Sunday, March 13, 2011

ಕೈ ಬರೆದಿದ್ದು, ಮನಸು ಅತ್ತಿದ್ದು- 1, Boyz Hostel:)

ಹಿಂಗೇ ಸುಮ್ನೆ... ಕಂಡಿದ್ದು, ಕೇಳಿದ್ದು, ಮತ್ತು ಹೇಳಿದ್ದು...

 

''
ಲೋ, ಮಚ್ಚಾ ಒಂದರ್ಧಾ ಸೋಪಿದ್ರೆ ಕೊಡೋ..........?!..''
''
ಉಹುಂ, ಇಲ್ಲಾ ಮಗಾ...''
''
ಹೋಗ್ಲೀ, ಶಾಂಪೂನಾದ್ರೂ ಇಟ್ಟೀದೀಯಾ?....ಶೀಗೆಕಾಯಿ....??...''
''
ಉಹುಂ..ಇಲ್ಲಾ, ಸುಮ್ನೆ ನಿದ್ದೆ ಹಾಳು ಮಾಡಿದ್ರೆ ಒದೆ ತಿಂತೀಯಾ........!!''
''
ಲೋ, ಶಾಂಪೂ ಚಿಕ್ದೂ ಇಲ್ವೇನೋ? ಮೊನ್ನೆ ಕೀ ಬೋರ್ಡ್ ಕೆಳಗಡೆ ನೋಡ್ದಂಗೆ ಇತ್ತು.........''
''
ಏನೂ ಇಲ್ಲಾ ಅಂದ್ರೆ ಗೊತ್ತಾಗಲ್ವಾ, ಕಿವಿ ಕೇಳಲ್ವಾ, ಅಥ್ವಾ ಕನ್ನಡ ಬರೋಲ್ವಾ?''
''
ಲೋ ಪ್ಲೀಸ್ ಕೊಡೋ, ಆಮೇಲ್ ತಂದು ಕೊಡ್ತೀನೋ, ನಂಗೆ ಬೇಗ ಕ್ಲಾಸ್ ಇದೆ, ಹೋಗ್ಬೇಕು ಮಚ್ಚಾ....''
''
ನೀನ್ ಹೋಗೋದಾದ್ರೆ ಹೋಗು, ನನ್ ನಿದ್ದೆ ಈಗ ಹಾಳು ಮಾಡಿದ್ರೆ ನೀನ್ ಹೋಗೋದ್ ಕಾಲೇಜ್ ಗೆ ಅಲ್ಲಾ, ಆಸ್ಪತ್ರೆಗೆ ನೋಡ್ತಾ ಇರು............''
                                 -----------
ಥರದ ಜಗಳ/ಸಂಭಾಷಣೆಗಳಿಂದ ಆರಂಭವಾಗುವ ದಿನ ಶುರುವಾಗುತ್ತದೆ ಎಲ್ಲರ ನಿದ್ದೆಯನ್ನೂ ಹಾಳು ಮಾಡುವ ಮೂಲಕ... ನಾನ್ ಹೇಳ್ತಾ ಇರೋದು ಎಲ್ಲೀದು ಅಂತ ಗೊತ್ತಾಯ್ತಾ? ಹಾಸ್ಟೆಲ್, ಬಾಯ್ಸ್ ಹಾಸ್ಟೆಲ್ ಬಗ್ಗೆನೇ! ಇದೆ ಒಂಥರಾ ವಿಚಿತ್ರ ಲೋಕ, ನರಕ, ಹಿಂಸೆ, ಆನಂದ, ಮತ್ತು ಭೂಮಿ ಮೇಲಿನ ಸ್ವರ್ಗ..!!
                                   -----------

ಹ್ಮ್ಮ್,
''
ಹಾಸ್ಟೆಲ್ ಅಂದ್ರೆ ಹೆದ್ರಿಕೆ, ನಾನ್ ಅಲ್ಲಿಗೆ ಹೋಗಲ್ಲಮ್ಮಾ....''
''
ಏನೂ ಆಗಲ್ಲ, ಅಲ್ಲಿರೋರೆಲ್ಲಾ ನಿನ್ನ ಥರಾನೇ, ಆಮೇಲಾಮೇಲೆ ಫ್ರೆಂಡ್ಸ್ ಆಗ್ತಾರೆ ಕಣೋ...''
''
ಆದ್ರೂ.........''
''
ಆದ್ರೂ ಇಲ್ಲ, ಗೀದ್ರೂ ಇಲ್ಲಾ, ನಾಳೇನೇ ಹೊರಡ್ಬೇಕು, ಈಗ ಲೇಟಾಯ್ತು.. ಮಲ್ಕೋ...''
''
ಅಮ್ಮಾ, ಪ್ಲೀಸ್ ಬೇಡಮ್ಮಾ, ನಾನ್ ಅಲ್ಲಿಗೆ ಹೋಗಲ್ಲಮ್ಮ... ಪ್ಲೀಸ್ ಅಮ್ಮಾ....., ಅಮ್ಮಾ................''
