Sunday, March 16, 2014

ನೀನ್ ಇಲ್ಲಿ ಇವತ್ತು ಬಂದಿದ್ದು ನಿಮ್ ಅಮ್ಮಂಗೆ ಗೊತ್ತಾಗ್ದೇ ಇರ್ಲೀ, ಹ್ಯಾಪೀ ಹೋಳಿ!! :)

ಹ್ಯಾಪೀ ಹೋಳಿ!!
Jepee bhat


ಜೀವನದಲ್ಲಿ ಎಲ್ಲವೂ ಬೇಕು.
ಎಲ್ಲರೂ ಬೇಕು, ಕೆಟ್ಟದ್ದು ಒಳ್ಳೆಯದು ಇದ್ರೇನೇ ಪ್ರಪಂಚ!!
ನನ್ನದು ಎಲ್ಲ ಬಣ್ಣಗಳು!!
ಕಾಮನಬಿಲ್ಲು -- ಏಳೂ ಬಣ್ಣಗಳು! ಎಲ್ಲದರ ಸಂಕೇತ.
 ಹ್ಯಾಪಿ ಹೋಳಿ ಎಲ್ರಿಗೂ :)


ಆ ಹುಡ್ಗಾ ನಮ್ ಮನೆಗೆ ಬರ್ದೇ ತುಂಬಾ ದಿನಾ ಆಗಿತ್ತು.
ಇವತ್ತು ಬಂದಾ!!
''ಗುಂಡು, ಗುಂಡೂ........''
ನಾನ್ ಯಾರಪ್ಪಾ ಅಂದ್ಕೊಂಡು ಊಂ ಅಂದೆ.
ಅವಂದೇ ಧ್ವನಿ ಥರಾ ಇದ್ರೂ ಮತ್ತೆ ಬೇರೆ ಯಾರಾದ್ರೂ ಇರಬಹುದು ಅಂತಾ ಮನಸಲ್ಲೇ ಲೆಕ್ಕಾಚಾರಾ ಹಾಕ್ಕೊಂಡು ನಿಧಾನವಾಗಿ ಕೂತಲ್ಲಿಂದಾ ಎದ್ದು ಹೊರಟೆ.

-------------------------------------------------

ಅವನು ನನಗೆ ಯಾವತ್ತೂ ಗುಂಡು ಗುಂಡೂ ಅಂತಾನೇ ಕರ್ಯೋದು, ಮಜಾ ಅಂದ್ರೆ ನಾನೂ ಅವ್ನಿಗೆ ಗುಂಡೂ ಅಂತಾನೇ ಕರೀತೀನಿ.
ಅಬ್ಬಬ್ಬಾ ಅಂದ್ರೆ ವಯಸ್ಸು ಹತ್ತು ಮುಗಿದು ಹನ್ನೊಂದಕ್ಕೆ ಬಿದ್ದಿರಬಹುದು, ಯಾವಾಗ್ಲೋ ಕೇಳ್ದಾಗಾ ನಾಲ್ಕನೇ ಕ್ಲಾಸು ಅಂದಿದ್ದಾ, ಯಾವ್ದೋ ಬೆಂಗಳೂರಿನ ವಿಜಯನಗರದ ಇಂಗ್ಲೀಶ್ ಮೀಡಿಯಂ ಸ್ಕೂಲು.
ಅವ್ನು ಯಾವತ್ತೂ ನಮ್ ಮನೆಗೇ ಹೊಸಾ ಪಿಚ್ಚರ್ ಎಲ್ಲಾ ನೋಡೋಕ್ ಬರೋವ್ನು. ಯಾವಾಗಲೂ ಇಲ್ಲೇ ತರ್ಲೆ ಮಾಡ್ಕೊಂಡು, ಜೋಡಿಸಿಟ್ಟಿರೋ ವಸ್ತುಗಳನ್ನೆಲ್ಲಾ ಚೆಲ್ಲಾ ಪಿಲ್ಲಿ ಮಾಡಿ, ಮಾಡಿರೋ ಅಡಿಗೇಲಿ ಎಲ್ಲಾನೂ ಚೂರ್ ಚೂರೇ ತಿಂದು ಸ್ಪೂನ್ ನಾ ಸಿಂಕ್ ನಲ್ಲಿ ಬಿಸಾಕ್ಬುಟ್ಟು ಗುಂಡೂ ಬಾಯ್, ಅಮ್ಮಾ ಕರೀತಿದಾರೆ!! ಆಯ್ತು, ಸೆಕೆಂಡ್ ನಲ್ಲಿ ಎಸ್ಕೇಪ್.
ಲಾಸ್ಟ್ ಟೈಮ್ ನಂಗೆ ಟೈಮ್ ಇಲ್ಲಾ ಅಂದ್ರೂ, ಚಿಕ್ ಮಕ್ಳ್ ಥರಾ ಹಿಂದೇನೇ ನೈಟಿ, ಚೂಡಿದಾರದ್ ದುಪ್ಪಟ್ಟಾ ಹಿಡ್ಕೊಂಡ್ ಬಿಡದೇ ಅವ್ರ್ ಅಮ್ಮನ್ ಹತ್ರಾ ರೋಡ್ ಸೈಡ್ ನಲ್ಲಿ ಮಾರೋ ಥಿಯೇಟರ್ ಪ್ರಿಂಟ್ ಡಿ.ವಿ.ಡೀ ನಾ ಹಠಾ ಮಾಡಿ ಮೂರ್ ದಿನಾ ಮುಕ್ಕಾಲ್ ಮುಕ್ಕಾಲ್ ಗಂಟೆ ತಗೊಂಡು ಕ್ರಿಶ್ ತ್ರೀ ಪಿಚ್ಚರ್ ನಾ ನಮ್ಮನೆಲ್ಲೇ ನೋಡ್ಕೊಂಡ್  ಹೋದಾ!!
ಇದು ಗೊತ್ತಾಗಿ ಅವ್ನ್ ಅಮ್ಮನಿಗೆ ಕೋಪಾ ನೆತ್ತಿಗೇರಿ ಎರ್ಡ್ ತೆಗೆದು ನನ್ನ ಎದುರಿಗೇನೆ ಸರಿಯಾಗ್ ಬಾರ್ಸಿದ್ರು. ಅವ್ನೂ ತುಂಬಾ ಕಿಲಾಡಿ ಆ ಮಾತು ಬೇರೆ ಬಿಡಿ. ಒಬ್ರ್ ಮಾತೂ ಒಳ್ಳೇದಕ್ಕೂ, ಏನೇ ಹೇಳಿದ್ರೂ ಕೇಳೋ ಹುಡ್ಗಾ ಅವ್ನು ಅಲ್ಲಾ, ಹಂಗ್ ಮಾಡಿದ್ರೆ ಯಾವ್ ಮಹಾ ತಾಯಿಗೆ ತಾನೇ ಸಿಟ್ಟು ಬರ್ದೇ ನಗು ಬರತ್ತೆ ಹೇಳಿ? ಯಾರಾದ್ರೂ ಸಮಾಧಾನದಿಂದ ಇರೋಕೆ ಸಾಧ್ಯಾನಾ? ಅವತ್ತು ಎಕ್ಸಾಮ್ ಇದ್ರೂನೂ ಅವ್ರ್ ಮನೆಗೆ ಹರಟೆ ಹೊಡ್ಯೋಕೆ ಹೋಗಿದ್ಯಾ ಅಂತಾ ಬೈದ್ರು ಬೇರೆ ಅವ್ನಿಗೆ, ಇನ್ನೊಂದ್ ಸಲಾ ಅವ್ರು ಇವ್ರು ಅಂತಲ್ಲಾ ಯಾರ್ದೇ ಮನೆಗೆ ನನ್ ಕೇಳ್ದೆ ಹೋದ್ರೆ ಕಾಲು ಮುರೀತೀನಿ ಮುಂಡೇದೆ ಅಂತಾ ಬೈಗುಳದ ಮಳೆ ಸುರಿಸ್ದ್ರು..  ನಂಗೇನೇ ಅಯ್ಯೋ ಪಾಪಾ ಅನ್ಸಿ ಹೋಯ್ತು! ಏನ್ ಮಾಡೋದು., ಅವ್ನ್ ಅಮ್ಮಾ ಅವರು, ತಡ್ಯೋಕೆ ನಾನ್ ಇವ್ನ್ ಅಪ್ಪಾ ಅಲ್ವಲ್ಲಾ!
ಏನಾದ್ರೂ ಮಧ್ಯಾ ಮಾತಾಡೋಕ್ ಹೋದ್ರೆ ಬೆಂಗ್ಳೂರ್ನಲ್ಲಿ ಬಿಟ್ಟಿ ಸಲಹೆ ಕೊಡೋರ್ಗೇನೂ ಕಡ್ಮೆ ಇಲ್ಲಾ, ನಮ್ ಮನೆ ಮಕ್ಳಿನ್ನಾ ಹೆಂಗ್ ಬೇಕೋ ಹಂಗ್ ಬೆಳುಸ್ತೀವಿ, ಕೇಳೋಕ್ ನೀವ್ ಯಾರ್ರೀ? ನಾವ್ ಹೊಡೀತೀವಿ, ಬಡೀತೀವಿ, ಚಚ್ಚಿ ಸಾಯ್ಸ್ತೀವಿ, ನಮ್ ಮಕ್ಳು ನಮ್ ಇಷ್ಟಾ ಅಂತಾರೆ!
ಏನೇ ನೋಡಿದ್ರೂ ನೋಡದೇ ಇರೋರ್ ಥರಾ ಸುಮ್ನಿದ್ರೆ ನಮ್ಗೇ ಕೆಲ್ವೊಂದು ವಿಷ್ಯಕ್ಕೆ ಒಳ್ಳೇದು ಅಲ್ವಾ?
ಹಂಗೆಲ್ಲಾ ಆಗ್ತಾ ಇದ್ದಾಗಾ--

--------------------------------------------------------

ಇವತ್ತು ಬಂದಾ!!
''ಗುಂಡು, ಗುಂಡೂ........''
ಶಿಟ್!!
ಇವತ್ತು ಹೋಳಿ ಅಲ್ವಾ ಸಡನ್ ಆಗಿ ನೆನ್ಪಾಯ್ತು!
ಲೋ ಬೇಡಾ ಕಣೋ ಸುಮ್ನಿರೋ ಅಂದೆ..
ಉಹುಂ ಹಾಕೇ ಹಾಕ್ತೀನಿ ಅಂದಾ.
ಅಮ್ಮನ್ ಹತ್ರಾ ಪರ್ಮಿಶನ್ ತಗೊಂಡ್ ಬಂದ್ಯಾ ಅಂದೆ. ಮಾತು ಆಡಿಲ್ಲಾ. ಅವ್ನ್ ಎರಡೂ ಕೈದು ಮುಷ್ಠಿ ಮುಚ್ಚಿತ್ತು.
ನಂಗೆ ಆಗ್ಲೇ ಒಳ್ಗಡೆ ಭಯಾ ಶುರು, ಭಯಾ ಅನ್ನೋದ್ಕಿಂತಾ ಆಮೇಲೆ ಮನೆ ಕ್ಲೀನ್ ಮಾಡೋಕ್ ಯಾರ್ ಹೆಂಡ್ತಿ ಬರ್ತಾರೆ ಅಲ್ವಾ? ನಂಗಂತೂ ಮದ್ವೆ ಆಗಿಲ್ಲಾ, ಮದ್ವೆ ಆದೋರು ಬ್ಯಾಚುಲರ್ಸ್ ಕಂಡ್ರೆ ಜಗತ್ತಲ್ಲಿ ಇರೋರಲ್ಲಿ ತೆಗೆದು ತೊಳೆದು ಸೋಸಿದ್ರೆ ಮೊದಲು ಸಿಗೋ ಕೆಟ್ಟೋರು, ಶತ್ರುಗಳು ಬ್ಯಾಚುಲರ್ಸೇ ಅನ್ನೋ ಥರಾ ಆಡ್ತಾರೆ!!
ಆದ್ರೂ ಅವ್ನ್ ನನ್ನಾ ಅಟ್ಟಿಸ್ಕೊಂಡ್ ಬಂದಾ, ನಾನು ಹಾಲಿಂದಾ ಕಿಚನ್, ಕಿಚನ್ ಇಂದಾ ಬಾಲ್ಕೋನಿ, ಅಲ್ಲಿಂದಾ ರೂಮು, ಆಮೇಲೆ ಬಾತ್ರೂಮು ಒಂದು ಮಿಕ್ಕಿತ್ತು, ಅಲ್ಲೆಲ್ಲಾ ನನ್ನಾ ಓಡಿಸ್ಕೊಂಡು ಹೋಗಿ ಗುಂಡೂ ಚೂರೇ ಚೂರು ಪ್ಲೀಸ್ ಅಂದಾ!!
ಪಾಪಾ ಅವ್ನ್ ಮುಖಾ ನೋಡಿ ನಂಗೇನೇ ಅಯ್ಯೋ ಅನಿಸ್ತು :(
ಆಯ್ತು ಮಾರಾಯಾ, ನಿನ್ ಖುಷಿ ನನ್ ಖುಷಿ ಅಲ್ವೇನೋ, ಹೆಂಗಂದ್ರೂ ಇವತ್ತು ಸಂಡೇ, ಮನೆಲ್ಲೇ ಬಿದ್ದಿರ್ತೀನಿ, ಎಲ್ಲೂ ಹೋಗಲ್ಲಾ ಹಾಕಪ್ಪಾ ಹಾಕು ಅಂದೆ.
ನನ್ ಮನಸಲ್ಲಿ ಅವ್ನು ಈಗ ನನ್ನನ್ನಾ ಪೂರ್ತಿ ಬಣ್ಣದಲ್ಲಿ ಸ್ನಾನಾ ಮಾಡಿಸ್ತಾನೆ, ಮನೆ ಕ್ಲೀನ್ ಮಾಡೋಕೆ ಇನ್ನು ಎರಡು ದಿನಾ ಬೇಕು ಅಂತಾ ನಾನ್ ಅವ್ನ್ ಆಟಾನೂ ಎಂಜಾಯ್ ಮಾಡ್ದೆ ಸುಮ್ನೆ ನಿಂತಿದ್ದೆ!
ಆದ್ರೆ ಅವ್ನು ತುಂಬಾ ಒಳ್ಳೆಯೋನ್ ಥರಾ, ಪ್ರಾಮಿಸ್ ಮಾಡ್ದ೦ಗೇನೇ ಹಣೆಗೆ ಪಿಂಕು, ಆಕಡೆ ಕೆನ್ನೆಗೆ ಯಲ್ಲೋ, ಈಕಡೆ ಕೆನ್ನೆಗೆ ರೆಡ್ದು, ಗಲ್ಲಕ್ಕೆ ವೈಟು, ಕುತ್ತಿಗೆಗೆ ಬ್ಲೂ ಹಚ್ಚಿ ಚೂರ್ ನೀರ್ ತಲೆ ಮೇಲೆ ಹಾಕಿ ಸ್ವೀಟಾಗಿ ಥ್ಯಾಂಕ್ಯೂ ಗುಂಡೂ ಅಂತಾ ಹೇಳಿ ಒಡೋಗ್ಬುಟ್ಟಾ!!
ಅವ್ನ್ ಕಣ್ಣಲ್ಲಿದ್ದ ಖುಷಿ, ಅಮ್ಮಾ ಬೈತಾರೆ ಅನ್ನೋ ಭಯಾ, ಯಾರ್ ಏನ್ ಅಂದ್ಕೋತಾರೆ ಅನ್ನೋ ನಾಚ್ಕೆ ಏನೂ ಇಲ್ದೆ ಹೆಂಗ್ ಮಕ್ಳು ಖುಷ್ ಖುಷಿಯಾಗ್ ಇರ್ತಾರೆ ಅಲ್ವಾ ಅಂತಾ ನಂಗೆ ಆಶ್ಚರ್ಯಾ ಆಯ್ತು!!
ಬಂದ್ ನಾಲ್ಕೇ ನಿಮಿಷಕ್ಕೆ ಇಡೀ ವಾತಾವರಣ ಚೇಂಜ್ ಮಾಡಿ, ಬಣ್ಣಮಯವಾಗಿಸಿ ನನಗೆ ಇಡೀ ವಾರಕ್ಕೆ ಆಗೋವಷ್ಟು ಖುಷಿ ಕೊಟ್ಟು ಹೋದ ಗುಂಡೂ ನಿನಗೆ ಥ್ಯಾಂಕ್ಸ್:)
ನೀನ್ ಇಲ್ಲಿ ಇವತ್ತು ಬಂದಿದ್ದು ನಿಮ್ ಅಮ್ಮಂಗೆ ಗೊತ್ತಾಗ್ದೇ ಇರ್ಲೀ, ಹ್ಯಾಪೀ ಹೋಳಿ!! :)