Tuesday, March 04, 2014

ಏನೇ ಆದ್ರೂ, ಎಷ್ಟೇ ಬೈದ್ರೂ ಅಪ್ಪಾ ಅಮ್ಮಾ ಅಲ್ವಾ? ಅವ್ರು ಆವ್ರ್ ಮಕ್ಳಿಗೆ ಬೈದೆ ಇನ್ಯಾರ್ಗೆ ಬೈತಾರೆ?

Jepee Bhat


ಟಿಕ್ ಟಿಕ್ ಗಡಿಯಾರದಲ್ಲಿ ಮಧ್ಯಾಹ್ನ ನಾಲ್ಕು ಗಂಟೆ ಸಮಯ.

''ಭುಲಾ ದೇನಾ ಮುಝೆ, ಏ ಅಲ್ವಿದಾ ತುಝೆ, ತುಝೆ ಜೀನಾ ಹೇ ಮೇರೆ ಬಿನಾ.......!!''

ನನ್ ಫೋನ್ ಈ ಥರಾ ಹಾಡಿ ನನ್ ಕರೀತು. ನಾನ್ ಯಾರಪ್ಪಾ ಅಂತಾ ಓಡೋಡಿ ಬಂದು ನೋಡಿದ್ರೆ ಅರ್ರೆ ನನ್ ಆಫೀಸ್ ಕಲೀಗ್, ಇವ್ನ್ ಯಾಕಪ್ಪಾ ಇಷ್ಟು ಹೊತ್ನಲ್ಲಿ ಫೋನ್ ಮಾಡ್ತಾ ಇದಾನೆ ಅಂದ್ಕೊಂಡೆ. ಥೋ ಅಂದ್ಕೊಂಡೇ ಮುಖಾ ಸಿಂಡರ್ಸ್ಕೊಂಡು ಫೋನ್ ನಾ ಅಟೆಂಡ್ ಮಾಡ್ದೆ.
''ಎಲ್ಲಿದೀರಾ ಅಂದಾ!''
ನಾನು ಮನೆಯಲ್ಲಿ ಅಂದೆ.
''ಏನ್ ಆಫೀಸ್ ಗೆ ಬರ್ತಾ ಇಲ್ವಾ ಇವತ್ತು, ಕ್ಯಾಬ್ ಬಂತಾ ಅಂದಾ?''
ಕ್ಯಾಬ್ ಇನ್ನೂ ಬಂದಿಲ್ಲಾ,ಆಫೀಸ್ ಗೆ  ಬರೋಕೆ ಅಂತಾನೆ ನಾನೂ ಹೊರಡ್ತಾ ಇದ್ದೀನಿ ಕಣಪ್ಪಾ ಅಂದೆ. ನಂದು ಒಂದು ಕೈಯಲ್ಲಿ ಎರಡೇ ಬಟನ್ ಹಾಕಿರೋ ಶರ್ಟ್, ಮತ್ತೊಂದು ಕೈನಲ್ಲಿ ಇವ್ನ್ ಹತ್ರಾ ಮಾತಾಡ್ತಾ ಇರೋ ಮೊಬೈಲ್ , ಕೆಳಗಡೆ ತನಗೆ ಸಂಬಂಧವೇ ಇಲ್ಲದಂತೆ ಬೆಲ್ಟ್ ಹಾಕ್ದೇ ಸೊಂಟದಿಂದ ಜಾರು ಬಂಡಿ ಆಡ್ತಾ ಇರೋ ಪ್ಯಾಂಟು ಇವಿಷ್ಟೂ ಹ್ಯೆಂಗೋ ಬ್ಯಾಲೆನ್ಸ್ ಮಾಡಿ ಹೇಳಪ್ಪಾ ಬೇಗ ಬೇಗ ಅಂದೆ.
ಅವ್ನು ಫುಲ್ ಉಸಿರು ತೆಗೀತಾ ಬನ್ನಿ ಬನ್ನಿ ತುಂಬಾ ಮಾತು ಆಡೋದಿದೆ, ಮನೆಯಲ್ಲಿ ಫುಲ್ ಜಗ್ಳಾ ಮಾಡ್ಕೊಂಡ್ ಬಿಟ್ಟೆ, ಈಗ ಏನು ಮಾಡ್ಬೇಕು ಅಂತಾನೇ ಗೊತ್ತಾಗ್ತಾ ಇಲ್ಲಾ, ಬನ್ನಿ ಬನ್ನಿ ಅಂತಾ ಹೇಳೋದೊಂದೇ ಮಾಡಿ ಫೋನ್ ಕಟ್ಟೇ ಮಾಡ್ಬುಟ್ಟ ಆಸಾಮಿ, ನಾನ್ ಮತ್ತೆ ಮಾಡಿದ್ರೆ ನಾಟ್ ರೀಚೆಬಲ್!

ಇದೇನಪ್ಪಾ ಅಂದ್ಕೊಂಡೇ ಮನೆಯಿಂದಾ ಹೊರ್ಗಡೆ ಹೋಗಿ ನಾನೂ ಕ್ಯಾಬ್ ಬರೋ ದಾರೀನೇ ನೋಡ್ತಾ ನಿಂತೆ.
ಅಂತೂ ಇಂತೂ ತಲೆ ತೂಗ್ತಾ, ಹಾರ್ನ್ ಮಾಡ್ಕೊಂಡು, ಬಸ್ರಿ ಹೆಂಗ್ಸಿನ್ ಥರಾ ಹೊಟ್ಟೆ ಬಿಟ್ಕೊಂಡು ನನ್ ಕ್ಯಾಬ್ ಬಂತು.
ಒಳ್ಗಡೆ ಹೋಗಿ ಕೂತೆ. ಜೋರಾಗಿ ಎಫ್.ಎಮ್ ನಲ್ಲಿ ಯಾವ್ದೋ ಕನ್ನಡದ ಹೊಸಾ ತಮ್ಟೆ ಹಾಡು ಕಿರಚ್ತಾ ಇತ್ತು. ಡ್ರೈವರ್ ನಾನು ಹತ್ತಿದ್ ತಕ್ಷಣಾ ಒಂದು ಒಲ್ಲದ ಮನಸಿನ, ಆದ್ರೆ ಪ್ರೀತಿ ತುಂಬಿದ ಸ್ಮೈಲ್ ಕೊಟ್ಟಾ! ನಾನು ಹ್ಮ್ಮ್ ಅಂದೆ. ಮತ್ತೆ ಸುಮ್ನಿರ್ದೆ ಸಾರ್ ಊಟಾ ಆಯ್ತಾ? ಏನ್ ತಿಂದ್ರಿ? ಚಿಕ್ಕನ್ನೋ ಮಟ್ಟನ್ನೋ ಅಂದಾ. ನಾನು ಮುಖಾ ಊದಿಸ್ಕೊಂಡು ಅನ್ನಾ ಸಾಂಬಾರ್ ಅಂದೆ, ಜೊತೆಗೆ ಅವತ್ತೇ ಹೇಳ್ಲಿಲ್ವೆಂಡ್ರೀ ನಾನು ಪ್ಯೂರ್ ಪಕ್ಕಾ ವೆಜ್ಜು ಅಂತಾ ರೇಗ್ದೆ. ಅವ್ನು ಮತ್ತೆ ಅಷ್ಟಕ್ಕೇ ಸುಮ್ನಿರ್ದೆ ಏನೇನೋ ಕೇಳ್ತಾ ಇದ್ದಾ, ನಂಗೆ ಅದ್ಯಾವ್ದೂ ತಲೆಗೆ ಹೋಗ್ತಾನೇ ಇರ್ಲಿಲ್ಲಾ..
ಇವ್ನು ಯಾಕ್ ಹಂಗ್ ಫೋನ್ ಕಟ್ ಮಾಡ್ದಾ? ಏನ್ ಜಗಳಾ ಆಗಿರ್ಬಹ್ದು? ಏನ್ ಕಥೆ? ಅದ್ರ್ ಸುತ್ತಾನೇ ನನ್ ತಲೆ ತಿರಗ್ತಾ ಇತ್ತು..!

ಅಂತೂ ಇಂತೂ ಅವ್ನು ಬಂದಾ., ದಿನಾ ಮಾತಾಡ್ಕೊಂಡು ಮಗಾ ಮಚ್ಚಿ ಅಂತಾ ರೇಗಿಸ್ತಾ ಮಾತಾಡ್ತಾ ಇರೋನು ಅರ್ರೆ ಇವತ್ತು ಯಾಕೆ ಸುಮ್ನೆ ಕೂತಿದಾನೆ? ಏನು ಅಂಥದ್ದು ಆಗಿರ್ಬಹುದು, ಸುಮ್ನೆ ಇರ್ಲಿ, ಅವ್ನಿಗೆ ಅವ್ನ್ ಸ್ಪೇಸ್ ಕೊಡೋಣಾ, ಹೇಳ್ಬೇಕು ಅನ್ಸಿದ್ರೆ ಅವ್ನಾಗ್ ಅವ್ನೇ ಹೇಳ್ತಾನೆ, ಫೋನ್ ನಲ್ ಬೇರೆ ಮಾತಾಡ್ಬೇಕು ಅಂದಿದಾನೆ, ಹೇಳೇ ಹೇಳ್ತಾನೆ ಅಂತಾ ನನ್ ತಲೆಲೀ ಕೊರೀತಾ ಇರೋ ಹುಳಕ್ಕೆ ಹೇಳಿ ಸುಮ್ನೆ ಕೂತೆ.
ಅಷ್ಟ್ರಲ್ಲಿ ಮಧ್ಯೆ ಮಧ್ಯೆ ನಾಲ್ಕೈದು ಹೆವೀ ಸಿಗ್ನಲ್, ಮತ್ತೆರ್ಡು ತಮಟೆ ಹಾಡು, ಒಂದೆರ್ಡು ಪ್ರೇಮ ಗೀತೆಗಳು ಬಂದು ಹೋದ್ವು. ಡ್ರೈವರ್ ಸೂಪರ್ ನಾ ಬಾಯಲ್ ಹಾಕ್ಕೊಂಡು ಅದ್ನಾ ಮತ್ತೆ ಕಿರಚ್ತಾ ಇರೋ ಹಾಡನ್ನಾ ಎರಡನ್ನೂ ಎಂಜಾಯ್ ಮಾಡ್ಕೊಂಡು ಗಾಡಿ ಓಡಿಸ್ತಾ ಇದ್ದಾ.
ನಾನು ಈ ಪಾರ್ಟಿ ಯಾಕೆ ಇನ್ನೂ ಸುಮ್ನೆ ಕೂತಿದೆ ಅಂತಾ ಲೆಕ್ಕಾಚಾರಾ ಹಾಕ್ತಾ ನನ್ ಸಹಜ ಕುತೂಹಲದ ಪ್ರಾಣಿಗೆ ಸುಮ್ನೆ ಇರು ಸುಮ್ನೆ ಇರು ಅಂತಾ ಗದರಿಸಿ ಹೇಳೋ ಪ್ರಯತ್ನಾ ಮಾಡ್ತಾ ಇದ್ದೆ.

ಯಾವಾಗಾ ಮಲ್ಯಾ ಸಿಗ್ನಲ್ ದಾಟಿ, ರಿಚ್ಮಂಡ್ ಸಿಗ್ನಲ್ ಬಂತೋ ಪಾಪಾ ಅವ್ನು ಅಳೋಕೆ ಶುರು ಮಾಡ್ಬಿಟ್ಟ.
ನಾನು ಯಾಕಪ್ಪಾ ಏನಾಯ್ತು, ಸಮಾಧಾನಾ ಮಾಡ್ಕೋ ಅಂದ್ರೂ ಕೇಳ್ತಾ ಇಲ್ಲಾ, ಮತ್ತೂ ಜೋರಾಗಿ ಅಳೋದ್ ಒಂದೇ ಮಾಡ್ತಾ ಇದಾನೆ.
ಥತ್ತೆರೀ, ಏನ್ ಮಾಡೋದಪ್ಪಾ ಅಂದ್ಕೊಂಡು ಒನ್ ಸೆಕೆಂಡ್ ಬ್ಲ್ಯಾಂಕ್ ಆಗೋದೆ. ಕ್ಯಾಬಲ್ಲಿ ಎಲ್ಲಾರೂ ನಮ್ನೇ ನೋಡ್ತಾ ಇದಾರೆ, ಏನ್ ಮಾಡೋದು ಅಂದ್ಕೊಂಡು ಅವ್ನ್ ಕೂತಿರೋ ಸೀಟ್ ಗೆ ಹೋಗಿ ಅವ್ನ್ ಪಕ್ಕಾನೇ ಕೂತ್ಕೊಂಡೆ. ಅಳು ಮತ್ತೂ ಜೋರಾಯ್ತು,. ನಂಗ್ ಯಾಕ್ ಬೇಕಾಗಿತ್ತು ಇದು, ಚೆನ್ನಾಗಿ ಮುದ್ದಾಗಿರೋ ಹುಡ್ಗಿ ಅತ್ರೆ ಸಮಾಧಾನ ಮಾಡೋ ನನ್ ವಯಸ್ಸಲ್ಲಿ ನಂಗೆ ಇದು ಬೇಕಿತ್ತಾ ಅಂತಾ ನಂಗೆ ಆ ಟೈಮ್ ನಲ್ಲೂ ಅನ್ಸಿದ್ದು ನನ್ನ ಯಾವ ಮೂರ್ಖತನ ಅಂತಾ ನಂಗೆ ಈಗ್ಲೂ ಗೊತ್ತಾಗ್ತಾ ಇಲ್ಲಾ.

ಅವ್ನು ಮತ್ತೂ ಜೋರಾಗಿ ಅಳ್ತಾ ''ಅಲ್ರೀ, ನಾನ್ ಏನ್ ಜಗತ್ತಿನಲ್ಲಿ ಯಾವ ಮಕ್ಳೂ ಮಾಡ್ದೇ ಇರೋ ತಪ್ಪು ಮಾಡಿದೀನಾ, ಹಂಗೇನಾದ್ರೂ ಯಾವನ್ನಾದ್ರೂ ಅಂದ್ರೆ ಬನ್ನಿ, ಬರ್ಲೀ ಎಲ್ರೂ ಬಂದು ನನ್ನಾ ಹೊಡ್ದು ಹೊಡ್ದು ಸಾಯ್ಸಿಬುಡ್ಲೀ ಅನ್ನೋದು ಅಳೋದು ಅಷ್ಟೇ ಮಾಡ್ತಾ ಇದಾನೆ!
ನಾನು ಕೋಪದಲ್ಲಿ ಮನೆ ಬಿಟ್ಟು ಬಂದ್ ಬುಟಿದೀನಿ, ಇನ್ನು ಸತ್ರೂ ನಾ ನಿಮ್ ಮುಖಾ ನೋಡಲ್ಲಾ, ನೀವೂ ನನ್ ನೋಡೋಕೆ ಬರಬೇಡಿ ಅಂತೆಲ್ಲಾ ಹೇಳ್ಬುಟ್ ಬಂದಿದೀನಿ ಅಂತಾನೆ! ನಂಗೆ ಎದೆಯಲ್ಲಿ ಆಗ ಸಣ್ಣಗೆ ನಡುಕ ಶುರು ಆಯ್ತು..
ನಾನೂ ಮೂರ್ ನಾಲ್ಕು ಸೆಕೆಂಡ್ ತಲೆ ಮೇಲೆ ಕೈ ಹೊತ್ತು ಕೂತೆ.
ಆಮೇಲೆ ಅವ್ನ್ ಬೆನ್ ಮೇಲೆ ಕೈ ಇಟ್ಟು ಸಮಾಧಾನ ಮಾಡಿ ಅಂತೂ ಇಂತೂ ಕಣ್ಣೀರು ನಿಲ್ಸ್ದೆ. ನಂಗೆ ಗೊತ್ತಿರೋ ಸಾಧ್ಯಾ ಅಂತಾ ಅನ್ಸೋ ಸಲ್ಯೂಷನ್ಸ್ ಎಲ್ಲಾ ಕೊಟ್ಟೆ.. ಆದ್ರೂ ಉಹುಂ!! ಮತ್ತೆ ಅವ್ನ್ ಕಣ್ಣಲ್ಲಿ ನೀರು ಜಿನುಗ್ತಾನೇ ಇತ್ತು.

(ಆಮೇಲೆ ದಾರಿ ಮಧ್ಯ ಮಧ್ಯ ಅವ್ನು ಎಲ್ಲಾ ಕಥೆ ಏನು ಎತ್ತ ಅಂತೆಲ್ಲಾ ಹೇಳ್ದ! ಅವ್ನೂ ಇಲ್ಲಿ ನನ್ ಫೇಸ್ಬುಕ್ ಫ್ರೆಂಡ್ ಆಗಿರೋದ್ರಿಂದಾ ಅದ್ನೆಲ್ಲಾ ಪೂರ್ತಿ ಡೀಟೇಲ್ ಆಗಿ ನಾನು ಹೇಳೋಕ್ ಇಷ್ಟಾ ಪಡಲ್ಲಾ!!)

ಆಮೇಲೆ ರಾತ್ರಿ ಆಫೀಸ್ ನಲ್ಲಿ ಅವ್ನು ಊಟ ಮಾಡಿಲ್ಲಾ, ಮಾತಾಡಿಲ್ಲಾ, ನಾನೂ ಇನ್ನು ಇವ್ನಿಗೆ ಏನ್ ಮಾಡೋದಪ್ಪಾ ಅಂತಾ ಯೋಚಿಸ್ತಾ ಕೂತೆ.
ರಾತ್ರಿ ಎಲ್ಲಾ ಮುಚ್ಕೊಂಡು ಕೆಲ್ಸಾ ಮಾಡೋದ್ ಬಿಟ್ಟು ಏನ್ ಮಾಡೋದು ಅಂತಾ ಇಬ್ರೂ ಡಿಸ್ಕಸ್ ಮಾಡ್ತಾ ಕೂತ್ವಿ. ಯಾರೋ ಬಂದು ನಿಮ್ಗೆ ಸಂಬ್ಳಾ ಕೊಡೋದು ಹೀಗೆ ಆರಾಮ್ ಆಗಿ ಏ.ಸಿ ರೂಮಲ್ಲಿ ಕೂತ್ಕೊಂಡು ಊರ್ ಮೇಲಿನ್ ವಿಷ್ಯಾ ಮಾತಾಡೋಕಾ ಅಂತಾ ಇಂಗ್ಲೀಶ್ ನಲ್ಲಿ ಬೈದು ಹೋದ್ರು. ನಾವು ಮತ್ತೆ ಪೆಕ್ರು ಥರಾ ಸರೀ ಬ್ಯಾಡ ಬಿಡೀ. ಸಂಬ್ಳಾ ಸ್ವಲ್ಪಾ ಕಡ್ಮೇನೆ ಕೊಡಿ ಒಂದ್ ಹತ್ತಿಪ್ಪತ್ತು ರೂಪಾಯಿ ಹಿಡ್ಕೊಂಡೇ ಕೊಟ್ರೂ ಪರ್ವಾಗಿಲ್ಲಾ, ನಾವ್ ಆರಾಮಾಗಿ ಹೊರ್ಗಡೆ ತಂಪಾದ ಗಾಳಿಯಲ್ಲೇ ಮಾತು ಆಡ್ಕೊತೀವಿ ಅಂತಾ ಕನ್ನಡ ದಲ್ಲಿ ಮಾತು ಆಡ್ಕೊಂಡು ನಕ್ಕಿದ್ದು ಆ ಹುಡ್ಗಿಗೆ ಗೆ ಕೇಳ್ಸಿದ್ರೂ ಅರ್ಥಾ ಆಗ್ದೆ 'ಡು ಯುವರ್ ಅಸೈನ್ಡ್ ವರ್ಕ್' ಅಂತಾ ಮೂತಿ ತಿರುಗ್ಸಿ ಹೇಳಿ ಹೋದ್ಲು.
ಆದ್ರೂ ಈ ಯಪ್ಪನ್ ಮುಖದಲ್ಲಿ ಒನ್ ಸ್ಮೈಲ್ ಕೂಡ ಬಂದಿಲ್ಲಾ...

ಆಮೇಲೆ ರಾತ್ರಿ / ಬೆಳಗಿನ ಜಾವ  ಮನೆಗೆ ಬರೋ ಹೊತ್ನಲ್ಲಿ ಅವ್ರ್ ಅಮ್ಮಾ ಪಾಪಾ ಕಿವಿಗೆ ಶಾಲು ಹಾಕ್ಕೊಂಡು ಗೇಟ್ ಹತ್ರಾನೇ ಕಾಯ್ತಾ ನಿಂತಿದ್ರು. ಏನೇ ಆದ್ರೂ ಅಮ್ಮನ್ ಪ್ರೀತೀನೆ ಹಾಗೆ, ಅದ್ರಲ್ಲೂ ಭಾರತದ ಅಮ್ಮಂದಿರು, ಕರ್ನಾಟಕದ ಅಮ್ಮಂದಿರದು ಒಂದು ಕೈ ಮೇಲೇನೇ ಮುದ್ದು ಮಾಡೋದ್ರಲ್ಲಿ :)
ಅವ್ನ್ ಬಂದಿದ್ ತಕ್ಷಣ ಓಡ್ ಹೋಗಿ ಅವ್ನ್ ತಬ್ಕೊಳೋಕೆ ಟ್ರೈ ಮಾಡ್ತಾ ಇದ್ರೂ. ಏನೇ ಆದ್ರೂ, ಎಷ್ಟೇ ಬೈದ್ರೂ ಅಪ್ಪಾ ಅಮ್ಮಾ ಅಲ್ವಾ? ಅವ್ರು ಆವ್ರ್ ಮಕ್ಳಿಗೆ ಬೈದೆ ಇನ್ಯಾರ್ಗೆ ಬೈತಾರೆ? ಜಗತ್ ನಲ್ಲಿ ಯಾವ್ ಅಪ್ಪ ಅಮ್ಮಂಗೂ ತಮ್ ಮಕ್ಳು ಹಾಳಾಗ್ಲಿ, ಉಪವಾಸ ಬಿದ್ದು ಸಾಯ್ಲಿ ಅಂತಾ ಇರೊಲ್ಲಾ ಅಲ್ವಾ??
ಅವ್ರ್ ಅಮ್ಮಾ ಅವ್ನ್ ಹತ್ರಾ ಮಾತು ಆಡೋಕೆ ಅಂತಾ ಬರ್ತಾ ಇದ್ರೂ, ಇವ್ನು ಅವ್ರ್ ಮೇಲಿನ್ ಕೋಪಕ್ಕೆ ಮತ್ತೂ ದೂರಾ ದೂರಾ ಓಡಿ ಹೋಗ್ತಾನೇ ಇದ್ದಾ!
ನಂಗೂ ಕ್ಯಾಬ್ ಹಿಂದಿನ ಗ್ಲಾಸ್ ನ ಸೀ ಥ್ರೂ ನಲ್ಲಿ ನೋಡಿ ನೋಡಿ ಕಣ್ಣಲ್ಲಿ ನೀರು ಬಂದ್ಬುಡ್ತು!!

ಮನುಷ್ಯ ಸಂಬಂಧಗಳೇ ಹಾಗೆ, ತುಂಬಾ ನಾಜೂಕಾಗಿ ಪ್ರೀತಿಯಿಂದ ಬೆಳೆಸಿದರೆ, ನೋಡಿಕೊಂಡರೆ ಸಾವಿರ ಕಾಲ ಚೆನ್ನಾಗಿ ನಗುತ್ತಾ ಬಾಳಿಕೆ ಬರುತ್ತದೆ. ಅದೇ ಕೋಪಾ ಮಾಡ್ಕೊಂಡು ನಾನ್ ಮಾಡಿದ್ದೇ ಸರೀ, ನಂಗೆ ನಿನ್ ಕಂಡ್ರೆ ಆಗಲ್ಲಾ, ಅಡ್ಜಸ್ಟ್ಮೆಂಟ್ ಬೇಡಾ ಬರೊಲ್ಲ ಅಂದ್ರೆ ಎರಡೇ ನಿಮಿಷಕ್ಕೆ ಬೆಂಕಿ ಬಿದ್ದೋಗತ್ತೆ.
ಇದು ಬರೀ ಅಮ್ಮ-ಮಗನ ಸಂಬಂಧ ದಲ್ಲಿ ಮಾತ್ರಾ ಅಲ್ಲಾ, ಅಪ್ಪ ಮಗ , ಅಮ್ಮ ಮಗಳು, ಲವರ್ಸ್, ಗಂಡ ಹೆಂಡತಿ, ಬೆಸ್ಟ್ ಫ್ರೆಂಡ್ಸ್, ಯಾರ್ ಮಧ್ಯಾ ಬೇಕಾದ್ರೂ ಆಗ್ಬಹುದು ಅಲ್ವಾ?
ಅರಿತು, ಹೊಂದ್ಕೊಂಡು, ಇದ್ದಿದ್ರಲ್ಲೇ ಚೆನ್ನಾಗಿ ಹಂಚ್ಕೊಂಡು ಬಾಳಿದ್ರೆ ಸ್ವರ್ಗಾನಾ ಎಲ್ ಯಾಕ್ ಹುಡ್ಕೋಕೆ ಹೋಗೋಣಾ ಹೇಳಿ, ಅದು ಬೇಡ ಬೇಡಾ ಅಂದ್ರೂ ಆಗ ನಮ್ ಕಾಲ್ ಎದುರ್ಗಡೇನೇ ಕಾಲ್ ಮುರ್ಕೊಂಡು ಬಿದ್ದಿರತ್ತೆ :) ಆಗ ಎಷ್ಟು ಬೇಕಾದ್ರೂ ಬಾಚ್ಕೋಳಿ , ಎಲ್ಲಾ ನಿಮ್ದೇ:) ಆದ್ರೆ ಈಗ ಜಗಳ - ಕೋಪ - ಹೊಡೆದಾಟ ಬೇಡ ಅಲ್ವಾ??

ದೇವ್ರೇ, ಪಾಪಾ ಅವ್ರಿಬ್ರೂ ಒಂದಾದ್ರೆ ಸಾಕಪ್ಪಾ ಅನ್ಸ್ಬಿಟ್ಟಿದೆ. ನೀವೂ ಸಹ ಆ ತಾಯಿ ಮಗಾ ಒಂದಾಗ್ಲಿ ಅಂತಾ ದೇವರ ಹತ್ರಾ ಕೇಳ್ಕೊತೀರಾ ತಾನೇ??!