Monday, July 14, 2014

ದೂರದಲ್ಲೆಲ್ಲೋ ಹಕ್ಕಿಯು ಮತ್ತೊಂದು ಹಕ್ಕಿಗೆ ನಿನ್ನ ಹೆಸರ ಪ್ರೀತಿಯಿಂದ ಕರೆದಂತೆ ನನಗೆ ಕೇಳಿಸಿತ್ತು!

Jepee Bhat

ನಿಶ್ಚಲವಾಗಿ ನಿಂತಿರುವ ಬೆಟ್ಟ ಗುಡ್ಡದ ತುತ್ತ ತುದಿಯ ಮೊನಚುಗಳ ತಪ್ಪಲಲ್ಲಿ,
ದೇವಸ್ಥಾನದ ಎಲ್ಲ ಮೆಟ್ಟಿಲುಗಳಲ್ಲಿ, ದೇವರ ಹಣೆಯ ಕುಂಕುಮದ ಮಧ್ಯದಲ್ಲಿ,
ಪುಸ್ತಕಗಳ ಪ್ರತೀ ಹಾಳೆಯ ಇಂಚಿಂಚಿನ ಅಕ್ಷರಗಳಲ್ಲಿ, ಕೆಂಪು ಕಪ್ಪನೆಯ ಬಣ್ಣಗಳಲಿ,
ಹಾದಿ ಬದಿಯ ಭಿಕ್ಷುಕರ ಮಕ್ಕಳ ಸಭ್ಯತೆಯ ಹಸಿವಿನ ಮುಖದಲ್ಲಿ, ಮತ್ತು ಎಲ್ಲೆಡೆಯಲ್ಲಿ,
ನಿನ್ನನ್ನೇ ಕಂಡು, ನಿನ್ನ ಧ್ವನಿಯನ್ನೇ ಕೇಳಿ, ನಿನ್ನರಸುತ ನಡೆದೆ.
ನೊಂದೆ, ಬೆಂದೆ, ಅದೇ ಗುಂಗಿನಲ್ಲಿ, ಕಣ್ಣೀರಿನ ಬಿಸಿಯುಸಿರಲ್ಲಿ,
ಮತ್ತು ಕೃತಕ ವಿಕಾರದ ಮುಖವಾಡದ ನಗುವಿನ ಸೋಗಿನಲ್ಲಿ, ವಿಫಲತೆಯಲ್ಲಿ.

ನಿನ್ನರಸುವಿಕೆಯೇ ನನ್ನ ಜೀವನದ ಅಮೂಲ್ಯ ಅಂಗವಾದ ಸಂಗತಿಯಾದ ಕಾಲವೊಂದಿತ್ತು.
ಆಗ ವರುಷಗಳು ಬರೀ ನಿಮಿಷಗಳಾಗಿದ್ದವು, ಆಗ ಅದೇ ವಿರುದ್ಧ ದಿಕ್ಕು ಅಷ್ಟೇ.
ಹಕ್ಕಿಗಳ ಚಿಲಿಪಿಲಿ ರಾಗದಲ್ಲಿ ಯಾವಾಗಲೂ ನೀನಿರುತ್ತಿದ್ದೆ, ಈಗ ಹಾಗಲ್ಲವೇ ಅಲ್ಲ.
ದೇವಸ್ಥಾನದ ಘಂಟೆಯ ಮಾರ್ದನಿಯಲ್ಲಿ ನಿನ್ನದೇ ರಾಗ ನುಲಿಯುತ್ತಿದ್ದರೆ,
ಇಲ್ಲಿ ನನ್ನಲ್ಲಿ ನನ್ನದೇ ಸ್ವಂತ ಕನಸುಗಳು ಬಸಿರಾಗಿ ವಿಕಾರವಾಗಿ ಹಡೆಯಲು ನನ್ನನ್ನೇ ಕೊಲ್ಲುತ್ತಿವೆ.
ನಿನಗೆ ಇದರ ಪರಿವೇ ಇಲ್ಲ ; ನಿನ್ನ ತಪ್ಪಂತೂ ಅಲ್ಲವೇ ಅಲ್ಲ ಬಿಡು.