''
ಲಗೇಜ್ ಎಲ್ಲಾ ಪ್ಯಾಕ್ ಆಗಿದೆ, ಸ್ವಲ್ಪಾ ತಿಂಡಿ ಕೂಡ ಹಾಕಿಟ್ಟಿದೀನಿ, ಪಪ್ಪನ್ ಜೊತೆ ಹೊರ್ಡು..., ನಂಗೆ ಬರಕಾಗಲ್ಲ, ಆಫೀಸಿದೆ....''
ಅತ್ತ ಅಮ್ಮನ ಮಾತಿನ ಸುರಿಮಳೆ ಮುಂದುವರಿಯುತ್ತಲೇ ಇತ್ತು...
ಇತ್ತ ಕಣ್ಣೀರು ನೆಲಕ್ಕೆ ಸೇರಿ ಇನ್ನೇನು ಹೊಳೆಯಾಗಿ ಹರಿಯಲು ಅಣಿಯಾಗುತ್ತಿತ್ತು...
ಅಂತೂ ಇಂತೂ ಮಗರಾಯನನ್ನು ಒತ್ತಾಯ ಮಾಡಿ ಹಾಸ್ಟೆಲ್ ನಲ್ಲಿ ಇರೋಕೆ / ಇಡೋಕೆ ಒಪ್ಸಿದ್ದಾಯ್ತು..
ಅವನು ಏನಾಗ್ತಾನೋ ಏನೋ, ಇನ್ನಾದ್ರೂ ಉದ್ಧಾರ ಆದ್ರೆ ಸಾಕಿತ್ತಪ್ಪಾ ದೇವ್ರೆ!.. ದೇವ್ರೇ ನೀನೇ ಅವ್ನ ಕಾಪಾಡ್ಬೇಕು... ಕಡಿಮೆ ಅಂಕಗಳನ್ನು ತೆಗೆದುಕೊಂಡ ಮಗನ ಮುಖವನ್ನೇ ನೆನೆಯುತ್ತ ಅಮ್ಮ ಗೋಡೆಯ ಮೇಲಿನ ದೇವರ ಫೋಟೋವನ್ನೇ ದಿಟ್ಟಿಸುತ್ತ, ವಂದಿಸುತ್ತಾ ಹೇಳುತ್ತಿದ್ದರೆ...
''
ಹೂಂ, ವಟಗುಟ್ಟಿದ್ದು  ಸಾಕು., ಅಲ್ಲಿರೋ ಸ್ವಿಚ್ ನಾ ಆಫ್ ಮಾಡಿ ಬಿದ್ಕೋ....''
''
ಬೆಳಿಗ್ಗೆ ಬೇಗ ಎದ್ದು ತಿಂಡಿ ಮಾಡು, ನಿಂಗೂ ಆಫೀಸ್ ಇದೆ ಅಲ್ವಾ? ಅವ್ನ್ ಹೋಗಿ ಬಿಟ್ಟು ಬರೋದು ಬೇಡ್ವಾ..?? ಅಪ್ಪನ ಆಜ್ಞೆ ಅಮ್ಮನಿಗೆ....
ಮನೆಯವರಿಗೆಲ್ಲಾ ಟಾಟಾ ಮಾಡಿ, ಏರ್ ಬ್ಯಾಗ್ ಹೆಗ್ಲಿಗ್ ಹಾಕ್ಕೊಂಡು ರೆಡಿ ಆಗು, ಸೂಟ್ ಕೇಸ್ ಪಪ್ಪಾ ಹಿಡ್ಕೋತಾರೆ.. ನಾನು 2 ಜೊತೆ ಚಪ್ಲಿ, ಒಂದು ಲೋಟ, ತಟ್ಟೆ, ಬಕೆಟ್, ಮಗ್, ಸೋಪು, ಬ್ರಶ್ಹು, ಟವೆಲ್, ಬಟ್ಟೆ ಇಷ್ಟು ಹಾಕಿಟ್ಟಿದೀನಿ ಸಾಕಲ್ವ? ಮಿಕ್ಕಿದ್ದು ನೀನು ಹಾಕ್ಕೊಂಡಿದೀಯ ಅಲ್ವೇನೋ..??
''ಹೂಂ ಅಮ್ಮಾ.....''

ಅಂತೂ ಅಷ್ಟೂ ಬ್ಯಾಗ್ ಮತ್ತು ಎಲ್ಲ ದೊಡ್ಡ ಬ್ಯಾಗುಗಳನ್ನೂ ಮೀರಿದ ನೆನಪುಗಳನ್ನು ಹೊತ್ತು ಒಂದು ಕಡೆ ಬಂದು ಸೇರಿದ್ದಾಯ್ತು..
