![]() |
Life - Jp Bhat |
ಇದ್ದಕ್ಕಿದ್ದಂಗೆ
ಭಾವುಕರಾಗೋದು ಕೆಲವು ಸಲ ಇದಕ್ಕೇನಾ? ಅಥವಾ ಬೇರೇನೂ ಕಾರಣಗಳು ಇರಬಹುದಾ??
ಮೊದಲ ಸಲ ಶಾಲೆಗೆ
ಸೇರಿದಾಗ ಅಪ್ಪನ ಬಿಡೋಕಾಗದೆ, ಅವನ ಮುಖವನ್ನು ನೋಡಲಾಗದೇ, ಅವನನ್ನು ಇಡೀ ದಿನ ನೋಡಲಾರದೇ ಇರಬೇಕೆಂಬ
ಅನಿವಾರ್ಯ ಭಯದಿಂದ ಅತ್ತಿದ್ದೆ. ಗೆಳೆಯರು ಸಿಕ್ಕರು.
ಗೆಳೆತಿಯರು ಅವರು ತಂದಿದ್ದ ತಿಂಡಿಯನ್ನು ಕೊಟ್ಟರು. ಹುಡುಗರು ಹೊಡೆದಾಟಕ್ಕೆ ಬಂದರು. ಹುಡುಗಿಯರು
ನನ್ನನ್ನು ತಬ್ಬಿಕೊಂಡು ಸಮಾಧಾನ ಮಾಡಿದರು. ಅಂದಿನಿಂದ ಅಪ್ಪ ದೂರವಾದ. ಗೆಳೆಯರು ಹತ್ತಿರ ಬರುವುದನ್ನು
ಬಿಟ್ಟರು. ಗೆಳತಿಯರು ನನ್ನನ್ನು ಬಿಡೋಕಾಗದೆ ಬೇಜಾರು ಮಾಡಿಕೊಂಡರು.
ಹಾಗೇ ದೊಡ್ಡವನಾದೆ.
ಆಮೇಲೆ ಬಂದಿದ್ದೇ
ಹೈ ಸ್ಕೂಲ್.
ಸ್ವಲ್ಪ ಮಟ್ಟಿಗೆ
ಬಣ್ಣಗಳ ಲೋಕ; ಬುದ್ಧಿಯೂ ಸ್ವಲ್ಪ ಬೆಳೆದ ಕಾಲ. ಜೊತೆಗೆ ಕುರುಚಲು ಗಡ್ಡ ಮೀಸೆಯ ದರ್ಪ. ಹುಡುಗನಿಂದ
ಗಂಡಸಾದೆ ಅನ್ನೋ ಭಾವ. ಧ್ವನಿಯಲ್ಲಿ ಏರು ಪೇರು. ಧ್ವನಿ ಪೆಟ್ಟಿಗೆಯಲ್ಲಿ ಬಿರುಕು. ಆಣೆ ಕಟ್ಟಿನಿಂದ
ನೀರು ಹೊರಬಿಟ್ಟ ಹಾಗೆ ಬದುಕು. ಅಲ್ಲಿ ಇಲ್ಲಿ ಖರ್ಚಿಗೆ , ಕೆಟ್ಟ ಚಟಕ್ಕೆ ಒಳ್ಳೆಯ ಅಭ್ಯಾಸಕ್ಕೆ ಅಲ್ಪ
ಸ್ವಲ್ಪ ದುಡ್ಡು ಸಿಗುತ್ತಿದ್ದ ಬಂಗಾರದ ದಿನಗಳವು.
ಅಪ್ಪನ ಕಲರ್ ಮೊಬೈಲ್ ನಲ್ಲಿ ಆಟ ಆಡೋದು, ಹಾಡು ಕೇಳೋದು, ವಾಲ್ ಪೇಪರ್ ಚೇಂಜ್ ಮಾಡೋದು ನನಗೆ
ಹೆಮ್ಮೆಯ ವಿಷಯವಾಗಿತ್ತು. ಆಗಾಗ ಈ ಮೊಬೈಲ್ ನನ್ನ ಹತ್ತಿರವೂ ಎರಡು ಮೂರು ದಿನದ ಮಟ್ಟಿಗೆ ಇರುತ್ತಿತ್ತು;
ಅಪ್ಪ ನನ್ನನ್ನು ನೋಡಲು ಬಂದಾಗ ಅಥವಾ ನಾನೇ ಊರಿಗೆ ಹೋದಾಗ ಈ ಮೊಬೈಲ್ ಮತ್ತೆ ಅಪ್ಪಂದು.
ಆಗ ಅಪ್ಪ ಕೇವಲ ದುಡ್ಡು
ಕೊಡುವುದಕ್ಕೆ ಮಾತ್ರ ನನಗೆ ಬೇಕಾದ. ಬೇಜಾರಾದಾಗ, ಅಳಲೇ ಬೇಕು ಎನಿಸಿದಾಗ, ತಬ್ಬಿ ಸಮಾಧಾನ ಮಾಡಲು
ಆ ಶಾಲೆಯಲ್ಲಿ ಇರುವಂಥಹ ಹುಡುಗಿಯರು ಇಲ್ಲಿ ಇರದೇ ಇದ್ದಾಗ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ದೂರವಿರುತ್ತಿದ್ದ
ಕಾರಣ ಯಾವತ್ತಿನಂತೆಯೇ ಒಬ್ಬನೇ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದೆ.
ಅಮ್ಮ ಫೋನ್ ಮಾಡುತ್ತಿದ್ದಳು.
ಅಪ್ಪ ದುಡ್ಡು ಹಾಕುತ್ತಿದ್ದ. ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಆಕಾಶ ನೋಡಿಕೊಂಡು ಒಬ್ಬನೇ ಧೋ
ಎಂದು ಅಳುತ್ತಿದ್ದೆ.
ಅಮ್ಮ ಊಟ ಮಾಡು ಮಗನೇ
ಎನ್ನುತ್ತಿದ್ದಳು. ಅಪ್ಪ ಮಾರ್ಕ್ಸ್ ಶೀಟ್ ಗೆ ಸಹಿ ಹಾಕುತ್ತಿದ್ದ. ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಒಬ್ಬನೇ ಬಸ್ಸಿನ ಕಿಟಕಿಯ
ಪಕ್ಕ ಕೂತು ಕಣ್ಣಲ್ಲೇ ನೀರಾಗುತ್ತಿದ್ದೆ.
ಮತ್ತೆ ಧುತ್ತನೇ
ಎದುರಾದದ್ದು ಪೂರ್ತಿ ಬಣ್ಣಗಳ ಲೋಕ. ಎಲ್ಲೆಲ್ಲೂ ಚಿಟ್ಟೆಗಳ ಸಂಗೀತ. ಇದೇನಾ ಸ್ವರ್ಗ? ಕಾಲೇಜ್ ಲೈಫ್
ಇಷ್ಟು ಸುಂದರಾನಾ? ಇನ್ನು ಡಿಗ್ರಿ ಕಾಲೇಜ್ ಹೆಂಗಿರಬಹುದಪ್ಪಾ ಎಂಬ ಕಲ್ಪನೆಯಲ್ಲೇ ಅರ್ಧ ಈ ಚಿಕ್ಕ
ಕಾಲೇಜು ಮುಗಿದುಹೋಯ್ತು. ನನಗೆ ಈಗ ನನ್ನದೇ ಸ್ವಂತ ಮೊಬೈಲ್ ಬಂದಿತ್ತು. ಹುಡುಗಿಯರ ನಂಬರ್ ನಿಧಾನವಾಗಿ
ಸೇವ್ ಆಗುತ್ತಿತ್ತು ; ಟೆಕ್ಸ್ಟ್ ಮೆಸೇಜ್ ಗಳು ಬೇಕಾಬಿಟ್ಟಿ ಹರಿದಾಡುತ್ತಿದ್ದವು.
ಅಪ್ಪ ಅಮ್ಮ ಇಬ್ಬರೂ
ಫೋನ್ ಮಾಡುತ್ತಿದ್ದರು. ತಮ್ಮ ಮತ್ತೂ ಚೆನ್ನಾಗಿ ಓದುತ್ತಿದ್ದ. ನಾನು ರೂಮಿನಲ್ಲಿ ಕತ್ತಲೆಯಲ್ಲಿ ಒಬ್ಬನೇ
ಕೂತು ಅಳುತ್ತಿದ್ದೆ ಮತ್ತು ಆಗಾಗ ನಗುತ್ತಿದ್ದೆ.
ಹಾಯ್ ಫೋಕ್ಸ್ ಡ್ಯೂಡ್
; ದಿಸ್ ಈಸ್ ರಿಯಲ್ಲಿ ಹೆವೆನ್ ; ಏನ್ ಕಲರ್ಸೊ, ಆ ಚೂಡಿ ನೋಡೋ, ಜೀನ್ಸು ಸ್ಕರ್ಟು ನೋಡೋ - ಆಹ್
; ಡಿಗ್ರಿ -
ಕೈ ನಲ್ಲಿ ಮೊದಲಿಗಿಂತಾ
ಹೆಚ್ಚು ದುಡ್ಡು, ಮೊಬೈಲ್, ದೊಡ್ಡ ಪಟ್ಟಣ; ಹೆಂಗೆ ಅಷ್ಟೂ ದಿನಗಳು ವ್ಯಥಾ ಪೋಲಿಯಾಗಿ ಕಳೆದು ಹೋದವು?
ನಿದ್ದೆಯಲ್ಲೇ ಕಳೆದು ಬಿಟ್ಟೆನಾ?
ಅಮ್ಮ ಅಪ್ಪ ಫೋನ್
ಮಾಡಿದ್ದರಾ? ತಮ್ಮ ಚೆನ್ನಾಗಿ ಓದುತ್ತಿದ್ದನಾ? ನಾನು ಅಳುತ್ತಿದ್ದೆನಾ, ನಗು , ಸಿನಿಮಾ , ಹುಡುಗಿ,
ಕುಡಿತ , ಸಿಗರೇಟು ? ಉಹುಂ , ಒಂದೂ ಗೊತ್ತಿಲ್ಲ. ನೆನಪಿಲ್ಲಾ... ನೆನೆಸಿಕೊಳ್ಳಲೂ ಇಷ್ಟವಿಲ್ಲ...
ಹರುಕು ಜೀನ್ಸ್ ಉದ್ದ ಗಡ್ಡ ಒಂದು ದೊಗಲೆ ಅಂಗಿ ಹಸಿವಾದಾಗ ಒಂದು ಹಿಡಿ ಅನ್ನ ಅದಕ್ಕೆ ಒಂದಷ್ಟು ತಿಳಿ
ಸಾರು ಮೊಸರು, ಕೇಳಲು ನನ್ನದೇ ಆದ ಒಂದಿಷ್ಟು ಹಾಡುಗಳು; ಜೀವ ಸೋತಾಗ ತಲೆ ಕೊಟ್ಟು ಮಲಗಲು ಒಂದು ಚಿಕ್ಕ
ಸೂರು. ಇಷ್ಟೇ ನನಗೆ ನೆನಪು ಇರುವಂತಹ ಕಲೆಗಳು.
ನನಗೇ ಅಂತಾ ಮಾಡಿಕೊಟ್ಟ
ಸೂರಿಗೆ ಹೋಗುತ್ತಿದ್ದೆನಾ? ಉಹೂಂ ಅದೂ ಗೊತ್ತಿಲ್ಲ. ಏನೇ ಮಾಡಿಕೊಂಡರೂ ಇವತ್ತಿನ ತನಕ ಜೀವ ಗಟ್ಟಿಯಾಗಿ
ಹಿಡಿದುಕೊಂಡು ಬದುಕಿದ್ದೇನೆ ಅಷ್ಟೇ.
ಮೊದಲಿಂದಾನೂ ಹಳ್ಳಿ
ಪೇಟೆ ಎರಡರಲ್ಲೂ ಬೆಳೆದ ನನಗೆ ; ಎರಡರ ವಾತಾವರಣ ಎರಡೂ ಕಡೆಯ ನಡೆ ನುಡಿ; ಒಳಗು ಹೊರಗು ಗೊತ್ತಿರುವುದರಿಂದ
ನನಗೆ ಪೇಟೆ ಜೀವನ ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದರೆ ಇದು ಹಳೆಯ ಪೇಟೆಗಿಂತ ಕೊಂಚ ದೊಡ್ದದಾದುದರಿಂದ
ಇಲ್ಲಿಯ ಜನರ ವೇಷ ಭೂಷಣ, ಹಾವ ಭಾವ, ಆಹಾರ ಪಧ್ಧತಿ, ಜೀವನವನ್ನು ಅನುಭವಿಸುವ ಅನುಭೋಗಿಸುವ, ಅದನ್ನು
ಬದುಕುವ ರೀತಿಯ ಜೀವನ ಶೈಲಿಗೆ ಅಚ್ಚರಿ ಪಟ್ಟಿದ್ದೆ.
ದಿನಗಳು ಹೀಗೆಯೇ
ಸಾಗುತ್ತಿತ್ತು.
ಆಮೆಲಿಂದಾ ಬಂದಿದ್ದೇ
ಹೊಟ್ಟೆಗೆ ಬಟ್ಟೆಗೆ ದಾರಿ ಕಂಡುಕೊಳ್ಳುವ ಯೋಚನೆ ಮತ್ತು ಯೋಜನೆ. ರೆಸ್ಯೂಮ್ ಮಾಡಿ ಪ್ರಿಂಟ್ ಔಟ್ ತೆಗೆದು
ಸಿಕ್ಕ ಮಿಕ್ಕ ವೆಬ್ಸೈಟ್ ಗಳಿಗೆಲ್ಲಾ ಅಪ್ಲೋಡ್ ಮಾಡಿಯಾಯ್ತು. ಬರೀ ಸಿಂಗಲ್ಲೋ ಡಬಲ್ಲೋ ಡಿಗ್ರಿಯಿದ್ದರೆ
ಸಾಲಲ್ಲಾ ಅಂತಾ ಬೇರೆ ಹಾಳು ಮೂಳು ಅಡಿಷನಲ್ ಕೋರ್ಸ್ ಕೂಡ ಮಾಡಿದ್ದಾಯ್ತು, ಲಕ್ಷಗಟ್ಟಲೆ ಸುರಿದಿದ್ದೂ
ಆಯ್ತು.
ಬಂಡವಾಳ ಹೋಯ್ತು,
ಲಾಭಾ ?!
ಉಹುಂ , ಅವನ್ನೆಲ್ಲಾ
ಕೇಳಬಾರ್ದು , ನಮ್ ಕನ್ನಡ ಕಮರ್ಷಿಯಲ್ ಪಿಚ್ಚರ್ ಥರಾ, ಕಥೆಗೂ ಲೋಕೇಶನ್ ಗೂ, ಹೀರೋ ಹೀರೋಯಿನ್ ಗೂ
ಸಂಬಂಧಾ ಇದೆ ಇಲ್ಲಾ ಅನ್ನೋ ತರಹ....
ಆಹಾ ಜೀವನದ ಮೊದಲ
ಜಾಬ್ ಅನ್ನೋ ಕೆಲಸ ಸಿಕ್ತು. ಹೇಳಿಕೊಳ್ಳೋಕೆ ನನ್ನ ಹೆಸರೂ ಇಲ್ಲದ, ಕನಿಷ್ಠ ನನ್ನ ಮುಖವನ್ನು ಅಂಟಿಸಿ
ಅದರ ಕೆಳಗೆ ನನ್ನ ಹೆಸರನ್ನು ಕೈನಲ್ಲಿ ಬರೆದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕತ್ತಿನ ಪಟ್ಟಿಗೆ
ಹಾಕಿಕೊಳ್ಳೋ ದಾರವೂ ಇಲ್ಲದ ಕಂಪನಿಯಲ್ಲಿ ಕೆಲಸ, ಸಂಬಳ ಕೈಗೆ , ಹಾರ್ಡ್ ಕ್ಯಾಶ್. ಅರ್ಧ ಮಾತ್ರವೇ. ಮಿಕ್ಕಿದ ಅರ್ಧ ಸಂಬಳ ಮತ್ತೆ ಎರಡು ತಿಂಗಳಾದಮೇಲೆ, ಆ ತಿಂಗಳ
ಸಂಬಳವೂ ಮತ್ತೆ ಮುಂದಿನ ತಿಂಗಳಿಗೆ. ಕೆಲಸ ಮಾತ್ರ ದಿನಕ್ಕೆ ಬರೋಬ್ಬರಿ ಹದಿಮೂರು ಹದಿನಾಲ್ಕು ಘಂಟೆಗಳು
ಅಷ್ಟೇ.
ದಿನಕ್ಕೆ ಎಂಟರಿಂದ
ಹತ್ತು BMTC ಬಸ್ ಗಳನ್ನು ಹತ್ತಿ ಇಳಿದು, ಪ್ರಯಾಣಿಸಿ ಆಫೀಸ್ ಅನ್ನೋ ನರಕಕ್ಕೆ ಹೋಗಬೇಕಾದ ಸ್ಥಿತಿ!!
ಆಮೇಲಾಮೇಲೆ ಜೀವನ
ನನಗೇ ಆಶ್ಚರ್ಯವಾಗುವಂತೆ ಬದಲಾಯ್ತು, ಸಣ್ಣ ಬೋರ್ಡೆ ಇಲ್ಲದ ಕಂಪನಿಯಿಂದ ಎಂ ಎನ್ ಸೀ ಗಳೆಂದು ಕರೆಸಿಕೊಳ್ಳುವ
ಊಟಕ್ಕೂ ನಿದ್ರೆಗೂ ಸಮಯವಿಲ್ಲದ ಸಮಯ ಕೊಡದ ಗಾಜಿನ, ಹವಾನಿಯಂತ್ರಿತ ನರಕದೊಳಕ್ಕೆ ಜೀವನ ಶುರುವಾಯ್ತು;
ನಾನು ಬಂದು ಹೋಗಿ ಮಾಡುತ್ತಿದ್ದ BMTC ಬಸ್ಸುಗಳು ಪಾಪ ನನ್ನ ಆಫೀಸಿನ ಏಸೀ ಕಾರಿನ ಧೂಳಿನ ಹಿಂದೆಯೇ
ಮರೀಚಿಕೆಯಾಗಿ ಬಿಡುತ್ತಿದ್ದವು; ನಾನು ಬಸ್ಸುಗಳಿಗೆ ಹತ್ತಿ ಯಾವುದೋ ಕಾಲವಾಗುತ್ತಾ ಬಂದಿತ್ತು.
ಹೈ ಫೈ ಐ ಡೀ ಕಾರ್ಡು,
ಸ್ವೈಪ್ ಮಾಡದೇ ಒಳಗಡೆ ಹೋಗುವ ಹಾಗಿಲ್ಲ, ಮೊದಲ ದಿನ ಕಾರ್ಡ್ ಕೈಗೆ ಬಂದಾಗ ಆಶ್ಚರ್ಯ ಪಟ್ಟಿದ್ದೆ,
ನನಗೂ ಇಂತಹ ಸೌಭಾಗ್ಯ ಬಂತಲ್ಲ ಎಂದು. ಸಂಬಳಕ್ಕೆ ಹಳೆಯ ಕಂಪನಿಯ ತರಹ ಕೇಳುವ ಪ್ರಮೇಯವೂ ಇಲ್ಲ, ನಿಗದಿತ
ದಿನಾಂಕಕ್ಕೆ ನಮ್ಮದೇ ಆದ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು, ದುಡ್ಡು ತೆಗೆಯುವ ಪ್ರಸಂಗವೂ ಇಲ್ಲ,
ಮನೆಯಲ್ಲೇ ನೆಟ್ ಬ್ಯಾಂಕಿಂಗ್ ವ್ಯವಹಾರ ಶುರು ಆಯ್ತು; ಅಂಗಡಿಗೆ ಹೋದರೂ ಕಾರ್ಡನ್ನು ನೀಡಿ ಸಹಿಯನ್ನು
ಮಾಡಿ ಅಭ್ಯಾಸ ಆಯ್ತು. .
ಕ್ರೆಡಿಟ್ಟು , ಡೆಬಿಟ್ಟು
, ಫ್ಯೂಯೆಲ್ಲು, ಡಿನ್ನರ್ ಎಲ್ಲಾ ಕಾರ್ಡುಗಳನ್ನು ತೆಗೆದುಕೊಂಡು ಕೊಟ್ಟು ಕ್ಲೋಸ್ ಮಾಡಿಸಿ ಎಲ್ಲಾ
ಆಯ್ತು..
ಮೊದ ಮೊದಲು ಹಳೆ
ಕಂಪನಿಯಲ್ಲಿದ್ದ ಕಾಲದಲ್ಲಿ ಬರೀ ಕನಸೇ ಆಗಿದ್ದ ದೊಡ್ಡ ಫೋನುಗಳು, ಟ್ಯಾಬ್ಲೆಟ್ಟುಗಳು, ಒಳ್ಳೆಯ ಬಟ್ಟೆ
ಎಲ್ಲವೂ ಈಗ ಬೇಜಾರು, ಐ ಫೋನ್ ಕೂಡ ಮನೆಯಲ್ಲಿ ಎಲ್ಲೋ ಬಿದ್ದಿರುತ್ತದೆ. ಲಿವೈಸ್, ಅಡಿಡಾಸ್ , ನೈಕಿ,
ರೀಬಾಕ್, ಲೂಯಿ ಫಿಲಿಪ್, ಪ್ಯಾನ್ ಅಮೇರಿಕಾ, ಜಾನ್ಸ್
ಪ್ಲೇಯರ್, ಫ್ಲೈಯಿಂಗ್ ಮಶೀನ್ ಗಳು ಕೂಡ ಬೇಜಾರು.
ಚಿಕ್ಕವನಾಗಿದ್ದಾಗ ಅಪ್ಪ ಹೊಲಿಸಿ ಕೊಡುತ್ತಿದ್ದ ನೀಲಿ ಬಿಳಿಯ ಪ್ಯಾಂಟು ಅದರ ಮೇಲೊಂದು ಮ್ಯಾಚಿಂಗೇ
ಆಗದ ಬಣ್ಣದ ಶರ್ಟು, ಅದೇ ಈಗ ಪ್ರೀತಿಯಾಗಿ ಆಪ್ತವೆನಿಸುತ್ತದೆ. ಅದರನ್ನು ಹಾಕಿಕೊಂಡರೆ ಕೆಲವರಿಗೆ
ಅದು ಈಗ ಹುಚ್ಚು, ಅಥವಾ ಹೊಸಾ ಫ್ಯಾಶನ್!
ಅದಾದ ಮೇಲೆ ಎಷ್ಟೋ
ಕಂಪನಿಗಳು ಬದಲಾದವು; ಎಷ್ಟೋ ಜನರ ಪರಿಚಯವಾಯ್ತು; ಮೊದಲು ಖಾತೆ ತೆರೆದ ಬ್ಯಾಂಕ್ ಅಕೌಂಟ್ ಎಲ್ಲೋ ಸತ್ತು
ಹೋಗಿತ್ತು, ಅದಕ್ಕೂ ನೆಟ್ ಬ್ಯಾಂಕಿಂಗ್ ಬಂದು ಜೀವ ಬಂತು, ಈಗ ಇರೋ ಕಾರ್ಡ್ ಗಳಿಗೆ ಬೇರೆ ಬೇರೆ ಕಡೆ
ಫೋನಿನ ಪಾಸ್ಬುಕ್ಕಲ್ಲೋ, NFC ಯಲ್ಲೋ ಹಾಕಿಡಬೇಕಾದ ಪರಿಸ್ಥಿತಿ.
ಇಷ್ಟಪಟ್ಟು ಮಾತನಾಡುತ್ತಿದ್ದ
ಗೆಳೆಯರೆಲ್ಲಾ ದೂರವಾದರು, ಈ ಕೆಲಸದ ಒತ್ತಡದ ಮಧ್ಯೆ ಬರೀ ಫೇಸ್ಬುಕ್ ಚ್ಯಾಟ್ ಗಳಿಗಷ್ಟೇ ಸೀಮಿತವಾದರು,
ಅವರ ಮುಖಗಳೆಲ್ಲಾ ಮರೆಯುತ್ತ ಬಂದಿದ್ದವು. ಇವನ್ನೆಲ್ಲಾ ನೆನೆಸಿಕೊಂಡರೆ ಹಳೆಯ ಆ ಕಂಪನಿ ಆ ಸುಖದ ದಿನಗಳೇ
ಬೇಕೆನಿಸುತ್ತವೆ.
ಊರಿಗೆ ಹೋಗಿ ಬರುವುದೂ
ಕಡಿಮೆಯಾಗುತ್ತಾ ಬಂದಿತ್ತು, ಅಮ್ಮನ ಅಡುಗೆಯ ರುಚಿ ಇಲ್ಲದೆ ನಾಲಿಗೆಯೂ ಸತ್ತಿತ್ತು ; ಹಬ್ಬ ಹರಿದಿನಗಳು
ಆಫೀಸಿನ ಇಂಗ್ಲೀಶ್ ಕ್ಯಾಲೆಂಡರಿನಲ್ಲಿ ಮರೆಯಾಗಿದ್ದವು. ಸೋಶಿಯಲ್ ಸೈಟ್ ನಲ್ಲಿ ಹಬ್ಬದ ಬಗ್ಗೆ ಬಂದಾಗ
ಕಣ್ಣುಗಳು ಮಾತ್ರ ಅಳುತ್ತಿದ್ದವು, ಹೃದಯ ಮಾತ್ರ ಗಟ್ಟಿ ಗಟ್ಟಿ. ಹೃದಯವೂ ನೀರಾದರೆ ಬದುಕುವ ಶಕ್ತಿ
ಜೀವಕ್ಕೆಲ್ಲಿತ್ತು?
ಇಷ್ಟೆಲ್ಲಾ ಈಗ ಅರ್ಧ
ಮರ್ಧ ನೆನಪಾಗಲು ಕಾರಣ ಏನೋ ಕ್ಲೀನ್ ಮಾಡಿ ಏನೋ ಹುಡುಕುತ್ತಿದ್ದೆ, ಆಗ ಹಳೆಯ ವ್ಯಾಲೆಟ್ ನಲ್ಲಿ ಐನೂರರ
ಒಂದು ನೋಟು, ನೂರರ ಮೂರು, ಐವತ್ತರ ಎರಡು, ಇಪ್ಪತ್ತರ ನಾಲ್ಕು, ಐದರ ಎರಡು, ಹತ್ತರ ಒಂದು ನೋಟುಗಳು
ಮುದುಡಿ ಈಗಲೋ ಆಗಲೋ ಎಂದು ಅಳುತ್ತಾ ನಡುಗುತ್ತಾ ಕೂತಿವೆ, ಯಾವ ಕಾಲದಲ್ಲಿ ಯಾವಾಗ ನಾನೇ ಇಟ್ಟಿದ್ದೆನೋ
ನನಗಂತೂ ನೆನಪಿಲ್ಲ; ಅದನ್ನು ನೋಡಿ ನನ್ನ ಕಣ್ಣೆಲ್ಲಾ ಫಳ ಫಳ ಹೊಳೆಯಲು ಶುರು ಮಾಡಿಬಿಟ್ಟಿತ್ತು!!
ಏನೇ ಮಾಡಿದರೂ ಎಷ್ಟೇ
ದುಡಿದರೂ ಆ ದುಡ್ಡಿಗೆ ಸಮನಾದ ದುಡ್ಡಿಲ್ಲ, ಅದೇ ಪ್ರೀತಿಯಲ್ಲಿ ಅದನ್ನು ಖರ್ಚು ಮಾಡಲು ಮನಸೇ ಬರುತ್ತಿಲ್ಲ,
ಆದರೂ ಅದರಿಂದ ನೂರೈವತ್ತು ರೂಪಾಯಿ ತೆಗೆದು ಈಗಷ್ಟೇ ತಣ್ಣಗೆ ಐಸ್ ಕ್ರೀಂ ತಿಂದು ಬಂದೆ :)
ದುಡ್ಡು ತಣ್ಣಗೆ
ಐಬ್ಯಾಕೊ ದಲ್ಲಿನ ಕ್ಯಾಶ್ ಬಾಕ್ಸ್ ನಲ್ಲಿ ನಗುತ್ತಿದ್ದರೆ ಯಾವಾಗಲೂ ಸಪ್ಪೆಯಿಂದಿರುತ್ತಿದ್ದ ನನ್ನ
ಹೃದಯ ಮತ್ತು ಮುಖದಲ್ಲಿ ಏನೋ ಗೆದ್ದ, ಸಾಧಿಸಿಧ ಧನ್ಯತಾಭಾವದ ಮುಗುಳ್ನಗೆ ತೇಲುತ್ತಿತ್ತು.
11 comments:
Really nice... Gud job :) :D
ಇಲ್ಲಿ ಪ್ರತಿ ಸಾಲೂ ನಮ್ಮ ಯಾವುದೋ ನೆನಪುಗಳನ್ನು ಮೀಟುವಂತಿದೆ.
ಬಹಳ ಸುಲಲಿತವಾಗಿ ಹರಿದು ಬಂದ ನೆನಪುಗಳು. ಚೆನ್ನಾಗಿದೆ :)
tumbaa chenda bareeteera...FBninda illige bande
:-)
ms
Simply owesom.... :-)
Simply owesom.... :-)
Tumba meaningful ag iddu...namma bhavanegalu nimma baravanigeyalli
Vah vah... simply superb... nice articulation of feelings.. at one stage it remembered the lines.. "iruvudellava bittu iradudeDe tuDivude jeevana... "
Nice bro, u r inspiration
Nice bro, u r inspiration
ಓದುವಾಗ ಕೊಡುವ ಆಪ್ತ ಭಾವಕ್ಕೆ ಹೆಸರಿಲ್ಲ..😊😊😍
Post a Comment