Tuesday, June 14, 2011

''ರಾತ್ರಿ, ಟೆರೆಸ್, ನಾನು ಮತ್ತು ನನ್ನ ಕನಸು'' - 1


ಯಾಕೋ ಗೊತ್ತಿಲ್ಲ, ಬಹಳ ದಿನಗಳಿಂದ ಹೇಳಬೇಕು ಹೇಳಲೇ ಬೇಕು ಅಂದುಕೊಂಡು ಮನದಲ್ಲೇ ಬೆಳೆಯಲು ಬಿಟ್ಟು, ಅದನ್ನು ಅಲ್ಲೇ ಕೂಡಿಹಾಕಿ, ಅದಕ್ಕೆ ಅದರ ಮಿತಿಯನ್ನೂ ಗಡಿಯನ್ನೂ ದಾಟಲು ಬಿಟ್ಟು, ಸಿಹಿಗನಸನ್ನು ಕಾಣಲು ಸ್ವಾತಂತ್ರ್ಯ ಕೊಟ್ಟು, ಅದರದೇ ಆದ ಕಲ್ಪನೆಯ ಮೊಟ್ಟೆಗೆ ಕಾವನ್ನು ಕಾಯಲು ಕೊಟ್ಟು, ಮನಸ್ಸಿನಲ್ಲಿ ಹಾಗೆಯೇ ಬಿಟ್ಟಿದ್ದೆ.... ಇಂದು ಅದನ್ನು ಹೇಳಲೇ ಬೇಕು ಅಂತ ಅನ್ನಿಸದಿದ್ದರೂ ಯಾಕೋ ಅದು ತನ್ನಿಂದ ತಾನೇ ಹೊರಬರುತ್ತಿದೆ.. ಮಾತೇ ಮೌನವಾಗಿ, ಮೌನವೇ ಹಾಡಾಗಿ, ಹಾಡು ಮತ್ತೆ ರಾಗವಾಗಿ ಅದೇ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ, ಕೊಲ್ಲುತ್ತಿದೆ. ನೆನಪಿನಾಳದಲ್ಲಿ ನೂಕಿ, ಜೀಕಿ ಅದರದೇ ಆದ ಖುಷಿಯನ್ನು ನನ್ನ ನೋವಿನಲ್ಲಿ ಕಂಡುಕೊಳ್ಳುವ ಸಮರ್ಥ/ವ್ಯರ್ಥ ಪ್ರಯತ್ನ ಅದರದ್ದಿರಬಹುದೇ ಎಂಬ ಅನುಮಾನ ನನ್ನ ಕಾಡಿದ್ದಂತೂ ಸುಳ್ಳಲ್ಲ.  
Jepee Bhat

ಗೆಳತೀ,
ಇಂದು ನಿನ್ನ ನೆನಪಾಗಿ, ನಿನ್ನದೇ ನೆನಪಿಗೋಸ್ಕರ ಅಲ್ವೇ ಅಲ್ಲ,.. ಯಾವಾಗಲೂ ಟೆರೆಸ್ ಮೇಲೆ ಬರುವ ನನಗೆ ಇಂದು ಯಾಕೋ ನನ್ನ, ನಮ್ಮ ಮನೆಯ ಟೆರೆಸ್ಸೇ ನನಗೆ ವಿಶೇಷವಾಗಿ, ಜಗತ್ತಿನ ಅತೀ ಖುಷಿಯ ಮತ್ತು ಅಷ್ಟೇ ದುಃಖದ ಸ್ಥಳವಾಗಿ ಕಾಣುತ್ತಿದೆ. ಮತ್ತದೇ ಉತ್ತರ ಯಾಕೋ ಗೊತ್ತಿಲ್ಲ. ವಾತಾವರಣವಂತೂ ಅತ್ಯದ್ಭುತ. ಅಲ್ಲಿ ಈಗ ನೀನು ನನ್ನ ಜೊತೆ ಇದ್ದಿದ್ದರೆ ಹೇಗಿರಬಹುದಿತ್ತು ಎಂಬ ಕಲ್ಪನೆಯೇ ಸಾಕು ನನಗೆ ಮತ್ತಷ್ಟು ಸಿಹಿ ಸಿಹಿ ಮೂಟೆಯ ಕನಸನ್ನು ನನ್ನ ಜೀವನವಿಡೀ ಕಲ್ಪಿಸಿಕೊಳ್ಳಲು..
ಬಹುಶಃ ಮಳೆ ಬಂದು ನಿಂತು ಅರ್ಧ-ಮುಕ್ಕಾಲು ಘಂಟೆ ಆಗಿರಬಹುದು.. ಈಗ ಇಲ್ಲಿಯ ವಾತಾವರಣ, ಪರಿಸರ ನೀನು ಇಲ್ಲದೆಯೂ ಸಹ ಘಮ ಘಮಿಸುತ್ತಿದೆ.. ಆಗ ತಾನೇ ಮಳೆಯ ಹನಿಯನ್ನು ಕುಡಿದು ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡ ಭೂಮಿ, ಅದರ ಮಣ್ಣಿನಿಂದ ಹೊರಸೂಸುತ್ತಿರುವ ಆಗ ತಾನೇ ಮಳೆ ನಿಂತು, ಮಳೆ ನೀರನ್ನು ಕುಡಿದ ಮಣ್ಣು ಬೀರುತ್ತಿರುವ ಅದರದೇ ಆದ ವಿಶೇಷವಾದ ಪರಿಮಳ.., ಅದರ ಸವಿಯನ್ನು ಸವಿಯುವುದೇ ಒಂದು ಚಂದ. ಹೂವಿನ ಗಿಡಗಳು, ಯಾವುದೋ ಜಾತಿಯ ಕಾಡು ಮರಗಳು, ತನ್ನೆಲ್ಲ ಭುಜಗಳ ಮೇಲೆ, ನೆತ್ತಿಯ ಮೇಲೆ, ಅಂಗಾಂಗಗಳ ಮೇಲೆ ಆಕಾಶದ ಅಮೃತ ಹನಿಗಳನ್ನು ತುಂಬಿಕೊಂಡು, ಅದರಲ್ಲೇ ನೆನೆಯುತ್ತಾ, ತೇಲಾಡುತ್ತಾ ಆರಾಮಾಗಿ ಆಚೆಯಿಂದ ಈಚೆ, ಈಚೆಯಿಂದ ಮತ್ತೆಲ್ಲೋ ಬಾಗುತ್ತಾ ನಲಿಯುತ್ತಿದ್ದವು. ಆಗ ತಾನೇ ಮೇಯ್ದುಕೊಂಡು ಬಂದ ಹಸುಗಳು, ಅವುಗಳ ಕರುಗಳು ಚಿಗುರಿದ ಹಸಿ ಗರಿಕೆ ಹುಲ್ಲನ್ನು ತಿನ್ನುತ್ತಾ, ಅವನ್ನೇ ಮೆಲುಕು ಹಾಕುತ್ತಾ ಅವರದೇ ಆದ ಖುಷಿಯನ್ನು ಅನುಭವಿಸುತ್ತಿದ್ದವು. ಶಾಲೆ ಬಿಟ್ಟು ಬಂದ ಮಕ್ಕಳು, ಅವರನ್ನು ಕರೆದೊಯ್ಯಲು ಬಂದ ಅವರ ಅಪ್ಪ ಅಮ್ಮಂದಿರು ಎಲ್ಲರೂ ಅಚಾನಕ್ಕಾಗಿ ಬಂದ ಮಳೆಗೆ ಸಿಕ್ಕಿ ತತ್ತರಿಸಿ ಹೋಗಿದ್ದರು.. ಕೆಲವರಂತೂ ಮಳೆಗೆ ಶಪಿಸಿ ಬಯ್ಯುತ್ತಿದ್ದರೆ, ಪ್ರೇಮಿಗಳು ಮಳೆಯಲ್ಲೇ ಮನೆಯ ಹಿಂದಿನ ಪಾರ್ಕಿನಲ್ಲಿ ತಂ ತಮ್ಮ ಕನಸುಗಳನ್ನು ಕಾಣುತ್ತಾ, ಭವಿಷ್ಯದ ಚಿಂತೆಯಲ್ಲಿ ಮತ್ತಿನ್ನೇನೋ ಮಾಡುತ್ತಾ ಮೈ ಮರೆತಿದ್ದರು.. ಆಫೀಸಿನಿಂದ ಆಗಷ್ಟೇ ಹೊರಗೆ ಬಂದ ನೌಕರರು ಹೇಗೆ ಹೋಗುವುದು ಎಂದು ಚಿಂತಿಸುತ್ತಾ ಕೂತಿದ್ದರು. ಕಾರಿದ್ದವರು ಕಾರಿನಲ್ಲಿ, ಬೈಕ್ ಇದ್ದವರು ಅದರಲ್ಲಿ, ಏನೂ ಇಲ್ಲದೇ ಇದ್ದವರು ಎದುರಿನ ಚಹದ ಅಂಗಡಿಯಲ್ಲಿ ಅರ್ಧ ಕಪ್ ಚಹದೊಂದಿಗೆ ಮಳೆರಾಯನನ್ನೇ ನೋಡುತ್ತಾ, ದೊಡ್ಡ ಕಣ್ಣುಗಳನ್ನು ಬಿಡುತ್ತಾ, ಕೈನಲ್ಲಿ ಇರೋ ಬೀಡಿಯ ಹೊಗೆಯನ್ನು ಉಂಗುರ ಉಂಗುರವಾಗಿ ಮಾಡಿ ಬಿಡುತ್ತಾ, ಶೂನ್ಯ ದೃಷ್ಟಿಯಿಂದ ಆಕಾಶವನ್ನೇ ದಿಟ್ಟಿಸುತ್ತಿದ್ದರು. ಇನ್ನು ತರಕಾರಿ ಸಂತೆಯಲ್ಲೋ ಅದರ ಗೌಜು-ಗಲೀಜು-ಗೋಜಲು-ಗದ್ದಲವನ್ನು ಹೇಳದಿದ್ದರೇನೆ ಚಂದ. ಅಲ್ಲಿಯ ಟೆಂಟ್, ಅರ್ಧಂಬರ್ಧ ಹರಿದು ಕಟ್ಟಿರುವ ಗೋಣಿಚೀಲ, ಗೋಣಿಚೀಲವನ್ನೇ ಗೋಡೆಯಾಗಿ ಮಾಡಿಕೊಂಡು, ಅಲ್ಲೇ ಅದರಲ್ಲೇ ಜಾಗವನ್ನು ಭಾಗಮಾಡಿ, ವ್ಯಾಪಾರ ಮಾಡುವ ಬುದ್ಧಿವಂತ ವ್ಯಾಪಾರಸ್ಥರು, ಅಲ್ಲಿಯ ಗಲೀಜು ಕೊಳಕ ನಡುವೆಯೇ ಅರ್ಧ ಕೇಜಿ, ಒಂದೂ ವರೆ ಕೇಜಿ ತೆಗೆದುಕೊಳ್ಳುವ, ಆಗ ತಾನೇ ಮದುವೆಯಾದ ಇನ್ನೂ ತರಕಾರಿ, ಅಡುಗೆ ಎಂದರೇನೆ ಗೊತ್ತಿಲ್ಲದ ಶ್ರೀಮಂತರ ಮನೆಯ ಹೆಣ್ಣು ಮಗಳು, ಯಾವಾಗಲೂ .ಸೀ ಕಾರಿನಲ್ಲಿಯೇ ಓಡಾಡುವ ಅವರು ಮಳೆಗೆ ಗಲೀಜು ನೆಲದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿ......,.,  ಇವೆಲ್ಲವನ್ನೂ ನಿನ್ನೊಟ್ಟಿಗೇ ನಿನ್ನ ಜೊತೆಗೇ ಒಂದೆರಡು ಹೆಜ್ಜೆ ಹಾಕಿ ಕೈ ಕೈ ಹಿಡಿದುಕೊಂಡು ಓಡಾಡಿಕೊಂಡು ನೋಡಿದರೇನೇ ಎಷ್ಟು ಚಂದ ಅಲ್ವೇನೆ...?? ಇವಿಷ್ಟೂ ಮತ್ತಷ್ಟೂ ಆಗಿದ್ದು ಇಳಿ ಸಂಜೆಯ ಹೊತ್ತಲ್ಲಿ ಇವತ್ತಿನ ಮೊದಲನೇ ಮಳೆ ಯಾರಿಗೂ ಹೇಳದೇ ಕೇಳದೇ ಒಂಚೂರೂ ಸೂಚನೆ ಕೊಡದೇ ಬಂದಾಗ.. ಈಗ ಇವತ್ತಿನ ಎರಡನೇ ಮಳೆ ಬಂದು ನಿಂತಿದೆ.. ಆದರೆ ಈಗ ಯಾಕೆ ಇವೆಲ್ಲ ನೆನಪಾಗಿವೆ?, ಮತ್ತೂ ಮತ್ತೂ ನೆನಪಾಗುತ್ತಲೇ ಇವೆ ಎಂಬುದಕ್ಕೆ ಮತ್ತೊಮ್ಮೆ ನನ್ನಲ್ಲಿ ಉತ್ತರವಿಲ್ಲ.. ಮುಗುಳ್ನಗೆಯ ಸಹಿತ ಮೌನದ ಹಾಗೆ ಸುಮ್ಮನೆಯೇ ಉತ್ತರವಿದ್ದಿರಬಹುದು... ನೀನು ನನ್ನ ಜೊತೆ ಈಗ ಇದ್ದಿದ್ದರೆ ಅದಕ್ಕೆ ಮೌನದ ಹೊರತಾಗಿಯೂ ಮಾತಿನ ಉತ್ತರ ಸಿಗುತ್ತಿತ್ತೇನೋ?! ಗೊತ್ತಿಲ್ಲ.. ಇರಲಿ ಬಿಡು..
Jepee Bhat.2

ಇಂದು ನೆನಪಿನಾಳದ ಕಡಲಲ್ಲಿ ಸಾಗುತ್ತಿದ್ದ ದೋಣಿಗೆ ಒಮ್ಮೆಲೇ ಸಮುದ್ರದ ಅಲೆಗಳು ಯಾಕೋ ಎಂದಿನಂತೆ ಸ್ನೇಹಿತರಂತೆ ವರ್ತಿಸುತ್ತಿಲ್ಲ., ಅವುಗಳಿಗೂ ಅವುಗಳ ಮೇಲೆ ದಿನವೂ ಸಾಗುವ ದೋಣಿಯ ಮೇಲೆ ಯಾಕೋ ಮುನಿಸು. ಅಲೆಗಳ ಮುಖಾಂತರ ದೋಣಿಯನ್ನು ನೆಮ್ಮದಿಯಾಗಿ ತೇಲಿಸಲು ಬಿಡದೇ, ಅವುಗಳಿಗೂ ತೊಂದರೆಯನ್ನು ಕೊಡುತ್ತಿವೆ.. ಕಡಲಿನ ದೋಣಿ ಸಾಗದೇ ನಲುಗಿದರೆ ಪಾಪ ಅದರ ಚಾಲಕನ ಪರಿಸ್ಥಿತಿ, ಮನಸ್ಥಿತಿ, ಅವನ ಹೃದಯದ ಭಾವನೆಗಳೂ ನಲುಗಿ, ಅಲುಗಿ ಅತ್ತು ಅತ್ತೂ ಅವೂ ಕಣ್ಣೀರಿನ ಸಾಗರವಾಗಿ ಹರಿದು ಮತ್ತೆ  ಅದೇ ಸಮುದ್ರಕ್ಕೆ ಸೇರಬಹುದೆಂಬ ಘೋರ ಬೆತ್ತಲೆ ಸತ್ಯ ಅವಕ್ಕೆ ಗೊತ್ತಿದ್ದಂತಿಲ್ಲ ಪಾಪ. ಅವಾದರೂ ಏನು ಮಾಡಿಯಾವು ಅಲ್ಲವೇ?
ಶುಭ್ರ ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಮ್ಮೆಲೇ ಮೋಡ ಕವಿದು ನಾನು ನೆಮ್ಮದಿಯಿಂದ ನೋಡುತ್ತಿರುವ ಪೂರ್ಣ ಚಂದಿರನನ್ನು ಮುಚ್ಚಿದಂತೆ, ಆರಾಮವಾಗಿ ಸಾಗುತ್ತಿರುವ ಬಾಳಿನಲ್ಲಿ ಯಾರೋ ಒಮ್ಮೆಲೇ ಪ್ರವೇಶ ಮಾಡಿ ಇಡೀ ಬಾಳನ್ನೇ ತಿರುಗಿ ಮುರುಗಿಸಿ, ಮಗುಚಿ, ಹೊರಳಾಡಿಸಿ, ತಿರುಚಿ ಆಮೇಲೆ ನಮ್ಮನ್ನೇ ಮಗುವಂತೆ ಮರುಗಿಸುವ ಈ ನೆನಪುಗಳು ಎಲ್ಲಿಯೂ ಯಾರನ್ನೂ ಬಿಡುವುದಿಲ್ಲವೇನೋ ಎಂಬುದು ನಾನು ಇಲ್ಲಿ ಈಗ ನೋಡುತ್ತಲೇ ಅಳುತ್ತಲೇ ನಗುತ್ತಲೇ ದಿನವೂ ಕಂಡುಕೊಂಡ ಮತ್ತು ಕಾಣುತ್ತಿರುವ 'ಕಹಿ-ಸತ್ಯ'....
ಇಂದಿನ ಈ ಕಾಲದಲ್ಲಿ ಎಷ್ಟೋ ಕಷ್ಟ ಪಟ್ಟು, ಇಷ್ಟ ಪಟ್ಟು., ಎಷ್ಟೋ ಸಾವಿರ ಕನಸಿನ ಮೂಟೆ ಹೊತ್ತು, ಏನೇನೋ ಆಗಲು ಬಯಸಿ ಬಂದವರಿರುತ್ತಾರೆ. ಆದರೆ ಏನೋ ಮಾಡಲು ಹೋಗಿ ಏನೋ ಆಗಿ, ಆಮೇಲೆ ಅದೂ ಆಗದೇ ಮತ್ತೊಂದೇನೋ ಆಗಿರುತ್ತದೆ. ಆಗ ತಾನೇ ಹುಟ್ಟಿದ ಮಗು ಅಳುವುದನ್ನೇ ನಿಲ್ಲಿಸಿ ಚಿರನಿದ್ರೆಗೆ ಶರಣಾಗಿ ಈ ಲೋಕವೇ ಬೇಡವೆಂದು ಕಣ್ಣನ್ನು ತೆರೆಯುವ ಮೊದಲೇ ಮುಚ್ಚಿರುತ್ತದೆ. ಅದು ಮಾಡಿರುವ ಪಾಪವಾದರೂ ಏನು? ಅಥವಾ ಅದರ ಪಾಲಕರು, ಮುಂದೆ ಅದನ್ನು ಪಾಲಿಸಿ ಪೋಷಿಸಿ ಬೆಳೆಸಿ ವಿಧ್ಯಾಭ್ಯಾಸ ಮಾಡಿಸಿ ಅದಕ್ಕೆ ಮುಂದೊಂದು ದಿನ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕಾದ ಅಪ್ಪ ಅಮ್ಮ ಪಡೆದುಕೊಂಡು ಬಂದಿರುವ ಪುಣ್ಯವೇ ಅಷ್ಟಾ? ಇವೆಲ್ಲಾ ನೋಡುತ್ತಾ ಕುಳಿತರೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇಡೀ ಪ್ರಪಂಚ ನಶ್ವರ, ಯಾರಿಗೂ ಏನಕ್ಕೂ ಎಲ್ಲಿಯೂ ಸಂಬಂಧವೇ ಇಲ್ಲವೇನೋ ಅನ್ನಿಸಿಬಿಡುತ್ತದೆ.. ಹುಟ್ಟುತ್ತಾ ಅಪ್ಪ ಅಮ್ಮನ ಮುದ್ದಿನ ಮಕ್ಕಳಾಗಿ ಬೆಳೆಯುತ್ತಾ ಶತ್ರುಗಳಾಗಿ ಚಿಕ್ಕ ಭೂಮಿ ಆಸೆಗೋ, ಚಿನ್ನಕ್ಕೋ, ಅಥವಾ ಹೆಂಡತಿಯ ಮಾತು ಕೇಳಿಯೋ ಹೆತ್ತವರನ್ನೇ ದೂರ ಮಾಡುವ ಮಕ್ಕಳು... ಇವೆಲ್ಲವನ್ನೂ ನೋಡುತ್ತಿದ್ದರೆ ಮತ್ತೆ ನನಗೆ ಹಾಗನ್ನಿಸಿವುದು ಸುಳ್ಳಲ್ಲ...
ಯಾವುದೋ ಮತ್ತಿನಲ್ಲಿ, ಯಾರೊಟ್ಟಿಗೋ ಜಗಳವಾಡಿ, ಬಸ್ಸನ್ನು ಚಲಿಸುತ್ತಿರುವ ಚಾಲಕ ಅವನ ತಪ್ಪಿನಿಂದ, ಅವನ ನಿದ್ರೆಯಿಂದ, ಅಮಾಯಕ ನಲವತ್ತು-ಐವತ್ತು ಜನರ ಪ್ರಾಣ ತೆಗೆಯುವಾಗ, ಐವತ್ತು ಜನ ಯಾವ ತಪ್ಪೂ ಮಾಡದೇ ಅಮಾಯಕ ಅನ್ಯಾಯದ  ಸಾವು ಕಾಣುತ್ತಾರಲ್ಲಾ.., ಇದೂ ತಪ್ಪಾ? ಇದೂ ಕೂಡ ಯಾರ ಪಾಪಕ್ಕೋ ಯಾರೋ ಹೊಣೆ! ಯಾರೋ ಒಬ್ಬರ ತಪ್ಪಿಗೆ ಬರೋಬ್ಬರಿ ಐವತ್ತು ಜನರಿಗೆ ಸಂಪೂರ್ಣ ಶಿಕ್ಷೆ!! ಸುಮ್ಮನೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಯಾರೋ ವೃದ್ಧನಿಗೆ ಬಂದು ಗುದ್ದುವ ಲಾರಿ ರೂಪದ ಯಮನೋ, ಅಥವಾ ಅರ್ಧ ತೆಗೆದಿಟ್ಟ ಗುಂಡಿಯಲ್ಲಿ ಹೋಗಿ ಬೀಳುವ ಪುಟ್ಟ ಮಗುವೋ, ಅದೇ ಕೆಲಸದಲ್ಲಿ ಪಳಗಿರುವ ಮರ ಕುಯ್ಯುವ ಕೆಲಸಗಾರನಿಗೆ ಅದೇ ಮರ ಅವನ ತಲೆ ಮೇಲೆಯೇ ಬಿದ್ದು ಅವನು ಸಾಯುವ ಸಂದರ್ಭವೋ, ಇವೆಲ್ಲ ಯಾರ ಆಟವೋ? ಭಗವಂತ ನಮ್ಮ ತಾಳ್ಮೆ ಪರೀಕ್ಷಿಸಲು, ನಮ್ಮ ಬುದ್ಧಿಮತ್ತೆಯನ್ನು ಅಳೆಯಲು ಇಟ್ಟ ಪರೀಕ್ಷೆಗಳೋ ಒಂದೂ ಗೊತ್ತಿಲ್ಲಾ..
ಮತ್ತೆ ಮತ್ತೆ ನನಗೆ ಅನ್ನಿಸುವ, ಪದೇ ಪದೇ ಕಾಡುವ ವಿಷಯಗಳು ಹಲವಾರು. ಈ ಮಳೆಗೆ ಏನೇನೆಲ್ಲಾ ನೆನಪಿಸುವ ಶಕ್ತಿ ಇದೆ ಅಲ್ವಾ? ಎಲ್ಲೋ ಯಾವುದೋ ದಾರಿ ಹಿಡಿದು ಹೊರಟರೆ ಮುಂದೆ ಕಾಣುವ ದಾರಿ ನೂರಾರು, ಅದು ಟಿಸಿಲೊಡೆಯುವ ಪರಿ ಸಾವಿರಾರು, ನಮಗೆ ತಲೆ ಕೆಟ್ಟು ಅದು ತೋರುವ, ಮುಂಬೆಳಕು ಯಾವುದೆಂದೇ ಗೊತ್ತಾಗದೆ, ನಮಗೇ ನಮ್ಮಲ್ಲೇ ನಾವು ಹಲವಾರು ಬಾರಿ ಕಳೆದು ಹೋಗುತ್ತೇವೆ., ನಾನಂತೂ ಲೆಕ್ಕವಿಲ್ಲದಷ್ಟು ಬಾರಿ ಕಳೆದುಹೋಗಿದ್ದೇನೆ. ಇದು ಸತ್ಯ.
ಮುಂದುವರೆಯುವುದು, ಇನ್ನೂ ಇದೆ :):)
ಸದ್ಯದಲ್ಲೇ ಎರಡನೇ ಭಾಗದೊಂದಿಗೆ ಮತ್ತೆ ಬರುತ್ತೇನೆ!

2 comments:

ಅನು. said...

ಜೇಪೀ ಭಟ್ಟ್ ಕಳೆದು ಹೋಗಿರುವುದಂತೂ ಸತ್ಯ.ಮಳೆಯ ನೆವದಲ್ಲಿ,ತಾನು ಕಳೆದು ಹೋಗಿ,ಅವಳನ್ನು ಕಳೆದುಕೊಂಡು..ಏನೆಲ್ಲಾ ಇದೆ ಎಂದು ಕೊಂಡವನಿಗೆ..ಈ ಪ್ರಪಂಚದಲ್ಲಿ ಏನು ಇಲ್ಲ ಎನ್ನುವುದು ಅರಿವಾಗುವ ಹೊತ್ತಿಗೆ, ಕನಸುಗಳೆಲ್ಲಾ ನುಚ್ಚುನೂರಾಗಿ..ಎಲ್ಲಾ ಬರಿದಾದ ಅನುಭೂತಿಯಲ್ಲಿ ತೇಲಾಡುವಸ್ಟರಲ್ಲಿ,..ಏನೋ ಒಂದು ಆಶಾಕಿರಣ ಮಿಂಚಾಗಿ ಬಂದು..ಸಂಚು ಹೂಡುವುದೂ ಕೂಡ ಅಸ್ಟೇ ಸತ್ಯ.
ಕತೆಯ ಎಳೆಯನ್ನು ಬಿಡಿಸಲು ಹೋಗಿ..ತಾನೇ ಸಿಲುಕಿರುವಂತೆ ಒಮ್ಮೆ ಭಾಸವಾದರೂ ಸೂಕ್ಶ್ಮತೆಯಿಂದ ಕತೆ ಓಡಿಸಿದ ಪರಿ ಅದ್ಭುತ..ಹೀಗೇ ಸಾಗಲಿ ಕತೆಯ ಒರತೆ.ಥ್ಯಾಂಕ್ಸ್ ಜೇಪೀ..ಚೆನ್ನಾಗಿದೆ.

ಜೇಪೀ ಭಟ್ ! said...

ಕವನ:
ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!!
ನಾನೇ ಸಿಕ್ಕಿ ಹಾಕಿಕೊಂಡು ನಾನೇ ಹೇಗೋ ತಪ್ಪಿಸಿಕೊಂಡು ಬಂದೆ!!
ಧನ್ಯವಾದಗಳು!
ಹೀಗೆ ಓದ್ತಾ ಇರಿ!:)