''ಹ್ಮ್, ಉಸ್ಸಪ್ಪಾ... ಅಂತೂ ಇಂತೂ ಬಂದು ತಲುಪ್ದ್ವಿ.. ಏನಾದ್ರೂ ತಿಂತೀಯೇನೋ..??
''ಬೇಡಪ್ಪಾ...."
''ಸರೀ, ಹಾಗಾದ್ರೆ ಹಾಸ್ಟೆಲ್ ಗೆ ಹೋಗೋಣ್ವಾ?
''ಹೂಂ............''
                  -----------------------

''ಯಾವ್ ಜಾತಿ..?''
''ಬ್ರಾಹ್ಮಣ''
''ನೀವ್ ಏನ್ ಮಾಡ್ತಾ ಇದೀರಿ?''
''ಊರಲ್ಲಿ ಸಣ್ಣ ನಂದೊಂದು ಆಫೀಸ್ ಇದೆ ಸರ್, ಚಿಕ್ಕ ಪುಟ್ಟ ವ್ಯವಹಾರ...''
''ಮಗ................?''
''ಈಗ ಎಸ್.ಎಸ್.ಎಲ್.ಸೀ ಮುಗ್ದಿದೆ, ಪೀ.ಯೂ.ಸೀ ಮಾಡ್ತಾನಂತೆ...''
''ಯಾಕ್ರೀ ಎಲ್ಲಾದಕ್ಕೂ ನೀವೇ ಅಂತೀರಾ, ಮಗಾ ಏನ್ ಮೂಗಾನ..?''
'', ಅಲ್ಲಾ .....ಸಾ......ರ್....., ಏಯ್ ಮಾತಾಡೋ, ತಲೆ ಮೇಲೆ ಮೆಲ್ಲಗೆ ಮಗನಿಗೆ ಮೊಟಕುತ್ತಾ ಅಪ್ಪ ಹೇಳಿದ'...''
''ಅಪ್ಪಾ, ಸಾರ್. ಅದು..ಅದು...ಏನನ್ನೋ ಹೇಳಲು ಹೊರಟ ಅವನು ಮತ್ತೇನನ್ನೋ ಹೇಳಿದ.. ಪಾಪ ಅವನ ಮನಸ್ಸು ಮನೆಯ ಬಗ್ಗೇ, ಅಮ್ಮನ ಬಗ್ಗೇ, ಮತ್ತು ಬಿಟ್ಟು ಬಂದ ಹಳೆಯ ನೆನಪುಗಳು, ತನ್ನನ್ನು ಇಲ್ಲಿಯತನಕ ಕರೆದುಕೊಂಡು ಬಂದ ಜೀವನದ ಹಾಗೂ ಬಸ್ಸಿನ ದಾರಿಯ ಬಗ್ಗೇ ಚಿಂತಿಸುತ್ತಿದ್ದವು..! ಅಪ್ಪನು ಮೊಟಕಿದ ಮೇಲೆಯೇ ಅವನು ಲೋಕಕ್ಕೆ ಬಂದಿದ್ದು, ಅಪ್ಪ ಮೊಟಕಿ ಆದ ಮೇಲೆಯೇ ಅವನ ಕಣ್ಣಲ್ಲಿದ್ದ ಎರಡು-ಮೂರು ಕಣ್ಣ ನೀರಿನ ಹನಿಗಳು ಅವನಿಗೇ ಗೊತ್ತಿಲ್ಲದಂತೆ ಅವನ ಕೈ ಮೇಲೆ ಬಿದ್ದಿದ್ದು...
''ಅವನ ಕಣ್ಣಂಚಿನ ನೀರನ್ನು ಯಾರೂ ನೋಡಲೇ ಇಲ್ಲ, ನೋಡಿಯೂ ಇಲ್ಲ...
ಮೇಲಿನ ಮನೆಯ ಮೆತ್ತಿಯ ಮೇಲೆ ಅತ್ತಾಗಲೂ ಸಮಾಧಾನ ಮಾಡಲೂ ಯಾರೂ ಬಂದಿಲ್ಲ,.
ಆಗಲೇ ಇಲ್ಲದಿದ್ದುದು ಅವನಿಗೆ ಈಗ ಅದು ಯಾವುವೂ ಬೇಕಾಗಿಲ್ಲ..
ಒಂದರ್ಥದಲ್ಲಿ ಅವರ್ಯಾರೂ ಈಗ ಅವನಿಗೆ ಬೇಡವೂ ಬೇಡ...
ಅವರಿಗೂ ಇವನು ಬೇಕೋ ಬೇಡವೋ , ದೇವರೇ ಬಲ್ಲ!''
''ಹೂಂ, ರಿಸೀಟ್ ನಾ ನಾಳೆ ನಿಮ್ ಹುಡ್ಗನ್ ಕೈಲೇ ಕೊಡ್ತೀನಿ, ಚೇಂಜ್ ಕೂಡ ಅವ್ನಿಗೇ ಕೊಡ್ತೀನಿ.. ನೀವಿನ್ನು ಹೊರಡ್ಬಹ್ದು..'' ವಾರ್ಡನ್ ಗಂಟಲಿನಿಂದ ಆಜ್ಞೆ ಬೆರೆತ ಧ್ವನಿ ಹೊರಗೆ ಬಿತ್ತು..
''ಧನ್ಯವಾದಗಳು, ಬರ್ತೀನಿ ಸರ್..''
                           *****
''ನೋಡು ಮಗಾ, ಇನ್ಮೇಲಿಂದಾ ನಿನ್ನದು ಇದೇ ಮನೆ.. ಚೆನ್ನಾಗಿ ಓದು.. ಒಳ್ಳೇ ಹೆಸರು ತಗೋ.. ಉದ್ಧಾರ ಆಗು, ದುಡ್ಡನ್ನು ನೀರಿನ ಥರ ಖಾಲಿ ಮಾಡ್ಬೇಡ, ಮತ್ತೆ ಫೋನ್ ಮಾಡ್ತಾ ಇರು.. ಬೇಜಾರಾದಾಗ ನಾನೇ ಬರ್ತೀನಿ.. ಮುಂದಿನ ತಿಂಗ್ಳು ಅಮ್ಮನ್ನಾ ನಿನ್ನ ನೋಡೋಕ್ ಕಳ್ಸ್ತೀನಿ ಆಯ್ತಾ? ನೂರರ ಎರಡು ಗರಿ ಗರಿಯಾದ ನೋಟನ್ನು ಆಗ ತಾನೇ ಮಾಡಿಸಿಕೊಂಡು ಬಂದ ಹೊಸ ಬಿಸಿ ಬೀಗದ ಕೈ ಕೆಳಗಿಟ್ಟು ಅಪ್ಪ ಹೊರಟೇಬಿಟ್ಟ. ಇತ್ತ ಮಗ ಎಲ್ಲವನ್ನೂ ಕೇಳಿಸಿಕೊಂಡು ಏನೂ ಅರ್ಥವಾಗದೇ ತನ್ನ ಕಣ್ಣಿನಿಂದ ಎಲ್ಲವನ್ನೂ ಒಮ್ಮೆಲೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ,
''ಲೋ ಮಗಾ, ಆ ರೂಮ್ ಗೆ ಯಾವನೋ ಹೊಸಾ ಹುಡ್ಗ ಬಂದಿದಾನಂತೆ.. ಅವ್ನಾ ಕರೀ, ಸ್ವಲ್ಪಾ ಮಜಾ ತಗೊಳೋಣಾ.,'' ಎಂಬ ಧ್ವನಿ ಅತ್ತಲಿಂದ ಆದೇಶವಾಗಿದ್ದು ಈ ಹುಡುಗನಿಗೆ ಸ್ಪಷ್ಟವಾಗಿ ಇಲ್ಲಿಂದಲೇ ಕೇಳಿತ್ತು.
''ಇಲ್ಲಪ್ಪಾ, ನಾನ್ ಬರೋಲ್ಲಾ...''
''ಏಯ್ ಬಾರೋ, ಏನ್ ಗಾಂಚಾಲಿ ಮಾಡ್ತೀಯ, ಕರೀತಿರೋದು ಈ ಹಾಸ್ಟೆಲ್ ನ ಟಾಪ್ ಮೋಸ್ಟ್ ಸೀನಿಯರ್ ಓಕೆ, ಅದೇಕೆ, ಅದ್ ಹೆಂಗ್ ಬರಲ್ಲಾ ನೀನು, ನಾನೂ ನೋಡ್ತೀನಿ ಮಗ್ನೆ...'' ಅಲ್ಲಿ ಚಿಕ್ಕ ಸೀನಿಯರ್ ಅನ್ನಿಸಿಕೊಂಡವನ ಧ್ವನಿ ಮುಗಿಲಿಗೇ ಕಿಚ್ಚು ಹಚ್ಚುವಷ್ಟು ಜೋರಾಗಿ ಅದರ ಜೊತೆ ಅವನ ರಕ್ತವೂ ಬಿಸಿಯಾಗಿ ಕುದಿಯುತ್ತಿತ್ತು..
''ಅವ್ನು ಬರಲ್ಲಾ ಅಂದ...''
''ಅವ್ನಿಗೆ ಕೊಬ್ಬು ಸ್ವಲ್ಪಾ ಜಾಸ್ತೀನೇ ಅಂತ ಕಾಣುತ್ತೆ...'' ಇನ್ನೊಬ್ಬ ಪಿಸುಗುಟ್ಟಿದ..
''ಲೋ, ಅವ್ನ್ ಬರ್ದಿದ್ರೆ ಏನಾಯ್ತು? ನಾವೇ ಹೋಗೋಣ ತಡೀರಿ.. ಈ ಸಿಗರೆಟ್ ಅರ್ಧ ಇದೆ, ಪೂರ್ತಿ ಮುಗಿದು ಹೋಗ್ಲಿ.. ಕೈನಲ್ಲಿರುವ ಸಿಗರೆಟ್ ನ ಹೊಗೆಯನ್ನು ಬೀಳಿಸುತ್ತಾ ಅಪಹಾಸ್ಯದಲ್ಲಿ ನಗುತ್ತಾ ಸೀನಿಯರ್ ಎನಿಸಿಕೊಂಡ ಒಬ್ಬ ಹುಡುಗ ಅರಚುತ್ತಿದ್ದ...
''ಮಗಾ ಎಲ್ಲರ್ಗೂ ಮೆಸೇಜ್ ಹಾಕು, ಎಲ್ರೂ ಬರ್ಲೀ, ಮೆಸ್ಸ್ ಗೆ ಕರ್ಸೀ ಆ ಹುಡ್ಗನ್ನಾ... ಅವ್ನಜ್ಜಿ ಅವ್ನಿಗೆ ಇದೆ ಇವತ್ತು ಹಬ್ಬಾ, ಬಾ ಅಂದ್ರೆ ಬರೋಕಾಗಲ್ವಾ ಅವಂಗೆ, ಇವತ್ತು ಚೆನ್ನಾಗಿ ಅವ್ನ್ ಮೈನಲ್ಲಿ ಇರೋ ಎಲ್ಲಾ ಕೊಬ್ಬೂ ಇಳ್ಸೋಣಾ...'' ಒಬ್ಬೊಬ್ಬರು ತಲೆಗೊಂದು ಮಾತಿನಂತೆ ಆಡುತ್ತಿದ್ದರು...
                               ********
ಅನಿಸುತಿದೆ ಯಾಕೋ ಇಂದು, ನೀನೇನೆ... ಹೂಂ... ಹೂಂ....
ಇವನು ಬಾಯಲ್ಲಿ ಮುಂಗಾರು ಮಳೆಯ ಹಾಡನ್ನು ಗುನುಗಿಕೊಂಡು ತನ್ನ ಇರೋ ಬರೋ ಹಳೆಯ ಮತ್ತು ಹೊಸ ಬಟ್ಟೆಗಳನ್ನು ಮೂಲೆಯಿಂದ ಮೂಲೆಗೆ ಕಟ್ಟಿರುವ ತಿಳಿ ಹಳದಿ ಬಣ್ಣದ ಪ್ಲಾಸ್ಟಿಕ್ ದಾರಕ್ಕೆ ಇರುವ ಮೂರು ಹ್ಯಾಂಗರ್ ನಲ್ಲಿಯೇ ಚೆನ್ನಾಗಿ ಇಟ್ಟುಕೊಳ್ಳುವ ಹೊತ್ತಿಗೆ ಅವನು ಬಂದು ಮತ್ತೆ ಕೇಳಿದ..
''ಏಯ್ ಬರ್ತೀಯೋ, ಇಲ್ಲಾ ಈಗ ನಾವೇ ಎಳ್ಕೊಂಡು ಹೋಗ್ಲೋ..?''
''ಹೂಂ ಬರ್ತೀನಿ ಅಣ್ಣಾ....''
''ಅಣ್ಣಾ ಗಿಣ್ಣಾ ಎಲ್ಲ ಬ್ಯಾಡಾ ಮಗಾ, ಸಾರ್ , ಸಾರ್ ಅಂಥಾ ಹೇಳ್ಬೇಕು ಆಯ್ತಾ?''
ಅವನಿಗೆ ಆಗಲೇ ಬೆವರ ಹನಿಗಳು ಒಂದರ ಹಿಂದೆ ಒಂದು ಓಟಕ್ಕೆ ಬಿದ್ದವರಂತೆ ಓಡತೊಡಗಿದ್ದವು. ಕಣ್ಣಲ್ಲಿ ನೀರು ನಿಧಾನವಾಗಿ ನಡಿಗೆಯಲ್ಲಿದ್ದವು..
ಅವನು ಮೆಸ್ಸಿಗೆ ಬಂದ ತಕ್ಷಣ ಎಲ್ಲರೂ ಜೋರಾಗಿ ಒಮ್ಮೆಲೇ ನಕ್ಕು ಆಮೇಲೆ ಗಕ್ಕನೇ ನಿಲ್ಲಿಸಿಬಿಟ್ಟರು.. ಇವನು ಒಮ್ಮೆಲೇ ಅವಾಕ್ಕಾದ!
''ಲೋ ಹುಡ್ಗಾ ನಿನ್ ಪರಿಚಯ ಮಾಡ್ಕೋ..''
''ಪರಿಚಯ ಅಂದ್ರೆ...??!''
''ಪರಿಚಯ ಅಂದ್ರೆ ಪಿಚ್ಚರ್, ಪರಿಚಯ ಅನ್ನೋ ಪಿಚ್ಚರ್ ಬಂತಲ್ಲಾ ಅದು, ಆ ಫಿಲಮ್ಮು ನೋಡಿದೀಯಾ?''
''ಇಲ್ಲಣ್ಣಾ, ಸಾರೀ ಇಲ್ಲಾ 'ಸಾರ್'!..."
''ಓಹೋ, ಯಾಕೋ? ಫಿಲಮ್ಮು ಗಿಲಮ್ಮು ನೋಡೋ ಒಳ್ಳೆ ಅಭ್ಯಾಸ ನಿಂಗಿಲ್ವಾ..??'' ಹ್ಹಾ ಹ್ಹಾ, ಮೆಸ್ಸಿನ ತುಂಬಾ ಒಂದು ರೀತಿಯ ಉಸಿರುಗಟ್ಟಿಸುವ ಅವರ ಕೇಕೆ, ನಿಂದನೆ..
''ಹೋಗ್ಲೀ, ರೀಸೆಂಟ್ ಆಗಿ ಯಾವ್ ಪಿಚ್ಚರ್ ನೋಡಿದೀಯ?''
''ಮುಂಗಾರು ಮಳೆ ಸಾರ್...!''
''ಅದಲ್ದೇ ಮತ್ತೆ ಯಾವ್ದು? ಇವ್ನು ಇನ್ನೂ ಅಪ್ಡೇಟ್ ಆಗಿಲ್ಲ, ಆಗ ನಾನು ಕರ್ಯೋಕ್ ಹೋದಾಗ್ಲೂ ಅದ್ನೇ ಅರಚ್ತಿದ್ದಾ.... ಹ್ಹಾ ಹ್ಹಾ....!!'' ಮತ್ತೊಬ್ಬನ ನಗು ತೇಲಿಬಂತು...
''ಹ್ಹಾ ಹ್ಹಾ ನೋಡ್ರೋ ಮುಂಗಾರು ಮಳೆಯಂತೆ... ನೀನೂ ದೇವದಾಸ ಕಣೋ...''
''ಲೋ ದೇವದಾಸ ನಿಂಗೆ ಲವ್ವರ್ ಇದಾಳೇನೋ?'' 'ದೇವದಾಸ' ಇವ್ನಿಗೆ ಇದೇ ಅಡ್ಡ ಹೆಸ್ರು ಬಿದ್ದೋಯ್ತು.. ಹಾಸ್ಟೆಲ್ ಗಳಲ್ಲಿ ಹೀಗೆ ಅಡ್ಡ ಹೆಸ್ರು ಬೀಳೋದೇ ಇಂಥದ್ದೇ ಸಂಧರ್ಭಗಳಲ್ಲಿ..!!
''ಇಲ್ಲಾ ಸಾರ್...''
''ಹ್ಮ್ಮ್,?? ಹೋಗ್ಲೀ ಬಿಡು... ಗರ್ಲ್ ಫ್ರೆಂಡು?''
''ಅದೂ ಇಲ್ಲಾ ಸಾರ್...''
'' ಹ್ಹಾ ಹ್ಹಾ, ಮತ್ಯಾಕ್ ಭೂಮಿ ಮೇಲೆ ಬದ್ಕಿದೀಯ? ಹೋಗಿ ಯಾವ್ದಾರೂ ಮಠ ಸೇರ್ಕೋ..''
''ಈಗ ಮಠ ದಲ್ಲಿ ಇರೋರ್ಗೂ ಎಲ್ರೂ ಇರ್ತಾರೆ, ಆದ್ರೆ ಯಾರೂ ಓಪನ್ ಆಗಿ ಇರಲ್ಲಾ...'' ಗುಂಪಿನಿಂದ ಒಂದು ಮಾತು  ಹೀಗೆ ಬಂದಿದ್ದು ಯಾರಿಗೂ ಕೇಳಲಿಲ್ಲ...
''ಬಿಡು ಎಲ್ಲದೂ ಹಾಳಾಗೋಗ್ಲೀ... ಹಾಸ್ಟೆಲ್ ರೂಲ್ಸ್ ಗೊತ್ತಾ?''
''ಹಾಸ್ಟೆಲ್ ರೂಲ್ಸಾ? ಹಂಗಂದ್ರೆ?''
''ಲೋ ದೇವ್ದಾಸ, ನಾವ್ ನಿಂಗೆ ಪ್ರಶ್ನೆ ಕೇಳ್ತಾ ಇದೀವೋ? ಇಲ್ಲಾ ನೀನೇ ನಮ್ಗೆಲ್ಲ ರಾಗಿಂಗ್ ಮಾಡ್ತಾ ಇದೀಯೋ..?? ಉತ್ರಾ ಕೊಡೋ ಅಂದ್ರೆ ಆಗಿಂದಾ ಬರೀ ನಮ್ಗೆನೇ ಪ್ರಶ್ನೆ ಕೇಳ್ತಾ ಅವ್ನೆ!..''
''______________________'' ಅವನ ಕಡೆಯಿಂದ ಯಾವ ಉತ್ತರವೂ ಬಂದಿಲ್ಲ..
''ಮಾತಾಡೋ, ಮಾತಾಡೋ ನಿನ್...., ಲೋ ಹುಚ್ನನ್ಮಗ್ನೆ....'' ಆ ಕಡೆಯಿಂದ ಇವನು ಕೇಳದೇ ಇರೋ ಶಬ್ಧಗಳ ಬೈಗುಳ ಶುರುವಾಗಿತ್ತು...
''ಇವ್ನು ಮಾತಂತೂ ಆಡಲ್ಲಾ, ಎಲ್ರೂ ಸೇರಿ ಇವ್ನಿಗೆ ಟ್ರೀಟ್ ಕೊಡೋಣ್ವಾ?? ಲೈಟ್ ಆಫ್ ಮಾಡ್ರೋ....'' ಯಾವುದೋ ಧ್ವನಿ ಆ ನಡು ರಾತ್ರಿಯಲ್ಲಿ ಒಂದು ತರಹದ ವಿಚಿತ್ರವಾದ ಮುಖದೊಂದಿಗೆ ವಿಲಕ್ಷಣ ಸಂತೋಷವನ್ನು ಹೊತ್ತು ಮೆರೆಯುತ್ತಿತ್ತು..
ಒಬ್ಬನೇ ಒಬ್ಬನಿಗೆ ಗಡದ್ದಾಗಿ ತಿಂದ  ಐವತ್ತು ಜನ ಸೇರಿ ಹಸಿದ ಹೊಟ್ಟೆಯಲ್ಲಿ ಇದ್ದ ದೇವದಾಸನಿಗೆ ಕತ್ತಲಲ್ಲಿ ಸರಿಯಾಗಿ ಟ್ರೀಟ್ ಕೊಟ್ಟರು... ಟ್ರೀಟ್ ಕೊಡೋದು ಅಂದ್ರೆ ಸರಿಯಾಗಿ ಹಿಗ್ಗಾ ಮುಗ್ಗಾ ಥಳಿಸೋದು, ಮುಖಾ ಮೂತಿ ನೋಡದೇ ಯಾರು ಎಲ್ಲಿಗೆ ಎಷ್ಟು ಹೊತ್ತು ಬೇಕಾದರೂ ಥಳಿಸಬಹುದು...!!
ಆ ರಾತ್ರಿ ಅವನು ಅವರ ಟ್ರೀಟ್ ಮತ್ತು ಅವನ ಕಣ್ಣೀರಿನೊಂದಿಗೇ ಬೆಳಗು ಮಾಡಿದ..
ಹಾಸಿಗೆಯೆಲ್ಲಾ ಕಣ್ಣೀರಿನೊಂದಿಗೆ ಒದ್ದೆ,
ಮನಸು ಹಸಿ ಬಿಸಿ ನೆನಪುಗಳಿಂದ.......
                                --------------
ಮನೆಯಲ್ಲಿ ಫೋನ್ ಘಂಟೆ ಮೊಳಗಿಳಸಲು ಶುರುವಿಟ್ಟುಕೊಂಡಿತು..
ಮಗಂದೇ
ಫೋನ್, ಅಮ್ಮ ಉಸುರಿದಳು.
''ಹ್ಮ್, ಮಗ ಅಂತೆ ಮಗಾ, ಯಾಕ್ ಅವ್ನಿಗೆ ಬೇರೆ ಕೆಲ್ಸಾ ಇಲ್ವಾ ಮಾಡೋಕೆ? ಕಾಲೇಜ್ ಇಲ್ವಾ? ಹೊತ್ನಲ್ಲಿ ಅವ್ನ್ ಯಾಕೆಫೋನ್ ಮಾಡ್ತಾನೆ? ಅಪ್ಪ ಹೇಳಿದ.
''ಹೆಲೋ, ಅಪ್ಪಾ ನಾನಪ್ಪಾ........''
''ಹೂಂ, ಹೇಳೋ,. ಎನ್ಮಾಡ್ತಿದೀಯಾ? ಓದ್ತೀದೀಯ? ಎಗ್ಸಾಮ್ ಆಯ್ತಾ? ''
ಕಡೆಯಿಂದ ಏದುಸಿರು, ಒಂದೇ ಸಮನೆ ಅಳು.. ಕೈನಲ್ಲಿರೋ ಕರ್ಚೀಫ್ ಒದ್ದೆ-ಮುದ್ದೆ!
''ಲೋ, ಏನಾಯ್ತೋ ಹೇಳೋ? ಯಾಕ್ ಅಳ್ತೀದೀಯ?''
