Monday, March 24, 2014

ನಾನು ಸೋತು ಮತ್ತೆ ನಕ್ಕಿ ತಲೆಬಾಗುವುದು; ನಿನಗೇನೇ ಮತ್ತು ನೆನಪಿರಲಿ ನಿನಗೊಬ್ಬಳಿಗೇನೇ!!

©Jepee Bhat's eDiTiNgS!


ಎಷ್ಟೇ ಬೈದು ಕೋಪ ಮಾಡಿಕೊಂಡು ನೀ ನನ್ನ ಬಿಟ್ಟು ಹೋದರೂ,
ಮರೆಯುತ್ತೇನೆ ಎಂದರೂ ಮತ್ತೆ ನೆನಪಾಗುವ ಹಾಗೆ ಮಾಡಿದ್ದು ನೀನೇ,
ತಪ್ಪು ಸರಿಗಳೆಲ್ಲವೂ ರಾತ್ರಿ ಬೆಳಗಿನ ತರಹ ಕಳೆದು ಹೋಗಲಿ,
ನಗುವೊಂದೇ ನಮ್ಮ ಮುಂದೆ ರಾಶಿ ಸುರಿದೇ ಸುರಿಯಲಿ,

ಈ ಸುಂದರ ಬೆಳಗಿನ ಸೂರ್ಯನ ಕಿರಣಗಳ ಮೇಲೆ ಆಣೆ,
ರಾತ್ರಿ ಮಲಗಿಸಿದ ತಂಪು ಚಂದ್ರನ ಮೇಲೆ ಆಣೆ,
ನಿನ್ನ ಸುಂದರ ಕಪ್ಪು ಕಣ್ಣು-ಕೂದಲುಗಳ ಮೇಲೆ ಆಣೆ,
ನಿನ್ನಷ್ಟೇ ಮುದ್ದಾಗಿರೋ ನಿನ್ನ ಬಿಳಿಯ ಕೆನ್ನೆಗಳ ಮೇಲೆ ಆಣೆ,

ಈಗ ಕೇಳುತ್ತಿರುವುದು ಮತ್ತೇನನ್ನೂ ಅಲ್ಲ
ಬರೀ ನಿನ್ನ ಕೈ ಮತ್ತು ಹೆಗಲುಗಳು ಮಾತ್ರವನ್ನೇ,
ನಾನು ಸೋತು ಮತ್ತೆ ನಕ್ಕಿ ತಲೆಬಾಗುವುದು
ನಿನಗೇನೇ ಮತ್ತು ನೆನಪಿರಲಿ ನಿನಗೊಬ್ಬಳಿಗೇನೇ!!

Sunday, March 16, 2014

ನೀನ್ ಇಲ್ಲಿ ಇವತ್ತು ಬಂದಿದ್ದು ನಿಮ್ ಅಮ್ಮಂಗೆ ಗೊತ್ತಾಗ್ದೇ ಇರ್ಲೀ, ಹ್ಯಾಪೀ ಹೋಳಿ!! :)

ಹ್ಯಾಪೀ ಹೋಳಿ!!
Jepee bhat


ಜೀವನದಲ್ಲಿ ಎಲ್ಲವೂ ಬೇಕು.
ಎಲ್ಲರೂ ಬೇಕು, ಕೆಟ್ಟದ್ದು ಒಳ್ಳೆಯದು ಇದ್ರೇನೇ ಪ್ರಪಂಚ!!
ನನ್ನದು ಎಲ್ಲ ಬಣ್ಣಗಳು!!
ಕಾಮನಬಿಲ್ಲು -- ಏಳೂ ಬಣ್ಣಗಳು! ಎಲ್ಲದರ ಸಂಕೇತ.
 ಹ್ಯಾಪಿ ಹೋಳಿ ಎಲ್ರಿಗೂ :)


ಆ ಹುಡ್ಗಾ ನಮ್ ಮನೆಗೆ ಬರ್ದೇ ತುಂಬಾ ದಿನಾ ಆಗಿತ್ತು.
ಇವತ್ತು ಬಂದಾ!!
''ಗುಂಡು, ಗುಂಡೂ........''
ನಾನ್ ಯಾರಪ್ಪಾ ಅಂದ್ಕೊಂಡು ಊಂ ಅಂದೆ.
ಅವಂದೇ ಧ್ವನಿ ಥರಾ ಇದ್ರೂ ಮತ್ತೆ ಬೇರೆ ಯಾರಾದ್ರೂ ಇರಬಹುದು ಅಂತಾ ಮನಸಲ್ಲೇ ಲೆಕ್ಕಾಚಾರಾ ಹಾಕ್ಕೊಂಡು ನಿಧಾನವಾಗಿ ಕೂತಲ್ಲಿಂದಾ ಎದ್ದು ಹೊರಟೆ.

-------------------------------------------------

ಅವನು ನನಗೆ ಯಾವತ್ತೂ ಗುಂಡು ಗುಂಡೂ ಅಂತಾನೇ ಕರ್ಯೋದು, ಮಜಾ ಅಂದ್ರೆ ನಾನೂ ಅವ್ನಿಗೆ ಗುಂಡೂ ಅಂತಾನೇ ಕರೀತೀನಿ.
ಅಬ್ಬಬ್ಬಾ ಅಂದ್ರೆ ವಯಸ್ಸು ಹತ್ತು ಮುಗಿದು ಹನ್ನೊಂದಕ್ಕೆ ಬಿದ್ದಿರಬಹುದು, ಯಾವಾಗ್ಲೋ ಕೇಳ್ದಾಗಾ ನಾಲ್ಕನೇ ಕ್ಲಾಸು ಅಂದಿದ್ದಾ, ಯಾವ್ದೋ ಬೆಂಗಳೂರಿನ ವಿಜಯನಗರದ ಇಂಗ್ಲೀಶ್ ಮೀಡಿಯಂ ಸ್ಕೂಲು.
ಅವ್ನು ಯಾವತ್ತೂ ನಮ್ ಮನೆಗೇ ಹೊಸಾ ಪಿಚ್ಚರ್ ಎಲ್ಲಾ ನೋಡೋಕ್ ಬರೋವ್ನು. ಯಾವಾಗಲೂ ಇಲ್ಲೇ ತರ್ಲೆ ಮಾಡ್ಕೊಂಡು, ಜೋಡಿಸಿಟ್ಟಿರೋ ವಸ್ತುಗಳನ್ನೆಲ್ಲಾ ಚೆಲ್ಲಾ ಪಿಲ್ಲಿ ಮಾಡಿ, ಮಾಡಿರೋ ಅಡಿಗೇಲಿ ಎಲ್ಲಾನೂ ಚೂರ್ ಚೂರೇ ತಿಂದು ಸ್ಪೂನ್ ನಾ ಸಿಂಕ್ ನಲ್ಲಿ ಬಿಸಾಕ್ಬುಟ್ಟು ಗುಂಡೂ ಬಾಯ್, ಅಮ್ಮಾ ಕರೀತಿದಾರೆ!! ಆಯ್ತು, ಸೆಕೆಂಡ್ ನಲ್ಲಿ ಎಸ್ಕೇಪ್.
ಲಾಸ್ಟ್ ಟೈಮ್ ನಂಗೆ ಟೈಮ್ ಇಲ್ಲಾ ಅಂದ್ರೂ, ಚಿಕ್ ಮಕ್ಳ್ ಥರಾ ಹಿಂದೇನೇ ನೈಟಿ, ಚೂಡಿದಾರದ್ ದುಪ್ಪಟ್ಟಾ ಹಿಡ್ಕೊಂಡ್ ಬಿಡದೇ ಅವ್ರ್ ಅಮ್ಮನ್ ಹತ್ರಾ ರೋಡ್ ಸೈಡ್ ನಲ್ಲಿ ಮಾರೋ ಥಿಯೇಟರ್ ಪ್ರಿಂಟ್ ಡಿ.ವಿ.ಡೀ ನಾ ಹಠಾ ಮಾಡಿ ಮೂರ್ ದಿನಾ ಮುಕ್ಕಾಲ್ ಮುಕ್ಕಾಲ್ ಗಂಟೆ ತಗೊಂಡು ಕ್ರಿಶ್ ತ್ರೀ ಪಿಚ್ಚರ್ ನಾ ನಮ್ಮನೆಲ್ಲೇ ನೋಡ್ಕೊಂಡ್  ಹೋದಾ!!
ಇದು ಗೊತ್ತಾಗಿ ಅವ್ನ್ ಅಮ್ಮನಿಗೆ ಕೋಪಾ ನೆತ್ತಿಗೇರಿ ಎರ್ಡ್ ತೆಗೆದು ನನ್ನ ಎದುರಿಗೇನೆ ಸರಿಯಾಗ್ ಬಾರ್ಸಿದ್ರು. ಅವ್ನೂ ತುಂಬಾ ಕಿಲಾಡಿ ಆ ಮಾತು ಬೇರೆ ಬಿಡಿ. ಒಬ್ರ್ ಮಾತೂ ಒಳ್ಳೇದಕ್ಕೂ, ಏನೇ ಹೇಳಿದ್ರೂ ಕೇಳೋ ಹುಡ್ಗಾ ಅವ್ನು ಅಲ್ಲಾ, ಹಂಗ್ ಮಾಡಿದ್ರೆ ಯಾವ್ ಮಹಾ ತಾಯಿಗೆ ತಾನೇ ಸಿಟ್ಟು ಬರ್ದೇ ನಗು ಬರತ್ತೆ ಹೇಳಿ? ಯಾರಾದ್ರೂ ಸಮಾಧಾನದಿಂದ ಇರೋಕೆ ಸಾಧ್ಯಾನಾ? ಅವತ್ತು ಎಕ್ಸಾಮ್ ಇದ್ರೂನೂ ಅವ್ರ್ ಮನೆಗೆ ಹರಟೆ ಹೊಡ್ಯೋಕೆ ಹೋಗಿದ್ಯಾ ಅಂತಾ ಬೈದ್ರು ಬೇರೆ ಅವ್ನಿಗೆ, ಇನ್ನೊಂದ್ ಸಲಾ ಅವ್ರು ಇವ್ರು ಅಂತಲ್ಲಾ ಯಾರ್ದೇ ಮನೆಗೆ ನನ್ ಕೇಳ್ದೆ ಹೋದ್ರೆ ಕಾಲು ಮುರೀತೀನಿ ಮುಂಡೇದೆ ಅಂತಾ ಬೈಗುಳದ ಮಳೆ ಸುರಿಸ್ದ್ರು..  ನಂಗೇನೇ ಅಯ್ಯೋ ಪಾಪಾ ಅನ್ಸಿ ಹೋಯ್ತು! ಏನ್ ಮಾಡೋದು., ಅವ್ನ್ ಅಮ್ಮಾ ಅವರು, ತಡ್ಯೋಕೆ ನಾನ್ ಇವ್ನ್ ಅಪ್ಪಾ ಅಲ್ವಲ್ಲಾ!
ಏನಾದ್ರೂ ಮಧ್ಯಾ ಮಾತಾಡೋಕ್ ಹೋದ್ರೆ ಬೆಂಗ್ಳೂರ್ನಲ್ಲಿ ಬಿಟ್ಟಿ ಸಲಹೆ ಕೊಡೋರ್ಗೇನೂ ಕಡ್ಮೆ ಇಲ್ಲಾ, ನಮ್ ಮನೆ ಮಕ್ಳಿನ್ನಾ ಹೆಂಗ್ ಬೇಕೋ ಹಂಗ್ ಬೆಳುಸ್ತೀವಿ, ಕೇಳೋಕ್ ನೀವ್ ಯಾರ್ರೀ? ನಾವ್ ಹೊಡೀತೀವಿ, ಬಡೀತೀವಿ, ಚಚ್ಚಿ ಸಾಯ್ಸ್ತೀವಿ, ನಮ್ ಮಕ್ಳು ನಮ್ ಇಷ್ಟಾ ಅಂತಾರೆ!
ಏನೇ ನೋಡಿದ್ರೂ ನೋಡದೇ ಇರೋರ್ ಥರಾ ಸುಮ್ನಿದ್ರೆ ನಮ್ಗೇ ಕೆಲ್ವೊಂದು ವಿಷ್ಯಕ್ಕೆ ಒಳ್ಳೇದು ಅಲ್ವಾ?
ಹಂಗೆಲ್ಲಾ ಆಗ್ತಾ ಇದ್ದಾಗಾ--

--------------------------------------------------------

ಇವತ್ತು ಬಂದಾ!!
''ಗುಂಡು, ಗುಂಡೂ........''
ಶಿಟ್!!
ಇವತ್ತು ಹೋಳಿ ಅಲ್ವಾ ಸಡನ್ ಆಗಿ ನೆನ್ಪಾಯ್ತು!
ಲೋ ಬೇಡಾ ಕಣೋ ಸುಮ್ನಿರೋ ಅಂದೆ..
ಉಹುಂ ಹಾಕೇ ಹಾಕ್ತೀನಿ ಅಂದಾ.
ಅಮ್ಮನ್ ಹತ್ರಾ ಪರ್ಮಿಶನ್ ತಗೊಂಡ್ ಬಂದ್ಯಾ ಅಂದೆ. ಮಾತು ಆಡಿಲ್ಲಾ. ಅವ್ನ್ ಎರಡೂ ಕೈದು ಮುಷ್ಠಿ ಮುಚ್ಚಿತ್ತು.
ನಂಗೆ ಆಗ್ಲೇ ಒಳ್ಗಡೆ ಭಯಾ ಶುರು, ಭಯಾ ಅನ್ನೋದ್ಕಿಂತಾ ಆಮೇಲೆ ಮನೆ ಕ್ಲೀನ್ ಮಾಡೋಕ್ ಯಾರ್ ಹೆಂಡ್ತಿ ಬರ್ತಾರೆ ಅಲ್ವಾ? ನಂಗಂತೂ ಮದ್ವೆ ಆಗಿಲ್ಲಾ, ಮದ್ವೆ ಆದೋರು ಬ್ಯಾಚುಲರ್ಸ್ ಕಂಡ್ರೆ ಜಗತ್ತಲ್ಲಿ ಇರೋರಲ್ಲಿ ತೆಗೆದು ತೊಳೆದು ಸೋಸಿದ್ರೆ ಮೊದಲು ಸಿಗೋ ಕೆಟ್ಟೋರು, ಶತ್ರುಗಳು ಬ್ಯಾಚುಲರ್ಸೇ ಅನ್ನೋ ಥರಾ ಆಡ್ತಾರೆ!!
ಆದ್ರೂ ಅವ್ನ್ ನನ್ನಾ ಅಟ್ಟಿಸ್ಕೊಂಡ್ ಬಂದಾ, ನಾನು ಹಾಲಿಂದಾ ಕಿಚನ್, ಕಿಚನ್ ಇಂದಾ ಬಾಲ್ಕೋನಿ, ಅಲ್ಲಿಂದಾ ರೂಮು, ಆಮೇಲೆ ಬಾತ್ರೂಮು ಒಂದು ಮಿಕ್ಕಿತ್ತು, ಅಲ್ಲೆಲ್ಲಾ ನನ್ನಾ ಓಡಿಸ್ಕೊಂಡು ಹೋಗಿ ಗುಂಡೂ ಚೂರೇ ಚೂರು ಪ್ಲೀಸ್ ಅಂದಾ!!
ಪಾಪಾ ಅವ್ನ್ ಮುಖಾ ನೋಡಿ ನಂಗೇನೇ ಅಯ್ಯೋ ಅನಿಸ್ತು :(
ಆಯ್ತು ಮಾರಾಯಾ, ನಿನ್ ಖುಷಿ ನನ್ ಖುಷಿ ಅಲ್ವೇನೋ, ಹೆಂಗಂದ್ರೂ ಇವತ್ತು ಸಂಡೇ, ಮನೆಲ್ಲೇ ಬಿದ್ದಿರ್ತೀನಿ, ಎಲ್ಲೂ ಹೋಗಲ್ಲಾ ಹಾಕಪ್ಪಾ ಹಾಕು ಅಂದೆ.
ನನ್ ಮನಸಲ್ಲಿ ಅವ್ನು ಈಗ ನನ್ನನ್ನಾ ಪೂರ್ತಿ ಬಣ್ಣದಲ್ಲಿ ಸ್ನಾನಾ ಮಾಡಿಸ್ತಾನೆ, ಮನೆ ಕ್ಲೀನ್ ಮಾಡೋಕೆ ಇನ್ನು ಎರಡು ದಿನಾ ಬೇಕು ಅಂತಾ ನಾನ್ ಅವ್ನ್ ಆಟಾನೂ ಎಂಜಾಯ್ ಮಾಡ್ದೆ ಸುಮ್ನೆ ನಿಂತಿದ್ದೆ!
ಆದ್ರೆ ಅವ್ನು ತುಂಬಾ ಒಳ್ಳೆಯೋನ್ ಥರಾ, ಪ್ರಾಮಿಸ್ ಮಾಡ್ದ೦ಗೇನೇ ಹಣೆಗೆ ಪಿಂಕು, ಆಕಡೆ ಕೆನ್ನೆಗೆ ಯಲ್ಲೋ, ಈಕಡೆ ಕೆನ್ನೆಗೆ ರೆಡ್ದು, ಗಲ್ಲಕ್ಕೆ ವೈಟು, ಕುತ್ತಿಗೆಗೆ ಬ್ಲೂ ಹಚ್ಚಿ ಚೂರ್ ನೀರ್ ತಲೆ ಮೇಲೆ ಹಾಕಿ ಸ್ವೀಟಾಗಿ ಥ್ಯಾಂಕ್ಯೂ ಗುಂಡೂ ಅಂತಾ ಹೇಳಿ ಒಡೋಗ್ಬುಟ್ಟಾ!!
ಅವ್ನ್ ಕಣ್ಣಲ್ಲಿದ್ದ ಖುಷಿ, ಅಮ್ಮಾ ಬೈತಾರೆ ಅನ್ನೋ ಭಯಾ, ಯಾರ್ ಏನ್ ಅಂದ್ಕೋತಾರೆ ಅನ್ನೋ ನಾಚ್ಕೆ ಏನೂ ಇಲ್ದೆ ಹೆಂಗ್ ಮಕ್ಳು ಖುಷ್ ಖುಷಿಯಾಗ್ ಇರ್ತಾರೆ ಅಲ್ವಾ ಅಂತಾ ನಂಗೆ ಆಶ್ಚರ್ಯಾ ಆಯ್ತು!!
ಬಂದ್ ನಾಲ್ಕೇ ನಿಮಿಷಕ್ಕೆ ಇಡೀ ವಾತಾವರಣ ಚೇಂಜ್ ಮಾಡಿ, ಬಣ್ಣಮಯವಾಗಿಸಿ ನನಗೆ ಇಡೀ ವಾರಕ್ಕೆ ಆಗೋವಷ್ಟು ಖುಷಿ ಕೊಟ್ಟು ಹೋದ ಗುಂಡೂ ನಿನಗೆ ಥ್ಯಾಂಕ್ಸ್:)
ನೀನ್ ಇಲ್ಲಿ ಇವತ್ತು ಬಂದಿದ್ದು ನಿಮ್ ಅಮ್ಮಂಗೆ ಗೊತ್ತಾಗ್ದೇ ಇರ್ಲೀ, ಹ್ಯಾಪೀ ಹೋಳಿ!! :)

Tuesday, March 11, 2014

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!


Jepee bhat


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಆಗ ತುಂಬಾ ಹಿಂದೆ, ಹುಟ್ದಾಗ ಏನ್ ಮಜಾ ಇತ್ತು,
ಅತ್ತು-ಕರ್ದು ಮಾಡಿದ್ರೆ ಪುಕ್ಸಟ್ಟೆ ಕಷ್ಟಾ ಪಡ್ದೇ ಹೊಟ್ಟೆ ತುಂಬಾ ಊಟ,
ಕೂತಲ್ಲೇ ಆಟ, ತಣ್ಣಗೆ ತೊಟ್ಲಲ್ಲಿ ಸೊಂಪಾದ್ ನಿದ್ದೆ,
ಆಚೆ ಕಡೆಗೆ ಏನಕ್ಕೂ ಎದ್ದು ಹೋಗ್ದೆ ಕೂತಲ್ಲೇ ಚಡ್ಡಿ ಎಲ್ಲಾ ಒದ್ದೆ!
ಮಲ್ಗೋಕೂ ಅಳು, ಹಸಿದ್ರೂ ಅಳು, ಯಾರ್ ಎತ್ಕೊಂಡ್ರೂ ಅಳು, ಬರೀ ಅಳು ಅಳು ಅಳು,
ಯಾರಾದ್ರೂ ನಮಗೆ ಬೇಕಾದವ್ರ್ ಎತ್ಕೊಂಡ್ ಮುದ್ ಮಾಡಿ ಒಂದ್ ಪಪ್ಪಿ ಕೊಟ್ರೆ,
ಬೊಚ್ ಬಾಯ್ ತುಂಬಾ ಹಲ್ಲಿಲ್ದೆ ಎಂಜಲ್ ಸುರಿಸ್ತಾ ಬರೀ ನಗುವೇ ನಗು!!
ಬೇಜಾರ್ ಬಂದಾಗಾ ಬಾಯಲ್ ಹಾಕೋಕೆ ಬೆಲ್ಲಾ, ಚಾಕ್ಲೇಟ್, ಸಕ್ಕರೆ,
ಇಲ್ದಿದ್ರೆ ನಮ್ ಬೆರಳೇ ಅವ್ರ್ ನಮ್ ಬಾಯಿಂದಾ ತೆಗೀದೇ ಇದ್ರೆ ಅದೇ ನಮಗೆ ಅಕ್ಕರೆ!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಬೆಳೀತಾ ಬೆಳೀತಾ ಬೇಡಾ ಅಂದ್ರೂ ಚಿಕ್ ಅಂಗಿ-ಚಡ್ಡಿ ಹಾಕ್ಸಿ ಸ್ಕೂಲ್ ಗೆ ಸೇರ್ಸೇ ಬಿಟ್ರು,
ಆಗ್ಲಿಂದಾನೇ ನಮ್ಗೆ ಟೆನ್ಶನ್ ಸ್ಟಾರ್ಟ್ ಆಗೇ ಹೋಯ್ತು,
ಅದೇ ಗುಂಗಲ್ಲಿ ಹೋಮ್ ವರ್ಕ್ ಮಾಡ್ದೇ ಟೀಚರ್ ಏಟ್ ನಾ ಕೊಟ್ಟೇ ಬಿಟ್ರು,
ಮಾರನೇ ದಿನದಿಂದ ಶಾಲೆಗೆ ಸುಳ್ಳೇ ನೆಪ, ಕಾರಣ,
ಅಮ್ಮನಿಗೆ ಬೇಜಾರು, ಅಪ್ಪನಿಗೆ ಕೆಂಪಾದ ಕಣ್ಣು,
ನಮಗೆ ಸುಳ್ಳಿನ ಕಥೆ ಸುಮ್ನೆ ಹೊಟ್ಟೆ ನೋವು, ಕಾಲ್ ನೋವು,
ಅಪ್ಪನಿಗೆ ಕೋಪ ಬಂದು ಸರ್ಯಾಗ್ ನಾಲ್ಕ್ ಏಟ್ ಬಿದ್ರೆ ನಮ್ಗೆ ಬರೀ ಕಣ್ಣೀರು!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಆಮೇಲ್ ಬಂತು ಹೈಸ್ಕೂಲ್-ಕಾಲೇಜ್ ಲೈಫು,
ಎಲ್ರ್ ಥರಾನೂ ನಮ್ ಬಾಳಲ್ಲೂ ಫುಲ್ಲು ಕಲರ್ಸು, ಇಡೀ ಜನ್ಮಕ್ಕ್ ಸಾಕಾಗೋವಷ್ಟ್,
ಏನ್ ಹುಡುಗ್ರು-ಹುಡ್ಗೀರು, ಕಾರು ಬೈಕು,
ನೋಡ್ತಾ ಇದ್ರೆ ಎರಡೂ ಕಣ್ಣೂ ಕಡಿಮೇನೆ!
ಹೀಗೆ ಸಾಗ್ತಾ ಇತ್ತು ಜೀವ್ನಾ, ಏಳು-ಬೀಳು ಎಲ್ಲಾ,
ಎಲ್ಲಾ ಮುಗ್ದು ಇನ್ನೇನ್ ಕಾಲೇಜ್ ಮುಗೀತಪ್ಪಾ ಅಂದ್ಕೊಂಡ್ರೆ,
ಶುರುವಾಯ್ತು ಡಿಗ್ರೀನಲ್ಲೇ ಬಿದ್ದೆ ಪ್ರೀತಿ-ಪ್ರೇಮ-ಪ್ರಣಯ!
ಇನ್ನೇನ್ ಜೇಬಲ್ ಫುಲ್ಲು ಹಣ! ಲವ್ ಫೇಲಾದ್ರೆ ಮನೆ ಹಿತ್ಲಲ್ಲಿ ಡೈರೆಕ್ಟ್ ನಮ್ದೇ ಹೆಣ!!

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಅಂತೂ ಇಂತೂ ಹೆಂಗೋ ಪ್ರೀತಿ-ಗೀತಿ-ಇತ್ಯಾದಿ ನಡೀತಾ ಇತ್ತು,
ಮನೆಯಲ್ಲಿ ಅಪ್ಪಾ ಅಮ್ಮನಿಗೆ ವಯಸ್ಸಾಗ್ತಾ ಇತ್ತು!
ಮಗಾ ಇನ್ನೇನ್ ಸಾಕೋ ಓದಿದ್ದು, ಇನ್ನು ಕೆಲ್ಸಾ ಹುಡ್ಕೋ, ಜಾಬ್ ಹುಡ್ಕು, ಮಾಡು!
ನಾವ್ ಹೆಣ್ಣು ಹುಡ್ಕಿ ಮದ್ವೆ ಮಾಡಿ ಮುಗಿಸ್ತೀವಿ ಜವಾಬ್ದಾರಿ,
ಅದ್ನ್ ಸೀದಾ ಕೇಳ್ದೋನೆ ನಾನ್ ಮನೆಯಿಂದಾ ಇಲ್ಲಿಗೆ ಪರಾರಿ!!
ಹಂಗೋ ಹಿಂಗೋ ಓದ್ ಅಂತೂ ಮುಗೀತು, ಹುಡ್ಕಿ-ಅಲ್ದು-ಅತ್ತು-ತಿರ್ಗಿ ಕೆಲ್ಸಾನೂ ಸಿಗ್ತು!
ಡಿಗ್ರೀಲ್ ಆಗಿದ್ ಪ್ರೀತಿ ಕ್ಯಾಂಟೀನ್ ನಲ್ಲೇ ನೆಗ್ದು ಬಿತ್ತು!!
ನಂಗೆ ಕಂಪನೀಲಿ ತುಂಬಾ ದಿನದಿಂದ ಕಾಯ್ತಾ ಇರೋ ಪ್ರಮೋಶನ್ ಲೆಟರ್ ಪ್ರಿಂಟಾಗಿ ಬರೋ ಕಥೆ,
ಮನೆಯಲ್ಲೀಗ ಊಟಕ್ಕೆ ಮುದ್ದಾಂ ಬನ್ನಿ, ತಮ್ಮ ಆಗಮನಾಭಿಲಾಷಿಗಳು ಅಂತಾ ಮದ್ವೆ ಕಾರ್ಡ್ನಲ್ಲಿ ಅವ್ರ್ ಹೆಸ್ರ್ ಪ್ರಿಂಟಾಕೋ ಚಿಂತೆ!!


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ನಡ್ಕೊಂಡೋ ಬೈಕ್ನಲ್ಲೋ ಕ್ಯಾಬಲ್ಲೋ ಎಷ್ಟೇ ದೂರಾ ಆದ್ರೂ ಓಕೆ,
ಮನೆ ಎಲ್ಲೋ, ಆಫೀಸ್ ಎಲ್ಲೋ, ಏನೇ ಆದ್ರೂ ಸತ್ತು ಬಿದ್ದು ಹೋಗ್ಬುಟ್ ಬಾ,
ಹೊಟ್ಟೆಗೆ ನೆಟ್ಗೆ ಊಟ ಇಲ್ಲಾ, ಕಣ್ಣಿಗೆ ನಿದ್ರೆ ಮೊದ್ಲೇ ಇಲ್ಲಾ,
ಹಗ್ಲೋ ರಾತ್ರೀನೋ ಯಾವ್ ಟೈಮಿಗಾದ್ರೂ ಕೆಲ್ಸಕ್ಕೆ ರೆಡಿ,
ಆಮೇಲ್ ಹೆಲ್ತ್ ಕೈ ಕೊಟ್ಟು, ಗ್ಯಾರಂಟೀ ಆಸ್ಪತ್ರೆಗೆ ನೆಡಿ!!
ಏನೇ ಎಷ್ಟ್ ಮಾಡ್ ದಬಾಕಿದ್ರೂ ಆಮೇಲ್ ಬರೋದೇ ಬೀಪೀ, ಷುಗರ್, ತಲೆನೋವು ಗ್ಯಾಸು,
ಕಂಪ್ಯೂಟರ್ ದಿನಾ ಎಲ್ಲಾ ನೋಡಿ ನೋಡಿ ಬ್ಯಾಡಾ ಅಂದ್ರೂ ಕಣ್ಣಿಗೊಂದು ದೊಡ್ಡ ಸೋಡಾ ಗ್ಲಾಸು!
ತಿಂಗ್ಳೆಲ್ಲಾ ಕಷ್ಟಾ ಪಟ್ಟು ದುಡಿ, ಮನೆ ಹೆಂಡ್ತೀ ಕಾರು ಮಕ್ಳು, ಒಳ್ಳೆ ಸ್ಕೂಲು ಬಟ್ಟೆ ಬಂಗಾರಾ ಸೈಟು ಮನೆ!
ಏನಾದ್ರೂ ಯಡವಟ್ಟಾಗಿ ಕಂಪನಿ ಮುಚ್ಚಿದ್ರೆ/ ಅವ್ರೇ ತೆಗದ್ ಹಾಕಿದ್ರೆ ಇದ್ದೇ ಇದ್ಯಲ್ಲಾ ನಮ್ ಅಪ್ಪಂದೇ ಆದ ಸ್ವಂತ ಹಳ್ಳೀ ಮನೆ!!


ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

ಬರೀ ದುಡ್ಡು ಅಮೇರಿಕಾ ಕನ್ಸು ಕಾಣೋದೇ ಸಾಕಾ?
ಇಷ್ಟೆಲ್ಲಾ ಆದ್ರೂ ಇದೇ ಜೀವ್ನಾ ಬೇಕಾ??
ಹಳ್ಳೀಲಿದ್ಕೊಂಡೇ ಇರುವಷ್ಟರಲ್ಲಿ ಸುಖಾ ಪಡೋದೇ ಮೇಲಲ್ವಾ?
ಕೊಟ್ಗೇಲೀ ನಮ್ದೇ ಮನೆ ಹಸೂದು ಸಗಣಿ ಬಾಚೋದು ಕೀಳ್ ಕೆಲ್ಸಾ ಏನ್ ಅಲ್ಲಾ ಅಲ್ವಾ?
ಎಲ್ಲಾರೂ ಎಲ್ಲಾನೂ ಮಾಡೋದು ಹೊಟ್ಟೆಗೆ ಬಟ್ಟೆಗೆ ಮನಃ ಶಾಂತಿಗೆ,
ಏನೇ ಮಾಡಿದ್ರೂ ಈಗಿನ್ ಫಾಸ್ಟ್ ದುನಿಯಾದಲ್ಲಿ ಅದೇ ಇಲ್ಲಾ ಅಂದ್ರೆ ಅದ್ನೆಲ್ಲಾ ಮಾಡೋದ್ 'ಯಾರಿಗೆ'??

ಹಿಂಗೆಲ್ಲಾ ಆಗತ್ತೆ ಅಂತಾ ಗೊತ್ತಿದ್ರೆ ನಾನ್ ದೊಡ್ಡೋನ್ ಆಗ್ತಾನೇ ಇರ್ಲಿಲ್ಲಾ!!

(ನೆಟ್ವರ್ಕ್ ಡೊಮೇನ್ ಐಡಿ ಹೆಂಗೋ ಕೈ ಕೊಟ್ಟು ವರ್ಕ್ ಆಗ್ದೇ, ಏನೂ ಮಾಡಕ್ ತೋಚ್ದೆ ಖಾಲಿ ಕೂತಾಗ ಧೈರ್ಯಾ ಮಾಡಿ ಮ್ಯಾನೇಜರ್ ಹತ್ರಾನೇ ಅವ್ರ್ ಪಿಂಕ್ ವ್ಯಾನಿಟಿ ಬ್ಯಾಗಿಂದಾ ಟಿಶ್ಯೂ ಪೇಪರ್ ಮತ್ತೆ ಪೆನ್ ತಗೊಂಡ್ ಅವ್ರ್ ಕ್ಯೂಬಿಕಲ್ ನಲ್ಲೇ ಕೂತು ಆಫೀಸ್ನಲ್ ಬರ್ದಿದ್ದು)!!
ಹಿಂಗೆಲ್ಲಾ ಮಾಡೋಕ್ ನನ್ನ್ ಬಿಟ್ ಅವ್ರಿಗೆ ನನ್ ದೊಡ್ಡದೊಂದು ಸ್ಮೈಲ್ :) :)
- ಜೇಪೀ ಭಟ್ । ಹತ್ತನೇ ಮಾರ್ಚ್ 2014 :)


Tuesday, March 04, 2014

ಏನೇ ಆದ್ರೂ, ಎಷ್ಟೇ ಬೈದ್ರೂ ಅಪ್ಪಾ ಅಮ್ಮಾ ಅಲ್ವಾ? ಅವ್ರು ಆವ್ರ್ ಮಕ್ಳಿಗೆ ಬೈದೆ ಇನ್ಯಾರ್ಗೆ ಬೈತಾರೆ?

Jepee Bhat


ಟಿಕ್ ಟಿಕ್ ಗಡಿಯಾರದಲ್ಲಿ ಮಧ್ಯಾಹ್ನ ನಾಲ್ಕು ಗಂಟೆ ಸಮಯ.

''ಭುಲಾ ದೇನಾ ಮುಝೆ, ಏ ಅಲ್ವಿದಾ ತುಝೆ, ತುಝೆ ಜೀನಾ ಹೇ ಮೇರೆ ಬಿನಾ.......!!''

ನನ್ ಫೋನ್ ಈ ಥರಾ ಹಾಡಿ ನನ್ ಕರೀತು. ನಾನ್ ಯಾರಪ್ಪಾ ಅಂತಾ ಓಡೋಡಿ ಬಂದು ನೋಡಿದ್ರೆ ಅರ್ರೆ ನನ್ ಆಫೀಸ್ ಕಲೀಗ್, ಇವ್ನ್ ಯಾಕಪ್ಪಾ ಇಷ್ಟು ಹೊತ್ನಲ್ಲಿ ಫೋನ್ ಮಾಡ್ತಾ ಇದಾನೆ ಅಂದ್ಕೊಂಡೆ. ಥೋ ಅಂದ್ಕೊಂಡೇ ಮುಖಾ ಸಿಂಡರ್ಸ್ಕೊಂಡು ಫೋನ್ ನಾ ಅಟೆಂಡ್ ಮಾಡ್ದೆ.
''ಎಲ್ಲಿದೀರಾ ಅಂದಾ!''
ನಾನು ಮನೆಯಲ್ಲಿ ಅಂದೆ.
''ಏನ್ ಆಫೀಸ್ ಗೆ ಬರ್ತಾ ಇಲ್ವಾ ಇವತ್ತು, ಕ್ಯಾಬ್ ಬಂತಾ ಅಂದಾ?''
ಕ್ಯಾಬ್ ಇನ್ನೂ ಬಂದಿಲ್ಲಾ,ಆಫೀಸ್ ಗೆ  ಬರೋಕೆ ಅಂತಾನೆ ನಾನೂ ಹೊರಡ್ತಾ ಇದ್ದೀನಿ ಕಣಪ್ಪಾ ಅಂದೆ. ನಂದು ಒಂದು ಕೈಯಲ್ಲಿ ಎರಡೇ ಬಟನ್ ಹಾಕಿರೋ ಶರ್ಟ್, ಮತ್ತೊಂದು ಕೈನಲ್ಲಿ ಇವ್ನ್ ಹತ್ರಾ ಮಾತಾಡ್ತಾ ಇರೋ ಮೊಬೈಲ್ , ಕೆಳಗಡೆ ತನಗೆ ಸಂಬಂಧವೇ ಇಲ್ಲದಂತೆ ಬೆಲ್ಟ್ ಹಾಕ್ದೇ ಸೊಂಟದಿಂದ ಜಾರು ಬಂಡಿ ಆಡ್ತಾ ಇರೋ ಪ್ಯಾಂಟು ಇವಿಷ್ಟೂ ಹ್ಯೆಂಗೋ ಬ್ಯಾಲೆನ್ಸ್ ಮಾಡಿ ಹೇಳಪ್ಪಾ ಬೇಗ ಬೇಗ ಅಂದೆ.
ಅವ್ನು ಫುಲ್ ಉಸಿರು ತೆಗೀತಾ ಬನ್ನಿ ಬನ್ನಿ ತುಂಬಾ ಮಾತು ಆಡೋದಿದೆ, ಮನೆಯಲ್ಲಿ ಫುಲ್ ಜಗ್ಳಾ ಮಾಡ್ಕೊಂಡ್ ಬಿಟ್ಟೆ, ಈಗ ಏನು ಮಾಡ್ಬೇಕು ಅಂತಾನೇ ಗೊತ್ತಾಗ್ತಾ ಇಲ್ಲಾ, ಬನ್ನಿ ಬನ್ನಿ ಅಂತಾ ಹೇಳೋದೊಂದೇ ಮಾಡಿ ಫೋನ್ ಕಟ್ಟೇ ಮಾಡ್ಬುಟ್ಟ ಆಸಾಮಿ, ನಾನ್ ಮತ್ತೆ ಮಾಡಿದ್ರೆ ನಾಟ್ ರೀಚೆಬಲ್!

ಇದೇನಪ್ಪಾ ಅಂದ್ಕೊಂಡೇ ಮನೆಯಿಂದಾ ಹೊರ್ಗಡೆ ಹೋಗಿ ನಾನೂ ಕ್ಯಾಬ್ ಬರೋ ದಾರೀನೇ ನೋಡ್ತಾ ನಿಂತೆ.
ಅಂತೂ ಇಂತೂ ತಲೆ ತೂಗ್ತಾ, ಹಾರ್ನ್ ಮಾಡ್ಕೊಂಡು, ಬಸ್ರಿ ಹೆಂಗ್ಸಿನ್ ಥರಾ ಹೊಟ್ಟೆ ಬಿಟ್ಕೊಂಡು ನನ್ ಕ್ಯಾಬ್ ಬಂತು.
ಒಳ್ಗಡೆ ಹೋಗಿ ಕೂತೆ. ಜೋರಾಗಿ ಎಫ್.ಎಮ್ ನಲ್ಲಿ ಯಾವ್ದೋ ಕನ್ನಡದ ಹೊಸಾ ತಮ್ಟೆ ಹಾಡು ಕಿರಚ್ತಾ ಇತ್ತು. ಡ್ರೈವರ್ ನಾನು ಹತ್ತಿದ್ ತಕ್ಷಣಾ ಒಂದು ಒಲ್ಲದ ಮನಸಿನ, ಆದ್ರೆ ಪ್ರೀತಿ ತುಂಬಿದ ಸ್ಮೈಲ್ ಕೊಟ್ಟಾ! ನಾನು ಹ್ಮ್ಮ್ ಅಂದೆ. ಮತ್ತೆ ಸುಮ್ನಿರ್ದೆ ಸಾರ್ ಊಟಾ ಆಯ್ತಾ? ಏನ್ ತಿಂದ್ರಿ? ಚಿಕ್ಕನ್ನೋ ಮಟ್ಟನ್ನೋ ಅಂದಾ. ನಾನು ಮುಖಾ ಊದಿಸ್ಕೊಂಡು ಅನ್ನಾ ಸಾಂಬಾರ್ ಅಂದೆ, ಜೊತೆಗೆ ಅವತ್ತೇ ಹೇಳ್ಲಿಲ್ವೆಂಡ್ರೀ ನಾನು ಪ್ಯೂರ್ ಪಕ್ಕಾ ವೆಜ್ಜು ಅಂತಾ ರೇಗ್ದೆ. ಅವ್ನು ಮತ್ತೆ ಅಷ್ಟಕ್ಕೇ ಸುಮ್ನಿರ್ದೆ ಏನೇನೋ ಕೇಳ್ತಾ ಇದ್ದಾ, ನಂಗೆ ಅದ್ಯಾವ್ದೂ ತಲೆಗೆ ಹೋಗ್ತಾನೇ ಇರ್ಲಿಲ್ಲಾ..
ಇವ್ನು ಯಾಕ್ ಹಂಗ್ ಫೋನ್ ಕಟ್ ಮಾಡ್ದಾ? ಏನ್ ಜಗಳಾ ಆಗಿರ್ಬಹ್ದು? ಏನ್ ಕಥೆ? ಅದ್ರ್ ಸುತ್ತಾನೇ ನನ್ ತಲೆ ತಿರಗ್ತಾ ಇತ್ತು..!

ಅಂತೂ ಇಂತೂ ಅವ್ನು ಬಂದಾ., ದಿನಾ ಮಾತಾಡ್ಕೊಂಡು ಮಗಾ ಮಚ್ಚಿ ಅಂತಾ ರೇಗಿಸ್ತಾ ಮಾತಾಡ್ತಾ ಇರೋನು ಅರ್ರೆ ಇವತ್ತು ಯಾಕೆ ಸುಮ್ನೆ ಕೂತಿದಾನೆ? ಏನು ಅಂಥದ್ದು ಆಗಿರ್ಬಹುದು, ಸುಮ್ನೆ ಇರ್ಲಿ, ಅವ್ನಿಗೆ ಅವ್ನ್ ಸ್ಪೇಸ್ ಕೊಡೋಣಾ, ಹೇಳ್ಬೇಕು ಅನ್ಸಿದ್ರೆ ಅವ್ನಾಗ್ ಅವ್ನೇ ಹೇಳ್ತಾನೆ, ಫೋನ್ ನಲ್ ಬೇರೆ ಮಾತಾಡ್ಬೇಕು ಅಂದಿದಾನೆ, ಹೇಳೇ ಹೇಳ್ತಾನೆ ಅಂತಾ ನನ್ ತಲೆಲೀ ಕೊರೀತಾ ಇರೋ ಹುಳಕ್ಕೆ ಹೇಳಿ ಸುಮ್ನೆ ಕೂತೆ.
ಅಷ್ಟ್ರಲ್ಲಿ ಮಧ್ಯೆ ಮಧ್ಯೆ ನಾಲ್ಕೈದು ಹೆವೀ ಸಿಗ್ನಲ್, ಮತ್ತೆರ್ಡು ತಮಟೆ ಹಾಡು, ಒಂದೆರ್ಡು ಪ್ರೇಮ ಗೀತೆಗಳು ಬಂದು ಹೋದ್ವು. ಡ್ರೈವರ್ ಸೂಪರ್ ನಾ ಬಾಯಲ್ ಹಾಕ್ಕೊಂಡು ಅದ್ನಾ ಮತ್ತೆ ಕಿರಚ್ತಾ ಇರೋ ಹಾಡನ್ನಾ ಎರಡನ್ನೂ ಎಂಜಾಯ್ ಮಾಡ್ಕೊಂಡು ಗಾಡಿ ಓಡಿಸ್ತಾ ಇದ್ದಾ.
ನಾನು ಈ ಪಾರ್ಟಿ ಯಾಕೆ ಇನ್ನೂ ಸುಮ್ನೆ ಕೂತಿದೆ ಅಂತಾ ಲೆಕ್ಕಾಚಾರಾ ಹಾಕ್ತಾ ನನ್ ಸಹಜ ಕುತೂಹಲದ ಪ್ರಾಣಿಗೆ ಸುಮ್ನೆ ಇರು ಸುಮ್ನೆ ಇರು ಅಂತಾ ಗದರಿಸಿ ಹೇಳೋ ಪ್ರಯತ್ನಾ ಮಾಡ್ತಾ ಇದ್ದೆ.

ಯಾವಾಗಾ ಮಲ್ಯಾ ಸಿಗ್ನಲ್ ದಾಟಿ, ರಿಚ್ಮಂಡ್ ಸಿಗ್ನಲ್ ಬಂತೋ ಪಾಪಾ ಅವ್ನು ಅಳೋಕೆ ಶುರು ಮಾಡ್ಬಿಟ್ಟ.
ನಾನು ಯಾಕಪ್ಪಾ ಏನಾಯ್ತು, ಸಮಾಧಾನಾ ಮಾಡ್ಕೋ ಅಂದ್ರೂ ಕೇಳ್ತಾ ಇಲ್ಲಾ, ಮತ್ತೂ ಜೋರಾಗಿ ಅಳೋದ್ ಒಂದೇ ಮಾಡ್ತಾ ಇದಾನೆ.
ಥತ್ತೆರೀ, ಏನ್ ಮಾಡೋದಪ್ಪಾ ಅಂದ್ಕೊಂಡು ಒನ್ ಸೆಕೆಂಡ್ ಬ್ಲ್ಯಾಂಕ್ ಆಗೋದೆ. ಕ್ಯಾಬಲ್ಲಿ ಎಲ್ಲಾರೂ ನಮ್ನೇ ನೋಡ್ತಾ ಇದಾರೆ, ಏನ್ ಮಾಡೋದು ಅಂದ್ಕೊಂಡು ಅವ್ನ್ ಕೂತಿರೋ ಸೀಟ್ ಗೆ ಹೋಗಿ ಅವ್ನ್ ಪಕ್ಕಾನೇ ಕೂತ್ಕೊಂಡೆ. ಅಳು ಮತ್ತೂ ಜೋರಾಯ್ತು,. ನಂಗ್ ಯಾಕ್ ಬೇಕಾಗಿತ್ತು ಇದು, ಚೆನ್ನಾಗಿ ಮುದ್ದಾಗಿರೋ ಹುಡ್ಗಿ ಅತ್ರೆ ಸಮಾಧಾನ ಮಾಡೋ ನನ್ ವಯಸ್ಸಲ್ಲಿ ನಂಗೆ ಇದು ಬೇಕಿತ್ತಾ ಅಂತಾ ನಂಗೆ ಆ ಟೈಮ್ ನಲ್ಲೂ ಅನ್ಸಿದ್ದು ನನ್ನ ಯಾವ ಮೂರ್ಖತನ ಅಂತಾ ನಂಗೆ ಈಗ್ಲೂ ಗೊತ್ತಾಗ್ತಾ ಇಲ್ಲಾ.

ಅವ್ನು ಮತ್ತೂ ಜೋರಾಗಿ ಅಳ್ತಾ ''ಅಲ್ರೀ, ನಾನ್ ಏನ್ ಜಗತ್ತಿನಲ್ಲಿ ಯಾವ ಮಕ್ಳೂ ಮಾಡ್ದೇ ಇರೋ ತಪ್ಪು ಮಾಡಿದೀನಾ, ಹಂಗೇನಾದ್ರೂ ಯಾವನ್ನಾದ್ರೂ ಅಂದ್ರೆ ಬನ್ನಿ, ಬರ್ಲೀ ಎಲ್ರೂ ಬಂದು ನನ್ನಾ ಹೊಡ್ದು ಹೊಡ್ದು ಸಾಯ್ಸಿಬುಡ್ಲೀ ಅನ್ನೋದು ಅಳೋದು ಅಷ್ಟೇ ಮಾಡ್ತಾ ಇದಾನೆ!
ನಾನು ಕೋಪದಲ್ಲಿ ಮನೆ ಬಿಟ್ಟು ಬಂದ್ ಬುಟಿದೀನಿ, ಇನ್ನು ಸತ್ರೂ ನಾ ನಿಮ್ ಮುಖಾ ನೋಡಲ್ಲಾ, ನೀವೂ ನನ್ ನೋಡೋಕೆ ಬರಬೇಡಿ ಅಂತೆಲ್ಲಾ ಹೇಳ್ಬುಟ್ ಬಂದಿದೀನಿ ಅಂತಾನೆ! ನಂಗೆ ಎದೆಯಲ್ಲಿ ಆಗ ಸಣ್ಣಗೆ ನಡುಕ ಶುರು ಆಯ್ತು..
ನಾನೂ ಮೂರ್ ನಾಲ್ಕು ಸೆಕೆಂಡ್ ತಲೆ ಮೇಲೆ ಕೈ ಹೊತ್ತು ಕೂತೆ.
ಆಮೇಲೆ ಅವ್ನ್ ಬೆನ್ ಮೇಲೆ ಕೈ ಇಟ್ಟು ಸಮಾಧಾನ ಮಾಡಿ ಅಂತೂ ಇಂತೂ ಕಣ್ಣೀರು ನಿಲ್ಸ್ದೆ. ನಂಗೆ ಗೊತ್ತಿರೋ ಸಾಧ್ಯಾ ಅಂತಾ ಅನ್ಸೋ ಸಲ್ಯೂಷನ್ಸ್ ಎಲ್ಲಾ ಕೊಟ್ಟೆ.. ಆದ್ರೂ ಉಹುಂ!! ಮತ್ತೆ ಅವ್ನ್ ಕಣ್ಣಲ್ಲಿ ನೀರು ಜಿನುಗ್ತಾನೇ ಇತ್ತು.

(ಆಮೇಲೆ ದಾರಿ ಮಧ್ಯ ಮಧ್ಯ ಅವ್ನು ಎಲ್ಲಾ ಕಥೆ ಏನು ಎತ್ತ ಅಂತೆಲ್ಲಾ ಹೇಳ್ದ! ಅವ್ನೂ ಇಲ್ಲಿ ನನ್ ಫೇಸ್ಬುಕ್ ಫ್ರೆಂಡ್ ಆಗಿರೋದ್ರಿಂದಾ ಅದ್ನೆಲ್ಲಾ ಪೂರ್ತಿ ಡೀಟೇಲ್ ಆಗಿ ನಾನು ಹೇಳೋಕ್ ಇಷ್ಟಾ ಪಡಲ್ಲಾ!!)

ಆಮೇಲೆ ರಾತ್ರಿ ಆಫೀಸ್ ನಲ್ಲಿ ಅವ್ನು ಊಟ ಮಾಡಿಲ್ಲಾ, ಮಾತಾಡಿಲ್ಲಾ, ನಾನೂ ಇನ್ನು ಇವ್ನಿಗೆ ಏನ್ ಮಾಡೋದಪ್ಪಾ ಅಂತಾ ಯೋಚಿಸ್ತಾ ಕೂತೆ.
ರಾತ್ರಿ ಎಲ್ಲಾ ಮುಚ್ಕೊಂಡು ಕೆಲ್ಸಾ ಮಾಡೋದ್ ಬಿಟ್ಟು ಏನ್ ಮಾಡೋದು ಅಂತಾ ಇಬ್ರೂ ಡಿಸ್ಕಸ್ ಮಾಡ್ತಾ ಕೂತ್ವಿ. ಯಾರೋ ಬಂದು ನಿಮ್ಗೆ ಸಂಬ್ಳಾ ಕೊಡೋದು ಹೀಗೆ ಆರಾಮ್ ಆಗಿ ಏ.ಸಿ ರೂಮಲ್ಲಿ ಕೂತ್ಕೊಂಡು ಊರ್ ಮೇಲಿನ್ ವಿಷ್ಯಾ ಮಾತಾಡೋಕಾ ಅಂತಾ ಇಂಗ್ಲೀಶ್ ನಲ್ಲಿ ಬೈದು ಹೋದ್ರು. ನಾವು ಮತ್ತೆ ಪೆಕ್ರು ಥರಾ ಸರೀ ಬ್ಯಾಡ ಬಿಡೀ. ಸಂಬ್ಳಾ ಸ್ವಲ್ಪಾ ಕಡ್ಮೇನೆ ಕೊಡಿ ಒಂದ್ ಹತ್ತಿಪ್ಪತ್ತು ರೂಪಾಯಿ ಹಿಡ್ಕೊಂಡೇ ಕೊಟ್ರೂ ಪರ್ವಾಗಿಲ್ಲಾ, ನಾವ್ ಆರಾಮಾಗಿ ಹೊರ್ಗಡೆ ತಂಪಾದ ಗಾಳಿಯಲ್ಲೇ ಮಾತು ಆಡ್ಕೊತೀವಿ ಅಂತಾ ಕನ್ನಡ ದಲ್ಲಿ ಮಾತು ಆಡ್ಕೊಂಡು ನಕ್ಕಿದ್ದು ಆ ಹುಡ್ಗಿಗೆ ಗೆ ಕೇಳ್ಸಿದ್ರೂ ಅರ್ಥಾ ಆಗ್ದೆ 'ಡು ಯುವರ್ ಅಸೈನ್ಡ್ ವರ್ಕ್' ಅಂತಾ ಮೂತಿ ತಿರುಗ್ಸಿ ಹೇಳಿ ಹೋದ್ಲು.
ಆದ್ರೂ ಈ ಯಪ್ಪನ್ ಮುಖದಲ್ಲಿ ಒನ್ ಸ್ಮೈಲ್ ಕೂಡ ಬಂದಿಲ್ಲಾ...

ಆಮೇಲೆ ರಾತ್ರಿ / ಬೆಳಗಿನ ಜಾವ  ಮನೆಗೆ ಬರೋ ಹೊತ್ನಲ್ಲಿ ಅವ್ರ್ ಅಮ್ಮಾ ಪಾಪಾ ಕಿವಿಗೆ ಶಾಲು ಹಾಕ್ಕೊಂಡು ಗೇಟ್ ಹತ್ರಾನೇ ಕಾಯ್ತಾ ನಿಂತಿದ್ರು. ಏನೇ ಆದ್ರೂ ಅಮ್ಮನ್ ಪ್ರೀತೀನೆ ಹಾಗೆ, ಅದ್ರಲ್ಲೂ ಭಾರತದ ಅಮ್ಮಂದಿರು, ಕರ್ನಾಟಕದ ಅಮ್ಮಂದಿರದು ಒಂದು ಕೈ ಮೇಲೇನೇ ಮುದ್ದು ಮಾಡೋದ್ರಲ್ಲಿ :)
ಅವ್ನ್ ಬಂದಿದ್ ತಕ್ಷಣ ಓಡ್ ಹೋಗಿ ಅವ್ನ್ ತಬ್ಕೊಳೋಕೆ ಟ್ರೈ ಮಾಡ್ತಾ ಇದ್ರೂ. ಏನೇ ಆದ್ರೂ, ಎಷ್ಟೇ ಬೈದ್ರೂ ಅಪ್ಪಾ ಅಮ್ಮಾ ಅಲ್ವಾ? ಅವ್ರು ಆವ್ರ್ ಮಕ್ಳಿಗೆ ಬೈದೆ ಇನ್ಯಾರ್ಗೆ ಬೈತಾರೆ? ಜಗತ್ ನಲ್ಲಿ ಯಾವ್ ಅಪ್ಪ ಅಮ್ಮಂಗೂ ತಮ್ ಮಕ್ಳು ಹಾಳಾಗ್ಲಿ, ಉಪವಾಸ ಬಿದ್ದು ಸಾಯ್ಲಿ ಅಂತಾ ಇರೊಲ್ಲಾ ಅಲ್ವಾ??
ಅವ್ರ್ ಅಮ್ಮಾ ಅವ್ನ್ ಹತ್ರಾ ಮಾತು ಆಡೋಕೆ ಅಂತಾ ಬರ್ತಾ ಇದ್ರೂ, ಇವ್ನು ಅವ್ರ್ ಮೇಲಿನ್ ಕೋಪಕ್ಕೆ ಮತ್ತೂ ದೂರಾ ದೂರಾ ಓಡಿ ಹೋಗ್ತಾನೇ ಇದ್ದಾ!
ನಂಗೂ ಕ್ಯಾಬ್ ಹಿಂದಿನ ಗ್ಲಾಸ್ ನ ಸೀ ಥ್ರೂ ನಲ್ಲಿ ನೋಡಿ ನೋಡಿ ಕಣ್ಣಲ್ಲಿ ನೀರು ಬಂದ್ಬುಡ್ತು!!

ಮನುಷ್ಯ ಸಂಬಂಧಗಳೇ ಹಾಗೆ, ತುಂಬಾ ನಾಜೂಕಾಗಿ ಪ್ರೀತಿಯಿಂದ ಬೆಳೆಸಿದರೆ, ನೋಡಿಕೊಂಡರೆ ಸಾವಿರ ಕಾಲ ಚೆನ್ನಾಗಿ ನಗುತ್ತಾ ಬಾಳಿಕೆ ಬರುತ್ತದೆ. ಅದೇ ಕೋಪಾ ಮಾಡ್ಕೊಂಡು ನಾನ್ ಮಾಡಿದ್ದೇ ಸರೀ, ನಂಗೆ ನಿನ್ ಕಂಡ್ರೆ ಆಗಲ್ಲಾ, ಅಡ್ಜಸ್ಟ್ಮೆಂಟ್ ಬೇಡಾ ಬರೊಲ್ಲ ಅಂದ್ರೆ ಎರಡೇ ನಿಮಿಷಕ್ಕೆ ಬೆಂಕಿ ಬಿದ್ದೋಗತ್ತೆ.
ಇದು ಬರೀ ಅಮ್ಮ-ಮಗನ ಸಂಬಂಧ ದಲ್ಲಿ ಮಾತ್ರಾ ಅಲ್ಲಾ, ಅಪ್ಪ ಮಗ , ಅಮ್ಮ ಮಗಳು, ಲವರ್ಸ್, ಗಂಡ ಹೆಂಡತಿ, ಬೆಸ್ಟ್ ಫ್ರೆಂಡ್ಸ್, ಯಾರ್ ಮಧ್ಯಾ ಬೇಕಾದ್ರೂ ಆಗ್ಬಹುದು ಅಲ್ವಾ?
ಅರಿತು, ಹೊಂದ್ಕೊಂಡು, ಇದ್ದಿದ್ರಲ್ಲೇ ಚೆನ್ನಾಗಿ ಹಂಚ್ಕೊಂಡು ಬಾಳಿದ್ರೆ ಸ್ವರ್ಗಾನಾ ಎಲ್ ಯಾಕ್ ಹುಡ್ಕೋಕೆ ಹೋಗೋಣಾ ಹೇಳಿ, ಅದು ಬೇಡ ಬೇಡಾ ಅಂದ್ರೂ ಆಗ ನಮ್ ಕಾಲ್ ಎದುರ್ಗಡೇನೇ ಕಾಲ್ ಮುರ್ಕೊಂಡು ಬಿದ್ದಿರತ್ತೆ :) ಆಗ ಎಷ್ಟು ಬೇಕಾದ್ರೂ ಬಾಚ್ಕೋಳಿ , ಎಲ್ಲಾ ನಿಮ್ದೇ:) ಆದ್ರೆ ಈಗ ಜಗಳ - ಕೋಪ - ಹೊಡೆದಾಟ ಬೇಡ ಅಲ್ವಾ??

ದೇವ್ರೇ, ಪಾಪಾ ಅವ್ರಿಬ್ರೂ ಒಂದಾದ್ರೆ ಸಾಕಪ್ಪಾ ಅನ್ಸ್ಬಿಟ್ಟಿದೆ. ನೀವೂ ಸಹ ಆ ತಾಯಿ ಮಗಾ ಒಂದಾಗ್ಲಿ ಅಂತಾ ದೇವರ ಹತ್ರಾ ಕೇಳ್ಕೊತೀರಾ ತಾನೇ??!