ಕಾಲವೇನೋ ಬದಲಾಗಿದೆ, ನೀನೂ ಬದಲಾಗಿದ್ದೀಯಾ, ಮತ್ತು ನಿನ್ನವೂ ಕೂಡ.
ದಿನಬೆಳಿಗ್ಗೆ ನಿನ್ನ ಸಿಹಿದನಿಯ ಕೇಳಿಸಿಕೊಳ್ಳಲಾರದ ಪಾಪಿಯು ನಾನಾಗಿದ್ದೇನೆ ಈಗ,
ಮತ್ತದೇ ಬೆಳಗು ಎದುರು ಮನೆಯ ಹೆಂಗಸಿನ ರಂಗೋಲಿಯ ಜೊತೆಗೆ,
ನನ್ನದೇ ಮನೆಯಲ್ಲಿ ನೀನಿರಬೇಕಾದ ಹಾಸಿಗೆಯಲ್ಲಿ ನನ್ನ ಪಕ್ಕದಲ್ಲಿ ಇನ್ಯಾರೋ ; ಅಷ್ಟೇ ವ್ಯತ್ಯಾಸ.
ನಿನ್ನ ಉಸಿರಿಗೆ, ಮುತ್ತಿಗೆ, ನುಣುಪಿನ ಮೈಯ ಬಿಳುಪಿಗೆ, ಮತ್ತು ಅಪ್ಪುಗೆಗೆ ಇಲ್ಲೀಗ ತೀರದ ದಾಹ ಮತ್ತು ಬರಗಾಲ.
ಈ ಮತ್ತೊಂದು ಬರಗೆಟ್ಟ ಬೆಳಗಿಗೆ ನನ್ನ ಉಸಿರು ಕೊನೆಯಾದರೆ ಸಾಕಿತ್ತು, ಆದರೆ ಹಾಗಾಗಲಿಲ್ಲ.
ದೂರದಲ್ಲೆಲ್ಲೋ ಹಕ್ಕಿಯು ಮತ್ತೊಂದು ಹಕ್ಕಿಗೆ ನಿನ್ನ ಹೆಸರ ಪ್ರೀತಿಯಿಂದ ಕರೆದಂತೆ ನನಗೆ ಕೇಳಿಸಿತ್ತು.


3 comments:

Badarinath Palavalli said...

ಮನಸು ಮುದುಡಿ ಹೋಯಿತು ನನಗೂ ಓದುತ್ತಾಹೋದ ಹಾಗೆ...
ಯಾವುದೋ ಹಳೆ ನೆನಪುಗಳು ಮುಳ್ಳಿನಂತೆ ಇರಿಯಲಾರಂಭಿಸಿದವು!

Anonymous said...

ವಿರಹವಿದೆ...ದುಃಖವಿದೆ..ನೋವಿದೆ..
ಆದರೂ ನಿಜವನ್ನು ಒಪ್ಪಿಕೊಂಡು..ಭರವಸೆಯ ಬೆಳಕು ಕಾಣುತ್ತಿದೆ..
ಚೆನ್ನಾಗಿದೆ..ಬರೆಯುತ್ತಿರಿ

Badarinath Palavalli said...

'ದೂರದಲ್ಲೆಲ್ಲೋ ಹಕ್ಕಿಯು ಮತ್ತೊಂದು ಹಕ್ಕಿಗೆ ನಿನ್ನ ಹೆಸರ ಪ್ರೀತಿಯಿಂದ ಕರೆದಂತೆ ನನಗೆ ಕೇಳಿಸಿತ್ತು'
ಇದಕಿಂತಲೂ ವ್ಯಥೆಯು ಬೇರುಂಟೆ ನಮಗೆ.

ಕವಿ ಬಿ.ಆರ್. ಎಲ್ ಬರೆಯುತ್ತಾರೆ:
'ಬೇರೊಬ್ಬರ ಕೊಬ್ಬಿಗೆ
ಶಾಖವಾಗಿಹಳು ನನ್ನ ನಲ್ಲೆ ಇಂದು'
:-(