Friday, March 18, 2011

-ಕೈ ಬರೆದಿದ್ದು, ಮನಸು ಅತ್ತಿದ್ದು- 2, Boyz Hostel:)


''ಟೀ, ಕಾಫಿ, ಟೀ, ಕಾಫಿ...........''
''
ವಡೆ, ದೋಸೆ, ಇಡ್ಲೀ, ರೈಸ್ ಬಾತ್, ಪುಲಾವ್,......''
''
ಬಿಸ್ಸಿ ಬಿಸ್ಸಿ ಬಾದಾಮ್ ಹಾಲೂ............''
ಹಾಗೂ ಇನ್ನಿತರ ಶಬ್ಧಗಳಿಂದ ತುಂಬಿ ಹೋಗಿದ್ದ ರೈಲಿನ ಜನರಲ್ ಬೋಗಿಯಲ್ಲಿ ಕುಳಿತು ಒಬ್ಬನೇ ಗಲಾಟೆ ಮತ್ತು ಗೊಂದಲದ ನಡುವೆಯೂ ಯೋಚಿಸುತ್ತಿದ್ದ....
ನನ್ನ ಜೀವನವೇ ಹಾಗಾ? ನಾನೇ ಹಾಗಾ? ನಾನು ಭೂಮಿಯಲ್ಲಿರುವ ಎಲ್ಲರಿಂದಲೂ ತಿರಸ್ಕ್ರತನಾ? ನನ್ನ ಮೇಲೆ ಎಲ್ಲರಿಗೂ ಕೋಪಾನಾ? ನಾನು ಅವ್ರಿಗೆ ಮಾಡಿದ್ದಾದರೂ ಏನು? ನನ್ ಪಾಡಿಗೆ ನಾನ್ ಇದ್ದಿದ್ದೇ ತಪ್ಪಾಗೋಯ್ತಾ? ಅಥ್ವಾ ಹಾಗೆ ತಮ್ಮ ಪಾಡಿಗೆ ತಾವು ಸುಮ್ಮನೇ, ಅವರದೇ ಆದ ಒಬ್ಬಂಟಿ ಲೋಕದಲ್ಲಿ ಇದ್ದವರನ್ನು ಕಂಡರೆ ಜಗತ್ತಿಗೆ ಆಗಲ್ವಾ? ನನ್ನವರೇ ಆದ ಅಪ್ಪ ಅಮ್ಮ ಕೂಡಾ ನನ್ನ ಪ್ರೀತಿ ಮಾಡಿಲ್ಲ ಅಂದ್ರೆ, ಅವ್ರೂ ಕೂಡ ನನ್ನ ದ್ವೇಶಿಸಿದ್ರೆ ನಾನಾದ್ರೂ ಎಲ್ಲಿಗೆ ಹೋಗ್ಲೀ? ಏನ್ ಮಾಡ್ಲೀ ದೇವ್ರೆ?? ಅವನ ಮನಸ್ಸು ರೈಲಿನಲ್ಲಿಯೇ ಕೂತು ಅದರಾಚೆಗೆ ಕಾಡಿನಲ್ಲಿ ಸಾವಿರ ರೈಲುಗಳ ವೇಗಕ್ಕೆ ಸಮನಾದ ರೀತಿಯಲ್ಲಿ ಯೋಚನೆಯಲ್ಲಿದ್ದವು...
ಸರಿಯಾಗಿ ಎರಡು ದಿನದಿಂದ ಏನೂ ತಿನ್ನದೇ ಇದ್ದುದರಿಂದ ಹೊಟ್ಟೆಯೂ ನಿಧಾನವಾಗಿ ತಾಳ ಹಾಕಲು ಶುರು ಮಾಡಿತ್ತು... ಹೊಟ್ಟೆಯಲ್ಲಿ ಇಲಿ ಓಡಾಡಿದ ಅನುಭವ!..
ಹಾಗೇ ಒಂದು ಟೀ ತೆಗೆದುಕೊಂಡು ರೈಲಿನ ಬಾಗಿಲ ಹತ್ತಿರ ಹೋಗಿ ನಿಂತುಕೊಂಡು ಬಿಸಿ ಬಿಸಿಯಾದ ಟೀಯನ್ನು ನಿಧಾನವಾಗಿ ಆರಿಸಿ ಕುಡಿಯಲು ಶುರುವಿಟ್ಟುಕೊಂಡ.
ಮತ್ತೆ ಮನಸು ಯೋಚನೆಯಲ್ಲೇ ಈಜಾಡುತ್ತಿತ್ತು... ಕೈನಲ್ಲಿರುವ ಟೀ ಅರ್ಧ ಮುಗಿದಿತ್ತು... ತಣ್ಣನೆಯ ಗಾಳಿ ಮುಖಕ್ಕೆ ಬೀಸುತ್ತಿರಲು ಅವನ ದುಃಖದ ಮನಸಿಗೆ ಎಲ್ಲೋ ಒಂಚೂರು ಪನ್ನೀರು ಸಿಂಪಡಿಸಿದಂತಾಗಿ ದೇವರೇ ಖುಷಿಯನ್ನು ಹೀಗೇ ಸದಾ ಜಾರಿಯಲ್ಲಿಡಪ್ಪಾ ಅಂತ ಬೇಡಿಕೊಳ್ಳುತ್ತಿತ್ತು.. ಆದರೆ ಯಾರಿಗೆ ಗೊತ್ತಿತ್ತು ಅದು ಅವನ ಜೀವನದ ಅತ್ಯಂತ ಸುಂದರ ಮತ್ತು ಅವನು ಯಾವತ್ತೂ ಕಂಡಿರದ ನರಕದ ನೈಜ ರೂಪವೆಂದು?
ದಿನದ  ಸಂಜೆಯೇ ಅವನ ಶವವನ್ನು ರೈಲ್ವೆ ನಿಲ್ದಾಣದ ಅಧಿಕಾರಿಗಳು ಅವನ ಮನೆಗೆ ತಲುಪಿಸಿ ಬಂದಿದ್ದರು....

**************
@ Jp..


''
ಹ್ಹಾ, ಹ್ಹಾ ಲೋ ನಮ್ಮ ಹಾಸ್ಟೆಲ್ ನಲ್ಲಿ ಒಬ್ನು ದೇವದಾಸ ಅಂತಿದ್ದ.. ಗೊತ್ತಾ ಅವ್ನ್ ಕಥೆ?''
''
ಹೂಂ, ಒಂದೆರ್ಡು ದಿನಾ ಕಂಡಿದ್ದಾ.. ಒಂದು ದಿನ ಲೈಟ್ ಆಗಿ ಇಟ್ಕೊಂಡಿದ್ವಿ ಪ್ರೊಗ್ರಾಮ್ ನಾ..., ಆಮೇಲ್ ಅವ್ನ್ ಎಲ್ಲೋದಾ? ಪತ್ತೇನೇ ಇಲ್ಲಾ ಕಣ್ರೋ...''
''
ಹೂಂ......... ಏನೇ ಆಗ್ಲಿ, ಪಾಪಾ ಸೈಲೆಂಟ್ ಆಗಿದ್ದಾ ಹುಡ್ಗಾ....ಅವ್ನ್ ಪಾಡಿಗೆ ಅವ್ನ್ ರೂಮಲ್ಲಿ ಒಬ್ನೇ ಇರೋನಪಾ..., ಯಾರ್ ತಂಟೆಗೂ ಬರ್ತಿರ್ಲಿಲ್ಲಾ... ನಮ್ ಜೊತೆ ಮಾತಾಡೋಕೂ ಉಹೂಂ........''
''
ಯೋಯ್, ಇವತ್ತು ಮತ್ತೆ ಯಾರೋ ಹೊಸ ಹುಡ್ಗ ಬಂದಿದಾನಂತೆ.. ಕರುಸ್ರೋ ಅವನ್ನೂ...........''
''
ಏಯ್ ಬಾ ಮರೀ.....''
''
ಏನೋ ಯೆಂಗಿದೆ ಮೈಗೆ? ನೆಟ್ಗೆ ಮಾತಾಡೋಕ್ ಆಗಕಿಲ್ವಾ?''
''
ಏಯ್ ಸೀನಿಯರ್ ಗೇ ನೀನು ತಾನು ಅಂತೀಯಾ?''
''
ನಿಂಗೂ ಅಂತೀನಿ, ಅವ್ನಿಗೂ ಅಂತೀನಿ.. ಏನೋ ಮಾಡ್ತೀಯಾ ಲೇ...?''
''
ಏಯ್ ಐತ್ಹೆ ಕಣ್ಲಾ ನಿಂಗೆ...''
''
ಕಂಡೀವ್ನಿ, ಹೋಗ್ಲಾ.. ಯಾರ್ನ ಕರ್ಕೋ ಬತ್ತೀಯಾ  ಕರ್ಕೋ ಬಾ ಹೋಗ್......!!''
''
ಅಣ್ಣಾ ಈಗ ಬಂದಿರೋನು ಸ್ವಲ್ಪಾ ಜೋರು ಅನ್ಸತ್ತೆ ಅಣ್ಣಾ... ತುಂಬಾ ಅವ್ವಾಜ್ ಹಾಕ್ತಿದ್ದಾ, ಮತ್ತೆ., ಮತ್ತೆ ಏನೇನೋ ಅಂತಿದ್ದಾ ಅಣ್ಣಾ.............''
''
ಏನೇನೋ ಅಂದ್ರೆ ಏನೋ....??''
''
ಅಯ್ಯೋ ಬ್ಯಾಡಾ ಬಿಡೀ ಅಣ್ಣಾ...........!!'' ಅವನು ಅಲ್ಲಿ ನಡೆದ ಅರ್ಧಂಬರ್ಧ ಸಂಭಾಷಣೆಯನ್ನು ಇಲ್ಲಿ ಬಂದು ಒಂದೇ ಉಸಿರಲ್ಲಿ ಅರುಹಿದ.
''
ಅವ್ನಿಗೆ ಇದೆಲ್ಲಾ ಹೊಸ್ದಲ್ಲಾ ಅಣ್ಣಾ... ಅವ್ನು ಒಂದೆರ್ಡು ಸಲ ಜೈಲಿಗೂ ಹೋಗಿ ಬಂದಿದ್ನಂತೆ..., ಅವ್ನು, ಅವ್ನು....''
''
ಏನ್ ಅವ್ನು, ಅವ್ನು.... ಮುಂದೆ ಹೇಳೋ ನಿನ್.............''
''
ಏಯ್ ಯಾರೇ ಆಗಿರ್ಲೀ, ಇವತ್ ರಾತ್ರಿ ಅವ್ನಿಗೆ ಇದೆ ಹಬ್ಬಾ... ಏಯ್ ಪಕ್ಕದ್ ಏರಿಯ ಹಾಸ್ಟೆಲ್ ಹುಡುಗ್ರನ್ನೂ ಕರೀರೋ....''
''
ಅವ್ನು ಒಬ್ಬಾ, ನಾವು ಬರೋಬ್ಬರೀ ನೂರಾ ಮೂವತ್ಮೂರು..!!'' ಹ್ಹಾ , ಹ್ಹಾ., ಇವರ ಬಲಹೀನತೆಯನ್ನು ಇವರೇ ಹಾಸ್ಯ ಮಾಡಿಕೊಂಡು ನರಿ ಊಳಿಟ್ಟಂತೆ ಇಡೀ ಊರಿಗೆ ಕೇಳುವಂತೆ ಅರಚಾಡುತ್ತಿದ್ದರು..

**************************

''
ನೀನ್ ಏನೇ ಅನ್ನು ಮಗಾ, ದರಿದ್ರ ಊಟ ಅಂತೂ ತಿನ್ನಕ್ಕೇ ಆಗಲ್ಲ ಅಲ್ವಾ?''
''
ಛೀ! ಇದ್ನಾ ನಾವ್ ತಿನ್ನೋದು ಆಮೇಲಿನ್ ಮಾತು, ಊಟಾನ ನಾಯಿನೂ ಮೂಸಲ್ಲಾ....''
''
ಹ್ಮ್ಮ್, ಏನ್ ಮಾಡೋದು ಈಗ? ರೀಸೆಂಟ್ ಆಗಿ ಊರಿಂದಾ ಯಾರ್ ಬಂದಿದಾರೋ? ಅವ್ರ್ ಬ್ಯಾಗ್ ಚೆಕ್ ಮಾಡು... ಏನಾದ್ರೂ ಇಟ್ಟೇ ಇಟ್ಟಿರ್ತಾರೆ...!!'' ಇಬ್ಬರ ಕಣ್ಣಿನಲ್ಲೂ ಸಾವಿರ ಸಾವಿರ ದೀಪದ ಬೆಳಕು ಪ್ರತಿಫಲಿಸುತ್ತಿತ್ತು.
''
ದರಿದ್ರದವ್ರು, ಊರಿಂದಾ ತಂದಿದ್ನಾ, ತಂದಿರೋ ತಿಂಡೀ ನಾ ಕೊಟ್ಗೊಂಡು ತಿನ್ನಕ್ಕಾಗಲ್ವಾ?'' ನಮಗೆ ಸ್ವಲ್ಪಾ ಜಾಸ್ತೀನೇ ಕೊಟ್ರೆ ಒಳ್ಳೆದಪ್ಪಾ... ಊಂ... ನಾವು ಒಪ್ಕೊತೀವಿ.. ನಾವ್ ಹೊಟ್ಟೆ ಬಾಕ್ರೇ, ಏನೀಗ?? ಮತ್ತೊಬ್ಬ ಮನಸ್ಸಿನಲ್ಲೇ ಅಂದುಕೊಂಡ!
''
ವೋಯ್, ಅಂಗೆಲ್ಲಾ ಅನ್ಬೆಡಾ  ನೀನು.. ಈಗ್ ಮಾತಾಡಿದ್, ಬೈದಿದ್ ಎಲ್ಲಾನೂ ವಾಪಸ್ ತಗೋ ಮತ್ತೆ..... ಅವತ್ತು ಕೊಟ್ಟಿಲ್ವೇನೋ  ನಿಂಗೆ?, ಇಸ್ ಇಸ್ಕೊಂಡು ಬಾಯ್ ಚಪ್ಪರ್ಸ್ಕೊಂಡು ತಿಂದೆ ಮಗ್ನೇ...!''
''
ಹೂಂ, ತಿಂದೆ... ಈಗ್ ಇಲ್ಲಾ ಅಂದೋರ್ಯಾರು?'' ಹ್ಹಾ ಹ್ಹಾ, ಅದು ಅವತ್ತಿಗಾಯ್ತು... ಇವತ್ತಿಗೆ ಯಾರ್ ನಿನ್ ಮಾವಾ ಬಂದು ಕೊಡ್ತಾನಾ??''
''ಹೂಂ, ದಿನಾ ಕೊಡ್ತೀನಿ ಅಂದ್ಕೊಂಡ್ಯಾ?, ತಂದಿರೋದೇ ಸ್ವಲ್ಪಾ... ಅಷ್ಟೂ ನಿಮ್ಗೇ ಕೊಟ್ಬುಟ್ರೆ ನಂಗೆ ಎಲ್ಲಿ ಉಳ್ಯತ್ತೆ...??''
''
ಏಯ್, ನೀನ್ ತಿಂದ್ರೂ ಒಂದೇ, ನಾವ್ ತಿಂದ್ರೂ ಒಂದೇ.... ಗೊತ್ತಾಯ್ತಾ..., ಅವ್ನ್ ಮಾತ್ ಏನೋ ಕೇಳ್ತೀಯಾ.., ಕಿತ್ಕೊಳೋ ಅದ್ನಾ... ಹ್ಹಾ ಹ್ಹಾ...!''
''
ನಾವ್ ಅವ್ನ್ ತಿಂಡಿ ಕಿತ್ಕೊಳೋಣಾ, ಅವ್ನು ನಮ್ದು ಏನು ಕಿತ್ಕೋತಾನೆ ಅಂತಾನೂ ನೋಡೋಣಾ... ಹ್ಹಾ ಹ್ಹಾ....!'' ಅವನ ತಿಂಡಿಯಲ್ಲಿ ಇವರ ಮಜಾ... ಜೊತೆಗೆ ಅವರ ಮಾತುಗಳ ಮಂತ್ರಾಕ್ಷತೆ ಇವನಿಗೆ...
ಅಂತೂ ಇಂತೂ ಯಾರೋ ತಂದಿರೋದನ್ನ ಯಾರೋ ಕಿತ್ಕೊಂಡು ತಿಂದಿದ್ದಾಯ್ತು... ಇವ್ನಿಗೆ ಅವರ ಮಾತುಗಳ ಹೊರತಾಗಿ ಮತ್ತೇನೂ ಉಳಿದಿಲ್ಲ... ಇರೋ ಎರಡು ಕಣ್ಣನ್ನೇ ದೊಡ್ಡದಾಗಿ ಅಮಾಯಕತೆಯಿಂದ ನೋಡುವುದರ ಹೊರತಾಗಿ!
ಆಗ ತಟ್ಟನೆ ನೆನಪಾಯಿತು:
ಮನೆಯಿಂದ ಕೊಟ್ಟದ್ದು ತನಗೆ,
ಹಾಸ್ಟೆಲ್ ನಲ್ಲಿ ಕದ್ದು ತಿಂದಿದ್ದು ಹೊಟ್ಟೆಗೆ,
ಹೊಟ್ಟೆ ಕಟ್ಟಿ ತಿನ್ನದೇ ಇಟ್ಟಿದ್ದು ಅವರಿಗೆ,
ಏನೂ ಮಾಡದೆ ಬಿಟ್ಟದ್ದು ಹಾಸ್ಟೆಲ್ ಪರರಿಗೆ
...!!

***************************

@ Jp..


ಹ್ಯಾಪ್ಪಿ ಬರ್ತ್ ಡೇ ಟು ಯೂ..... ಹ್ಯಾಪ್ಪಿ ಬರ್ತ್ ಡೇ ಟು ಯೂ.....ಹ್ಯಾಪ್ಪಿ ಬರ್ತ್ ಡೇ........
ಮೆಸ್ಸಿನ ಮಧ್ಯದಲ್ಲಿ ದುಂಡನೆಯ ಮೇಜಿನ ಮೇಲೆ ದೊಡ್ಡದಾದ ಕೇಕ್ ಇರಿಸಿ, ಹಾಲ್ ಅನ್ನು ಚೆನ್ನಾಗಿ ಅಲಂಕರಿಸಿ ಇಡಲಾಗಿತ್ತು. ಅವನನ್ನು ಮಧ್ಯರಾತ್ರಿ ಎಬ್ಬಿಸಿಕೊಂಡು ಬಂದು ಸರಿಯಾಗಿ ಎಲ್ಲರೂ ಹೊಡೆದು, ಕೇಕ್ ಕಟ್ ಮಾಡಿಸಿ, ತಣ್ಣನೆಯ ತಂಪಾದ ನೀರನ್ನು ಮಧ್ಯರಾತ್ರಿಯ ಚಳಿಯಲ್ಲೂ ಬಿಡದೇ, ಜ್ವರ ಬಂದಿದೆ ಎಂದರೂ ಕೇಳದೆ ನೂರಾರು ಲೀಟರ್ ನೀರನ್ನು ಸ್ನಾನ ಮಾಡಿಸಿ, ಹುಡುಗನ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಅವನಿಗೆ ದಿನ ತಾನು ಯಾಕಾದರೂ ಹುಟ್ಟಿದೆನೋ, ಹುಟ್ಟಿದರೂ ಇಂದೇ ಇದೇ ಮನುಷ್ಯರ ಕೈಗೆ ಇವತ್ತು ಯಾಕಾದರೂ ಸಿಕ್ಕಿದೇನೋ ಅನಿಸಿದ್ದು ಸುಳ್ಳಲ್ಲ...
''
ಏಯ್ ಟ್ರೀಟ್ ಕೊಡ್ಸೋ...........!''
''
ಹೂಂ ಕೊಡ್ಸೋಣ ಬನ್ನಿ... ನಿಮ್ಗೆ ಇಲ್ಲಾ ಅಂತೀನಾ...??''
''
ಮ್ಮ್, ಇವತ್ತು ಒಳ್ಳೆ ಊಟ... ಏಯ್ ಬರ್ರೋ ಎಲ್ಲಾ.... ಹತ್ತಿ ಹತ್ತಿ....!'' ಮರುದಿನ ಮಧ್ಯಾನ್ನ ಅಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು..
ಒಂದೊಂದು ಬೈಕಿನ ಮೇಲೆ ಮೂರು-ನಾಲ್ಕು ಜನ ಹತ್ತಿ ಹೆಲ್ಮೆಟ್ ಇಲ್ದೆ, ಡ್ರೈವಿಂಗ್ ಲೈಸನ್ಸ್ ಇಲ್ದೆ, ಅಷ್ಟೂ ಸರ್ಕಲ್ಲಿನ ಅಷ್ಟೂ ಪೊಲೀಸ್ನವ್ರನ್ನ ಯಾಮಾರ್ಸಿ ಅಷ್ಟೂ ಜನ ಬಂದು ಹೋಟೆಲ್ ತಲ್ಪೋ ಹೊತ್ತಿಗೆ ಅಬ್ಬಬ್ಬಾ..., ಪೂರ್ತಿ ಹಸಿವು ಸತ್ತು ಮತ್ತೆ ಅವನಿಗೇ ಹೊಡೆಯುವ ಮನಸ್ಸಾಗಿತ್ತು. ಮಗಾ ಇವ್ನೆಲ್ಲಾ ಲೈಫ್ ನಲ್ಲಿ ಮರ್ಯೋಕೆ ಸಾಧ್ಯಾನಾ..??''
''
ಮರ್ಯೋಕೆ ಚಾನ್ಸೇ ಇಲ್ಲಾ ಮಗಾ...''
''
ಏನ್ ಮಾಡೋದು, ಈಗ ಅವೆಲ್ಲ ಬರೀ ನೆನಪು  ಮಾತ್ರ...''
''
ಹೂಂ.. ಮತ್ತೆ ಹೆಂಗಿದೆ ನಿನ್ ಕೆಲ್ಸಾ, ಹೆಂಡ್ತಿ ಮಕ್ಳು., ಹ್ಹಾ ಹ್ಹಾ... ಮದ್ವೆ ಆದ್ಯೋ ಇಲ್ವೋ?.., ಕೇಳೋದ್ನೆ ಮರೆತು ಬಿಟ್ಟೆ...''
''
ಲೋ ಮದ್ವೆ ಆಗದೆ ಮಕ್ಳು ಹೆಂಗಿದಾರೆ ಅಂತೀಯಲ್ಲೋ, ಥೂ ನಿನ್ನಾ.....!!''
''
ಹೂಂ ಆದೆ ಕಣೋ... ಅವ್ರೆಲ್ಲ ಚೆನ್ನಾಗಿದಾರೆ... ನಮ್ ಬಾಸ್ ದೇ ಸ್ವಲ್ಪಾ ಕಿರಿಕ್ಕು ಮಗಾ.. ಅದ್ಕೆ ಕಂಪನಿ ಚೇಂಜ್ ಮಾಡ್ಬೇಕು ಅಂತಿದೀನಿ... ನೀನು?''
ಇಬ್ಬರ ಹಳೇ ಸ್ನೇಹಿತರ ಮಾತು-ಕಥೆ ಯಾರ ಹಂಗಿಲ್ಲದೆ, ಜಗತ್ತಿನ ಪರಿವಿಲ್ಲದೆ, ಅವರ ಹಳೆಯ ಮಾಮೂಲಿ ಬೀದಿ ಬದಿಯ ಟೀ ಶಾಪ್ ಒಂದರಲ್ಲಿ ಬರೋಬ್ಬರಿ ಎರಡೂ-ವರೆ ಘಂಟೆಗಳಿಂದ ಸುದೀರ್ಘವಾಗಿ ಸಾಗಿತ್ತು... ತಲಾ ಒಬ್ಬೊಬ್ಬರು  ಆರು ಟೀ, ಮತ್ತು ಮತ್ತೊಬ್ಬ ಹತ್ತು ಸಿಗರೇಟನ್ನು ಭರ್ಜರಿಯಾಗಿ ಒಬ್ಬನೇ ಸುಟ್ಟು ಮುಗಿಸುವಲ್ಲಿ ಯಶಸ್ವಿಯಾಗಿದ್ದ!
''
ಇನ್ನೊಂದೆರ್ಡು ಟೀ ಮತ್ತೆ ಒನ್ ಪ್ಯಾಕ್ ಸಿಗರೆಟ್ ಕೊಡಣ್ಣಾ....!''
''
ಹೂಂ..... ತಂದೆ...''
ಮತ್ತೆ ಅವರ ಮಾತು ಸಾಗಿತ್ತು... ಹಳೆಯ ಘಟನೆಗಳು ಒಂದೊಂದಾಗಿ ಮನಸಿನ ಈಚೆ ಜಾರುತ್ತಾ, ತೇಲುತ್ತಾ, ತೆವಳುತ್ತಾ, ಹಾರುತ್ತಾ, ಕುಣಿಯುತ್ತ, ಒಂದೊಂದು ಸಲ ನಗುತ್ತ, ಯಾವಾಗಲೂ  ಅಳುತ್ತ, ಒಂದೊಂದನ್ನೇ ಕೆದಕುತ್ತಾ  ಮಾತನಾಡಲು, ಮತ್ತು ತಾವೂ ನಿಮ್ಮ ಜೊತೆಗೇ ಇದ್ದೇವೆ, ಯಾವಾಗಲೂ ಹೀಗೇ ನೀವು ಎಲ್ಲಿ ಹೋದರೂ ಇರುತ್ತೇವೆ  ಎಂಬುದನ್ನು ಹೇಳಲು ಹವಣಿಸುತ್ತಿದ್ದವು....
''
ಲೋ ನಿಂಗೆ ನೆನಪಿದ್ಯಾ.. ನಾವು ಹಾಸ್ಟೆಲ್ ನಲ್ಲಿ ಇರ್ಬೇಕಾದ್ರೆ ಒಬ್ನು ದೇವದಾಸ ಅಂತಿದ್ನಲ್ಲಾ., ಅವ್ನು ಏನಾದ? ಯಾರ್ನ ಕೇಳಿದ್ರೂ ಗೊತ್ತಿಲ್ಲ ಅಂತಾರಲ್ಲೋ... ಅವಾಗಾವಾಗ ನಾನೂ ನೀನೂ ಅವನಿಗೆ ಆಟ ಅಡ್ಸ್ತಿದ್ವಿ ನೆನ್ಪಿದ್ಯಾ?''
''
ಹೂಂ.. ನೆನ್ಪಿದೆ ಮಗಾ, ಅವ್ನು,,. ಅವನ್ನ ಅವ್ರು ಸಾಯ್ಸಿದ್ರಂತೆ...!''
''
ಸಾಯ್ಸಿದ್ರಾ, ಯಾರೋ, ಹೆಂಗೋ, ಹಾಸ್ಟೆಲ್ ಹುಡುಗ್ರಾ, ಯಾಕಂತೋ? ನಿಜಾನೇನೋ, ಯಾವಾಗಲೋ ಲೋ ಹೇಳೋ  ಹೆಂಗೋ??'' ಅವನು ಕುತೂಹಲ ತಡೆಯಲಾಗದೆ ಒಂದೊಂದೇ ಪ್ರಶ್ನೆಯನ್ನು ಒಟ್ಟಿಗೇ ದೀಪಾವಳಿಯ ರಾಕೆಟ್ ಬಿಟ್ಟಂತೆ ಒಂದರ ಹಿಂದೆ ಮತ್ತೊಂದನ್ನು ಕೇಳ್ತಾನೇ ಇದ್ದ... ಗಡಿಬಿಡಿಯಲ್ಲಿ ಇದ್ದ ಟೀಯನ್ನೂ ಕೈ ಮೇಲೆ ಚೆಲ್ಲಿಕೊಂಡು, ಅದು ಕೈಯನ್ನು  ಸುಟ್ಟು ಕೈ ಉರಿಯುತ್ತಿದ್ದರೂ ಅದನ್ನೂ ಲೆಕ್ಕಿಸದೇ ಅವನು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಎಸಿತಾನೇ ಇದ್ದ.. ಅಲ್ಲೇ ಅವರ ಹಿಂದೆಯೇ ಕೂತು ಇಬ್ಬರು ಪೋಲೀಸಿನವರೂ ಕೂಡ ಟೀ ಹೀರುತ್ತಾ, ಅವರ ಮುಂದಿನ ಮಾತುಗಳನ್ನು ಕೇಳುತ್ತಾರೆ ಎಂಬುದು ಅವರಿಗಾದರೂ ಎಲ್ಲಿ ಗೊತ್ತಿತ್ತು?
''
ಅವ್ನ್ ಕಂಡ್ರೆ ಮನೆಯಲ್ಲಿ ಯಾರಿಗೂ ಆಗ್ತಾ ಇರಲಿಲ್ವಂತೆ, ಪಾಪ ಅವ್ನು ಮನೆಗೇ ವಾಪಸ್ ಹೋಗಿ ಎಲ್ಲವನ್ನೂ ಹೇಳಿ ಮನೆಯಲ್ಲೇ ಇರೋಣ ಅಂತ ವಾಪಸ್ ಹೋಗ್ತಿದ್ನಂತೆ..
''
ಥೋ, ಯಾರೋ ಕಳ್ರು ಅವ್ನ್ ಪರ್ಸ್ ಕಿತ್ಕೊಳೋಕ್ ಟ್ರೈ ಮಾಡಿದ್ರಂತೆ, ಇವ್ನು ಎಗರಾಡಿದ್ನಂತೆ.. ದುಡ್ಡು ಕೇಳಿದ್ರೆ ಕೊಟ್ಟಿಲ್ಲಾ.. ಅಪ್ಪ ಬೈತಾರೆ ಬಿಡ್ರೋ ಅಂತ ತುಂಬಾ ಅತ್ನಂತೆ.. ಅವ್ನ್ ಯಾವ ಸೀಮೆ ಅಪ್ಪಾನೋ ನಾವ್ ಕಂಡಿಲ್ದೆ ಇರೋನಾ..?''
''
ನೀನ್ ಅಪ್ಪನ ಹತ್ರಾ ಹೋದ್ರೆ ತಾನೇ ಬೈಸ್ಕೊಳ್ಳೋದು...?'' ಅಂತಾ ಹೇಳಿ ಇರೋ ಬರೋ ದುಡ್ಡು ಚಿಲ್ರೆ, ಬುಕ್ಸ್, ಅವ್ನ್ ಹಾಕ್ಕೊಂಡ್ ಬಟ್ಟೆನೂ ಬಿಟ್ಟಿಲ್ವಂತೆ ಮಗಾ, ಎಲ್ಲಾನೂ ಕಿತ್ಕೊಂಡು ಅವ್ನ್ ಟ್ರೇನ್ ನಲ್ಲೇ ಕೊಲೆ ಮಾಡಿ ಟಾಯ್ಲೆಟ್ ನಲ್ಲಿ ಅವ್ನ್ ಹೆಣ ಮಲಗ್ಸಿ ಹೋಗಿದ್ರಂತೆ.. ಯಪ್ಪಾ ಎಷ್ಟು ಪಾಪ ಅಲ್ವಾ? ಅವ್ನು ಎಷ್ಟ್ ಕೂಗೋಕೆ ಟ್ರೈ ಮಾಡಿದ್ರೂ ಯಾರೂ ಬಂದಿರ್ಲಿಲ್ವಂತೆ ಮಗಾ, ಆಮೇಲಾಮೇಲೆ ಬಾಯಿಗೆ ಬಟ್ಟೆ ಹಾಕಿ ಚೂರಿಯಿಂದ ಹೊಟ್ಟೆಗೆ ತಿವಿದು ತಿವಿದು ಸಾಯ್ಸಿದ್ರಂತೆ ಮಗಾ.. ಬಾಡಿ ಒಳಗೆ ನೋಡೋಕೆ ಏನೂ ಇಟ್ಟಿರ್ಲಿಲ್ವಂತೆ.. ಮುಖಾ ಕತ್ತು ಎಲ್ಲಾ ಕುಯ್ದು ಹಾಕಿದ್ರಂತೆ, ಛೀ! ಅಲಾ ಮಗಾ, ಬರೀ ನೂರೋ ಇನ್ನೋರಕ್ಕೋ ಥರ ಕೊಲೆ ಮಾಡೋ ಜನಾನೂ ಜಗತ್ತಿನಲ್ಲಿ ಇರ್ತಾರಾ??''
''
ಅಯ್ಯೋ, ಅವ್ನು ಆಗ ಪೋಲೀಸ್ ಗೆ ಫೋನ್ ಮಾಡಿಲ್ವಾ? ಅಥ್ವಾ ಮನೆಗೇ?
''
ಅಯ್ಯೋ ಎಲ್ಲಿ ಫೋನ್? ಅವ್ನ್ ಮನೆಲೀ ಅವ್ನಿಗೆ ಸರಿಯಾಗಿ ದುಡ್ಡು ಕೊಡ್ತಾ ಇರ್ಲಿಲ್ಲಾ, ಹಾಗಂತಾ ಇವ್ನೇನೂ ಅಡ್ಡ ದಾರಿ ಹಿಡ್ದಿರ್ಲಿಲ್ಲಾ.. ಮೊಬೈಲ್ ಕೊಡ್ಸಿರ್ಲಿಲ್ಲಾ ಅನ್ಸತ್ತೆ.. ಅವ್ನು ಹಾಸ್ಟೆಲ್ ನಲ್ಲಿ ಇರ್ಬೇಕಾದ್ರೂ ಎಸ್.ಟೀ.ಡಿ. ಬೂತ್ ಗೆ ಹೋಗೇ ಮನೆಗೇ ಫೋನ್ ಮಾಡಿ ಬರ್ತಿದ್ದ....''
''
ಛೆ!!, ಒಳ್ಳೆ ಹುಡ್ಗ ಆಗಿದ್ದಾ ಅವ್ನು, ಹೆಂಗೆಂಗೋ ಆಗಿ ಅನ್ಯಾಯವಾಗಿ ಸತ್ತೋದ್ನಲ್ಲೋ...!!''
''
ಹ್ಮ್, ಹುಟ್ಟು ಸಾವು ಎರ್ಡೂ ಯಾರ್ ಕೈನಲ್ಲಿದೆ ಮಗಾ??''
ಮೆಲ್ಲನೆಯ ಧ್ವನಿಯಲ್ಲಿ ಟೀ ಅಂಗಡಿಯಿಂದ 'ದೇಹಕೆ ಉಸಿರೇ ಸದಾ ಭಾರ, ಇಲ್ಲಾ ಧಾರಾ.....' ಹಾಡು ಹನಿ ಹನಿ ಯಾಗಿ ತೇಲಿ ಬರುತ್ತಿತ್ತು.. ಇಬ್ಬರ ಕಣ್ಣೂ, ಮತ್ತು ಹಿಂದೆ ಕೂತ ಪೋಲೀಸರ ಕಣ್ಣುಗಳೂ ಒದ್ದೆಯಾಗಿದ್ದವು... ಟೀ ಮುಗಿದಿತ್ತು. ಪೋಲೀಸಿನವರು ಏನೋ ಸಾಧಿಸಿದವರಂತೆ ಅಲ್ಲಿಂದ ಎದ್ದು ಹೋದರು.. ಇವರ ಬೈಕುಗಳೂ ದೊಡ್ಡ ಸದ್ದು ಮಾಡುತ್ತಾ ಅವರದೇ ಬೈಕಿನ ಹೊಗೆಯಲ್ಲಿ ಬೀದಿಯಲ್ಲಿ ಕರಗಿಹೋದವು..

************************
@ Jp..


ಹುಟ್ಟೂ ಅಷ್ಟೇ, ಸಾವೂ ಅಷ್ಟೇ.. ಬದುಕೂ ಅಷ್ಟೇ, ಯಾವ್ದೂ ಯಾರ್ ಕೈನಲ್ಲೂ ಇಲ್ಲಾ.. (http://jpbhat.blogspot.com/2010/12/blog-post_29.html) ಪೂರ್ತಿ ಹಣೆ ಬರಹ ನಂಬಿ ಕೂತ್ರೂ ಕೆಲ್ಸಾ ಆಗಲ್ಲಾ.. ಯಾಕೆಂದ್ರೆ ಮಂತ್ರಕ್ಕೆ ಮಾವಿನಕಾಯಿ ಉದುರಿ ಹೋಗೋ ಕಾಲ ಇದಲ್ಲಾ.. ಹಂಗೆ ಶ್ರಮ ಪಟ್ರೆ ಕೆಲ್ಸ ಖಂಡಿತವಾಗ್ಲೂ ಆಗೇ ಆಗತ್ತೆ! ಎಲ್ಲರ ಜೀವನದಲ್ಲಿ ಅನುಭವ ಬೇಕು, ಅನುಭವ... ಅದು ಸುಮ್ನೆ ಹಂಗೆ ಸಿಗಲ್ಲಾ...ಅನುಭವವನ್ನು ಅನುಭವಿಸಿಯೇ ಪಡೀಬೇಕು. ಎಷ್ಟೇ ಆದ್ರೂ ಹಾಸ್ಟೆಲ್ ಲೈಫ್ ಅನ್ನೋದು ಒಂದು ಸುಂದರ ಘಳಿಗೆ, ಪಾರ್ಟೀಸ್, ನೈಟ್ ಔಟ್ಸ್, ಕ್ಲಾಸ್ ಮಾಸ್ಸ್ ಬಂಕ್ಸ್.. ಟೆಸ್ಟ್ಸೂ, ಇಂಟರ್ನಲ್ಸೂ.., ಎಕ್ಷಾಮ್ಸ್ವಾರಕ್ಕೆ ಒಂದ್ಸಲ ಮಾಡೋ ಸ್ನಾನ, ಅದಾದ್ಮೇಲೆ ಬಿಟ್ಟಿ ಸೆಂಟ್, ಬಿಟ್ಟಿ ಬಟ್ಟೆ, ಆಮೇಲೆ ಗಾಡೀನೂ ಬಿಟ್ಟಿದೇ ಆಗ್ಬೇಕು ಅಲ್ವಾ ಮಗಾ?? ಇವೆಲ್ಲಾ ಮತ್ತೆ ಮತ್ತೆ ಎಲ್ಲಿ ಸಿಗೋಕೆ ಸಾಧ್ಯಾನೋ ಮಗಾ? ಅವೆಲ್ಲ ಬರೀ ನೆನಪು ಮಾತ್ರ. ಅವಾಗ ಊಟ ಸಿಕ್ಕಿಲ್ಲ ಅಂದ್ರೆ ಸಿಗೋ, ಇರೋ ಬರೋ ಪಾತ್ರೆನೇ ಎತ್ತಾಕ್ತಾ ಇದ್ವಿ, ಈಗ ನೋಡು ಹ್ಹಾ ಹ್ಹಾ ಊಟ ಮಾಡೋಕೆ ನಮಗೆ ಟೈಮ್ ಇಲ್ಲ, ಈಗ ಎತ್ತಾಕ್ದ್ರೆ ತಲೆ ಮೇಲೆ ಹೆಂಡ್ತಿ ಹೊಡೀತಾಳೆ..  ಮತ್ತೆ ಹೊಸಾ ಪಾತ್ರೆ ನಾವೇ ತಂದು ಕೊಡ್ಬೇಕು.. ಇವೆಲ್ಲಾ ಬೇಕಾ ಗುರೂ?? ಫಸ್ಟ್ ಫಸ್ಟ್ ನಾವೂ ಆಟ ಆಡಿಸ್ಕೊಂಡು, ನಾವೂ ಬೇರೆಯವರಿಗೆ ಆಟ ಆಡ್ಸಿ, ...... ಛೆ, ಈಗ ಎಲ್ಲಾ ಎಲ್ಲಾ ಬರೀ ನೆನಪು ಮಗಾ... ಆಮೇಲೆ ಸೀನಿಯರ್ಸ್ ಕೂಡ ನಮಗೆ ಕ್ಲೋಸ್ ಫ್ರೆಂಡ್ಸ್ ಆಗ್ತಿದ್ರು.. ನಾವೇ ಅವ್ರ್ ಜೊತೆ ಎಷ್ಟು ಪಾರ್ಟಿ ಮಾಡಿಲ್ಲ ಹೇಳು? ಎಷ್ಟ್ ಟ್ರಿಪ್ ಹೋಗಿಲ್ಲ ಹೇಳು... ಏನೇ ಆದ್ರೂ ಎಲ್ಲರ ಲೈಫ್ನಲ್ಲೂ ಒಂದ್ಸಲ ಆದ್ರೂ ಹಾಸ್ಟೆಲ್ ಲೈಫ್ ಅನುಭವಿಸಲೇ ಬೇಕು ಅಲ್ವಾ ಮಗ?? ಏನಂತೀಯ??''
ಮತ್ತಿಬ್ಬರ ಸ್ನೇಹಿತರ ಮಾತುಗಳು ಫೋನಿನಲ್ಲಿ ನಿರಂತರವಾಗಿ ಸಾಗಿತ್ತು..
ಇಲ್ಲಿ ಎರಡು ಅಗರಬತ್ತಿಗಳ ಹೊಗೆಯ ಸುಳಿಯ ನಡುವೆ ಮತ್ತು ಮಂದವಾದ ಹಣತೆಯ ದೀಪದ ಬೆಳಕಿನಲ್ಲಿ 'ದೇವದಾಸನ' ಮುಗ್ಧ ಮುಖ ಚಿಕ್ಕದಾದ ಮುಗುಳ್ನಗೆ ಹೊತ್ತು ತನಗೂ ಜಗತ್ತಿಗೂ ಇಷ್ಟೇನಾ ಸಂಬಂಧ? ತನಗೆ ಇದ್ದ ಋಣ ಇಷ್ಟೇನಾ ಎಂದು ಸತ್ತ ಮೇಲೆಯೂ, ಫೋಟೋದಲ್ಲಿಯೂ ಕೂಡ ಯೋಚಿಸುತ್ತಿದ್ದವು.
ಊಟ ಬಿಟ್ಟು ತಿಂಗಳೇ ಕಳೆದಿದ್ದುದರಿಂದ ಅಪ್ಪ ಅಮ್ಮನ ಕಣ್ಣುಗಳಲ್ಲಿ ಕಣ್ಣೀರಿನ ಜೊತೆ ರಕ್ತವೂ ಹೆಪ್ಪುಗಟ್ಟಿತ್ತು!

ಇದರ ಹಿಂದಿನ (ಮೊದಲನೇ ಭಾಗವನ್ನು) ನೀವು ಇಲ್ಲಿ ಓದಬಹುದು: