Sunday, April 06, 2014

ಇಡೀ ಜಗತ್ತಲ್ಲಿ ಅವ್ಳಷ್ಟೇ ಮುದ್-ಮುದ್ದಾಗಿ ಕ್ಯೂಟ್ ಆಗಿರೋ ಎಲ್ಲಾ ಹುಡ್ಗೀರಿಗೆ 'ಡೆಡಿಕೇಟೆಡ್' ಇದು :)


Jepee Bhat
ಇಲ್ಲಿ ಬಾರೋ ಏನೋ ತೋರಿಸ್ತೀನಿ ಅಂತಾ ಒಂದೇ ಉಸ್ರಲ್ಲಿ ನನ್ ಕೈ ಹಿಡ್ಕೊಂಡ್ ಎಳ್ಕೊಂಡ್ ಹೋಗೇ ಬಿಟ್ಳು.. ಎಲ್ಲೇ, ಏನೇ ಅಂಥದ್ದು ಅರ್ಜೆಂಟ್  ಅಂದ್ರೂ ಮಾತಾಡಿಲ್ಲಾ, ನಕ್ಬುಟ್ಟು ಹಂಗೇ ಸುಮ್ನಾದ್ಳು!
ನಾನೂ ಅದೇನ್ ತೋರಿಸ್ತಾಳೋ ನೋಡೇ ಬಿಡೋಣಾ ಅಂತಾ ಸುಮ್ನೇನೆ ಅವ್ಳ್ ಹಿಂದೇನೇ ಹೋದೆ. ಮೇನ್ ಡೋರ್ ಗೆ ಅವ್ಳಿದ್ದೇ .ಡೀ ಕಾರ್ಡ್  ಸ್ವ್ಯೆಪ್ ಮಾಡಿ ನನ್ನಾ ಯೆಳ್ಕೊಂಡ್ ಹೋಗೇ ಬಿಟ್ಳು, ನಂಗೆ ಮತ್ತೆ ಸ್ವ್ಯೆಪ್ ಮಾಡೋ ಕಾಟಾ ತಪ್ತು! ಸರೀ ಮೇನ್ ಡೋರ್ ದಾಟಿ ರಿಸೆಪ್ಷನ್ ಹತ್ರಾ ಬಂದು ಮತ್ತೆ ಮುಂದೆ ಹೋಗಿ ಮತ್ತೊಂದ್ ಬಾಗ್ಲಿನ್ನಾ ಸ್ವ್ಯೆಪ್ ಮಾಡ್ದೇನೇ ತೆಗ್ದು ಅಂತೂ ಇಂತೂ ಸರಿಯಾಗ್ ನಾಲ್ಕೂವರೆ ನಿಮಿಷಾ ಕಾದೂ ಕಾದೂ ಲಿಫ್ಟ್ ಒಳ್ಗಡೆ ಹೋದ್ವೀ. ನಂಗೆ ಏನಪ್ಪಾ ಇವ್ಳಿದ್ದು ಥೂ ಅಂದ್ಕೊಂಡೆ!! ಅದು ನಿಧಾನವಾಗಿ ಸಿಟಿ ಬಸ್ ಥರಾ ಎಲ್ಲಾರ್ನೂ ಎಲ್ಲಾ ಫ್ಲೋರ್ ನಲ್ಲೂ ಹತ್ತಿಸ್ಕೊಂಡ್ ಹತ್ತಿಸ್ಕೊಂಡ್ ಮೇಲೆ ಹೋಗ್ತಾ ಇತ್ತು... ಈಗಾದ್ರೂ ಕೈ ಬಿಡೇ ನಂದು ಅಂತಾ ಹೇಳೋದ್ರೊಳ್ಗೆ ಅವ್ಳಿಗೇ ಏನ್ ಕಂಡ್ತೋ ಏನೋ ಪಾಪಾ ಹಿಡ್ಕೊಂಡಿರೋ ನನ್ನಾ ಕೈನಾ ರಪ್ಪಂತಾ ಒಂದೇ ಸಲಾ ಬಿಸಾಕ್ಬುಟ್ಳು! ಸೆಕೆಂಡ್ ಫ್ಲೋರ್ ನಲ್ಲಿ ಹೆಗಲು ಮೇಲೆ ಕೈ ಹಾಕ್ಕೊಂಡಿರೋ ಒಂದ್ ಬೇರೆ ಕಂಪನಿ ಹುಡ್ಗಾ-ಹುಡ್ಗೀ ಬಂದಿದ್ದೂ ಇದ್ಕೆ ಕಾರಣ ಇರ್ಬಹುದು ಅಂತಾ ನಾನು ಅವಳ ಕಣ್ಣನ್ನೇ ನೋಡ್ತಾ ಹನ್ನೊಂದ್ ನೇ ಫ್ಲೋರ್ ತನಕಾ ಸುಮ್ನೇ ನಿಂತಿದ್ದೆ :)
ಅಂತೂ ನಮ್ ಆಫೀಸ್ ಬಂತು, ಏನಪ್ಪಾ ಇವ್ಳಿದ್ದು ವಯಸ್ಸಲ್ಲಿ, ಹೊತ್ನಲ್ಲಿ ಎಲ್ಲಾರ್ ಮುಂದೆ ಕೋತಿ ಆಟ ಅಂದ್ಕೊಂಡೆ, ಮತ್ತೆ ಕೈ ಹಿಡ್ಕೊಂಡ್ ಕೆಫೆಟೇರಿಯಾಕ್ಕೆ ಎಳ್ಕೊಂಡೇ ಹೋದ್ಳು. ಅಲ್ಲೂ ಅವ್ಳಿದ್ದೇ ಕಾರ್ಡು!
ಅಲ್ಲಾ ಇವ್ರು ಏನಕ್ಕೆ ಥರಾ ಗಲ್ಲಿ ಗಲ್ಲಿಗೆ ಹೀಂಗ್ ತೊಂದ್ರೆ ಕೊಡ್ತಾರಪ್ಪಾ ಅಂದ್ಕೊಂಡ್ ಬಯ್ಕೊಂಡೇ ಹೋದೆ, ಸಧ್ಯಕ್ಕೆ ರೆಸ್ಟ್ ರೂಮ್ಸ್ ಗೊಂದು ಥರಾ ಕಾಟಾ ಇಲ್ಲ, ಮುಂದೆ ಅದ್ಕೂ ಮಾಡೋಕ್ ಐಡಿಯಾ ಕೊಡೋಣಾ ಅವ್ರಿಗೆ ಅಂದ್ಕೊಂಡೆ. ಆದ್ರೂ ಒಳ್ಗಡೆ ಇರೋ ಬರೀ ಒಂದೊಂದ್ ರೆಸ್ಟ್ ರೂಮ್ಸ್ ಗೂ  ಮೂರ್ ಮೂರ್ ಬಯೋ-ಮೆಟ್ರಿಕ್ ಸಿಸ್ಟಮ್ ಇದೆ :(
(ನಂಗೆ ಆಫೀಸಲ್ಲಿ . ಡೀ ಕಾರ್ಡ್ ಸ್ವ್ಯೆಪ್ ಮಾಡೋದು ಅಂದ್ರೆ ಕೆಟ್ಟ ಬೇಜಾರು/ ತಲೆ ನೋವು [ನನ್ ಹತ್ರಾ ಕಾರ್ಡ್ ಇದ್ರೂನೂ ಒಂದೊಂದ್ ಸಲಾ ಸುಮ್ನೆ ನಿಂತಿರ್ತೀನಿ, ಇಲ್ದೆ  ಇರೋನ್   ಥರಾ, ಆಮೇಲೆ ಬೇರೆ ಎಂಪ್ಲಾಯೀಸೋ, ಸೆಕ್ಯೂರಿಟಿ ಯವ್ರೊ ಬಂದು ತೆಗೀತಾರೆ ಪಾಪಾ!!] ಅದೇ ಕ್ರೆಡಿಟ್ಟೋ ಡೆಬಿಟ್ಟೋ ಕಾರ್ಡ್ ಆದ್ರೆ ಖುಷ್-ಖುಷಿಯಿಂದಾ ಉಜ್ತೀನಿ!!)
ತಡ್ಯೇ, ನಾನ್ ಕಾಫೀ ತಗೋತೀನಿ ನಿಂಗೇನಾದ್ರೂ ಬೇಕಾ ಅಂದೆ. ನಿನ್ನೆ ತಾನೇ ಶೇಪ್ ಮಾಡ್ಸಿದ್ ಹುಬ್ಬು ಹಾರ್ಸಿ, ಕಣ್ ಚಿಕ್ದು ಮಾಡಿ, ಕೂದ್ಲಿನ್ನಾ ನಾಲ್ಕ್ ಎಳೆ ನಾ ಒಟ್ಗೂಡ್ಸಿ ಕಿವಿ ಹಿಂದೆ ತಳ್ತಾ ಹೂಂ ತಗೋ, ''ನಂಗೆ ಬ್ರೂ ಸ್ಟ್ರಾಂಗು, ಕಹಿ ಕಹಿ ಬೇಕು ಅಂದ್ಳು''. ಅವ್ರು ಮತ್ತೆ ನಂಗೆ ಬೇರೆ ಅವ್ಳಿಗೆ ಬೇರೆ ಅಂದ್ರೆ ಮತ್ತೆ ಲೇಟ್ ಮಾಡ್ತಾರಲ್ಲಾ, ಟೈಮ್ ಬೇರೆ ಆಗ್ತಾ ಇದೆ ಅಂದ್ಕೊಂಡು ಅವ್ರ್ ಹೇಳಿದ್ದೇ ಎರಡು ಕೊಡಪ್ಪಾ ಅಂದೆ. ಅವ್ನು ನಾನ್ ಒಬ್ನೇ ಎರಡು ಕಾಫೀ ಕುಡ್ಯೋ ಥರಾ ಒಂಥರಾ ಸಾರ್ಕ್ಯಾಸ್ಟಿಕ್ ಲುಕ್ ಕೊಟ್ಟಾ. ಹಾಳಾಗ್ ಹೋಗ್ಲೀ ಅಂದ್ಕೊಂಡ್ ಸುಮ್ನೆ ಆದೆ. ಆಗ್ಲೂ ಕೈ ಹಿಡ್ಕೊಂಡೇ ಇದ್ಳು (ನನ್ ಕೈ ನಲ್ಲಿ ಅದೆಂಥಾ ಸುಡುಗಾಡು ಚಂದಾ ಕಂಡ್ತೋ ಅವ್ಳಿಗೆ ಮತ್ತೆ ದೇವ್ರಿಗೇನೆ ಗೊತ್ತು) ಸಾರ್ ಎರಡು ಸ್ಟ್ರಾಂಗ್ ಕಾಫೀ ಅಂತಾ ಕಿರಚ್ದಾ ಕೆಫೆಟೇರಿಯಾ ಕಾಫೀ ಅಂಗಡೀ ಹುಡ್ಗಾ.

ಅದ್ನಾ ಹಿಡ್ಕೊಂಡ್ ನನ್ಗೊಂಚೂರ್ ಸಕ್ರೆ ಹಾಕ್ಕೊಂಡ್ ಅವ್ಳಿಗೆ ಬರೀ ಕರೀ ಕಾಫೀ ಇರೋ ಬಿಳೀ ಪೇಪರ್ ಕಪ್ ಕೊಟ್ಟೆ. ಅವ್ಳು ಫುಲ್ ಖುಷ್, ಮುಖದಲ್ಲಿ ಸಾವಿರ ಬೆಳದಿಂಗಳು. ಹೆಣ್ಮಕ್ಳು ಅದೇನಕ್ಕೆ ಹಂಗೆ ಸಣ್ಣ ಪುಟ್ಟದ್ದಕ್ಕೂ ಅತೀ ಖುಷಿಯಾಗ್ತಾರೋ/ತೀರಾ ಸಣ್ಣ ಕ್ಷುಲ್ಲಕ ವಿಷಯಕ್ಕೂ ಚಂಡಿ ಚಾಮುಂಡಿಯಾಗ್ತಾರೋ ಶಿವನಿಗೇ ಗೊತ್ತು!!
ಅವಳ ಎಡ ಕೈನಲ್ಲಿ ನನ್ನ ಬಲಗೈ, ನನ್ನ ಎಡಗೈನಲ್ಲಿ ಚೂರು ಸಕ್ರೆ ಹಾಕಿರೋ ಕಪ್ಪು ಕಾಫಿ, ಅವಳ ಬಲಗೈನಲ್ಲಿ ಪಿಂಕ್ ಉದ್ದಾ ಪರ್ಸ್, ಅದ್ರ್ ಮೇಲೆ ಅವ್ಳ್ ಗಿಂತಾ ಉದ್ದಾ ದೊಡ್ಡಾ ಇರೋ ಪಿಂಕ್ ಫ್ಲಿಪ್ ಕವರ್ ಹಾಕಿರೋ ಅವ್ಳ್ ಪ್ರೀತಿಯ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್, ಅದ್ರ್ ಮೇಲೆ ಚೂರೂ ಸಕ್ರೆ ಹಾಕ್ದಿರೋ ಕರೀ ಕಪ್ಪು ಸ್ಟ್ರಾಂಗ್ ನೊರೆ ನೊರೆ ಕಾಫಿ. ಅವಿಷ್ಟನ್ನೂ ಒಂದರ ಮೇಲೊಂದು ಸರ್ಕಸ್ ಮಾಡ್ ಹಿಡ್ಕೊಂಡ್ ಹೈ-ಹೀಲ್ಸ್ ಚಪ್ಲಿ ಹಾಕ್ಕೊಂಡ್ ಹೆಂಗೋ ಬರ್ತಾ ಇದ್ಳು!! ಇವ್ಳಿಗೇನಪ್ಪಾ ಇಷ್ಟೊಂದು ಪಿಂಕ್ ಹುಚ್ಚು ಅಂದ್ಕೊಂಡೆ! ನೀಲಿ ಟೈಟ್ ಜೀನ್ಸ್, ಅದ್ರ್ ಮೇಲೆ ಪಿಂಕ್ ಟಾಪ್, ಕೈ ಬೆರಳು ಕಾಲು ಬೆರಳುಗಳಿಗೂ, ತುಟಿಗೂ, ಕಣ್ಣು ಹುಬ್ಬು, ರೆಪ್ಪೆ ಕೆಳಗೂ ಎಲ್ಲಾ ಕಡೆ ನೇಲ್ ಪಾಲಿಶ್, ಲಿಪ್ ಸ್ಟಿಕ್ಕು, ಹೇರ್ ಬ್ಯಾಂಡ್, ಕ್ಲಿಪ್ಪು, ಚಪ್ಲಿ, ಕೈ ಗೆ ಹಾಕಿರೋ ಬಳೆ ತರಹದ ಪ್ಲಾಸ್ಟಿಕ್ / ರಬ್ಬರ್ ಫ್ಯಾನ್ಸೀ ಐಟಮ್ಮುಗುಲಾಬಿಯೋ ಗುಲಾಬಿ. ಪಿಂಕಿ :) ಸ್ವೀಟ್ ಪಿಂಕೀ!! ನಾನ್ ಕೇಳ್ದೆ, ಅಲ್ವೇ ಇಷ್ಟೊಂದು ನೀನ್ ಪಿಂಕ್ ಫಾಲೋವರ್ರಾ ಅಂದೇ ಹೂಂ ಅಂದ್ಲು. ಅಲ್ಲಾ ಎಲ್ಲಾ ನಿಂಗೆ ಪಿಂಕು ಸಿಕ್ಕಿದೆ ಹಾಕೀದೀಯಾ, ಮೇಲಿಂದಾ ಕೆಳಗೆ ಉಗುರಿನಾ ತನಕಾ ಪಿಂಕ್ ಸಿಕ್ಕಿದೆ, ನಿಂಗೆ ಇಷ್ಟು ಮಾಡಿದೋಳಿಗೆ ಒಂದ್ ಪಿಂಕ್ ಪ್ಯಾಂಟ್ ಸಿಕ್ಕಿಲ್ವೇನೆ ಅಥ್ವಾ ಮರ್ತೋಯ್ತಾ ಅಂದೆ. ನನ್ ತಲೆ ಪಕ್ಕಾ ಅವ್ಳ್ ತಲೆಯಿಂದಾ ಕುಟ್ಟಿದ್ಳು. ನಿಂಗೆಲ್ಲಾ ಅವೆಲ್ಲಾ ಗೊತ್ತಾಗಲ್ಲಾ ಸುಮ್ನೇ ಬಾರೋ ಅಂದ್ಲು. ಲೆಗ್ಗಿನ್ನೋ ಪ್ಯಾಂಟೋ ಬರತ್ತಲ್ಲಾ ಅದ್ನಾ ಹಾಕ್ಕೊಂಡ್ ಬರ್ಬೇಕಿತ್ತೇ ಅಂದೆ, ನಿನ್ ತಲೆ ಯಾರಾದ್ರೂ ಥರಾ ಟೀ ಶರ್ಟ್ ಮೇಲೆ ಲೆಗ್ಗಿನ್ಸ್ ಹಾಕ್ತಾರಾ ಕೇಳಿದ್ಳು, ನಂಗೇನೆ ಗೊತ್ತು ನಾನಂತೂ ಹಾಕಲ್ಲಾಪ್ಪಾ ಅಂತಂದು ಪೆಚ್ಚು ಮೂತಿ ಮಾಡಿ ನಕ್ದೆ. ಹೇ ಹೇ ವೆರಿ ಫ಼ನ್ನಿ ಅಂತಾ ಕಡೆಯಿಂದಾ ಬಾಣಾ ಬಿಟ್ಟಂಗೆ ಬಂತು ಉತ್ರಾ. ಆದ್ರೂ ಅಷ್ಟ್ ಪಿಂಕಿಶ್ ಹಾಕ್ಕೊಂಡ್ರೂ ಒಂಚೂರೂ ಅಸಹ್ಯ / ಢಾಳ ಪಿಂಕ್ ಅಂತೂ ಅಲ್ವೇ ಅಲ್ಲಾ.. ಎಲ್ಲವೂ ಪಿಂಕ್ ನಲ್ಲೇ ಥರೇವಾರೀ ಬಣ್ಣ ಬಣ್ಣದ ಶೇಡ್ಸ್, ಎಷ್ಟು ಚೆನ್ನಾಗಿ ಮುದ್ದಾಗಿ ಕಾಣ್ತಾ ಇದ್ಲು, ಲವ್ಲೀ ಕಾಣ್ಟ್ರಾಸ್ಟ್ ಕಲರ್ಸ್!! ಯಾರಿಗೇ ಆದರೂ ಅಲ್ಲೇ ಲವ್ ಆಗೋವಷ್ಟು ಸ್ಮಾರ್ಟ್ ಆಗಿ, ಕ್ಯೂಟಿ ಸ್ಮಾಲ್ ಪೈ :) 
ಇಷ್ಟು ಮಾತು ಮುಗಿಯೋವಷ್ಟರಲ್ಲಿ ಕೆಫೆಟೇರಿಯಾ ದಾಟಿ ಮತ್ತೊಂದ್ ಬಾಗಿಲು ನನ್ ಕಾರ್ಡ್ ನಲ್ಲಿ ಸ್ವ್ಯೆಪ್ ಮಾಡಿ ಅವ್ಳ್ ಕ್ಯೂಬಿಕಲ್ ಗೆ ಕರ್ಕೊಂಡ್ ಹೋದ್ಲು. ಅಲ್ಲಿ ಅವ್ಳು ಚೆಲ್ಲಾ ಪಿಲ್ಲಿ ಮಾಡ್ ಇಟ್ಟಿದ್ ಸಾಮಾನ್ ನೋಡಿ ನಾನ್ ಶಾಕ್ ಆಗ್ಬಿಟ್ಟೆ!! ಹಂಗೇನೇ ಕೆಳ್ಗಡೆ ಸಪರೇಟ್ ಲಾಕರ್ ನಾ ಓಪನ್ ಮಾಡಿ ಇಟ್ಳು... ಈಗ ಶುರುವಾಗತ್ತೆ ನಿಜವಾದ ಕಥೆ!
********
ನಂಗೆ ನಿದ್ದೆಯಲ್ಲಿ ಯಾರೋ ಬಂದು ಕೆನ್ನೆ ಗಿಂಡಿ, ಮೈ ಮೇಲೆ ಒಂದ್ ಬಕೆಟ್ ಬಿಸಿ ನೀರು ಹಾಕಿ ಎಬ್ಸ್ದಂಗೆ ಆಯ್ತು.
ಮನ್ಸು ತಲೆ ಎರಡೂ ಸರಿಯಾಗಿ ಎಂಟು ದಿನದ ಹಿಂದೆ ಓಡೋಯ್ತು :) :)
--
ನಂಗೆ ಸರಿಯಾಗಿ ನೆನ್ಪಿದೆ. ಅವತ್ತು ನೀನು ಹೊಸಾ ಹ್ಯಾಂಡ್ ಬ್ಯಾಗ್ ತಗೊಂಡು ಅದ್ರ್ ತುಂಬಾ ಏನೋ ತುಂಬಿಸ್ಕೊಂಡ್ ಬಂದೆ, ನಾನೂ ಕೆಟ್ ಕುತೂಹಲಾ ಇರೋ ಪ್ರಾಣಿ, ಏನೇ ಅದು ತೋರ್ಸಲ್ವಾ ಅಂದೆ! ನೀನು ಉಹುಂ, ಕೊಡಲ್ಲಾ ಹೋಗೋ ಅಂತಾ ಅಂದೆ. ನಾನೂ ಸುಮ್ನಾದೆ. ಆಮೇಲೆ ನೀನೇ ಬಂದು ನೋಡೋ ಏನೂ ಇಲ್ಲಾ ಕಣೋ ಅಂತಾ ನಾಲ್ಕ್ ನಾಲ್ಕ್ ಅಂದ್ರೂ ನಾನೂ ನಿನ್ ಮೇಲಿನ್ ಕೋಪಕ್ಕೆ ನೋಡ್ದೆ ಸುಮ್ನೇ ಅವಾಯ್ಡ್ ಮಾಡ್ದೆ. ನಿಂಗೆ ನೆನಪಿದ್ಯಾ?
ಆಮೇಲೆ ಮನೆಗೆ ಬಂದೆ, ಪಾಪಾ ಅನಿಸ್ತು! ಆಮೇಲೆ ಮೂರ್ ದಿನಾ ಮಾತು ಕಥೆ ಏನೂ ಇಲ್ಲಾ :( ನಿನ್ ಕೈ, ನನ್ ಕೈ ಇಬ್ರಿದ್ದೂ ಕೆರೀತಾ ಇತ್ತು, ನಿಂದೂ ಅಲ್ವಾ? ನನ್ನಾ ಇನ್ನು ಎಷ್ಟು ಪರ್ಚೋಕೆ, ಗುದ್ದೋಕೆ , ಹೊಡ್ಯೋಕೆ ಐಡಿಯಾ ಹಾಕ್ ಇಟ್ಟೀದೀಯಾ ನಿಜಾ ಹೇಳೇ ಇವತ್ತಾದ್ರೂನೂ!
ಆಮೇಲೆ ನಿನ್ ಪ್ರೀತಿ ಜೋಳ / ಗೋಲ್ ಗಪ್ಪಾನಾ ಆಫೀಸ್ ಬ್ಯಾಕ್ ಗೇಟ್ ಹಿಂದೆ ಅವತ್ತು ಸಂಜೆ ಮತ್ತೆ ತಿಂದ್ಮೇಲೆ ಚಂದ್ರಾ ನಿನ್ ಮುಖದಲ್ಲಿ ಪ್ರತ್ಯಕ್ಷಾ :) ಅದ್ ಹೆಂಗೆ ಚಂದ್ರಾ ನಿನ್ ಮುಖದಲ್ಲಿ ರಾತ್ರಿ, ಬೆಳಿಗ್ಗೆ, ಮಧ್ಯಾಹ್ನ ಬೇಕ್ ಬೇಕು ಅಂದಾಗೆಲ್ಲಾ ಕಾಣ್ತಾನೋ, ನೀನೇ ಹೇಳ್ಬೇಕು ಮಾರಾಯ್ತೀ!!
ಮತ್ತೆ ಫ್ರೆಂಡ್ ಶಿಪ್ ಸರೀ ಹೋಯ್ತು!!
ವಾಪಾಸ್ ಗೇಟ್ ನಿಂದಾ ಆಫೀಸ್ ಗೆ ಹೋಗ್ಬೇಕಾದ್ರೆ ನಿನ್ ಕೈನಲ್ಲಿರೋ ಮರದ ಒಂದೇ ಒಂದು ಬಳೆ ನನ್ನ ಕೈ ಕಿರು ಬೆರಳಿಗೆ ಸಿಕ್ಕಿ ಹಾಕ್ಕೊಂಡಿತ್ತು, ನೀನ್ ನೋಡಿದ್ಯಾ? ಅಥ್ವಾ ನೋಡಿದ್ರೂ ಇವ್ನಿಗೆ ಮಾಡ್ಸೋಣ ಇರು ಅಂತಾ ಸುಮ್ನೆ ಇದ್ಯಾ? ನನ್ ಮೇಲಿನ ಅವತ್ತಿನ ಕೋಪಕ್ಕೆ ನೀನು ಬೇಕು ಅಂತಾನೇ ಮಾಡಿರ್ತೀಯಾ ಅಲ್ವೇನೆ ಪಿಂಕೀ??
ಅದೇನ್ ಕರಡಿ ಮರಿ ಹುಚ್ಚು ಪ್ರೀತಿ / ಮೂಡ್ ಸ್ವಿಂಗೋ??! ನಿನ್ ಪ್ರೀತಿ, ಕೋಪ, ನಗು, ಮೂಡ್ ಗೆ ಒಂದಕ್ಕೊಂದು ಸಂಬಂಧಾ, ಟೈಮ್ ಏನೂ ಇಲ್ವೇನೇ?!
ನನ್ ಕೈ ಬೆರಳು ನೋವಾದ್ರೆ ನಿಂಗೆ ಖುಶೀ ಅಲ್ವಾ??
ಹಂಗೋ ಹಿಂಗೋ ಮಾಡಿ ಹೆಂಗೆಂಗೋ ಮತ್ತೆ ಮಾತು ಶುರುವಾಯ್ತು, ಆದ್ರೆ ಈಗ ನಿಂಗೆ ಇರೋದ್ಕಿಂತಾ ಹೆಚ್ಚಿಗೆ ಪ್ಯಾಕೇಜ್ ಕೊಟ್ಟು ಬೇರೆ ಕಂಪನಿಗೆ ಸೆಲೆಕ್ಟ್ ಮಾಡಿದೋರ್ ಯಾರ್? ಅವ್ರಿಗೆ ನನ್ನ ಧಿಕ್ಕಾರವಿರಲಿ :( ನನ್ನಾ ನಿನ್ನಾ ಜಗಳ ದಿನಾ ಆಗೋದನ್ನಾ ಅನ್ಯಾಯವಾಗಿ ತಪ್ಪಿಸಿಬಿಟ್ರಲ್ಲೇ!! ಅದ್ಕೆ ಅಲ್ವಾ ನೀನು ಇವತ್ತು ನನ್ನಾ ರೀತಿ ನಿನ್ ಕ್ಯೂಬಿಕಲ್ ಗೆ ಎಳ್ಕೊಂಡು ಹೋಗಿದ್ದು, ನಾನ್ ಅವತ್ತು ಕೇಳಿದ್ ಹೊಸಾ ಬ್ಯಾಗ್, ನಿನ್ ಕ್ಯೂಬಿಕಲ್, ಲಾಕರ್ ಎಲ್ಲಾ ತೆಗೆದು ನನ್ ಎದುರ್ಗಡೆ ಬಿಚ್ಚಿಟ್ಟಿದ್ದು?
ಅದನ್ ನೋಡೇ ಅಲ್ವಾ ನಾನ್ ರೀತಿ ಶಾಕ್ ಆಗಿದ್ದು? ಇಬ್ರೂ ಫ್ಲೋರ್ ಗೆ ಕಾಫೀ ಅಭಿಷೇಕ ಮಾಡ್ಸಿದ್ದು?
******************
ನಾನೂ ಒಂದೊಂದಾಗಿ ನೋಡ್ತಾನೇ ಹೋದೆ, ಅದೇನೇ ಅದು ಬರೀ ಫಿಲಂ ನಲ್ಲಿ ಮಾತ್ರಾನೇ ನೋಡಿದ್ದೆ ಹುಡ್ಗೀರ್ ಲೋಕಾನಾ, ಬರೀ ಫೋರ್ ಬೈ ಫೋರ್ ಜಾಗದಲ್ಲಿ ಅದೇನ್ ಪ್ರಪಂಚಾ ತೋರಿಸ್ಬಿಟ್ಯೇ ಮಾರಾಯ್ತೀ?!
ಮೊದಲಿಗೆ ನಿನ್ನ ಪಿಂಕ್ ಹೇರ್ ಬ್ಯಾಂಡು (ಈಗ ಫೋಟೋ ಹಾಕಿದೀನಲ್ಲಾ ಅದು, ಅವತ್ತು ಯಾವತ್ತೋ ನಾನ್ ಅದು ಒಂಥರಾ ಮಜಾ ಇದೆ ಅಂಥಾ ಹೇಳಿದ್ದಕ್ಕೆ ನನಗೆ ಇವತ್ತು ನೀನು ಆಫೀಸ್ ಬಿಟ್ ಹೋಗ್ಬೇಕಾದ್ರೆ ಸಿಕ್ಕ ಸ್ಮಾಲ್ ಪಿಂಕಿ ಮಗ್ಳು ಇದು - ನಂಗೆ ಗಿಫ್ಟ್ ? ನೀನ್ ಯೂಸ್ ಮಾಡಿ / ಮಾಡ್ತಾ ಇದ್ದ ಹೇರ್ ಬ್ಯಾಂಡ್, ಲೇಯ್ ಕೋತೀ ಈಗ ಇದ್ನಾ ನಾನ್ ಯಾರಿಗೇ ಕೊಡ್ಲೀ , ನಾನಂತೂ ಹಾಕ್ಕೊಳ್ಳೋಕೆ ಆಗಲ್ಲಾ!!!), ಆಮೇಲೆ ಏನೋ ಒಂದಿಷ್ಟು ಫೈಲ್ಸ್ ಗಳು, ನಾನೇ ಕೊಟ್ಟ ಎರಡು ಡೈರಿ ಮಿಲ್ಕ್ ಸಿಲ್ಕ್ ಖಾಲಿ ನೀಲಿ ಚರ ಚರಾ ಅನ್ನೋ ಕವರ್ರು, ಯಾವಾಗಲೋ ತಗೊಂಡು ಮುಡಿದ ಒಣಗಿದ ಗುಲಾಬಿ, ಮಲ್ಲಿಗೆ ಹೂವು, ಯಾವ್ದೋ ಬ್ಯೂಟಿ ಪಾರ್ಲರ್ ಡಿಸ್ಕೌಂಟ್ ವೋಚರ್, ಮೊವೀ ಗಿಫ್ಟ್ ಪಾಸ್, ಕಾಫೀ ಡೇ ಕಾರ್ಡು , ಅಪ್ಪಿ ತಪ್ಪಿ ಒಂದು ಕಪ್ಪನೆಯ ಕ್ಲಿಪ್ಪು, ಜ್ವರದ್ದು ನಾಲ್ಕು ಟ್ಯಾಬ್ಲೆಟ್ಟು, ಅರ್ಧಾ ಖಾಲಿ ಆದ ಡಿಯೋ ಬಾಟಲ್, ಇನ್ನೂ ಏನೇನೋ, ಆದ್ರೂ ಅದೇನೋ ಕವರ್ ನಲ್ಲಿ ಇರೋದನ್ನಾ ಮಾತ್ರಾ ನೀನು ಇನ್ನೂ ತೋರ್ಸಿಲ್ಲಾ, ನಂಗೆ ಮುಟ್ಟೋಕೂ ಬಿಟ್ಟಿಲ್ಲಾ, ಛೀ ಅದು ನೀನ್ ಮುಟ್ಬೇಡಾ ಅಂದ್ಯಲ್ಲಾ ಯಾಕೆ? ಅದನ್ನಾ ಯಾಕೆ ನೀನು ಹಂಗೇ ಬ್ಯಾಗಿಗೆ ತುರುಕ್ದೆ? ಅಂಥದ್ ಏನೇ ಅದು? ಕಂಪನಿ ಬಿಡ್ಬೇಕಾದ್ರೆ ನಾನೂ ಅಲ್ಲಿ ಬಂದ್ರೆ ಮತ್ತೆ ತೋರಿಸ್ತೀಯಾ? ಅಥ್ವಾ ಆಗ್ಲೇ ಹೇಳೋದಾ ಅದನ್ನಾ??!
ಅದ್ ಒಂದ್ ಬಿಟ್ ಮತ್ತೇನ್ ಬೇಕಾದ್ರೂ ಕೇಳು ಮಾಡ್ತೀನಿ ಅಂದ್ಯಲ್ಲಾ ನಾನ್ ಏನ್ ಕೇಳ್ಲೀ ನೀನೇ ಹೇಳು ಪಿಂಕೀ!! ಪಕ್ಕಾ ಪೋಲಿ ಆಗ್ತೀಯಾ ಅಲ್ವಾ ಒಂದೊಂದ್ ಸಲಾ, ಹುಡುಗ್ರ್ ಕಿಂತಾ ಜಾಸ್ತಿ? ಆಗಾ ಗಿಂಡೋಕೆ ನಿನ್ ಪಕ್ಕದಲ್ಲಿ ಇದ್ದೋರು ಅವತ್ತಿಗೆ ಸತ್ರು ಅಲ್ವಾ?!
ಅಂತೂ ಇಂತೂ ಮಾಡಿ ನಿನ್ ಕ್ಯೂಬಿಕಲ್ ಕ್ಲೀನ್ ಮಾಡಿ, ಎಲ್ಲಾ ತಗೊಂಡು ಆಫೀಸ್ ಗೆ ಸಂಬಂಧ ಪಟ್ಟಿದ್ದೆಲ್ಲಾ ಅವರಿಗೆ ಒಪ್ಸಿ ಬಂದಿದ್ದಾಯ್ತು!! :)

ಇದ್ನಾ ಬರೀ ಅವತ್ತು ಬ್ಯಾಗ್ ತೋರ್ಸು ಅಂದಿದ್ದಕ್ಕೆ ಇಷ್ಟೆಲ್ಲಾ ಮಾಡಿ ಎಲ್ಲರ ಎದುರಿಗೆ ಹಿಂಗೆಲ್ಲಾ ಮಾಡಿದ್ದು ಬೇಕಿತ್ತೇನೆ ಹುಚ್ಚು ಹುಡುಗಿ? ನಾನ್ ಏನೋ ಆಯ್ತು ಅಂದ್ಕೊಂಡ್ರೆ ಉಫ್!! ಆದರೂ ಹುಡ್ಗೀರು ಹಿಂಗೆಲ್ಲಾ ಬರೀ ಮಾತನ್ನಾ ಇಷ್ಟೆಲ್ಲಾ ಸೀರಿಯಸ್ ಆಗಿ ತಗೊಂಡು ಹಿಂಗೆಲ್ಲಾ ಮಾಡ್ತಾರಾ? ಇವ್ಳಿನ್ನಾ ನೋಡೇ ನಂಗೆ ಗೊತ್ತಾಗಿದ್ದು.. ಹುಡ್ಗೀರು ಎಷ್ಟೇ ಕೆಟ್ಟವರಾದ್ರೂ ಆವ್ರ್ ಒಳ್ಗೆ ಯಾವಾಗಲೂ ಒಂದು ಒಳ್ಳೆ ತಾಯಿ ಮನಸ್ಸು, ತುಂಟ ಹುಡುಗಿಯ ಕಳ್ಳ ಮನಸ್ಸು, ಮಾಗಿದ ತುಂಬಾ ಯೋಚನೆ ಮಾಡುವ ಹೆಂಗಸಿನ ಮನಸ್ಸು, ಎಲ್ಲವೂ ಕೂಡ್ಕೊಂಡ್ ಇರತ್ತೆ ಅಂತಾ ಅವತ್ತೇ ನಂಗೆ ಗೊತ್ತಾಗಿದ್ದು!! ದೇವರ ಸೃಷ್ಟಿಯೇ ವಿಚಿತ್ರ ಅಲ್ವಾ? ಎಲ್ಲೋ ಇರೋರ್ನಾ ಎಲ್ಲೋ ತಂದು ಯಾರ್ಗೋ ಸೇರ್ಸೀ ಬಿಟ್ಟು ಇರೋಕೇ ಆಗ್ದೆ ಇರೋ ಥರಾ ಮಾಡ್ ಹಾಕ್ತಾನೆ ಕಳ್ಳ ದೇವ್ರು, ಅವ್ನೂ ತುಂಬಾ ಕಳ್ಳ ತುಂಟ :)
ಅವಳ ಹೊಟ್ಟೆ ತಂಪಾಗಿರಲಿ, ಹೊಸಾ ಕೆಲಸ ಜಾಗ ಸ್ನೇಹಿತರು ಎಲ್ಲಾ ಒಳ್ಳೆಯವರೇ ಸಿಗ್ಲೀ :)
ಹುಡ್ಗೀರ್ ಪ್ರಪಂಚಾ ಹಿಂಗೂ ಇರತ್ತಾ? ಇಷ್ಟು ಭಾವುಕರಾ? ಇಷ್ಟು ಗಯ್ಯಾಳಿಗಳಾ? ಹಿಂಗೂ ಇರ್ತಾರೆ ಅಂತಾ ತೋರ್ಸಿದ್ದಕ್ಕೆ ನಿನಗೊಂದು ದೊಡ್ಡ ಥ್ಯಾಂಕ್ಸೆ ಪಿಂಕಿ!

ಅಷ್ಟ್ ಮಾಡಿ ವಾಪಾಸ್ ಬರೋವಾಗಾ ಯಾಕ್ ನೀನ್ ನನ್ನ ಕೈ ಹಿಡ್ಕೊಂಡಿಲ್ಲಾ? ಯಾಕ್ ಬರೀ ಅಳ್ತಾ ಇದ್ದೆ? ಏನೂ ಕಾರಣಾ ಇಲ್ದೆ? ಅಳುವಿಗೆ ನಂದೇ ಕರ್ಚೀಫ್ ಯಾಕ್ ಕೇಳಿ ತಗೊಂಡೆ? ಅದನ್ನಾ ನಾನೇ ಇಟ್ಕೊಂಡಿರ್ಲಾ ಅಂತಾನೂ ಯಾಕ್ ಕೇಳ್ದೆ? ಕಾಫೀ ಚೆಲ್ಲಿದ್ದು ನೀನೇ ಆದ್ರೂ ಮತ್ತೆ ನನ್ ಹತ್ರಾನೇ ಯಾಕೆ ಕಾಫೀ ಕೊಡಿಸ್ಕೊಂಡೆ? ನಂಗೆ ತುಂಬಾ ಪ್ರಶ್ನೆ ಕೇಳೋದಿದೆ. ಯಾವಾಗ ಸಿಕ್ತೀಯಾ ಪಿಂಕೀ? ಇನ್ನೂ ಅಳ್ತಾನೇ ಇದೀಯಾ? ಅಳ್ಬೇಡಾ ಸುಮ್ನಿರು. ಫೋನ್ ಮಾಡ್ತೀನಿ ಮಾತಾಡು ಆಯ್ತಾ?

ಆದ್ರೆ ಇವತ್ತು ಸಿಗು. ಕೆಳಗಿನ ನನ್ನ ಕಂಡೀಶನ್ ಗೆ ಒಪ್ಕೊಂಡು ಬರೋದಾದ್ರೆ ಮಾತ್ರಾ:
- ಅವತ್ತು ಕವರ್ ನಲ್ಲಿ ತೋರ್ಸ್ದೆ ಇರೋದು ಏನು? ಇವತ್ತು ತೋರ್ಸ್ಬೇಕು, ಮುಟ್ಟೋಕೆ ಬಿಡ್ಬೇಕು, ನಂಗೆ ಒಟ್ನಲ್ಲಿ ಅದು ಏನು ಅಂತಾ ಗೊತ್ತಾಗ್ಬೇಕು.
- ಇವತ್ತು ಏನೂ ಕೋತಿ ಚೇಷ್ಟೆ ಮಾಡ್ಬಾರ್ದು, ಪ್ರಾಮಿಸ್ ನೌ ಓನ್ಲೀ. ನಾನ್ ನಿನ್ ಥರಾ ಅಲ್ಲಾ, ಪಬ್ಲಿಕ್ ನಲ್ಲಿ ನಂಗೆ ಮರ್ಯಾದಿ ದೊಡ್ಡದು, ನಿನ್ ಥರಾ ನಾನು ಮದ್ವೆ ಆಗಿ ಬೇರೆ ಊರಿಗೆ ಹೋಗೋ ಮನುಷ್ಯಾ ಅಲ್ಲಾ ನೋಡು ಅದ್ಕೆ.
- ನನ್ನ ಕರ್ಚೀಫ್ ವಾಪಾಸ್ ತಂದು ಕೊಡ್ಬೇಕು., ಇಲ್ಲಾ ಹೆಂಗಂದ್ರೂ ಅದು ಹಳೇದು, ನಂಗೆ ಹೊಸಾದು ಇವತ್ತು ನೀನೇ ತಂದು ಕೊಡ್ಬೇಕು ಆಯ್ತಾ?
- ಇವತ್ತು ಪಿಂಕ್ ಬಿಟ್ಟು ಬೇರೆ ಡ್ರೆಸ್ ಹಾಕ್ಕೊಂಡ್ ಬರ್ಬೇಕು.
- ಮತ್ತೆ ಮತ್ತೆ, ಇವತ್ತಾದ್ರೂ ಕಾಫೀ ಕೊಡ್ಸೆ, ಹೆಂಗಂದ್ರೂ ಅವತ್ತು ಎರಡು ಕಾಫೀ ಹಾಳು ಮಾಡಿದೀಯಾ!!
ಕಾಯ್ತಾ ಇರ್ತೀನಿ, ಫೋನೋ ಮೆಸೆಜೋ ಏನೋ ಒಂದು ಮಾಡು.
ನಿನ್ನ ಚಾರ್ಮೀ !! :)

1 comment:

nishu bhat said...

superrrrrrrrrrr...........