Tuesday, June 14, 2011

''ರಾತ್ರಿ, ಟೆರೆಸ್, ನಾನು ಮತ್ತು ನನ್ನ ಕನಸು'' - 1


ಯಾಕೋ ಗೊತ್ತಿಲ್ಲ, ಬಹಳ ದಿನಗಳಿಂದ ಹೇಳಬೇಕು ಹೇಳಲೇ ಬೇಕು ಅಂದುಕೊಂಡು ಮನದಲ್ಲೇ ಬೆಳೆಯಲು ಬಿಟ್ಟು, ಅದನ್ನು ಅಲ್ಲೇ ಕೂಡಿಹಾಕಿ, ಅದಕ್ಕೆ ಅದರ ಮಿತಿಯನ್ನೂ ಗಡಿಯನ್ನೂ ದಾಟಲು ಬಿಟ್ಟು, ಸಿಹಿಗನಸನ್ನು ಕಾಣಲು ಸ್ವಾತಂತ್ರ್ಯ ಕೊಟ್ಟು, ಅದರದೇ ಆದ ಕಲ್ಪನೆಯ ಮೊಟ್ಟೆಗೆ ಕಾವನ್ನು ಕಾಯಲು ಕೊಟ್ಟು, ಮನಸ್ಸಿನಲ್ಲಿ ಹಾಗೆಯೇ ಬಿಟ್ಟಿದ್ದೆ.... ಇಂದು ಅದನ್ನು ಹೇಳಲೇ ಬೇಕು ಅಂತ ಅನ್ನಿಸದಿದ್ದರೂ ಯಾಕೋ ಅದು ತನ್ನಿಂದ ತಾನೇ ಹೊರಬರುತ್ತಿದೆ.. ಮಾತೇ ಮೌನವಾಗಿ, ಮೌನವೇ ಹಾಡಾಗಿ, ಹಾಡು ಮತ್ತೆ ರಾಗವಾಗಿ ಅದೇ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ, ಕೊಲ್ಲುತ್ತಿದೆ. ನೆನಪಿನಾಳದಲ್ಲಿ ನೂಕಿ, ಜೀಕಿ ಅದರದೇ ಆದ ಖುಷಿಯನ್ನು ನನ್ನ ನೋವಿನಲ್ಲಿ ಕಂಡುಕೊಳ್ಳುವ ಸಮರ್ಥ/ವ್ಯರ್ಥ ಪ್ರಯತ್ನ ಅದರದ್ದಿರಬಹುದೇ ಎಂಬ ಅನುಮಾನ ನನ್ನ ಕಾಡಿದ್ದಂತೂ ಸುಳ್ಳಲ್ಲ.  
Jepee Bhat

ಗೆಳತೀ,
ಇಂದು ನಿನ್ನ ನೆನಪಾಗಿ, ನಿನ್ನದೇ ನೆನಪಿಗೋಸ್ಕರ ಅಲ್ವೇ ಅಲ್ಲ,.. ಯಾವಾಗಲೂ ಟೆರೆಸ್ ಮೇಲೆ ಬರುವ ನನಗೆ ಇಂದು ಯಾಕೋ ನನ್ನ, ನಮ್ಮ ಮನೆಯ ಟೆರೆಸ್ಸೇ ನನಗೆ ವಿಶೇಷವಾಗಿ, ಜಗತ್ತಿನ ಅತೀ ಖುಷಿಯ ಮತ್ತು ಅಷ್ಟೇ ದುಃಖದ ಸ್ಥಳವಾಗಿ ಕಾಣುತ್ತಿದೆ. ಮತ್ತದೇ ಉತ್ತರ ಯಾಕೋ ಗೊತ್ತಿಲ್ಲ. ವಾತಾವರಣವಂತೂ ಅತ್ಯದ್ಭುತ. ಅಲ್ಲಿ ಈಗ ನೀನು ನನ್ನ ಜೊತೆ ಇದ್ದಿದ್ದರೆ ಹೇಗಿರಬಹುದಿತ್ತು ಎಂಬ ಕಲ್ಪನೆಯೇ ಸಾಕು ನನಗೆ ಮತ್ತಷ್ಟು ಸಿಹಿ ಸಿಹಿ ಮೂಟೆಯ ಕನಸನ್ನು ನನ್ನ ಜೀವನವಿಡೀ ಕಲ್ಪಿಸಿಕೊಳ್ಳಲು..
ಬಹುಶಃ ಮಳೆ ಬಂದು ನಿಂತು ಅರ್ಧ-ಮುಕ್ಕಾಲು ಘಂಟೆ ಆಗಿರಬಹುದು.. ಈಗ ಇಲ್ಲಿಯ ವಾತಾವರಣ, ಪರಿಸರ ನೀನು ಇಲ್ಲದೆಯೂ ಸಹ ಘಮ ಘಮಿಸುತ್ತಿದೆ.. ಆಗ ತಾನೇ ಮಳೆಯ ಹನಿಯನ್ನು ಕುಡಿದು ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡ ಭೂಮಿ, ಅದರ ಮಣ್ಣಿನಿಂದ ಹೊರಸೂಸುತ್ತಿರುವ ಆಗ ತಾನೇ ಮಳೆ ನಿಂತು, ಮಳೆ ನೀರನ್ನು ಕುಡಿದ ಮಣ್ಣು ಬೀರುತ್ತಿರುವ ಅದರದೇ ಆದ ವಿಶೇಷವಾದ ಪರಿಮಳ.., ಅದರ ಸವಿಯನ್ನು ಸವಿಯುವುದೇ ಒಂದು ಚಂದ. ಹೂವಿನ ಗಿಡಗಳು, ಯಾವುದೋ ಜಾತಿಯ ಕಾಡು ಮರಗಳು, ತನ್ನೆಲ್ಲ ಭುಜಗಳ ಮೇಲೆ, ನೆತ್ತಿಯ ಮೇಲೆ, ಅಂಗಾಂಗಗಳ ಮೇಲೆ ಆಕಾಶದ ಅಮೃತ ಹನಿಗಳನ್ನು ತುಂಬಿಕೊಂಡು, ಅದರಲ್ಲೇ ನೆನೆಯುತ್ತಾ, ತೇಲಾಡುತ್ತಾ ಆರಾಮಾಗಿ ಆಚೆಯಿಂದ ಈಚೆ, ಈಚೆಯಿಂದ ಮತ್ತೆಲ್ಲೋ ಬಾಗುತ್ತಾ ನಲಿಯುತ್ತಿದ್ದವು. ಆಗ ತಾನೇ ಮೇಯ್ದುಕೊಂಡು ಬಂದ ಹಸುಗಳು, ಅವುಗಳ ಕರುಗಳು ಚಿಗುರಿದ ಹಸಿ ಗರಿಕೆ ಹುಲ್ಲನ್ನು ತಿನ್ನುತ್ತಾ, ಅವನ್ನೇ ಮೆಲುಕು ಹಾಕುತ್ತಾ ಅವರದೇ ಆದ ಖುಷಿಯನ್ನು ಅನುಭವಿಸುತ್ತಿದ್ದವು. ಶಾಲೆ ಬಿಟ್ಟು ಬಂದ ಮಕ್ಕಳು, ಅವರನ್ನು ಕರೆದೊಯ್ಯಲು ಬಂದ ಅವರ ಅಪ್ಪ ಅಮ್ಮಂದಿರು ಎಲ್ಲರೂ ಅಚಾನಕ್ಕಾಗಿ ಬಂದ ಮಳೆಗೆ ಸಿಕ್ಕಿ ತತ್ತರಿಸಿ ಹೋಗಿದ್ದರು.. ಕೆಲವರಂತೂ ಮಳೆಗೆ ಶಪಿಸಿ ಬಯ್ಯುತ್ತಿದ್ದರೆ, ಪ್ರೇಮಿಗಳು ಮಳೆಯಲ್ಲೇ ಮನೆಯ ಹಿಂದಿನ ಪಾರ್ಕಿನಲ್ಲಿ ತಂ ತಮ್ಮ ಕನಸುಗಳನ್ನು ಕಾಣುತ್ತಾ, ಭವಿಷ್ಯದ ಚಿಂತೆಯಲ್ಲಿ ಮತ್ತಿನ್ನೇನೋ ಮಾಡುತ್ತಾ ಮೈ ಮರೆತಿದ್ದರು.. ಆಫೀಸಿನಿಂದ ಆಗಷ್ಟೇ ಹೊರಗೆ ಬಂದ ನೌಕರರು ಹೇಗೆ ಹೋಗುವುದು ಎಂದು ಚಿಂತಿಸುತ್ತಾ ಕೂತಿದ್ದರು. ಕಾರಿದ್ದವರು ಕಾರಿನಲ್ಲಿ, ಬೈಕ್ ಇದ್ದವರು ಅದರಲ್ಲಿ, ಏನೂ ಇಲ್ಲದೇ ಇದ್ದವರು ಎದುರಿನ ಚಹದ ಅಂಗಡಿಯಲ್ಲಿ ಅರ್ಧ ಕಪ್ ಚಹದೊಂದಿಗೆ ಮಳೆರಾಯನನ್ನೇ ನೋಡುತ್ತಾ, ದೊಡ್ಡ ಕಣ್ಣುಗಳನ್ನು ಬಿಡುತ್ತಾ, ಕೈನಲ್ಲಿ ಇರೋ ಬೀಡಿಯ ಹೊಗೆಯನ್ನು ಉಂಗುರ ಉಂಗುರವಾಗಿ ಮಾಡಿ ಬಿಡುತ್ತಾ, ಶೂನ್ಯ ದೃಷ್ಟಿಯಿಂದ ಆಕಾಶವನ್ನೇ ದಿಟ್ಟಿಸುತ್ತಿದ್ದರು. ಇನ್ನು ತರಕಾರಿ ಸಂತೆಯಲ್ಲೋ ಅದರ ಗೌಜು-ಗಲೀಜು-ಗೋಜಲು-ಗದ್ದಲವನ್ನು ಹೇಳದಿದ್ದರೇನೆ ಚಂದ. ಅಲ್ಲಿಯ ಟೆಂಟ್, ಅರ್ಧಂಬರ್ಧ ಹರಿದು ಕಟ್ಟಿರುವ ಗೋಣಿಚೀಲ, ಗೋಣಿಚೀಲವನ್ನೇ ಗೋಡೆಯಾಗಿ ಮಾಡಿಕೊಂಡು, ಅಲ್ಲೇ ಅದರಲ್ಲೇ ಜಾಗವನ್ನು ಭಾಗಮಾಡಿ, ವ್ಯಾಪಾರ ಮಾಡುವ ಬುದ್ಧಿವಂತ ವ್ಯಾಪಾರಸ್ಥರು, ಅಲ್ಲಿಯ ಗಲೀಜು ಕೊಳಕ ನಡುವೆಯೇ ಅರ್ಧ ಕೇಜಿ, ಒಂದೂ ವರೆ ಕೇಜಿ ತೆಗೆದುಕೊಳ್ಳುವ, ಆಗ ತಾನೇ ಮದುವೆಯಾದ ಇನ್ನೂ ತರಕಾರಿ, ಅಡುಗೆ ಎಂದರೇನೆ ಗೊತ್ತಿಲ್ಲದ ಶ್ರೀಮಂತರ ಮನೆಯ ಹೆಣ್ಣು ಮಗಳು, ಯಾವಾಗಲೂ .ಸೀ ಕಾರಿನಲ್ಲಿಯೇ ಓಡಾಡುವ ಅವರು ಮಳೆಗೆ ಗಲೀಜು ನೆಲದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿ......,.,  ಇವೆಲ್ಲವನ್ನೂ ನಿನ್ನೊಟ್ಟಿಗೇ ನಿನ್ನ ಜೊತೆಗೇ ಒಂದೆರಡು ಹೆಜ್ಜೆ ಹಾಕಿ ಕೈ ಕೈ ಹಿಡಿದುಕೊಂಡು ಓಡಾಡಿಕೊಂಡು ನೋಡಿದರೇನೇ ಎಷ್ಟು ಚಂದ ಅಲ್ವೇನೆ...?? ಇವಿಷ್ಟೂ ಮತ್ತಷ್ಟೂ ಆಗಿದ್ದು ಇಳಿ ಸಂಜೆಯ ಹೊತ್ತಲ್ಲಿ ಇವತ್ತಿನ ಮೊದಲನೇ ಮಳೆ ಯಾರಿಗೂ ಹೇಳದೇ ಕೇಳದೇ ಒಂಚೂರೂ ಸೂಚನೆ ಕೊಡದೇ ಬಂದಾಗ.. ಈಗ ಇವತ್ತಿನ ಎರಡನೇ ಮಳೆ ಬಂದು ನಿಂತಿದೆ.. ಆದರೆ ಈಗ ಯಾಕೆ ಇವೆಲ್ಲ ನೆನಪಾಗಿವೆ?, ಮತ್ತೂ ಮತ್ತೂ ನೆನಪಾಗುತ್ತಲೇ ಇವೆ ಎಂಬುದಕ್ಕೆ ಮತ್ತೊಮ್ಮೆ ನನ್ನಲ್ಲಿ ಉತ್ತರವಿಲ್ಲ.. ಮುಗುಳ್ನಗೆಯ ಸಹಿತ ಮೌನದ ಹಾಗೆ ಸುಮ್ಮನೆಯೇ ಉತ್ತರವಿದ್ದಿರಬಹುದು... ನೀನು ನನ್ನ ಜೊತೆ ಈಗ ಇದ್ದಿದ್ದರೆ ಅದಕ್ಕೆ ಮೌನದ ಹೊರತಾಗಿಯೂ ಮಾತಿನ ಉತ್ತರ ಸಿಗುತ್ತಿತ್ತೇನೋ?! ಗೊತ್ತಿಲ್ಲ.. ಇರಲಿ ಬಿಡು..
Jepee Bhat.2

ಇಂದು ನೆನಪಿನಾಳದ ಕಡಲಲ್ಲಿ ಸಾಗುತ್ತಿದ್ದ ದೋಣಿಗೆ ಒಮ್ಮೆಲೇ ಸಮುದ್ರದ ಅಲೆಗಳು ಯಾಕೋ ಎಂದಿನಂತೆ ಸ್ನೇಹಿತರಂತೆ ವರ್ತಿಸುತ್ತಿಲ್ಲ., ಅವುಗಳಿಗೂ ಅವುಗಳ ಮೇಲೆ ದಿನವೂ ಸಾಗುವ ದೋಣಿಯ ಮೇಲೆ ಯಾಕೋ ಮುನಿಸು. ಅಲೆಗಳ ಮುಖಾಂತರ ದೋಣಿಯನ್ನು ನೆಮ್ಮದಿಯಾಗಿ ತೇಲಿಸಲು ಬಿಡದೇ, ಅವುಗಳಿಗೂ ತೊಂದರೆಯನ್ನು ಕೊಡುತ್ತಿವೆ.. ಕಡಲಿನ ದೋಣಿ ಸಾಗದೇ ನಲುಗಿದರೆ ಪಾಪ ಅದರ ಚಾಲಕನ ಪರಿಸ್ಥಿತಿ, ಮನಸ್ಥಿತಿ, ಅವನ ಹೃದಯದ ಭಾವನೆಗಳೂ ನಲುಗಿ, ಅಲುಗಿ ಅತ್ತು ಅತ್ತೂ ಅವೂ ಕಣ್ಣೀರಿನ ಸಾಗರವಾಗಿ ಹರಿದು ಮತ್ತೆ  ಅದೇ ಸಮುದ್ರಕ್ಕೆ ಸೇರಬಹುದೆಂಬ ಘೋರ ಬೆತ್ತಲೆ ಸತ್ಯ ಅವಕ್ಕೆ ಗೊತ್ತಿದ್ದಂತಿಲ್ಲ ಪಾಪ. ಅವಾದರೂ ಏನು ಮಾಡಿಯಾವು ಅಲ್ಲವೇ?
ಶುಭ್ರ ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಮ್ಮೆಲೇ ಮೋಡ ಕವಿದು ನಾನು ನೆಮ್ಮದಿಯಿಂದ ನೋಡುತ್ತಿರುವ ಪೂರ್ಣ ಚಂದಿರನನ್ನು ಮುಚ್ಚಿದಂತೆ, ಆರಾಮವಾಗಿ ಸಾಗುತ್ತಿರುವ ಬಾಳಿನಲ್ಲಿ ಯಾರೋ ಒಮ್ಮೆಲೇ ಪ್ರವೇಶ ಮಾಡಿ ಇಡೀ ಬಾಳನ್ನೇ ತಿರುಗಿ ಮುರುಗಿಸಿ, ಮಗುಚಿ, ಹೊರಳಾಡಿಸಿ, ತಿರುಚಿ ಆಮೇಲೆ ನಮ್ಮನ್ನೇ ಮಗುವಂತೆ ಮರುಗಿಸುವ ಈ ನೆನಪುಗಳು ಎಲ್ಲಿಯೂ ಯಾರನ್ನೂ ಬಿಡುವುದಿಲ್ಲವೇನೋ ಎಂಬುದು ನಾನು ಇಲ್ಲಿ ಈಗ ನೋಡುತ್ತಲೇ ಅಳುತ್ತಲೇ ನಗುತ್ತಲೇ ದಿನವೂ ಕಂಡುಕೊಂಡ ಮತ್ತು ಕಾಣುತ್ತಿರುವ 'ಕಹಿ-ಸತ್ಯ'....
ಇಂದಿನ ಈ ಕಾಲದಲ್ಲಿ ಎಷ್ಟೋ ಕಷ್ಟ ಪಟ್ಟು, ಇಷ್ಟ ಪಟ್ಟು., ಎಷ್ಟೋ ಸಾವಿರ ಕನಸಿನ ಮೂಟೆ ಹೊತ್ತು, ಏನೇನೋ ಆಗಲು ಬಯಸಿ ಬಂದವರಿರುತ್ತಾರೆ. ಆದರೆ ಏನೋ ಮಾಡಲು ಹೋಗಿ ಏನೋ ಆಗಿ, ಆಮೇಲೆ ಅದೂ ಆಗದೇ ಮತ್ತೊಂದೇನೋ ಆಗಿರುತ್ತದೆ. ಆಗ ತಾನೇ ಹುಟ್ಟಿದ ಮಗು ಅಳುವುದನ್ನೇ ನಿಲ್ಲಿಸಿ ಚಿರನಿದ್ರೆಗೆ ಶರಣಾಗಿ ಈ ಲೋಕವೇ ಬೇಡವೆಂದು ಕಣ್ಣನ್ನು ತೆರೆಯುವ ಮೊದಲೇ ಮುಚ್ಚಿರುತ್ತದೆ. ಅದು ಮಾಡಿರುವ ಪಾಪವಾದರೂ ಏನು? ಅಥವಾ ಅದರ ಪಾಲಕರು, ಮುಂದೆ ಅದನ್ನು ಪಾಲಿಸಿ ಪೋಷಿಸಿ ಬೆಳೆಸಿ ವಿಧ್ಯಾಭ್ಯಾಸ ಮಾಡಿಸಿ ಅದಕ್ಕೆ ಮುಂದೊಂದು ದಿನ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕಾದ ಅಪ್ಪ ಅಮ್ಮ ಪಡೆದುಕೊಂಡು ಬಂದಿರುವ ಪುಣ್ಯವೇ ಅಷ್ಟಾ? ಇವೆಲ್ಲಾ ನೋಡುತ್ತಾ ಕುಳಿತರೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇಡೀ ಪ್ರಪಂಚ ನಶ್ವರ, ಯಾರಿಗೂ ಏನಕ್ಕೂ ಎಲ್ಲಿಯೂ ಸಂಬಂಧವೇ ಇಲ್ಲವೇನೋ ಅನ್ನಿಸಿಬಿಡುತ್ತದೆ.. ಹುಟ್ಟುತ್ತಾ ಅಪ್ಪ ಅಮ್ಮನ ಮುದ್ದಿನ ಮಕ್ಕಳಾಗಿ ಬೆಳೆಯುತ್ತಾ ಶತ್ರುಗಳಾಗಿ ಚಿಕ್ಕ ಭೂಮಿ ಆಸೆಗೋ, ಚಿನ್ನಕ್ಕೋ, ಅಥವಾ ಹೆಂಡತಿಯ ಮಾತು ಕೇಳಿಯೋ ಹೆತ್ತವರನ್ನೇ ದೂರ ಮಾಡುವ ಮಕ್ಕಳು... ಇವೆಲ್ಲವನ್ನೂ ನೋಡುತ್ತಿದ್ದರೆ ಮತ್ತೆ ನನಗೆ ಹಾಗನ್ನಿಸಿವುದು ಸುಳ್ಳಲ್ಲ...
ಯಾವುದೋ ಮತ್ತಿನಲ್ಲಿ, ಯಾರೊಟ್ಟಿಗೋ ಜಗಳವಾಡಿ, ಬಸ್ಸನ್ನು ಚಲಿಸುತ್ತಿರುವ ಚಾಲಕ ಅವನ ತಪ್ಪಿನಿಂದ, ಅವನ ನಿದ್ರೆಯಿಂದ, ಅಮಾಯಕ ನಲವತ್ತು-ಐವತ್ತು ಜನರ ಪ್ರಾಣ ತೆಗೆಯುವಾಗ, ಐವತ್ತು ಜನ ಯಾವ ತಪ್ಪೂ ಮಾಡದೇ ಅಮಾಯಕ ಅನ್ಯಾಯದ  ಸಾವು ಕಾಣುತ್ತಾರಲ್ಲಾ.., ಇದೂ ತಪ್ಪಾ? ಇದೂ ಕೂಡ ಯಾರ ಪಾಪಕ್ಕೋ ಯಾರೋ ಹೊಣೆ! ಯಾರೋ ಒಬ್ಬರ ತಪ್ಪಿಗೆ ಬರೋಬ್ಬರಿ ಐವತ್ತು ಜನರಿಗೆ ಸಂಪೂರ್ಣ ಶಿಕ್ಷೆ!! ಸುಮ್ಮನೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಯಾರೋ ವೃದ್ಧನಿಗೆ ಬಂದು ಗುದ್ದುವ ಲಾರಿ ರೂಪದ ಯಮನೋ, ಅಥವಾ ಅರ್ಧ ತೆಗೆದಿಟ್ಟ ಗುಂಡಿಯಲ್ಲಿ ಹೋಗಿ ಬೀಳುವ ಪುಟ್ಟ ಮಗುವೋ, ಅದೇ ಕೆಲಸದಲ್ಲಿ ಪಳಗಿರುವ ಮರ ಕುಯ್ಯುವ ಕೆಲಸಗಾರನಿಗೆ ಅದೇ ಮರ ಅವನ ತಲೆ ಮೇಲೆಯೇ ಬಿದ್ದು ಅವನು ಸಾಯುವ ಸಂದರ್ಭವೋ, ಇವೆಲ್ಲ ಯಾರ ಆಟವೋ? ಭಗವಂತ ನಮ್ಮ ತಾಳ್ಮೆ ಪರೀಕ್ಷಿಸಲು, ನಮ್ಮ ಬುದ್ಧಿಮತ್ತೆಯನ್ನು ಅಳೆಯಲು ಇಟ್ಟ ಪರೀಕ್ಷೆಗಳೋ ಒಂದೂ ಗೊತ್ತಿಲ್ಲಾ..
ಮತ್ತೆ ಮತ್ತೆ ನನಗೆ ಅನ್ನಿಸುವ, ಪದೇ ಪದೇ ಕಾಡುವ ವಿಷಯಗಳು ಹಲವಾರು. ಈ ಮಳೆಗೆ ಏನೇನೆಲ್ಲಾ ನೆನಪಿಸುವ ಶಕ್ತಿ ಇದೆ ಅಲ್ವಾ? ಎಲ್ಲೋ ಯಾವುದೋ ದಾರಿ ಹಿಡಿದು ಹೊರಟರೆ ಮುಂದೆ ಕಾಣುವ ದಾರಿ ನೂರಾರು, ಅದು ಟಿಸಿಲೊಡೆಯುವ ಪರಿ ಸಾವಿರಾರು, ನಮಗೆ ತಲೆ ಕೆಟ್ಟು ಅದು ತೋರುವ, ಮುಂಬೆಳಕು ಯಾವುದೆಂದೇ ಗೊತ್ತಾಗದೆ, ನಮಗೇ ನಮ್ಮಲ್ಲೇ ನಾವು ಹಲವಾರು ಬಾರಿ ಕಳೆದು ಹೋಗುತ್ತೇವೆ., ನಾನಂತೂ ಲೆಕ್ಕವಿಲ್ಲದಷ್ಟು ಬಾರಿ ಕಳೆದುಹೋಗಿದ್ದೇನೆ. ಇದು ಸತ್ಯ.
ಮುಂದುವರೆಯುವುದು, ಇನ್ನೂ ಇದೆ :):)
ಸದ್ಯದಲ್ಲೇ ಎರಡನೇ ಭಾಗದೊಂದಿಗೆ ಮತ್ತೆ ಬರುತ್ತೇನೆ!

Tuesday, May 24, 2011

ನೀರೇ ಇಲ್ಲದೆ ಸಾಯುತ್ತಿರುವ ಮೀನಿನಂತೆ, ಎಲ್ಲವೂ ಇದ್ದು ನೀನೇ ಇಲ್ಲದೆ ಕಣ್ಣೀರಿಡುವ ನನ್ನಂತೆ!

Jepee BHAT:)

ಪ್ರೀತಿಯ ನೀನೇ ಇಲ್ಲದ ನನ್ನ ಬಾಳು,
ಮೂಕ ಬಡವನ ಹಸಿದ ಹೊಟ್ಟೆಯ ಗೋಳು..
ಸೂರ್ಯನೇ ಇಲ್ಲದ ಪೂರ್ತಿ ದಿನದಂತೆ,
ಚಂದಿರನೇ ಇಲ್ಲದ ಹುಣ್ಣಿಮೆಯ ದಿನದಂತೆ..

ಹುಣ್ಣಿಮೆಯ ಕಾಣದ ನವ ವಧು-ವರರ ಜೋಡಿಯಂತೆ,

ಮಳೆಯೇ ಕಾಣದ ಮಲೆನಾಡಿನ ರೈತರಂತೆ..
ನೀರೇ ಇಲ್ಲದೆ ಸಾಯುತ್ತಿರುವ ಮೀನಿನಂತೆ,
ಎಲ್ಲವೂ ಇದ್ದು ನೀನೇ ಇಲ್ಲದೆ ಕಣ್ಣೀರಿಡುವ ನನ್ನಂತೆ!

ನನ್ನ ಮಾತನ್ನು ಕೇಳುವವರಿಲ್ಲ ಇಲ್ಲಿ ಯಾರೂ,

ನಿನಗೂ ಬೇಡವಾದೆನಾ ನಾನು ಒಂದು ಚೂರೂ?
ಇನ್ನಾದರೂ ದಯಮಾಡಿ ಸ್ವಲ್ಪ ತಿರುಗಿ ನೋಡು,
ನನ್ನೆದೆಯ ನೋವ ಕಿಂಚಿತ್ತಾದರೂ ಕಡಿಮೆ ಮಾಡು..

Tuesday, May 17, 2011

ಹಿಂದೆ ಆಗಿದ್ದೆಲ್ಲಾ ಹಾಗೆಯೇ ಕರಗಿ ತೇಲಿ ಹೋಗಲಿ... ಇನ್ನು ಮುಂದೆ ಬದುಕಲ್ಲಿ ಯಾವಾಗಲೂ ಖುಷಿಯೇ ತುಂಬಿರಲಿ....

Jepee Bhat:):)

ನಿನ್ನಂತೆ ಯಾರೂ ಇಲ್ಲ,
ನನ್ನಂತೆ ಹುಚ್ಚರೇ ಎಲ್ಲ?
ನಿನ್ನ ಕಂಡ ಮೇಲೆಯೇ ಮರುಳಾದೆ ನಾನು..
ನನ್ನ ನೋಡಿಯೂ ನೋಡದಂತೆ ಹೋದೆ ನೀನು....

ಯಾಕೆ ಯಾವಾಗಲೂ ಹೀಗೆಯೇ ಮಾಡುವೆ ನೀನು?

ನಿನ್ನ ನೋಡಿದ ಮೇಲೆಯೇ ಅಲ್ಲವೇ ಹಾಗಾದದ್ದು ನಾನು??
ನನ್ನ ಎಲ್ಲವಕ್ಕೂ ನಿನ್ನ ಕಣ್ಣುಗಳೇ ಸಾಕು........
ಈ ಹೃದಯಕ್ಕೆ ಯಾವಾಗಲೂ ನೀನೇ ಬೇಕು.....

ಕೇಳುವೆಯಾ ಈಗಲಾದರೂ..?

ಬರುವೆಯಾ ಇನ್ನು ಮುಂದಾದರೂ..?
ಹಿಂದೆ ಆಗಿದ್ದೆಲ್ಲಾ ಹಾಗೆಯೇ ಕರಗಿ ತೇಲಿ ಹೋಗಲಿ...
ಇನ್ನು ಮುಂದೆ ಬದುಕಲ್ಲಿ ಯಾವಾಗಲೂ ಖುಷಿಯೇ ತುಂಬಿರಲಿ....

Thursday, May 12, 2011

ಮಳೆಯಲ್ಲಿ ಬರೀ ಅವಳೇ.. ಈಗಿನ ಮೌನದಲ್ಲೂ ಮತ್ತೆ ಅವಳೇ..!

Nenapu!!

ಅಳುವ ಹೃದಯ,
ನಗುವ ಮನಸು..
ಪ್ರೀತಿ ಕಾಣದ ಜೀವ,
ಕಂಡಿದೆ ಬರೀ ನೋವ..

ಬಿಡದೇ ಸುರಿದ ಮಳೆ,
ತಂದಿತು ನೆನಪಿನ ಹೊಳೆ..
ಮಳೆಯಲ್ಲಿ ಬರೀ ಅವಳೇ..
ಈಗಿನ ಮೌನದಲ್ಲೂ ಮತ್ತೆ  ಅವಳೇ..!

ಎಲ್ಲೆಲ್ಲೂ ಕಾಡುವ ಅವಳು,
ಈಗೀಗ ಮಾತಿಗೂ ಸಿಗಳು..
ಕನಸಲ್ಲೂ, ನನಸಲ್ಲೂ ಕಾಣಳು,
ಆದರೆ ಅವಳೇ ಯಾಕೆ ಹೀಗಾದಳು??

ನೆನಪಲ್ಲಿ ನೆನಪಾಗಿ ಬಂದ ''ಅವಳಿಗೆ''......

Sunday, May 08, 2011

ಕೇವಲ ಇಷ್ಟು ಮಾತ್ರ ಹೇಳಬಲ್ಲೆ ನೀನು ಸಾವಿರ ಕಾಲ ಸುಖದಿಂದ ನಗುತ್ತಾ ಬಾಳಮ್ಮಾ!

Mom LOVE U.

ಎಷ್ಟು ಹೇಳಿದರೂ ಮುಗಿಯದ,
ಎಷ್ಟು ವರ್ಣಿಸಿದರೂ ಸಾಲದ,
ಎಂದೂ ತೀರಿಸಲಾಗದ ಋಣದ,
ನಮ್ಮ ದುಃಖವನ್ನು ಎಂದೂ ಬಯಸದ.....

ನಮ್ಮ ಏಳಿಗೆಗಾಗಿ ಎಂದೂ ಶ್ರಮಿಸುವ,

ಅವಳ ನಿದ್ದೆಯನ್ನೂ ಹಸಿವನ್ನೂ ಬಿಟ್ಟು, ಎಲ್ಲವನ್ನೂ ನಮಗೇ ಕೊಡುವ,
ನಮ್ಮ ಮುಖದ ನಗುವಲ್ಲೇ ಅವಳ ನಗುವನ್ನೂ ನೋಡುವ,
ನಮಗೆ ನೋವಾದರೆ ನಮಗಿಂತ ಹೆಚ್ಚು ನೋವನ್ನು ಅನುಭವಿಸುವ...

ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿರುವ,

ಕಣ್ಣಲ್ಲಿ ಕಣ್ಣನಿಟ್ಟು ಎಲ್ಲವನ್ನೂ ಬಿಟ್ಟು ನಮ್ಮನ್ನೇ ನೋಡಿಕೊಂಡಿರುವ,
ಅಮ್ಮಾ ನಿನ್ನನ್ನು ನಾ ಏನೆಂದು ವರ್ಣಿಸಲಿ? ಹಾಡಿ ಹೊಗಳಿ ಬರೆಯಲಿ?
ಕೇವಲ ಇಷ್ಟು ಮಾತ್ರ ಹೇಳಬಲ್ಲೆ ನೀನು ಸಾವಿರ ಕಾಲ ಸುಖದಿಂದ ನಗುತ್ತಾ ಬಾಳಮ್ಮಾ!

ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ನನ್ನ ಪ್ರೀತಿಯ ಅಮ್ಮನಾದ ''ಜಯಲಕ್ಷ್ಮಿ'' ಗೆ ಅರ್ಪಣೆ!!

ಅಮ್ಮಾ ಐ ಲವ್ ಯೂ!

Friday, May 06, 2011

ನೆನಪೇ ನೆಪವಾದಾಗ!

Jepee Bhat


ನೆನಪಲ್ಲೇ ನೆನಪಾಗಿ ಬಂದ ಅವಳು,

ತಣ್ಣನೆಯ ಮಳೆಯ ಹನಿಯಲ್ಲಿ ಕಂಡ ಅವಳು,
ಖುಷಿಯ ಕಣ್ಣೀರಲ್ಲೇ ನಾಚಿ ನೀರಾಗಿದ್ದ ಅವಳು,
ಈಗ ನನ್ನ ದುಃಖದ ಕಣ್ಣೀರಿಗೂ ಕಾರಣಳಾದವಳು ಅವಳು..

ನಗುವನ್ನೇ ನಾಚಿಸುವಂತೆ ನಗುತ್ತಿದ್ದ ಅವಳು,

ನೆಪಕ್ಕೆ ನೆನಪಾಗಿ ಬಂದ ಅವಳು,
ನಗಿಸುವ ಬದಲು ಅಳಿಸಿ ಮಾಯವಾದಳು,
ಈಗ ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ ಅವಳು....

ಆಗ ಕಂಡಿದ್ದೆಲ್ಲ ಬರೀ ನಿನ್ನ ಕಣ್ಣ ಹೊಳಪು,

ಈಗ ಮಾತ್ರ ಅದು ಬರೀ ನನ್ನ ನಿನ್ನ ನೆನಪು..
ಬರೀ ಕನಸಲ್ಲಿ ಮಾತ್ರ ಅದು ಸೊಗಸು...
ಈಗ ಅದೆಲ್ಲ ಆಗಿ ತೋರುತ್ತಿದೆ ಬರೀ ಕಪ್ಪು-ಬಿಳುಪು....

Tuesday, April 26, 2011

ಅತ್ತೆಯು ಕಂಡರೆ ಸೊಸೆಯನ್ನೂ ಮಗಳಂತೆ, ಆಗುವುದು ಮನೆ ಬೇಡವೆಂದರೂ ಸ್ವರ್ಗದಂತೆ..

Jepee Bhat!

ಅತ್ತೆಯು ಕಂಡರೆ ಸೊಸೆಯನ್ನೂ ಮಗಳಂತೆ,
ಆಗುವುದು
ಮನೆ ಬೇಡವೆಂದರೂ ಸ್ವರ್ಗದಂತೆ..
ಸೊಸೆಯೂ
ನೋಡಿಕೊಂಡರೆ ಅತ್ತೆಯನ್ನು ಅಮ್ಮನಂತೆ,
ಸಂಸಾರ
ಸಾಗುವುದು ತೂತೇ ಇಲ್ಲದ ನಿಲ್ಲದ ದೋಣಿಯಂತೆ..

ಎಲ್ಲರೊಡನೆ
ಒಂದಾಗಿ ಬಾಳು ಖುಷಿಯಿಂದ ಬಂದ ಮನೆಯಲ್ಲಿ,
ಬಂದ
ಮನೆಗೇ ಇಡಬೇಡ ಬೆಂಕಿಯನ್ನು ನಿನ್ನ ಮೌನದಲ್ಲಿ..
ನಿನ್ನ
ಮನದಲ್ಲಿ ಏನಿದ್ದರೂ ಹೇಳಿಬಿಡು ಅದೂ ಎಲ್ಲರೆದುರಲ್ಲಿ,
ಸಿಟ್ಟಾಗಿ
ಯಾವುದನ್ನೂ ಕೆಡಿಸಬೇಡ ನಿನ್ನ ಕೋಪದ ಮಾತಿನಲ್ಲಿ....

ಗಾಳಿಗೆ
ತೂರಿಬಿಡು ಅಲ್ಲಿ  ಇಲ್ಲಿ ಹೇಳಿದ್ದನ್ನು ಅವರು-ಇವರು,
ನಮ್ಮ
ಸಂಸಾರಕ್ಕೆ ಹುಳಿ ಹಿಂಡಲು  ಅವರು ಯಾರು...?
ಕಷ್ಟ
ಸುಖಕ್ಕೆ ಇಲ್ಲವೇ ಎಲ್ಲರೆದುರು ಕೈ ಹಿಡಿದ   ಪತಿ ದೇವರು..??
ಬೇರೆ
ಮತ್ತೂ ಹೆಚ್ಚಿನ ಕಷ್ಟಕ್ಕೆ ಇದ್ದಾನಲ್ಲವೇ ನಮ್ಮೆಲ್ಲರ ದೇವರು...:)
ನನ್ನ ಪ್ರೀತಿಯ ಸ್ನೇಹಿತೆಗೆ ಅರ್ಪಣೆ... ಯಾಕೆ ನೀನು ಅತ್ತೆ ಸೊಸೆ ಬಗೆಗೆ ಒಂದು ಕವನ ಬರೆಯಬಾರದು ಎಂದು ಒಂದು ವಿಶೇಷ, ವಿಶಿಷ್ಟ ಸಂದರ್ಭದಲ್ಲಿ ಸಲಹೆ ನೀಡಿದ ''ಅವಳಿಗೆ''........!!

Monday, April 18, 2011

ಸುಂದರವಾದ ನಶೆಯಿತ್ತು ಅವಳ ಮುಂಗುರುಳಲ್ಲಿ, ಕಾಡಿತು ನನ್ನ ಅದು ಹಗಲಿರುಳಲ್ಲಿ, ಎಲ್ಲಿ ಹೋದರಲ್ಲಿ..


ಸುಂದರವಾದ ನಶೆಯಿತ್ತು ಅವಳ ಮುಂಗುರುಳಲ್ಲಿ,
ಕಾಡಿತು ನನ್ನ ಅದು ಹಗಲಿರುಳಲ್ಲಿ, ಎಲ್ಲಿ ಹೋದರಲ್ಲಿ..
ಗೊತ್ತಿದ್ದು ಗೊತ್ತಿದ್ದೂ ಮತ್ತೆ ಅದನ್ನೇ ನೋಡಿದೆ,
ಬೇಡವೆಂದರೂ ಅವಳ ಪ್ರೀತಿಯಲ್ಲಿ ಬಿದ್ದು ಎದ್ದೆ....

ಬೇಕೆಂತಲೇ ಅವಳು ಮತ್ತೆ ಮತ್ತೆ ತೋರಿಸುವ ಮುಂಗುರುಳು,

ಮಾಡಿತು ನನ್ನ ಮನಸಿನ ಎಲ್ಲ ಭಾವಗಳ ಮರುಳು..
ಪದೇ ಪದೇ ನನ್ನನ್ನೇ ಕದ್ದು  ನೋಡಿ ನಗುವ ಅವಳು,
ಅವಳ ನಗುವೇ ಮಾಡಿದೆ ನನ್ನ ಮತ್ತೆ ಮತ್ತೆ ಅವಳತ್ತ ತಿರುಗಿ ನೋಡಲು...

ಹೀಗೆ ಆಗುತ್ತಿದ್ದರೆ ಮತ್ತಷ್ಟು ದಿನ,

ನಗುವರು ನನ್ನ ಹುಚ್ಹ ಎಂದು ತಿಳಿದ ಜನ..
ಅವರಿಗೇನು ಗೊತ್ತು ಪ್ರೇಮಿಗಳ ಮನ,
ಅದು ಸುಮ್ಮ ಸುಮ್ಮನೇ ನಗುತ್ತ ಅಳುತ್ತ ಬರೆಯುತ್ತೆ ಕವನ!

Monday, April 11, 2011

ಗೊಂದಲದ ಗೂಡಲ್ಲಿ, ನನ್ನ ಹುಚ್ಚು ಮನಸು ಭಾವನೆಗಳ ಕಡಲ ಕವಲಲ್ಲಿ, ಕತ್ತಲಲ್ಲಿ ಹುಡುಕುತ್ತಿವೆ ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ...

Jepee BHAT*

ಕಣ್ಣೀರಿನ ಕೊಳಕ್ಕೇ ಕಲ್ಲೆಸೆದವರು ಯಾರು?
ನಗುತ್ತಿದ್ದ ಮೊಗಕೆ ಅಳುವನ್ನು ತಂದೋರು ಯಾರು?
ಹಾರಾಡಿಕೊಂಡಿದ್ದ ಮನಸಿಗೆ ಬೇಲಿ ಹಾಕಿದವರು ಯಾರು?
ಆರೋಗ್ಯದಿಂದ ಇದ್ದ ದೇಹವನ್ನು ಸತ್ತಂತೆ ಮಾಡಿದವರು ಯಾರು?

ಇದ್ದಕ್ಕಿದ್ದಂತೆ ಮನಸೇ ಅತ್ತಿದ್ದು, ಮನಸೇ ಸತ್ತಿದ್ದು, ಆಮೇಲೆ ನಕ್ಕಿದ್ದು..

ಆಮೇಲೆ ಸುಮ್ಮನೇ ಸಮಾಧಾನ ಮಾಡಿದ್ದು ಗೊತ್ತಿದ್ದು ಗೊತ್ತಿದ್ದೂ...
ಏನೋ ಮಾಡಲು ಹೋಗಿ ನಾನೇ ಆದೆ ಮೋಡಿ..
ಹರಿಯುತ್ತಿದೆ ಈಗ ದೇಹದಲ್ಲಿ ಕಣ್ಣೀರಿನ ಕೋಡಿ..

ಕನಸು ಕಂಡಿದ್ದು ಏನೇನೋ..ಆಗಿದ್ದು ಮತ್ತಿನ್ನೇನೋ...

ಯಾವಾಗಲೂ ಹೀಗೆಯೇ, ಜೀವನವೇ ಹೀಗೇನೋ?
ಗೊಂದಲದ ಗೂಡಲ್ಲಿ, ನನ್ನ ಹುಚ್ಚು ಮನಸು ಭಾವನೆಗಳ ಕಡಲ ಕವಲಲ್ಲಿ,
ಕತ್ತಲಲ್ಲಿ ಹುಡುಕುತ್ತಿವೆ ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ...

Thursday, March 31, 2011

ಹಿಂದೆ ಟೀಕೆ ಮಾಡುವ ಎಲ್ಲರ ಬಾಯನ್ನು ಮುಚ್ಚಿಸಿಬಿಡು.. ವಿಶ್ವಕಪ್ಪನ್ನೇ ಗೆದ್ದು ಮುಡಿಲಿಗೇರಿಸಿಕೊಂಡು ಬಿಡು....

ಇಂಡಿಯಾ ಈ ಬಾರಿಯ ವಿಶ್ವಕಪ್ಪನ್ನು ಗೆದ್ದು ಬರಲಿ ಎಂಬ ಆಶಯದಿಂದ::
ಜೇಪೀ ಭಟ್!:)


ಇಂಡಿಯಾ, ಇಂಡಿಯಾ, ಇಂಡಿಯಾ..............!!!!
ಗೆಲುವಿನ ರುಚಿಯನ್ನು ಕಂಡೆಯಾ....??
ಇಲ್ಲಿಯತನಕ ಎಲ್ಲರಿಗೂ ಸೋಲಿನ ಕಹಿಯನ್ನು ಕಾಣಿಸಿದೆ....
ಇನ್ನು ಮುಂದಿನ ಗೆಲುವನ್ನೂ ನಿನ್ನದಾಗಿಸಿಕೊಳ್ಳುವೆಯಾ...??

ಇತಿಹಾಸದಂತೆ ಮತ್ತೆ ಮತ್ತೊಮ್ಮೆ ವಿಶ್ವಕಪ್ಪನ್ನು ಗೆದ್ದು ತಾ...
ಎಲ್ಲರ ಮೊಗದಲ್ಲಿ ನಿನ್ನಿಂದ  ಮಂದಹಾಸವನ್ನು  ತಾ....
ಹಿಂದಿನ ಎಲ್ಲ ನೋವು, ಎಲ್ಲರ ನೋವನ್ನೂ  ಮರೆಸಿಬಿಡು...
ಎಲ್ಲರ ಮನದಲ್ಲಿ ನಿನ್ನ ಗೆಲುವಿನ ಛಾಯೆಯನ್ನು ಹರಿಸಿಬಿಡು..

ಹಿಂದೆ ಟೀಕೆ ಮಾಡುವ ಎಲ್ಲರ ಬಾಯನ್ನು ಮುಚ್ಚಿಸಿಬಿಡು..
ವಿಶ್ವಕಪ್ಪನ್ನೇ ಗೆದ್ದು ಮುಡಿಲಿಗೇರಿಸಿಕೊಂಡು ಬಿಡು....
ಭಾರತೀಯರ, ಭಾರತಾಂಬೆಯ ಹೆಮ್ಮೆಯ ಮಕ್ಕಳಾಗಿ...
ಎಲ್ಲರ ಹೃದಯದ, ಈ ವಿಶ್ವಕಪ್ಪಿನ ಬೆಳಕಾಗಿ....!!

Monday, March 28, 2011

ಇಬ್ಬರ ಬದುಕೂ ನುಚ್ಚು ನೂರಾಯಿತು, ಕನಸು ಹರಿದು ಚೂರಾಯಿತು..

Jp bhat:)

ನಾನಿದ್ದೆ ಮುಂಜಾವಿನ ಕಡಲ ತೀರದಲಿ,
ಅವಳಿದ್ದಳು ನನ್ನೆದೆಯ ದಿನದ ಬಡಿತದಲಿ..
ಇಬ್ಬರೂ ಸಾಗಲಿದ್ದೆವು ಬಾಳಿನ ದೋಣಿಯಲಿ,
ಸುನಾಮಿಯೇ ಬಂತು ತಿಳಿಯದೇ ಹಗಲಿನಲಿ..

ಇಬ್ಬರ ಬದುಕೂ ನುಚ್ಚು ನೂರಾಯಿತು,

ಕನಸು ಹರಿದು ಚೂರಾಯಿತು..
ಮನಸು ಬೇರೆ ಬೇರೆಯಾಯಿತು,
ಹೃದಯ ಉಸಿರಾಡುವುದನ್ನೇ ನಿಲ್ಲಿಸಿತು..

ಮನಸುಗಳು ಸದ್ದು ಮಾಡದೆಯೇ ಅತ್ತವು,

ದೇಹಗಳು ನಗುವುದನ್ನೇ ಮರೆತುಬಿಟ್ಟವು..
ಪ್ರಪಂಚದಲ್ಲಿ ಇನ್ನೆಷ್ಟು ಸಾವು-ನೋವೋ..?
ಇದನ್ನೇ ನೋಡಿ ಬದುಕಬೇಕೆ ನಾವು-ನೀವೂ..?

Friday, March 25, 2011

ಹೃದಯದ ನೋವನ್ನು ನಾನೇ ಯಾವಾಗಲೂ ಕಂಡೆ.. ಹೃದಯದ ಕರೆಗೆ ಮತ್ತೆ ಅವಳಿಗಾಗಿಯೇ ಓಡೋಡಿ ಬಂದೆ!

Jepee bhat's.

ಹಣೆಯ ಮೇಲಿನ ಆತಂಕದ ಗೆರೆ,
ಹೆಚ್ಚಿಸಿತು ನನ್ನ ತಲೆಯ ಮೇಲಿನ ಹೊರೆ..
ಚಿಂತಿಸಿದಾಗ ತಿಳಿಯಿತು, ಅದು ಮನಸ್ಸಿಗೆ ಬಿದ್ದ ಬರೆ,
ಆಗ ನನ್ನಲ್ಲೇ, ನನಗೆ ನಾನೇ ಆದೆ ಸೆರೆ..

ಕೆಲವೊಮ್ಮೆ ಮನಸ್ಸು ನಿಂತೇ ಬಿಡುತ್ತದೆ..

ಏನೂ ಮಾಡದೆ, ಮಾತೂ ಆಡದೇ...
ಹೃದಯ ಮಾತ್ರ ಬಡಿದುಕೊಳ್ಳುತ್ತದೆ ತನ್ನ ಪಾಡಿಗೆ,
ಆದರೆ ಕಣ್ಣಲ್ಲಿ ಮಾತ್ರ ನೀರು ಯಾರಿಗೂ ಹೇಳದೇ...

ಸತ್ತ ಹೃದಯ ಅವಳಿಗಾಗಿಯೇ ಬದುಕಿದೆ..

ಇದ್ದ ಹೃದಯದ ಬಡಿತ ಎಂದೋ ನಿಂತಿದೆ..
ಹೃದಯದ ನೋವನ್ನು ನಾನೇ ಯಾವಾಗಲೂ ಕಂಡೆ..
ಹೃದಯದ ಕರೆಗೆ ಮತ್ತೆ ಅವಳಿಗಾಗಿಯೇ ಓಡೋಡಿ ಬಂದೆ!