Friday, December 31, 2010

"ಹೀಗೆ ಸುಮ್ಮನೆ - ಹವ್ಯಕರ ಮನೆಯಲ್ಲಿ ಒಂದು ಸುತ್ತು ..."

Jepee Bhat's..


ಬೆಳಿಗ್ಗೆ ಬೆಳಿಗ್ಗೆ ಅಮ್ಮನ ಹಾಡಿನೊಂದಿಗೆ ಆರಂಭವಾಗುವ ದಿನ ,
ಅವಳಿoದಾನೇ ಮನೆಯ ಬಾಗಿಲನ್ನು ಸಾರಿಸುವ ಮೂಲಕ ಪ್ರಾರಂಭ ..
ಅವಳ ಕೆಲಸ ಅತ್ತ ಆರಂಭವಾಗುತ್ತಲೇ ,
ಇತ್ತ ಅಪ್ಪನ ದಿನಚರಿಯೂ ಪ್ರಾರಂಭ ...
ಅಮ್ಮನ ಮನೆಯ ಕೆಲಸ ಚುರುಕು ಪಡೆಯುತ್ತಿದ್ದಂತೆ ,
ಅಪ್ಪನ ಕೂಟ್ಟಿಗೆ ಕೆಲಸವೂ ಅರ್ಧ ಸಮಾಪ್ತಿಯ ಹಂತ ...
ಎಲ್ಲರೂ ಎದ್ದು ಬರುವ ಹೊತ್ತಿಗೆ ,
ಬಿದ್ದಿರಬೇಕು ದೋಸೆ ರಾಶಿ-ರಾಶಿ..
ಚಟ್ನಿ - ಬೆಲ್ಲ - ಉಪ್ಪಿನಕಾಯಿ - ತುಪ್ಪದ ಜೊತೆ ..
ಜೊತೆ ಜೊತೆಗೆ ಬಿಸಿ ಬಿಸಿ ಹಬೆಯಾಡುವ ಆಗ ತಾನೇ ಕರೆದು ತಂದ ಹಾಲಿನ ಚಾ ..!
ತಿಂಡಿ ತಿಂದು ಆದ ನಂತರ ,
ಎಲ್ಲರೂ ಅಂಗಳದ ಬಿಸಿಲಲ್ಲಿ ಹರಟೆ ಕೂಡುವ ಅವರು ..
ರಾಜಕೀಯ., ಅಡಿಕೆ ., ಗದ್ದೆ ., ಆಳುಗಳು .,ಮದುವೆಗಳ ಬಗ್ಗೇ ಚರ್ಚೆ ಮಾಡುವರು ..
ಅವರವರ ಕೆಲಸಕ್ಕೆ ಹೋಗುವ ತರಾತುರಿಯಲ್ಲಿರುವ ಅವರು ....
ತೋಟಕ್ಕೆ ಹೋಗುವ ಅಪ್ಪ, ದೊಡ್ಡಪ್ಪ -- ಆಳು , ಅವರ ಮರಿ ಮಕ್ಕಳ ಸೈನ್ಯ ..
ಅಡಿಕೆ ಮಾರಿ ಬರಲು ಗಾಡಿಗೆ ಕಾಯುತ್ತಿರುವ ಇನ್ನೊಬ್ಬ ದೊಡ್ದಪ್ಪನೋ ..
ಯಾವುದೋ ವಿಚಾರದಲ್ಲಿ ಇನ್ನೆಲ್ಲೋ ನೋಡುತ್ತಿರುವ ಚಿಕ್ಕಪ್ಪನೋ ..
ಅವರವರ ವಿಚಿತ್ರ ಲೋಕದಲ್ಲಿ ಅವರು !!!
ಹೀಗೆ ದೊಡ್ಡವರೆಲ್ಲಾ ಮನೆಯಿಂದ ಹೋದ ಮೇಲೆ ಚಿಕ್ಕವರ ಆಟ ಶುರು ..
ಬಲು ಜೋರು ..........
ಯಾವುದೋ ಸಂಗೀತವನ್ನು ರೇಡಿಯೋದೊಳಗೆ ಕುಳಿತು ಕೇಳುವಂತೆ ಕೇಳಿಸಿಕೊಂಡು ಮಧ್ಯಾನ್ನ ಊಟಕ್ಕೆ ತಯಾರಿ ನಡೆಸುವ ಅಮ್ಮ ,
ಯಾವುದೋ ಇನ್ಯಾರದ್ದೋ ಮನೆಯ ಹಿತ್ತಲ ಗಿಡಕ್ಕೆ , ಅದರ ಆಗು - ಹೋಗು ಗಳ ಬಗ್ಗೇ ಮಾತನಾಡುವ ಚಿಕ್ಕಮ್ಮ!
ಅವಳ ಮಗಳ ಮದುವೆಯ , ಸೀರೆಯ , ಮೊಮ್ಮಕ್ಕಳ ಬಗ್ಗೆ ಫೋನಿನಲ್ಲೇ ಕಥೆ ಬರೆಯುವ ದೊಡ್ಡಮ್ಮ ...
ಯೋಚನೆ ಮಾಡುತ್ತಾ ಕೂತ ಚಿಕ್ಕಪ್ಪ ಯಾವಾಗಲೋ ಎದ್ದು ಕಟ್ಟೆಯಲ್ಲಿ ಕೂತು ಮತ್ತೆ ಆಳುಗಳಿಗೆ ಕೆಲಸ ಹೇಳುತ್ತಾ..
ಯಾವುದೋ ದೇವರ ಅಥವಾ ಇನ್ಯಾವುದೋ ಬಚ್ಚಲು ತೊಳೆಯುವ ದೃಶ್ಯವನ್ನು ಕಾಣದಿದ್ದರೂ ಕಂಡಂತೆ , ಕೇಳದಿದ್ದರೂ ಕೇಳಿದಂತೆ ನೋಡುವ ಅಜ್ಜಿ ,..
ಅವನದೇ ಜಾಗದಲ್ಲಿ ಕಾಗದ ಪತ್ರವನ್ನೂ , ಯಾವುದೋ ಬೇಕಾಗಿರುವ ಪೇಪರ್ರೋ ಅವನ ಕಪಾಟಿನಲ್ಲೇ ಇಟ್ಟು, ಕಳೆದು , ಮತ್ತೆ ಹುಡುಕುತ್ತಿರುವ ಅಜ್ಜ ..
ಮೊನ್ನೆಯಷ್ಟೇ ಮದುವೆಯಾದ ಮೆತ್ತಿಯಿಂದ ಇನ್ನೂ ಕೆಳಗಿಳಿದು ಬಾರದ 'ಅಣ್ಣ - ಅತ್ತಿಗೆಯರ' ಗುಸು ಗುಸು ಕೋಣೆಯಲ್ಲಿ..
ಕೆಳಗೆ ಅವರ ಆಗಮನಕ್ಕೇ  ಕಾದು ನಿಂತಿರುವ, ಬ್ರೆಶ್ಹು , ಗರಿ ಗರಿ ಟವೆಲ್ಲು ದೊಡ್ಡಮ್ಮನ ಕೈಯಲ್ಲಿ ...
ಎಲ್ಲರೂ ಊಟಕ್ಕೆ ಬರುವ ಹೊತ್ತಿಗೆ ................,,......
''ಕೆಳಗೆ ಇಳಿದು ಬಂದಿರುತ್ತಾರೆ ಅಣ್ಣ - ಅತ್ತಿಗೆ ............"..?!
ಆ ಕಂಪ್ಯೂಟರ್ ಅನ್ನು ಆಫ್ ಮಾಡಿ ಕೆಳಗೆ ಬರುತ್ತೀಯೋ ಇಲ್ಲವೋ ಎಂದು ಅಮ್ಮನಿಂದ ಬೈಸಿಕೊಳ್ಳುವ ಅಣ್ಣ ..,
ಅಪ್ಪನಿಂದನೂ ಎಂದಿನಂತೆ ಹಾಕಿಸಿಕೊಳ್ಳಬೇಕು ಮಂತ್ರಾಕ್ಷತೆ..
'' ತಮ್ಮನಂತೆಯೇ ಓದಿ-ಓದಿ ಉದ್ಧಾರ ಆಗೋಕೆ ನಿನಗೇನು ಧಾಡಿ??
ಎಲ್ಲರೂ ಸೇರಿ,ಕೂಡಿ, ಊಟ ಮಾಡಿ ಮುಗಿಸುವ ಹೊತ್ತಿಗೆ ..
ಸುಸ್ತು ಆದರು ಸ್ವಲ್ಪ ಸ್ವಲ್ಪವೇ ಬಡಿಸಿ ಬಡಿಸಿ ನನ್ನ ಹೊಸ ಅತ್ತಿಗೆ........ ..!
ಮಧ್ಯಾನ್ನ [ ಇಳಿ ಸಂಜೆ ಹೊತ್ತಿಗೆ] ಮತ್ತದೇ ಹಾಡು ...
ಎಲ್ಲರ ಮಾತು-ಕಥೆ ..ಸಂತೋಷ ..ಅವರವರ ಲೋಕದ ಪಾಡು ..
ಇನ್ನೂ ಕತ್ತಲಾದರೂ ಮಣ್ಣಿನಲ್ಲಿ ಆಟ ಆಡಿ ಮುಗಿಯದ ಅಕ್ಕನ ಮಗು ..
ಪಾಪ , ಮನೆಯೊಳಕ್ಕೆ ಬರುತ್ತಲೇ ತಿಂದಿತು ಅಕ್ಕನಿಂದ ಏಟು ..
ಆಮೇಲೆ ಸಮಾಧಾನ ಮಾಡಲು ಅಕ್ಕನಿಂದಲೇ ಪಡೆಯುವ , ಸಾಕು ಸಾಕು ಎಂದರೂ ಬಿಡದೆ ನೀಡುವ ಸಿಹಿ ಸಿಹಿ ಮುತ್ತು ..
ಅಷ್ಟರೊಳಗೆ ಸಂಜೆಯೂ ಮುಗಿದಿತ್ತು .........
ಮರುದಿನ ಮತ್ತದೇ ಬೆಳಗಿಗೆಂದು ಅದೇ ಮೈ ಕೊರೆವ ಚಳಿಯು ಬಾಯಿ ಬಿಟ್ಟು ಕಾಯುತ್ತಿತ್ತು ..
ಇತ್ತ ಎಲ್ಲರಿಗೂ ತಣ್ಣನೆ ನಿದ್ದೆ ಮೈಯನ್ನು ಆವರಿಸಿತ್ತು ..
ಇನ್ನೆಲ್ಲೋ ಮೂಲೆಯಲ್ಲಿ ಒಂದು ಮಂದವಾದ ದೀಪದ ಕೆಳಗೆ,
ನನ್ನ ಕೈ ಬೆರಳುಗಳು ಪೇಪರಿನ ಚೂರಿನಲ್ಲಿ ಇನ್ನೇನೋ ಬರೆಯುತ್ತಿತ್ತು........!!!