವಳನ್ನೇ ಹುಡುಕುತ್ತಿದ್ದೇನೆ..

ಅವಳ ಹೆಸರೇ 'ಮಾಯಾ'... . . .

ಕಲ್ಪನೆಯ ಮಾಯಾ ಲೋಕದಲ್ಲಿ ತೇಲುತ್ತಿದ್ದಾಗ ಮಾಯದಂತೆ ಬಂದು ಮಾಯವಾದ ಮಿಂಚಿನ ಹುಡುಗಿ.. ಈಗಲೂ ಬಂದು ಆಗಾಗ ಕಚಗುಳಿ ಇಡುತ್ತಿರುತ್ತಾಳೆ.. ನಾನೂ ಒಳಗೊಳಗೇ ನಗುತ್ತಿರುತ್ತೇನೆ.. ಎಲ್ಲಿದ್ದರೂ, ಯಾವುದೇ ಸಂಧರ್ಭವಾದರೂ, ಯಾರು ಏನೇ ತಿಳಿದುಕೊಂಡರೂ! ಅವಳನ್ನು ಹೇಗೆಲ್ಲಾ, ಎಷ್ಟೆಲ್ಲಾ ಪ್ರೀತಿಸಿದೆ, ಹೇಳಿದೆ,.. ಆದರೂ ಅವಳು ಕೇಳಲಿಲ್ಲ, ಆದರೆ ನಾನು ಅವಳು ಹೇಳಿದಂತೆ ಕೇಳಿದೆ. ನಾನೇ ಬದಲಾದೆ. ಆಮೇಲೆ ಅವಳೇ ಬದಲಾಗಿ ನನಗೆ ಸಿಗುವ ಬದಲು ನನಗೇ ಕೈ ಕೊಟ್ಟು, ನೀನು ನಾನು ಹೇಳಿದ ಬದಲಾಗಿ ಹೇಗೇಗೋ ಬದಲಾದೆ ಅಂತ  ಹೇಳಿ ಮತ್ತೆ ಮಾಯವಾದಳು..:( ಪ್ರತೀ ದಿನವೂ, ಅನು-ತನುವಿನಲ್ಲಿಯೂ, ಪ್ರತೀ ಪ್ರೇಮಿಗಳ ದಿನದಂದೂ ಅವಳಿಗೆ ಹೇಳುತ್ತಿದ್ದೆ.
ನಾನಂದೆ, ನಾನು ನಿನ್ನ ಪ್ರೀತಿಸುತ್ತೇನೆ-ಬಿಟ್ಟಿರಲಾರದಷ್ಟು,
ಅವಳೆಂದಳು, ನಾನು ನಿನ್ನ ದ್ವೇಷಿಸುತ್ತೇನೆ-ಹೇಳಲಾರದಷ್ಟು!:

ಅವಳೂ ಕೇಳುತ್ತಿದ್ದಳು, ಆದರೆ ಕೇಳಿ ಹಾಗೇ ಅದರ ಮುಂದಿನ ನಿಮಿಷಕ್ಕೆ ಮರೆಯುತ್ತಿದ್ದಳು ಎಂದು ನನಗೆ ಈಗ ಗೊತ್ತಾಗಿದೆ.
ಅಲ್ಲಿಗೇ ಮುರಿದು ಬಿತ್ತು ಕನಸು. . . . . . .    ..         .. . . 


nanDu5.
  
ಆ ದಿನವೇ ಅಂದುಕೊಂಡೆ ಮುರಿದ ಮನಸು, ಹಾಳಾದ ಕನಸು..
ಅವಳು ಮಾಡುತ್ತಿದ್ದ ಪ್ರತಿಯೊಂದು ಚೇಷ್ಟೆಯನ್ನೂ ಸಹಿಸಿಕೊಂಡೆ, ಸ್ಮರಿಸಿಕೊಂಡೆ.. ಅವಳ ಪ್ರತಿಯೊಂದು ಮಾತನ್ನೂ ಅರಗಿಸಿಕೊಂಡೆ, ಪ್ರತೀ ನೋವನ್ನೂ, ಅವಮಾನವನ್ನೂ, ಹತಾಷೆಯನ್ನೂ, ಕೋಪವನ್ನೂ, ಅಸಹನೆಯನ್ನೂ, ಅಷ್ಟೇ ಏಕೆ ಅವಳಿಗಾಗಿ ನನ್ನ ಹಸಿವನ್ನೂ ನುಂಗಿಕೊಂಡೆ, ಆದರೆ ನಿನಗೆ ಅದು ಯಾವುದೂ ಎಂದಿಗೂ ಕಂಡೇ ಇಲ್ಲ, ಕಾಣುವುದೂ ಬೇಡ ಬಿಡು. ಇಷ್ಟೆಲ್ಲಾ ಆದರೂ ನಾನು ಸುಮ್ಮನೇ ನಕ್ಕೆ. ಆದರೂ ಅವಳು ಇಂದಿಗೂ ಸಿಗಲಿಲ್ಲ.. ಸಿಗಲಿಲ್ಲವೆಂದು ಬಹಳ ಬೇಜಾರಾಗಿದ್ದು ಅವಳಿಗೆ ಇಂದಿಗೂ ಗೊತ್ತಾಗಲೇ ಇಲ್ಲ!


nandu..

ಈ ಪ್ರೀತಿಯ ಪ್ರೇಮಿಗಳ ದಿನದಂದು ಎಲ್ಲರಿಗೂ ಶುಭಾಶಯ ಕೋರುತ್ತಾ, ನಿಮ್ಮ ನಿಮ್ಮ ಪ್ರೀತಿ ಪ್ರೇಮ ಚೆನ್ನಾಗಿರಲೆಂದು ಹಾರೈಸುತ್ತಾ, ಇನ್ನಷ್ಟು ಹೊಸ ಹೊಸ ಪ್ರೀತಿ ಹುಟ್ಟಲಿ ಮತ್ತು ಹುಟ್ಟಿದ ಪ್ರೀತಿ ಆಕಾಶದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಪ್ರೀತಿಯ 'ಮಾಯಾ' ಳಿಗೂ ಪ್ರೇಮಿಗಳ ದಿನಾಚರಣೆಯ ಶುಭಾಷಯ ಕೋರುತ್ತಾ, ಪ್ರೀತಿಯಿಂದ ಪ್ರೀತಿಸಿದವಳಿಗೆ ಪ್ರೀತಿಯ ಪ್ರೇಮದ ಕಾಣಿಕೆಯಾಗಿ ಈ ಪುಟ್ಟ ಪತ್ರವನ್ನು ಒಂದೇ ಒಂದು ಸಿಹಿ ಹೂ ಮುತ್ತಿನೊಂದಿಗೆ ಮತ್ತು ಈ 'ತಿಳಿ ಹಳದಿ ಗುಲಾಬಿ' ಮತ್ತು ಶುಭ್ರ ಶ್ವೇತ ಬಣ್ಣದ ಗರಿ ಗರಿಯಾದ ಈ ಕರವಸ್ತ್ರದೊಂದಿಗೆ ಎಲ್ಲವನ್ನೂ ನಿನ್ನ ಮೃದುವಾದ ಪುಟ್ಟ ಕೈ ಒಳಗೆ ಇಡುತ್ತಿದ್ದೇನೆ. ತೆಗೆದುಕೊಳ್ಳುವುದು, ಬಿಡುವುದು, ಬಿಸಾಕುವುದು, ಅಥವಾ ನಿನ್ನೊಂದಿಗೇ  ಇಟ್ಟುಕೊಳ್ಳುವುದು, 'ಎಲ್ಲವನ್ನೂ' ನಿನಗೆ ಬಿಡುತ್ತಿದ್ದೇನೆ........(ತೀರಾ ಮೊದಲಿನ  ಹಾಗೆಯೇ)...!!


???????????????
 
ಇಂತಿ ನಿನ್ನ, ಇನ್ನೂ ನಿನ್ನ ಪ್ರೀತಿಸುತ್ತಿರುವ,
'ನನ್ನ ಹೆಸ್ರಾದ್ರೂ ನೆನ್ಪಿದ್ಯೇನೆ ' ??:(

ಗೆಳತೀ, ನಿನಗೆ ನನ್ನ ಕಣ್ಣಿನಲ್ಲಿ ಯಾವಾಗಲೂ ನೀರನ್ನೇ ನೋಡುವ ಬಯಕೆ,... ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ!

Everywer, Everytime-> BROKEN HEART Jp!:(

ಅವಳನ್ನು ನಾನು ಎಷ್ಟೆಲ್ಲಾ ಹೇಗೆಲ್ಲಾ ಪ್ರೀತಿಸಿದೆ,
ಅವಳು ನನ್ನ ಯಾವಾಗಲೂ ದೂರವೇ ಇಟ್ಟಳು..
ನಾನು ಮಾತ್ರ ಅವಳನ್ನೇ ನೆನೆದು ಇಟ್ಟೆ,
ನಾನು ಬಹುಷಃ ನೆನೆದು ನೆನೆದೇ ಕೆಟ್ಟೆ..!

ಈ ಪ್ರೀತಿಯೇ ಹಾಗೆ ದುಡ್ಡಿದ್ದೋರ ಪಾಲಿಗೆ,

ಏನೂ ಇಲ್ಲದೇ ಇದ್ದರೂ ಬೀಳುವುದು ಅವರ ಕಾಲಿಗೆ,
ನನ್ನ ಹೃದಯ ಮಾತ್ರ ಯಾವಾಗಲೂ ಖಾಲಿಯೇ..!

ಹೀಗೆ ಯಾಕೆಂದು ಮತ್ತೆ ಮತ್ತೆ ಕೇಳಿದರೆ ಮೌನಳಾದಳು,

ಬಿಡಿಸಿ ಹೇಳು ಎಂದರೆ ಏನೂ ಹೇಳದೆ ಮೂಕಳಾದಳು...!

ಗೆಳತೀ, ನಿನಗೆ ನನ್ನ ಕಣ್ಣಿನಲ್ಲಿ ಯಾವಾಗಲೂ ನೀರನ್ನೇ ನೋಡುವ ಬಯಕೆ,
...
ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ!