Sunday, May 11, 2014

ನಿನ್ನ ಧ್ವನಿ ಕೇಳಿ ನಿಂಗೆ ವಿಶ್ ಮಾಡೋ ಭರದಲ್ಲಿ ನಿನ್ನ ಮಗ!



Jepee Bhat @Amma



ಅಮ್ಮಂದಿರ ಬಗ್ಗೆ ಎಷ್ಟು ಹೇಳೋಣ?
ಅಮ್ಮನ ಬಗ್ಗೆ ಹೇಳಿದಷ್ಟೂ ಕಡಿಮೆಯೇ!
ಅಮ್ಮನಿಗೆ ಸಹಾಯ ಮಾಡಿದಷ್ಟೂ ಗೌಣವೇ!
ಅಮ್ಮನ ಬಗ್ಗೆ ಹೊಗಳಿದಷ್ಟೂ ಸಣ್ಣದೇ!
ಎಷ್ಟು ಜನುಮ ಎತ್ತಿ ಬಂದರೂ ಅಮ್ಮನಿಗೆ ಮಾಡೋ ಸೇವೆ ಚಿಕ್ಕದೇ!



ಎಲ್ಲರ ಅಮ್ಮಂದಿರೂ ಅವರವರಿಗೆ ಗ್ರೇಟ್, ಪ್ರೀತಿಯ ಅಮ್ಮ, ಹೊಡ್ಯೋ ಅಪ್ಪಾ! ಅಮ್ಮನ್ ಕಂಡ್ರೆ ಸಿಕ್ಕಾಪಟ್ಟೆ ಲವ್ವು; ಅಪ್ಪನ್ ಕಂಡ್ರೆ ಭಯಾ!
ಅಮ್ಮಾ ಪ್ರೀತಿ ಮಾಡ್ತಾಳೆ, ಅಪ್ಪಾ ಹೊಡೀತಾನೆ, ಬೈತಾನೆ, ಗದರ್ತಾನೆ, ಸಿಟ್ಟು ಮಾಡ್ಕೋತಾನೆ!
ಅಮ್ಮ ಪ್ರೀತಿಯ, ಪ್ರೀತಿ ಮಾಡೋ, ಪ್ರೀತಿಯ ಹೊಳೆ ಸುರ್ಸೋ ಮಹಾನದಿ.

ಅಮ್ಮನ ಮುಂದೆ ಅಪ್ಪ ಯಾವಾಗಲೂ  ಮೌನವಾಗಿ ಸರಿಯೋ ವಿಷಯವಾಗಿ ಹೋಗ್ತಾನೆ ಯಾಕೆ?!
ನಂಗೆ ಅಪ್ಪ ಅಮ್ಮ ಇಬ್ರೂ ಒಂದೇ :) ಇಬ್ರೂ ಒಂದೇ ಥರಾ ಪ್ರೀತಿ ಮಾಡಿ ನನ್ನ ಬೆಳ್ಸಿದಾರೆ! ಓದ್ಸಿದಾರೆ! ಮುದ್ದು ಮಾಡಿ ಇಷ್ಟು ಇರೋವ್ನಾ ಇಷ್ಟುದ್ದಾ ಮಾಡಿದಾರೆ!
ಇಬ್ರಿಗೂ ನನ್ನದೊಂದು ಥ್ಯಾಂಕ್ಸ್ :) ಇಲ್ಲಿಂದಾನೇ ಐನೂರು ಕಿಲೋ ಮೀಟರ್ ದೂರ ಇರೋ ನಿಮ್ಗೆ ನನ್ನ ಪ್ರೀತಿಯ ಅಪ್ಪುಗೆ!
ಎಲ್ರೂ ಹೇಳೋ ಥರಾ ಎಷ್ಟೇ ಜನುಮ ಎತ್ತಿದರೂ ನೀವೇ ಅಪ್ಪ ಅಮ್ಮಾ ಆಗಿ ಸಿಗ್ಲೀ ಅಂತಾ ಬೇಡ್ಕೊತೀನಿ; ಆದ್ರೆ ಒಂದು ಸಣ್ಣ ಸ್ಮಾಲ್ ಚೇಂಜ್!

ಅಪ್ಪಾ ನಂಗೆ ಪ್ಲೀಸ್ ಮುಂದಿನ ಜನ್ಮದಲ್ಲಿ ಹೊಡ್ಯೋದು ಸ್ವಲ್ಪಾ ಕಡ್ಮೆ ಮಾಡು [ನಾನು ಅಪ್ಪನ ಹತ್ತಿರ ಎಷ್ಟು ಏಟು ತಿಂದಿದೀನಿ ಅಂತಾ ನಂಗೆ ಮತ್ತೆ ನನ್ನ ಅಪ್ಪಂಗೆ ಯಾರಿಗೂ ಲೆಕ್ಕ ಇಲ್ಲ]
ಅಮ್ಮಾ ನೀನು ಮಾಡೋ ಪ್ರೀತೀನಾ ಒಂಚೂರೂ ಕಡ್ಮೆ ಮಾಡ್ಬೇಡಾ, ಇನ್ನೂ ಇನ್ನೂ ಜಾಸ್ತಿ ಮಾಡು [ಇನ್ಮುಂದೆ ಬರೋ ಸೊಸೆ ಮೊಮ್ಮಕ್ಕಳಿಗೂ ಸೇರಿಸಿ]



ಅಮ್ಮನ ಬಗ್ಗೆ ಏನು ನೆನ್ಪು ಮಾಡ್ಲೀ? ಏನು ಅಂತಾ ಹೇಳ್ಲೀ?