''ಅಪ್ಪಾ,,,.... ಅಪ್ಪಾ, ನಾನು ಇಲ್ಲಿ ಇರೋಲ್ಲಾಪಾ, ಇಲ್ಲಿರೋ ಹುಡುಗ್ರು ಸರೀ ಇಲ್ಲ.. ತುಂಬಾ ಹೊಡೀತಾರೆ, ಬೈತಾರೆ, ಮಧ್ಯರಾತ್ರಿ ಎಬ್ಸಿ ಎಲ್ಲೆಲ್ಲೋ ಕರ್ಕೊಂಡು ಹೋಗಿ ಏನೇನೋ ಪ್ರಶ್ನೆ ಬೆಳಗಿನವರೆಗೂ ಕೇಳ್ತಾರಪ್ಪಾ..  ಕೇಳ್ತಾನೇ ಇರ್ತಾರಪ್ಪಾ... ಅಪ್ಪಅಪ್ಪಾ ಪ್ಲೀಸ್ ನನ್ನ ಇಲ್ಲಿಂದಾ ಕರ್ಕೊಂಡು ಹೋಗಪ್ಪಾ ಪ್ಲೀಸಪ್ಪಾ....!!''
''ಏನ್ ಕರ್ಕೊಂಡು ಹೋಗೋದು? ಅಲ್ಲಿ ಬಿಟ್ಟಿರೋದು ಓದೋಕೆ ಅಂಥಾ, ಮನೆಯಿಂದ ಅಲ್ಲಿಗೆ, ಅಲ್ಲಿಂದಾ ಮತ್ತೆ ಮನೆಗೆಓಡಾಡೋಕಲ್ಲ ತಿಳೀತಾ? ಬರೀ ಊರಿಂದಾ ಮತ್ತೊಂದು ಊರಿಗೆ ಸುತ್ತೋದೇ ಜೀವನ ಅಂದ್ಕೊಂಡ್ಯಾ? ಹ್ಮ್, ಮಾತಾಡೋ.. ನಿನ್ ಮಾರ್ಕ್ಸ್ ನೋಡೋ.. ಅಲ್ಲಿ ಹೇಗೋ ಸೀಟ್ ಸಿಕ್ತು.. ಅಲ್ಲೂ ಬಿಟ್ ಬಂದು ಎಲ್ಲಿಗೆ ಹೋಗ್ತೀಯೋ? ಅಲ್ಲೇ ಅಡ್ಜಸ್ಟ್ಮಾಡ್ಕೊಂಡು ಇರು.. ಈಗ ಇಡು ಫೋನ್ ನಾ....., ಅಂದಂಗೆ ಚೆನ್ನಾಗೇ ಇದ್ದೀಯ ತಾನೇ? ಮತ್ತೇನೂ ತೊಂದ್ರೆ ಇಲ್ಲಾತಾನೇ? ಊಟ ಆಯ್ತಾ? ಹಾಸ್ಟೆಲ್ ಊಟ ಹೆಂಗಿದೆ?..''
''ಅತ್ತ ಅವನು ಅಪ್ಪನ ಮೊದಲ ವಾಕ್ಯ 'ಅಲ್ಲಿ ಬಿಟ್ಟಿರೋದು ಓದೋಕೆ ಅಂತ'............ ಅಂತಾ  ಕೋಪದ ಧ್ವನಿಯಲ್ಲಿಹೇಳುತ್ತಿದ್ದಾಗಲೇ ಇವನು ಫೋನ್ ಅನ್ನು ಇರಿಸಿಯಾಗಿತ್ತು.... ಅಪ್ಪನ ತರಹದ ಮಾತುಗಳನ್ನು ಕೇಳಿ ಅವನು ಅಲ್ಲೇ ಕುಸಿದುಬಿದ್ದಿದ್ದ... ಅವನ ಮನಸ್ಸು ಏನನ್ನೋ ಮಾಡಲು ನಿರ್ಧಾರ ಮಾಡಿತ್ತು...!
ಆಕಾಶದಲ್ಲಿರುವ
ನಕ್ಷತ್ರ ಫಳ ಫಳನೇ ಹೊಳೆಯುತ್ತಾ ಕನವರಿಸಿತ್ತು...
ಹುಚ್ಚು
ಮನಸು ಭಾವನೆಗಳ ಕಡಲ ಕವಲಲ್ಲಿ ಹಾಗೂ ಕತ್ತಲಲ್ಲಿ,
ಹುಡುಕುತ್ತಿವೆ
ಸಂತೈಸುವ ಕೈಗಳನ್ನು ಅವು ಸಿಗಲಾರದ ಜಾಗದಲ್ಲಿ.....
 To be continued......................:
ಇದರ ಮುಂದಿನ (ಎರಡನೇ ಭಾಗವನ್ನು) ನೀವು ಇಲ್ಲಿ ಓದಬಹುದು: