Monday, December 30, 2013

ಬೆಳಕಿನ ಪ್ರೀತಿಯ ಸಾಂತ್ವನವೋ? ಕತ್ತಲಿನ ಮೌನ ಮುಗುಳ್ನಗೆಯೋ?!!

Happy New Year-2014! Jepee Bhat



ಅಮಾವಾಸ್ಯೆಯಂದು ಮತ್ತೆ ಅವಳ ನಗು,
ಸುಮ್ಮನೆ ಬೆಳಕಿನಾಟವೆಂದು ತಿಳಿಯಲೋ?
ಅಥವಾ ಕತ್ತಲಿನ ಶುದ್ಧ ಮೂರ್ಖತನವೋ?
ಹುಣ್ಣಿಮೆಯಂದು ಮತ್ತವಳದೇ ಅಳುವಿಗೆ,
ಬೆಳಕಿನ ಪ್ರೀತಿಯ ಸಾಂತ್ವನವೋ?
ಕತ್ತಲಿನ ಮೌನ ಮುಗುಳ್ನಗೆಯೋ?!!

----------------------------------------------------------

ಕಸ್ತೂರಿ ಘಮಕ್ಕೆ ಮನಸೋತ ಪ್ರಬುದ್ಧ ಮನಸೋ?
ತಾಳ-ಮೇಳವಿಲ್ಲದೆ ಜೀಕುತ್ತಿರುವ ಹೃದಯದ ಮುನಿಸೋ?
ಮೌನ-ಮಾತಿಗೆ, ಪ್ರೀತಿ-ದ್ವೇಷಕ್ಕೆ, ಕಾರಣಗಳೇ ಬೇಕಿಲ್ಲ..
ಇರುವ, ಭಯದಿಂದ ಕಂಗೆಟ್ಟಿರುವ ಶರೀರಕ್ಕೆ ಸಮಾಧಾನವೇ ಸಾಕಲ್ಲ..

----------------------------------------------------------

ಮತ್ತದೇ ಕೋಪ, ಕಾರಣವಿಲ್ಲದ ಜಗಳ, ದೊಡ್ಡ ಗೋಡೆಯನ್ನು ಕಟ್ಟದಿರಲಿ..
ಹೊಸ ವರುಷವನ್ನು ಬಾಚಿ ತಬ್ಬೋಣ, ಮುಖದ ಮೇಲಿನ ನಗೆಯು ಎಂದಿಗೂ ಮಾಸದಿರಲಿ..

----------------------------------------------------------

ಬೀಸುವ ಗಾಳಿ, ಹರಿಯುವ ನೀರು, ನಿನ್ನ ಕಣ್ಣಿನ ಕಪ್ಪು ಎಲ್ಲದರಲ್ಲೂ ನಿನದೇ ನೆನಪು..
ಈ ಬರುತ್ತಿರುವ ವರ್ಷವಾದರೂ ಆರಿಸದಿರಲಿ ಮನೆ ದೀಪದ ನಲಿಯುವ ಒಲವಿನ ಒನಪು!! :)

-----------------------------------------------------------

''ಇನ್ನೇನು ಮುಗಿಯಲಿರುವ ಈ ವರ್ಷದ ಕೊನೆಗೆ, ತಾನೂ ಸಹ ಮುಗಿಯುತ್ತೇನೆಂದು ಗೊತ್ತಿದ್ದೂ ಸಹ ಈಗ ಏಳಲಿರುವ ಹೊಸ ವರ್ಷದ ಸ್ವಾಗತಕ್ಕೆ ನನ್ನ ಕೊನೆಯ ಮತ್ತು ಮೊದಲ ಕೆಲವು ಸಾಲುಗಳು''
❤❤''ಅಂತ್ಯ'' ಆರಂಭವೂ ಹೌದು, ಕೊನೆಯೂ ಹೌದು!❤❤
ಎಲ್ಲರಿಗೂ ಹೊಸ ವರ್ಷ ಶುಭವನ್ನೇ ಉಂಟುಮಾಡಲಿ :) :) ಹೊಸ ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು :) :)
-- ಜೇಪೀ ಭಟ್ :)
----------------------------------------------------------

Wednesday, November 20, 2013

ಸಂಭ್ರಮಿಸಲು ಕಾರಣಗಳು ಬೇಕೇ ಬೇಕಾ..?!

www.jpbhat.blogspot.in
Jepee Bhat


ಇತ್ತೀಚೆಗೆ ಸಂಭ್ರಮಿಸಲು ಕಾರಣಗಳೇ ಸಿಗುತ್ತಿಲ್ಲ,
ಹುಟ್ಟಿದ ಮಗು ಕೂಡ ತೊಟ್ಟಿಗೆ ಬಾಯಿ ಹಾಕಿ  ಚೀಪುತ್ತಿಲ್ಲ,
ಕೊಟ್ಟಿಗೆಯ ಪುಟ್ಟ ಕರು ಕೂಡ ನನ್ನ ಕೈ ಕಂಡೊಡನೆ ಜಿಗಿದು ಬರುತ್ತಿಲ್ಲ,
ನಿನ್ನೆ ಅರಳಿದ ಸುಂದರ ಕೆಂಡ ಸಂಪಿಗೆಯೂ ಕಂಪು ಬೀರುತ್ತಿಲ್ಲ..

ಮೊನ್ನೆ ಹೂವಾಗಿದ್ದ ಹಲಸಿನ ಚಿಗುರೂ ಕಾಯಿ ಬಿಟ್ಟಿಲ್ಲ,
ಅಪ್ಪ  ನೆಟ್ಟ ತೆಂಗಿನ ಗಿಡ ಭೂಗರ್ಭ ಸೀಳಿ ಕಾಯಿಯೇ ಬಿಟ್ಟಿಲ್ಲ,
ಮಳೆಯ ಹನಿಗಳಿಗೆ ಎಷ್ಟೇ ಮುಖ ಒಡ್ಡಿದರೂ ನನ್ನ ಕಣ್ಣೀರು ನಿಂತಿಲ್ಲ,
ಬೊಗಸೆ ಒಡ್ಡಿ  ಬೇಡಿದರೂ ಇನ್ನೂ ಚಂದ್ರ ಮತ್ತು ನಕ್ಷತ್ರ ಕೈಗೆ ಬಿದ್ದಿಲ್ಲ..

ಅಪರೂಪಕ್ಕೆ ಕಂಡ ನಿನ್ನ ಕನಸೂ ಸರಿಯಾಗಿ ಪೂರ್ತಿ ಬೀಳುತ್ತಿಲ್ಲ,
ಕತ್ತಲಿನಿಂದ ಆಚೆ ಬರಲು ಮನೆಯ ಮಾಳಿಗೆಯ ಮೇಲೆ ಸೂರ್ಯನೂ ಏರುತ್ತಿಲ್ಲ,
ಜಗತ್ತಿನಲ್ಲಿ ಎಲ್ಲರಿಗೂ ಹೀಗೆಯೇ ಆಗುತ್ತಿದ್ದರೂ ಸುಮ್ಮನೇ ನಾಚಿಕೆಯಿಂದ ಯಾರೂ ಹೇಳುತ್ತಿಲ್ಲ,
ಹೌದು, ಇತ್ತೀಚೆಗೆ ನನಗೆ ಯಾಕೋ ಸಂಭ್ರಮಿಸಲು ಕಾರಣಗಳೇ ಸಿಗುತ್ತಿಲ್ಲವಲ್ಲ...!!

Monday, November 04, 2013

ನಿನ್ನ ಪ್ರೀತಿಯ ಬೆಚ್ಚನೆಯ ಪರಿಮಳವಾದರೂ ಸೂಸಲಿ ನನ್ನ ಈ ಪ್ರೀತಿಯ ಅಂಗಡಿಯ ಕಡೆಗೇ...!!

Bhat Jepee
Image source - Internet!


ಸುಮ್ಮನೆ ಒಂದಿಷ್ಟು ಕನಸು, ಪ್ರೀತಿಗಳ ರಾಶಿ ಹಾಕಿ,
ಅಂಗಡಿ ಹಾಕಿ ಕೂತಿರುವೆ ಒಂದಷ್ಟು ದಿನದಿಂದ..
ಇನ್ನಾದರೂ ದೂರ ತಳ್ಳಿ ನಿನ್ನ ನಾಜೂಕು, ಕೋಪವ,
ಕೊಳ್ಳಲು ಬರುವೆಯಾ ಒಂದಿನಿತಾದರೂ ಈ ನನ್ನ ಪ್ರೀತಿಯ..?

ಪ್ರೀತಿ ಕನಸಿನ ತರಹ ರಾತ್ರಿಯಿಂದ ಬೆಳಗಿನವರೆಗೆ,
ಬಂದು ಹೋಗುವ ಸಾದಾ ಸೀದಾ ಸರಕಲ್ಲ,
ವರ್ಷದ ವಿರಹದ ಬೇಗುದಿಯ ತವಕದ ರೋದನೆ,
ಕೇಳಲು, ಕೊಳ್ಳಲು ಬಾ ಇನ್ನಾದರೂ ಈ ಪ್ರೀತಿ ನಿವೇದನೆ..

ಹೋದ ಕಡೆಯೆಲ್ಲಾ ನಿನ್ನದೇ ಮುಖ, ನಗುವೆಲ್ಲಾ ಚೆಲ್ಲಿದೆ,
ಹೃದಯದ ಬಿಗಿತ, ಜಿಗಿತ ನನ್ನ ಹಿಡಿತ ಮೀರಿ ಎಲ್ಲೋ ನಿಂತಿದೆ.
ಈಗಲಾದರೂ ನನ್ನ ಅಂಗಡಿ ಮುಖಕ್ಕೆ ಮುಖ ಹಾಕಿ ಹೋಗು ಚೆಲುವೆ,
ನಿನ್ನ ಪ್ರೀತಿಯ ಬೆಚ್ಚನೆಯ ಪರಿಮಳವಾದರೂ ಸೂಸಲಿ ನನ್ನ ಈ ಪ್ರೀತಿಯ ಅಂಗಡಿಯ ಕಡೆಗೇ...!!

Wednesday, May 08, 2013

ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!

Jepee Bhat..

ಮಳೆಯ ಕೊರೆತಕ್ಕೆ ಸಿಕ್ಕ ಮಣ್ಣು ಸೂಸಿದೆ ಪರಿಮಳ
ಇದರ ಪರಿವೇ ಇಲ್ಲದ ಮನಸುಗಳ ಮುದ್ದು ತಳಮಳ,
ಎಂದೋ ಕಣ್ಣಿಗೆ ಕಂಡ ಕಿಟಕಿಯ ಹೊರಗಿನ ಅವಳ ಸುಂದರ ಕೂದಲು
ಮತ್ತೆ ಮತ್ತೆ ಒತ್ತಿ ಹೇಳಿವೆ ಹೃದಯಕ್ಕೆ ಅಲ್ಲೇ ನೋಡಲು..

ಮಿಂಚು ಬರಸೆಳೆದು ಮೋಡಕ್ಕೆ ಅಪ್ಪಿ ಕೊಟ್ಟ ಮುತ್ತು
ಮತ್ತದೇ ದೊಡ್ಡ ಸಣ್ಣ ಹನಿಯಾಗಿ ಖುಷಿಯಾಗಿ ನೆಲಕ್ಕೆ ಬಿತ್ತು,
ಅದನ್ನರಿತ ಬಾಳೆ, ಕೆಸು, ಹಲಸಿನೆಲೆಗಳು ಮೆಲ್ಲನೆ ಗೊಣಲ್ಲಾಡಿಸಲು
ಅಂಬಾ ಎನುತ ಕೊಟ್ಟಿಗೆಯಲ್ಲಿನ ಗೌರಿ ತುಂಬಿಸಿತು ಚೊಂಬು ನೊರೆ ಹಾಲು..

ದಿನಾ ನೋಡಿದ ಅವಳನ್ನೇ ಕಲ್ಪಿಸಿ ಕೊಯ್ದ
ನಮ್ಮದೇ ಮನೆಯ ಮಲ್ಲಿಗೆ ಹೂವ ಮತ್ತೆ ಕಂಡೆ,
ಮರುದಿನ ಅವಳದೇ ಮನೆಯಲ್ಲಿ ಕೆಂಪನೆಯ ಸೀರೆಯಲ್ಲಿ ಅವಳ ಮುಡಿಯಲ್ಲಿ
ನೀರಲ್ಲಿ ತೊಯ್ದ ನಮ್ಮ ಮನೆಯದೇ ಆದ ಮಲ್ಲಿಗೆಯ ಹೂವ ದಂಡೆ...!!:):)