ಮೊದಲಿಂದಾ ನಂಗೆ ನೆನ್ಪಿದ್ದಂಗೆ ನೀನು ಹೇಳೋ ಕಥೆ ಎಲ್ಲಾ ನೆನ್ಪು ಮಾಡ್ಕೊಂಡ್ರೆ ನಂಗೆ ನೆನ್ಪಿರೋವಂಗೆ ನಾನ್ ಹುಟ್ಟಿದ್ದು ರಾತ್ರಿ ಹನ್ನೆರಡು ಮೂವತ್ತೆರಡಕ್ಕೆ!

ಪಾಪಾ ನಿಂಗೂ ನಿದ್ದೆ ಇಲ್ಲಾ; ನಂಗೆ ಹೊರ ಬಾರೋ ; ಜಗತ್ತು ನೋಡೋ ತವಕ; ನಿಂಗೆ ಅಲ್ಲಿ ಜೀವಾ ಹೋಗೋ ಥರಾ ಹೆರಿಗೆ ನೋವು!

ಆದ್ರೂ ನಾನು ಹುಟ್ಟಿದ್ಮೇಲೆ ಅಲ್ವಾ ನೀನು ಅಮ್ಮಾ ಆಗಿದ್ದು? ಅದ್ಕೆ ನೀನು ನಂಗೊಂದು ಚಿಕ್ ಥ್ಯಾಂಕ್ಸ್ ಹೇಳ್ಲೇಬೇಕು :p :D

ನಂಗೆ ಹಾಕೋ ಬಟ್ಟೆ ಟೊಪ್ಪಿ ಪೌಡರ್ ಸ್ನೋ ಎಲ್ಲಾ ಮೊದ್ಲೇ ರೆಡಿ ಮಾಡ್ಕೊಂಡಿದ್ದೆ ಅನ್ಸತ್ತೆ ಅಲ್ವೇನೆ ಅಮ್ಮಾ?!

ಆದ್ರೆ ನರ್ಸು ಅಳುತ್ತಿರೋ ನನ್ನಾ ಸುತ್ತಿದ್ದು ಮಾತ್ರಾ ಬಿಳೀ ಬಟ್ಟೆಲೀ ಅನ್ಕೋತೀನಿ!

ಆರು ತಿಂಗ್ಳು ಇರ್ಬೋದಾ? ಅಂಬೆಗಾಲಿಕ್ತಾ; ತೊದಲ್ತಾ; ಎಂಜಲು ಸುರಿಸ್ತಾ; ನಡ್ಯೋಕೆ ಕಲೀತಾ ಇರೋ ದಿನಗಳಿರಬಹುದು :) ನೀನು ನನ್ನ ಎಷ್ಟು ಖುಷಿಂದಾ ನೋಡ್ತಾ ಇದ್ದೆ ಅಲ್ವಾ?

ನಾನು ಚಡ್ಡಿಯಲ್ಲೇ ಹಾಕಿದ ಬಟ್ಟೆಯಲ್ಲೇ ಎಷ್ಟು ಗಲೀಜು ಮಾಡ್ಕೊಂಡಿಲ್ಲಾ, ನೀನು ರಾತ್ರಿ ಮಲ್ಕೊಂಡಿರಬೇಕಾದ್ರೆ ಎಷ್ಟು ಸಾವಿರ ಸಲ ಹಸಿವು ಅಂತಾ ಅತ್ತಿಲ್ಲಾ? ನೀನು ಎಲ್ಲೇ ಹೋದ್ರೂ ಪರಿಸ್ಥಿತಿ ಹೆಂಗೇ ಇದ್ರೂ ನಿನ್ನ ಎದೆಗೆ ನನ್ನ ಅವುಚಿಕೊಂಡು ಎಷ್ಟು ಸಾವಿರ ಮೈಲಿ ನನ್ನ ಜೊತೆ ಹೆಜ್ಜೆ ಹಾಕಿಲ್ಲ? ಬೇಸಿಗೆ ಮಳೆ ಚಳಿ ಕಾಲವೆನ್ನದೆ ; ಬಿಸಿಲಲ್ಲಿ ನನ್ನ ನೆರಳಾಗಿ, ಮಳೆಗಾಲದಲ್ಲಿ ನೀನು ಒದ್ದೆಯಾದ್ರೂ ನನ್ನ ಶರೀರಕ್ಕೆ ಕೊಡೆ ಹಿಡಿದುಚಳಿ ಗಾಲದಲ್ಲಿ ನೀನು ನಡುಗಿದರೂ ನನ್ನ ಬೆಚ್ಚಗೆ ಇಟ್ಟು, ನೀನು ಮಾಡಿದ ಪ್ರೀತಿ, ಒಂಚೂರೂ ಬೇಜಾರು ಮಾಡಿಕೊಳ್ಳದೆ ಮಾಡಿದ ಕೆಲಸಗಳು ಅವೆಷ್ಟು ಸಾವಿರವೋ, ಲಕ್ಷ ಕೋಟಿಯೋ? ಇವಕ್ಕೆಲ್ಲಾ ನಾನು ನಿನಗೆ ಏನನ್ನಾ ತಿರುಗಿಸಿ ಕೊಡಲೀ? ಅಥ್ವಾ ಏನು ಮಾಡಿದರೆ ಅದಕ್ಕೆ ಸಮ ಅಂತಾದರೂ ಹೇಳು! ಥ್ಯಾಂಕ್ಸ್ ಇಂದಾ ಮುಗ್ಯೋವಂಥದ್ದಾ ಇದು? ಉಹುಂ; ಇದ್ಕೆ ನನ್ನಲ್ಲಿ ಉತ್ತರವಿಲ್ಲಾ! ಮೌನದ ಪ್ರೀತಿಯ ಮುಗುಳ್ನಗೆಯಷ್ಟೇ ನನ್ನ ನಿರುಪಾಯದ ನಿಟ್ಟುಸಿರಷ್ಟೇ!

ಒಂಭತ್ತು ತಿಂಗಳುಗಳ ಕಾಲ ನಿನಗೆ ಎಷ್ಟು ನೋವು ಕಷ್ಟಾ ಕೊಟ್ಟಿಲ್ಲ? ಅದ್ಕೆ ನೀನು ಒಂಚೂರೂ ಬೇಜಾರು ಮಾಡಿಕೊಳ್ಳದೇ ಎಲ್ಲವನ್ನೂ ಅದು ಹೇಗೆ ಸಹಿಸಿಕೊಂಡೆ ಅಮ್ಮಾ? ನನಗೆ; ನಾನು ಈಗ ಇಲ್ಲಿ ಬಿದ್ದರೂ ನಿನಗೆ ಅಲ್ಲಿ ನೋವಾಗಿ ಎದ್ದು ಕೂರುವಂತೆ, ಬಾಧೆ ಪಡುವಂತೆ! ಇವೆಲ್ಲಾ ಅಮ್ಮಂದಿರಿಗೆ ಮಾತ್ರಾ ಸಾಧ್ಯಾ ಅಲ್ವಾ?

ಅದ್ಕೆ ನಿಂಗೆ ಮತ್ತೊಂದು ಥ್ಯಾಂಕ್ಸ್ :)

ನಂಗೆ ಇನ್ನೂ ಚೆನ್ನಾಗಿ ನೆನ್ಪಿದೆ!

ಆಗ ಮಳೆಗಾಲ, ಬೆಂಗಳೂರಿನ ಥರಹ ಎಲ್ಲ ಸೌಕರ್ಯವಿರೋ, ಮುಖ್ಯವಾಗಿ ಬೆಳಕಿರೋ ಹಳ್ಳಿಯಲ್ಲ. ಆಗ ನಂಗೆ ಎಷ್ಟು ವರ್ಷಾ? ನಾನು ಆಗ ಊರಲ್ಲಿ ಇದ್ದೆ. (ನನ್ನ ಹುಟ್ಟೂರಾದ ಹಳ್ಳಿ!!)  ಮಳೆಗಾಲದಲ್ಲಿ ಪವರ್ ಕಟ್ಟು! ಮಳೆಗಾಲದ ಐದು ತಿಂಗಳಲ್ಲಿ ಐದು ದಿನ ಕರೆಂಟ್ ಇದ್ರೆ ಹೆಚ್ಚು! ಪರಿಸ್ಥಿತಿ!!

ನಾನು ಊಟಕ್ಕೆ ಕೂತಿದ್ದೆ. ಕರೆಂಟ್ ಬೇರೆ ಇಲ್ಲಾ, ನಂಗೆ ಆಗ ಇದ್ದಕ್ಕಿದ್ದಂಗೆ ತುಪ್ಪಾ ನೆನ್ಪಾಗೋಯ್ತು, ನಂಗೆ ಊಟಕ್ಕೆ ಈಗ ತುಪ್ಪಾ ಬೇಕು! ನೀನು ಇವತ್ತು ಇಲ್ಲಪ್ಪಾ ನಾಳೆ ಮಾಡಿ ಕೊಡ್ತೀನಿ ಈಗ ಇರೋದ್ರಲ್ಲಿ ಊಟ ಮಾಡು ಅಂತಾ ಎಷ್ಟು ಸಮಾಧಾನ ಮಾಡಿಲ್ಲಾ? ನಾನು ಯಾವ್ದಕ್ಕೂ ಬಗ್ದೇ ಇದ್ದಾಗಾ ಕತ್ತಲೆಯಲ್ಲೇ ಚಿಮಣಿ ಬುರುಡೆ [ಸೀಮೆಎಣ್ಣೆಯನ್ನು ಉಪಯೋಗಿಸಿ ಈಗಲೂ ಹಳ್ಳಿ ಕಡೆ ಬಳಸೋ ದೀಪಗಳು] ಅದ್ನೇ ಹಚ್ಕೊಂಡು ಬೆಣ್ಣೆ ಕಾಯಿಸಿ ಮಧ್ಯರಾತ್ರಿ ಹೊಡ್ಯೋ ಸಿಡಿಲು ಗುಡುಗುಗಳ ಮಧ್ಯೆ, ಹಂಚಿನ ಮನೆಯ ಮೇಲಿಂದ ಮಧ್ಯೆ ತೊಟ್ಟಿಕ್ಕೋ ನೀರಿನ ನಡುವೆಯೇ ತುಪ್ಪ ಮಾಡಿ ಬಿಸಿ ಬಿಸಿ ಅನ್ನಕ್ಕೆ ಉಪ್ಪು ತುಪ್ಪ ಜೀರಿಗೆ  ನಿಂಬೆಹಣ್ಣು ಹಾಕಿ ಕಲಸಿ ತಿನ್ಸಿದ್ದು ಇವತ್ತಿಗೂ ನೆನಪಿದೆ; ಅಲ್ಲೀ ತನಕಾ ನಾನು ಮರದ ಮಣೆಯ ಮೇಲೆ ಚಕ್ಲೀ ಪಟ್ಟೆ [ಬೆಂಗ್ಳೂರಿನ ಭಾಷೇಲೀ ಚಕ್ಳಂ ಬಕ್ಳ ಅಂತಾ ಏನೋ ಹೇಳ್ತಾರೆ- ನೆಲದ ಮೇಲೆ ಎರಡೂ ಕಾಲನ್ನ ಒಂದರೊಳಗೊಂದನ್ನು ಸಿಕ್ಕಿಸಿ ಕುಳಿತುಕೊಳ್ಳೋದು] ಹಾಕ್ಕೊಂಡು ಕೂತಿಲ್ಲಾ?! ಈಗ ನೆನೆಸಿಕೊಂಡರೆ ಎಷ್ಟು ಖುಶೀ ಆಗತ್ತೆ ಗೊತ್ತಾ? ಅದ್ರ್ ಮಧ್ಯೇನೆ ಪಾಪಾ ಅಮ್ಮಂಗೆ ಇಷ್ಟೆಲ್ಲಾ ಕಷ್ಟಾ ಕೊಟ್ನಾ ಅಂತಾನೂ ಅನ್ಸತ್ತೆ! ಈಗ ಎಲ್ಲೋ ಮೂಲೇಲೀ ಆಂಧ್ರಾ ಸ್ಟೈಲ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋದಾಗಾ ದಾಲ್ ಮೇಲೆ ಎರಡು ಚಮಚಾ ತುಪ್ಪಾನಾ ಭಿಕ್ಷೆಗೆ ಹಾಕೋ ಥರಾ ಹುಯ್ತಾರಲ್ಲಾ ಆಗೆಲ್ಲಾ ನಂಗೆ ಘಟನೆ ನೆನ್ಪಿಗೆ ಬಂದು ನಾನು ಕಾಲಕ್ಕೆ ಓಡಿ ಹೋಗ್ತೀನಿ! ಆಗ ಕೇವಲ ಕಣ್ಣಲ್ಲಿ ಸಣ್ಣ ಪೊರೆಯ ನೀರು ಬಿಟ್ಟು ಮತ್ತೇನೂ ಉತ್ತರವಿರಲ್ಲ ನನ್ನ ಹತ್ತಿರ!

ಮತ್ತೊಂದನ್ನಾ ನೆನಪಿಸಿಕೊಳ್ಳಲೇ ಬೇಕು! ಆಗ ನಾನು ನಾಲ್ಕನೇ ಕ್ಲಾಸು ಇರ್ಬೋದು; ನಮ್ಮೂರಿನ ಮಳೆಗಾಲಕ್ಕೆ ಟೀ ವೀ; ಫೋನು ಫ್ಯಾನು ಲೈಟು ಹಾಳಾಗೋದೇನೂ ಹೊಸಾ ವಿಷ್ಯಾ ಅಲ್ಲಾ, ಆಗ ನಂದು ಒಂದು ಅಪ್ಪಾ ತೆಗೆಸಿಕೊಟ್ಟಿರೋ ಕ್ಯೂಟ್ ಕ್ಯಾಸಿಯೋ ವೈಟ್ ಡಯಲ್ ವಾಚು ಕೆಲ್ಸಾ ಮಾಡ್ದೆ ನಿಂತೋಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಅಪ್ಪಾ ಕರೆಂಟ್ ಇದ್ದಾಗ್ಲೇ ಇಸ್ತ್ರಿ ಮಾಡೋಕೆ ಅಂತಾ ಎಲ್ಲಾ ಬಟ್ಟೆ ರಾಶಿ ಹಾಕಿ ಇಸ್ತ್ರಿ ಪೆಟ್ಟಿಗೆ ನಾ ಪ್ಲಗ್ ಗೆ ಸಿಕ್ಸಿ ಎಲ್ಲೋ ಹೋಗಿದ್ರು. ನಾನು ನನ್ ಮಾಸ್ಟರ್ ಮೈಂಡ್ ಉಪಯೋಗಿಸಿ ವಾಚನ್ನಾ ಹೆಂಗೆಲ್ಲಾ ನಾನಾಗೇ ಸರೀ ಮಾಡ್ಕೊಂಡು ನಿಮ್ಮತ್ರ ಹೊಗಳಿಸಿಕೊಳ್ಬೋದು ಅಂತಾ ಸ್ಕೆಚ್ ಹಾಕ್ತಾ ಇದ್ದೆ. ಆಗ ತಲೆಗೆ ಬಂದಿದ್ದೇ ಇಸ್ತ್ರಿ ಪೆಟ್ಟಿಗೆಯ ಬ್ಯಾಕ್ ಗೆ ನನ್ ಹಾಳಾದ ವಾಚ್ ಬ್ಯಾಕ್ ತಾಗಿಸಿ ಹಿಡ್ಕೊಂಡ್ರೆ ಅದು ಬಿಸಿ ಆಗಿ ವಾಚ್ ದು ಬ್ಯಾಟರಿ ಏನಾದ್ರೂ ನೀರಿಗೆ ಶೀತ ಆಗಿದ್ರೆ ಸರಿ ಹೋಗ್ಬೋದು ಅನ್ನೋ ನನ್ನ ವಿಚಾರಾ, ಸರೀ ಏನ್ಮಾಡೋದು? ಹಂಗೆ ಮಾಡ್ದೆ! ಸ್ವಲ್ಪಾ ತಾಗಿಸಿ ಹಿಡ್ಕೊಂಡು ನೋಡ್ದೆ, ಸಾಕಪ್ಪಾ ಹಾಳಾದ್ರೆ ಕಷ್ಟಾ ಅಂತಾ ಚೂರು ಕೈಗೆ ತಾಗ್ಸಿ ನೋಡ್ದೆ, ಚೂರು ಬಿಸಿ ಬಿಸಿಯಾಗಿ ನಂಗೆ ಮಜಾ ಕೊಡ್ತು, ಮತ್ತೆ ಹಂಗೆ ಮಾಡೋದು, ಕೈ ಗೆ ಹಿಡ್ಯೋದು, ಮತ್ತೆ ಬಿಸಿ ಮತ್ತೆ ಕೈ, ಅದೇ ನಂಗೆ ಆಟ ಆಗೋಯ್ತು, ಒಂದೈದು ನಿಮಿಷಾ ಹಂಗೆ ಮಾಡ್ದೆ! ಅಷ್ಟೊತ್ತಿಗೆ ಅಮ್ಮಾ ನನ್ನಾ ಹುಡುಕ್ಕೊಂಡು ಬಂದ್ರು! ಅದೇ ಟೈಮ್ ಗೆ ಸರಿಯಾಗಿ ಹಾಳಾದ ಹಾಳು ದರಿದ್ರ ವಾಚು ಬೇರೆ ಸರಿಯಾಗಿ ಕೆಲ್ಸಾ ಮಾಡೋಕೆ ಶುರು ಆಯ್ತು! ಸೆಕೆಂಡ್ ಮುಳ್ಳಿನ ಜೊತೆಗೆ ನನ್ ಮುಖದಲ್ಲಿ ಸ್ಮೈಲ್ ಕೂಡಾ ಓಡೋಕೆ ಶುರು ಆಯ್ತು! ಅಮ್ಮನ ಹತ್ತಿರ ನನ್ನ ಸಾಧನೆ ಹೇಳ್ಕೊಳ್ಳೋದು ಬ್ಯಾಡ್ವಾ? ಸರೀ ಮೊದ್ಲು ಅಮ್ಮಂಗೆ ಮಜಾ ಬಿಸಿ ಬಿಸಿಯಾಗೋ ಆಟ ತೋರ್ಸೋಣಾ; ಆಮೇಲೆ ವಾಚ್ ನಾ ನಾನೇ ಸರೀ ಮಾಡ್ಕೊಂಡೆ ಅಂತಾ ಹೊಗಳಿಸಿಕೊಳ್ಳೋಣಾ ಅನ್ಕೊಂಡು ವಾಚ್ ನಾ ತೆಗ್ದು ನಿನ್ ಕೈ ಮೇಲೆ ಇಟ್ಟೆ ನೋಡು, ಹಾಳಾದ ವಾಚು ಅದ್ಕೂ ಮಜಾ ಬಂದಿರ್ಬೇಕು ಸರಿಯಾಗಿ ಬಿಸಿ ಆಗಿತ್ತು, ನಿನ್ ಕೈ ಅವತ್ತು ಹೆಂಗೆ ಸುಟ್ಟಿತ್ತು ಅಲ್ವಾ ಅಮ್ಮಾ?? ನೀನು ಆಹ್ ಅಂದೆ ಅಷ್ಟೇ ಬಿಟ್ರೆ ಮತ್ತೆ ಏನಾದ್ರೂ ಮಾತು ಆಡಿದ್ಯಾ? ನನ್ ಮುಖದಲ್ಲಿರೋ ನಗು ಗಮನಿಸಿ ನನ್ ತಲೆ ಸವರಿ ವಾಚು ಸರೀ ಹೋಯ್ತಾ ಅಂದೆ; ಅಷ್ಟೇ!! ನನ್ನ ನಗುವಲ್ಲೇ ನಿನ್ನ ನಗು; ನಾನು ಅತ್ರೆ ನೀನೂ ಅಳ್ತಿದ್ದೆ! ಸುಮ್ ಸುಮ್ನೆ ಗಾದೆ ಮಾಡಿದಾರಾ? ಊರಿಗೆ ಅರಸನಾದ್ರೂ ತಾಯಿಗೆ ಮಗಾ ಅಂತಾ?! ಆಗ ಅವತ್ತು ನಾನು ನಿಂಗೆ ಸುಟ್ಟಿದ್ದು ಕಲೆ ಎಷ್ಟು ದಿನಾ ಇತ್ತು ಅಲ್ವಾ? ಈಗ್ಲಾದ್ರೂ ಅದು ಹೋಗಿದ್ಯಾ? ನಾನು ಇಷ್ಟು ವರ್ಷಾ ಆದ್ರೂ ಕೇಳೋಕೇ ಮರ್ತು ಹೋಗಿದ್ದೆ ನೋಡು, ಈಗ ಹೇಳು ಉರಿ ಹೆಂಗಿದೆ? ಕಲೆ ಹೋಯ್ತಾ?

ಥರ ನಾನು ನಿಂಗೆ ಎಷ್ಟು ಗೋಳು ಹುಯ್ಕೊಂಡಿಲ್ಲಾ? ಎಷ್ಟು ಕಾಟಾ ಕೊಟ್ಟಿಲ್ಲಾ? ಉತ್ರ ಹೇಳೇ ಅಮ್ಮಾ!! ಈಗ ಇಷ್ಟು ದೊಡ್ಡೋನು ಆದ್ರೂ ಈಗ ನಾನು ಊರಿಗೆ ಬಂದಾಗ್ಲೂ ನನ್ನ ಬಟ್ಟೆ ತೊಳ್ಯೋದು, ಅದ್ನಾ ಒಣಗಿಸಿ ಇಸ್ತ್ರಿ ಮಾಡಿ ಮಡಚಿಟ್ಟು ಬ್ಯಾಗಿಗೆ ತುಂಬಿ ಮತ್ತೆ ನಂಗೆ ಬಟ್ಟೆ ಹಾಕ್ಕೊಳೋಕ್ಕೆ ಮನಸು ಬರಲ್ಲಾ ಹಂಗೆ ಮಾಡಿ ಇಡ್ತೀಯಲ್ಲಾ; ಚೆಂದ ಅನುಭವಕ್ಕೆ ಪ್ರೀತಿಗೆ ನಾನು ಏನಂತಾ ಹೆಸರಿಡ್ಲೀ, ನಿಂಗೆ ವಾಪಾಸ್ ಏನು ಕೊಡ್ಲೀ?!

ಮನೆಯೇ ಮೊದಲ ಪಾಠ ಶಾಲೆ ; ತಾಯಿಯೇ ಮೊದಲ ಗುರು, ಎಷ್ಟು ಸತ್ಯ!! ನೀನ್ ನಂಗೆ ಏನೇನ್ ಹೇಳ್ ಕೊಟ್ಟಿಲ್ಲ ಜೀವನಕ್ಕೆ, ಬದುಕಿಗೆ ಬೇಕಾಗಿರೋವಂಥದ್ದು, ತಿನ್ನೋ ಅಡಿಗೆಯಿಂದ ಹಿಡಿದು, ಹಾಕೋ ಬಟ್ಟೆಯ ತನಕ, ಬೆಳಿಗ್ಗೆ ಎದ್ದು ಹಲ್ಲು ಉಜ್ಜೋದ್ರಿಂದಾ, ಸ್ನಾನಾ ಮಾಡೋ ತನಕ, ಮಾತು ಆಡೋದು, ನಡ್ಯೋದು, ಬರ್ಯೋದು ಓದೋದು, ಆಟ ಆಡೋದು, ಸಮಾಜಕ್ಕೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗೋಕೆ ಬೇಕಾದ ಗುಣಗಳು! ಇನ್ನು ಏನೇನು ಅಂತಾ ಪಟ್ಟಿ ಮಾಡ್ತಾ ಹೋಗ್ಲೀ ಅಲ್ವಾ?

ನಿಂಗೆ ಫೇಸ್ಬುಕ್ಕು, ಫೇಸ್ಬುಕ್ಕನ್ನಾ ಉಪಯೋಗಿಸೋರ್ನಾ ಕಂಡ್ರೆ ಆಗಲ್ಲಾ ಅಂತಾ ಗೊತ್ತು, ನಿನ್ನ ಫೋಟೋ ಹಾಕಿರೋದಕ್ಕೂ ನಂಗೆ ಬೈತೀಯಾ ಅಂತಾನೂ ಗೊತ್ತು, ಸುಮ್ನೆ ತಲೆ ತಗ್ಸಿ ಬೈಸ್ಕೊತೀನಿ ಅಷ್ಟೇ :)

ಆದ್ರೆ ನಂಗೆ ನಿನ್ಮೇಲೆ ಪ್ರೀತಿ ಜಾಸ್ತಿ ಅಲ್ವಾ? ಅದ್ಕೆ ನಾಲ್ಕು ಅಕ್ಷರಾ, ನಿನ್ ಫೋಟೋದ್ ಜೊತೆ!

ನಿನ್ನ ಕೆಲಸದಲ್ಲಿ ಯಾವತ್ತಿನ ತರಹ ಇವತ್ತೂ ಬ್ಯೂಸಿ ಆಗ್ಬೇಡಾ!! ಎಂಜಾಯ್ ಮಾಡು, ಇವತ್ತು ನಿನ್ ದಿನಾ, ನಿನ್ನ ಥರಾ ಇರೋ ಎಲ್ಲ ಅಮ್ಮಂದಿರ ದಿನಾ! :)



ಬಾಟಮ್ ಲೈನ್ : ಅಮ್ಮಂದಿರ ದಿನದ ಶುಭಾಶಯಗಳು! ಇಡೀ ಜಗತ್ತಿನ ಎಲ್ಲ ಅಮ್ಮಂದಿರಿಗೆ! ಕೆಟ್ಟ ಮಕ್ಕಳಿರಬಹುದು, ಕೆಟ್ಟ ಅಮ್ಮಂದಿರಿರೋಕೆ ಸಾಧ್ಯಾ ಇಲ್ಲ!

ಎಲ್ಲ ಅಮ್ಮಂದಿರಿಗೂ ಇವತ್ತು ಕೆಲ್ಸಕ್ಕೆ ರಜಾ ಕೊಡಿ; ಹೋಟೆಲ್ ಗೆ ಕರ್ಕೊಂಡು ಹೋಗಿ ಅವಳಿಗಿಷ್ಟಾ ಇರೋ ಊಟ ಕೊಡ್ಸಿ, ಒಂದ್ ಸರ್ಪ್ರೈಸ್ ಗಿಫ್ಟ್ ಕೊಡಿ, ಒಂದು ಒಳ್ಳೆ ಥೀಯೇಟರ್ ಗೆ ಮೂವೀ ಗೆ ಕರ್ಕೊಂಡು ಹೋಗಿ ಅಮ್ಮಂಗೆ ಇಷ್ಟಾ ಆಗೋ ಹೀರೋ ನೋ, ಹೀರೋಯಿನ್ನೋ ಇರೋ ಥರದ್ದು, ಶಾಪಿಂಗ್ ಮಾಡ್ಸಿ, ಒಟ್ನಲ್ ನಿಮ್ಮನ್ನಾ ಇಷ್ಟು ವರ್ಷಾ ಖುಶಿಯಾಗ್ ಇಟ್ಟಿರೋ, ಇನ್ಮುಂದೂ ಖುಷಿಯಾಗಿ ಇಡೋ ನಿಮ್ಮ ಅಮ್ಮಂದಿರನ್ನ ಇವತ್ತಾದ್ರೂ ಖುಷಿಯಾಗಿಡಿ, ಮನೆ ಕೆಲ್ಸಕ್ಕೆ ರಜೆ ಕೊಡಿ, ಫ್ರೆಂಡ್ಸು ಮೂವೀ ಔಟಿಂಗು ಅಡ್ಡಾ ಯಾವಾಗ್ಲೂ ಇರತ್ತೆ, ಇವತ್ತು ಒಂದಿನಾ ಅಮ್ಮಂಗೆ ಟೈಮ್ ಕೊಟ್ಟು ಇಡೀ ದಿನಾ ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡಿ ಅವ್ಳ್ ಮುಖದಲ್ಲಿ ಬರೋ ನಗು ನೋಡೋದ್ಕಿಂತಾ ಹೆಚ್ಗೆ ನಿಮ್ಗೆ ಇನ್ನೇನ್ ಬೇಕು?! ನನ್ ಅಮ್ಮನ್ ಥರಾ ಹೊರ್ಗಡೆ ಬರೋಲ್ಲಾ ಆಗಲ್ಲಾ ಅಂದ್ರೆ ಅವ್ಳಿನ್ನಾ ಒಂದ್ ಕಡೆ ಕೂರ್ಸಿ ನೀವೇ ಅಡಿಗೆ ಮಾಡಿ ಊಟ ಬಡ್ಸಿ ನೋಡಿ, ಮನೆ ಕ್ಲೀನಿಂಗು, ಪಾತ್ರಾ ಬಟ್ಟೆ ಎಲ್ಲಾ ಕೆಲಸಾನೂ ಇವತ್ತು ಒಂದಿನಾ ಮಾಡಿ ನೋಡಿ :)



ಇನ್ನು ನನ್ನಮ್ಮಾ: ಈಗಿನ ಪ್ರಪಂಚದ ಯಾವ ಹೊಸಾ ವಸ್ತುಗಳಿಗೂ ಒಗ್ಗದ, ಬೇಸಿಕ್ ಮೊಬೈಲ್ ಹ್ಯಾಂಡ್ ಸೆಟ್ಟನ್ನೂ ಉಪಯೋಗಿಸೋಕೆ ಬಾರದ, ಫೇಸ್ಬುಕ್ ಅಕೌಂಟ್ ಇಲ್ಲದ, ಥಿಯೇಟರ್ ಸಾಯ್ಲೀ, ಟೀ ವೀ ಲೀ ಬರೋ ಧಾರಾವಾಹಿ, ಸೀರಿಯಲ್ಲೂ, ರಿಯಾಲಿಟಿ ಶೋ, ಪಿಚ್ಚರ್ ಕೂಡ ನೋಡದ, ಹಳೆ ರೇಡಿಯೋ ದಲ್ಲಿ ಬರೋ ಗೊರ್ ಗೊರ್ ಅನ್ನೋ ದೂರದ ಧಾರವಾಡದ ಸ್ಟೇಷನ್ ಯಾರದೋ ಶಾಸ್ತ್ರೀಯ ಸಂಗೀತವನ್ನು ಕೇಳ್ಕೊಂಡು ನಿನ್ನ ಲೋಕದ ರಂಗೋಲಿ, ಹಳೇ ಹಾಡು [ಶುಭ ಕಾರ್ಯದಲ್ಲಿ/ ಕಾರ್ಯಕ್ರಮದಲ್ಲಿ ಹೆಂಗಸರು ಯಾವುದೇ ವಾದ್ಯ ಹಿಮ್ಮೇಳಗಳಿಲ್ಲದೆ ಹಾಡೋ ಹಾಡು - ಉತ್ತರ ಕನ್ನಡದ ಕಡೆ ಜಾಸ್ತಿ, ನಾನು ನೋಡಿದ ಹಾಗೆ] ಹಾಡ್ಕೊಂಡು ಬರ್ಕೊಂಡು, ನಿನ್ನದೇ ಮಕ್ಕಳ ಥರಾ ಇರೋ ನಿಂಬೆ ಗಿಡ, ಸೇವಂತಿಗೆ, ಗುಲಾಬಿ ಗಿಡಕ್ಕೆ ನೀರು ಗೊಬ್ಬರ ಹಾಕ್ಕೊಂಡು, ಮನೆಯವರಿಗೆಲ್ಲಾ ಅಡಿಗೆ, ಊಟ ಮತ್ತದೇ ಮಾಮೂಲಿ ಕೆಲಸವಾ? ನಾನ್ ಅಲ್ಲಿ ಇದ್ರೆ ಇಲ್ಲಿ ಇಷ್ಟೊಂದು ಹೇಳಿದ ಹಾಗೆ / ಹೇಳಿದ್ರಲ್ಲಿ ಒಂದಾದ್ರೂ ಕೆಲ್ಸಾ ಮಾಡ್ ಕೊಡ್ತಿದ್ದೆ!! ಆದ್ರೆ ಏನ್ ಮಾಡ್ಲೀ, ನೀನ್ ಅಲ್ಲಿ ನಾನ್ ಇಲ್ಲಿ :) ಇಲ್ಲಿಂದಾನೇ ನಿಂಗೆ ಮತ್ತೊಮ್ಮೆ ನನ್ನ ಪ್ರೀತಿಯ ಅಪ್ಪುಗೆ - ಅಮ್ಮಂದಿರ ದಿನದ ಶುಭಾಶಯಗಳು ಅಮ್ಮಾ -- ಅಟ್ಲೀಸ್ಟ್ ಫೋನ್ ಮಾಡಿ ಆದ್ರೂ ವಿಶ್ ಮಾಡೋಣ ಅಂದ್ರೆ ಮನೆ ಲ್ಯಾಂಡ್ ಲೈನ್ ಹಾಳಾಗಿ ಹದಿನೈದು ದಿನಾ ಆಯ್ತು, ಅಪ್ಪನ ಮೊಬೈಲ್ ಗೆ ಮೊದ್ಲೇ ಮನೆಲ್ಲಿ ನೆಟ್ವರ್ಕ್ ಬರಲ್ಲಾ!!! ಆಹಾ ಏನ್ ಕಾಂಬಿನೇಷನ್ನು, ಸರೀ ಹೋಯ್ತು! ಟೆಲಿ ಪತಿ ಇಂದಾ ಆದ್ರೂ ಮನೆ ಲ್ಯಾಂಡ್ ಫೋನು ಸರೀ ಆಗ್ಲೀ, ಇಲ್ಲಾ ಅಂದ್ರೆ ನೀನೇ ನೆಟ್ವರ್ಕ್ ಇರೋ ಏರಿಯಾ ಗೆ ಬಾ :) ನಿನ್ನ ಧ್ವನಿ ಕೇಳಿ ನಿಂಗೆ ವಿಶ್ ಮಾಡೋ ಭರದಲ್ಲಿ ನಿನ್ನ ಮಗ!

1 comment:

Badarinath Palavalli said...

ಯಾಕೋ ಮನಸು ನೀರಾಗಿ ಹೋಯಿತು.
ಅಮ್ಮನ ಬಗ್ಗೆ ಎಂತಹ ಒಳ್ಳೆಯ ಬರಹವಿದು.
Really loved it. :-)