Wednesday, July 06, 2016

ಈ ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.
ಇವತ್ತೂ ಸಹ ಹಾಗೆಯೇ ಆಯಿತು.
ನಾನು ಮಾಮೂಲಿಯಾಗಿ ಒಂದ್ ಟೀ ಷರ್ಟ್, ಒಂದ್ ಥ್ರೀ ಫೋರ್ಥ್ ಹಾಕ್ಕೊಂಡು ಕಿವೀಲೀ ಈಯರ್ ಫೋನ್ಸ್ ಇಟ್ಕೊಂಡು ಹಾಡು ಕೇಳ್ಕೊಂಡು ಹೋಗ್ತಾ ಇದ್ದೆ. ತಿಂಡಿ ತಿನ್ನೋಣ ಅಂತನಿಸಿ ಒಂದು ಚಿಕ್ ಕ್ಯಾಂಟೀನ್ ಒಳಗೆ ಹೋದೆ. ಅಲ್ಲಿ ಒಬ್ಬ ಸುಮಾರು ಮೂವತ್ತು ಮೂವತ್ತೆರಡು ಪ್ರಾಯದ ಗಂಡಸಿದ್ದ. ಸುಕ್ಕು ಸುಕ್ಕಾದ ಬಟ್ಟೆ, ಸರಿಯಾದ ಬಣ್ಣ, ಇಸ್ತ್ರಿ ಕೂಡ ಇಲ್ಲದೇ ಮಂಕಾಗಿದ್ದ ಬಿಳೀ ಷರ್ಟು ಕಪ್ಪು ಬಣ್ಣದ ಸಾಧಾರಣ ಪ್ಯಾಂಟ್ ಹಾಕ್ಕೊಂಡು ಹಲ್ ಕಿಸ್ಕೊಂಡ್ ಸಾರ್... ಏನ್ ಕೊಡ್ಲೀ ಅಂದ...
ನಾನ್ ಏನೇನಿದೆ ಅಂದೆ..
ಇಡ್ಲೀ ವಡೆ ಪುಲಾವ್ ಫಡ್ಡು .. ದೋಸೆ ಖಾಲಿ ಸಾರ್ ಅಂದ.
ನಂಗ್ ಫೋನ್ ಬಂತು.. ನಾನ್ ಆಚೆ ಬಂದು ಇಂಗ್ಲೀಷಿನಲ್ಲಿ ಮಾತಾಡಿ ಮುಗಸ್ದೆ. ಇವನು ಅದ್ಯಾವ ಮಾಯದಲ್ಲಿ ನಾನು ಮಾತಾಡಿದ್ದು ಕೇಳಿಸಿಕೊಂಡನೋ ಗೊತ್ತಿಲ್ಲ. ನಾನ್ ವಾಪಾಸ್ ಬರೋದ್ರೊಳ್ಗೆ ಸಾರ್ ಯು ಹ್ಯಾವಂಟ್ ಗಿವನ್ ಯುವರ್ ಆರ್ಡರ್ ಯೆಟ್, ವಾಟ್ ವುಡ್ ಯು ಲೈಕ್ ಟು ಹ್ಯಾವ್ ಸರ್ ಅಂದ...
ನಾನು ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ.
ನಿಂತುಕೊಂಡ ಮೆಟ್ಟಿಲುಗಳಿಂದ ಜಾರಿ ಬಿದ್ದಿಲ್ಲವಷ್ಟೇ.
ಮನಸಲ್ಲೇ ಲೆಕ್ಕಾಚಾರ ಹಾಕ್ತಾ ಇದ್ದೆ. ಮನೆ ಬಿಟ್ಟು ಓಡಿ ಬಂದಿರ್ತಾನೆ, ಹೆಚ್ಚು ಅಂದ್ರೆ ಹತ್ತನೇ ತರಗತಿ ಓದಿರ್ತಾನೆ. ಸ್ವಲ್ಪ ಇಂಗ್ಲೀಷ್ ಟಚ್ ಇರತ್ತೆ. ಅದ್ಕೆ ಮಾತಾಡ್ದಾ ಅಂದ್ಕೊಂಡೆ. ಅದ್ರೆ ಇಷ್ಟೊಂದು ವ್ಯಾಕರಣಬದ್ಧವಾಗಿ.. ಉಹೂಂ..!!
ಸರಿ ತಿಂಡಿ ತಿಂತಾ ತಿಂತಾ ತಡ್ಕೊಳ್ಳೋಕಾಗ್ದೇ ಕೇಳೇಬಿಟ್ಟೆ.
ಅವ್ನು ಚಟ್ನಿ ಖಾಲಿ ಆಗಿದೆ ಅಂತಾ ರುಬ್ತಾ ಇದ್ದಾ.
ಏನ್ ಓದಿರೋದು ನೀವು ಅಂದೆ. ಅವ್ನಿಗೆ ಕೇಳ್ಸಿಲ್ಲಾ.
ಮತ್ತೆ ಏನ್ ಓದಿದೀರಾ ನೀವು ಅಂದೆ.
ಅವ್ನು ಮಿಕ್ಸಿ ಆಫ್ ಮಾಡಿ ಯಾಕ್ಸಾರ್ ಅಂದಾ..
ನಾನ್ ಹಿಹಿಹಿ ಯಾಕೂ ಅಲ್ಲಾ ಸುಮ್ನೇ ಅಂದೇ..
ಚಟ್ನೀನಾ ಹಾಕ್ಬುಟ್ಟು ಈಗ್ ಮಾಡಿದ್ದು ಹೆಂಗಿದೆ ಹೇಳಿ ಅಂದಾ.. ಸೂಪರ್ ಅಂದೆ.
ಅವನೇ ಮುಂದುವರೆದು ಸಾರ್ ನಾನು ರೆಗ್ಯೂಲರ್ ಎಂಬೀಏ ಇನ್ ಫಿನಾನ್ಸ್ ಅಂದಾ.
ನಾನ್ ಷಾಕ್ ಆದೆ.
ಮತ್ತೆ ಇಲ್ಲಿ ಹೆಂಗೆ ಥರಾ ಅಂದೆ.
ಸಾರ್ ನಮ್ಮಪ್ಪಂದೇ ಹೊಟೆಲ್ ಹೆಲ್ಪ್ ಮಾಡೋದ್ರಲ್ಲೇನು ತಪ್ಪು ಅಂದಾ.
ನಾನು ಮೂಕನಾಗಿ ನಿಂತಿದ್ದೆ.
ನೀವ್ ಬೇರೆ ಎಲ್ಲೂ ಕೆಲ್ಸಾ ಮಾಡಲ್ವಾ ಅಂದೆ.
ಯಾಕ್ ಸಾರ್ ಮಾಡ್ತೀನಲ್ಲಾ..
ನಾನು ವಿಪ್ರೋದಲ್ಲಿ ಟೀಂ ಲೀಡ್ ಅಂದ.
ನಾನು ಉಗುಳು ನುಂಗಿಕೊಂಡೆ.
ಪ್ಯಾಕೇಜ್ ಚೆನ್ನಾಗಿರ್ಬೇಕಲ್ವಾ ಅಂದೆ. ಟೇಕ್ ಹೋಂ ಸ್ಯಾಲರಿ ಕೂಡಾ ಹೇಳ್ದಾ. ನಂಗೆ ಅಬ್ಬಾ ಅನಿಸ್ತು.
ಮುಂದಿನ ಹತ್ತು ನಿಮಿಷದಲ್ಲಿ ಸರ್ವರ್ ಡೇಟಾಬೇಸ್ ಷೇರ್ ಮಾರ್ಕೇಟ್, ರಿಮೋಟ್ ಸೆಸ್ಷನ್ಸ್ ಸಾಫ್ಟ್ವೇರ್ ಡೆವಲಪಿಂಗ್, ನೆಟ್ವರ್ಕಿಂಗ್, ಜಾವಾ ಕೋರ್ ವಿಂಡೋಸ್ ಎಲ್ಲದರ ಎಲ್ಲ ವಿಷಯಗಳ ಟೆಕ್ನಿಕಲ್ ಥಿಂಗ್ಸ್ ಬಗ್ಗೆ ಮಾತಾಡಿದ್ವಿ.
ನೀವ್ ಎಲ್ಲಿ ಕೆಲ್ಸಾ ಮಾಡೋದು ಅಂದಾ..
ಸಾರ್ ವಿಪ್ರೋಗ್ ಬರ್ತೀರಾ ಅಂದ್ರೆ ಹೇಳಿ ಪಕ್ಕಾ ರೆಫರ್ ಮಾಡ್ತೀನಿ ಅಂದಾ...
ಸರಿ ಲೇಟಾಯ್ತು, ಈಗ್ ಕ್ಯಾಬ್ ಬರತ್ತೆ ಮನೆಗೆ ಹೋಗಿ ಡ್ರೆಸ್ ಛೇಂಜ್ ಮಾಡಿ ಹೊರಡ್ಬೇಕು ಸಾರ್ ಆಫೀಸಿಗೆ, ಇಟ್ಸ್ ನೈಸ್ ಟು ಮೀಟ್ ಯು ಸಾರ್ ಅಂತಾ ಹೇಳಿ ಹೊಂಟೋದ ಆಸಾಮಿ....
ಆಗಷ್ಟೇ ಹೊಟೆಲ್ಗೆ ಬಂದ ಅವರ ಅಪ್ಪ ಅಮ್ಮ ನಮ್ ಮಗಾ ಸಾರ್ ಅಂದ್ರು, ಅವರ ಕಣ್ಣಲ್ಲಿ ಮಗನ ಬಗೆಗಿದ್ದ ಹೆಮ್ಮೆ ಹೊಳೆಯುತ್ತಿತ್ತು.
ಇಡ್ಲೀ ಚಟ್ನೀ ಹಾಕ್ಕೊಟ್ಟ, ಶಾಲೆಗೆ ಹೋಗಿರದ ಮುಖವನ್ನು ಹೊಂದಿದ ಒಬ್ಬ ವ್ಯಕ್ತಿಯ ಹಿಂದೆ ಮತ್ತು ಒಳಗೆ ಇಷ್ಟೊಂದು ಗುಟ್ಟಿವೆಯಾ ಅಂತಾ ತಲೆ ಕೆರ್ಕೊಂಡು ನನ್ ಹಳೇ ಥ್ರೀ ಫೋರ್ಥ್ ಗೆ ಕೈ ಉಜ್ಕೊಂಡ್ ಮನೆ ಕಡೆ ಬಂದೆ..
ಜಗತ್ತು ನಮ್ಮೆದೆರು ಪ್ರತೀ ಕ್ಷಣವೂ ವಿಸ್ಮಯಗಳನ್ನು ಎಸೆಯುತ್ತಿರುತ್ತೆ.
ನಮಗದನ್ನು ಸೂಕ್ಷ್ಮ ಕಣ್ಣುಗಳಿಂದ ನೋಡುವ, ಪ್ರೀತಿಯಿಂದ ಅಪ್ಪಿಕೊಳ್ಳುವ, ಸ್ವೀಕರಿಸುವ ಮನೋಭಾವವಿರಬೇಕಷ್ಟೇ 😊

Friday, February 27, 2015

ಹಿಂಗಿಂದಾ ಹಂಗಾ?

JP BHAT
Life - Jp Bhat
ಇದ್ದಕ್ಕಿದ್ದಂಗೆ ಭಾವುಕರಾಗೋದು ಕೆಲವು ಸಲ ಇದಕ್ಕೇನಾ? ಅಥವಾ ಬೇರೇನೂ ಕಾರಣಗಳು ಇರಬಹುದಾ??

ಮೊದಲ ಸಲ ಶಾಲೆಗೆ ಸೇರಿದಾಗ ಅಪ್ಪನ ಬಿಡೋಕಾಗದೆ, ಅವನ ಮುಖವನ್ನು ನೋಡಲಾಗದೇ, ಅವನನ್ನು ಇಡೀ ದಿನ ನೋಡಲಾರದೇ ಇರಬೇಕೆಂಬ ಅನಿವಾರ್ಯ ಭಯದಿಂದ ಅತ್ತಿದ್ದೆ.  ಗೆಳೆಯರು ಸಿಕ್ಕರು. ಗೆಳೆತಿಯರು ಅವರು ತಂದಿದ್ದ ತಿಂಡಿಯನ್ನು ಕೊಟ್ಟರು. ಹುಡುಗರು ಹೊಡೆದಾಟಕ್ಕೆ ಬಂದರು. ಹುಡುಗಿಯರು ನನ್ನನ್ನು ತಬ್ಬಿಕೊಂಡು ಸಮಾಧಾನ ಮಾಡಿದರು. ಅಂದಿನಿಂದ ಅಪ್ಪ ದೂರವಾದ. ಗೆಳೆಯರು ಹತ್ತಿರ ಬರುವುದನ್ನು ಬಿಟ್ಟರು. ಗೆಳತಿಯರು ನನ್ನನ್ನು ಬಿಡೋಕಾಗದೆ ಬೇಜಾರು ಮಾಡಿಕೊಂಡರು.

ಹಾಗೇ ದೊಡ್ಡವನಾದೆ.

ಆಮೇಲೆ ಬಂದಿದ್ದೇ ಹೈ ಸ್ಕೂಲ್.
ಸ್ವಲ್ಪ ಮಟ್ಟಿಗೆ ಬಣ್ಣಗಳ ಲೋಕ; ಬುದ್ಧಿಯೂ ಸ್ವಲ್ಪ ಬೆಳೆದ ಕಾಲ. ಜೊತೆಗೆ ಕುರುಚಲು ಗಡ್ಡ ಮೀಸೆಯ ದರ್ಪ. ಹುಡುಗನಿಂದ ಗಂಡಸಾದೆ ಅನ್ನೋ ಭಾವ. ಧ್ವನಿಯಲ್ಲಿ ಏರು ಪೇರು. ಧ್ವನಿ ಪೆಟ್ಟಿಗೆಯಲ್ಲಿ ಬಿರುಕು. ಆಣೆ ಕಟ್ಟಿನಿಂದ ನೀರು ಹೊರಬಿಟ್ಟ ಹಾಗೆ ಬದುಕು. ಅಲ್ಲಿ ಇಲ್ಲಿ ಖರ್ಚಿಗೆ , ಕೆಟ್ಟ ಚಟಕ್ಕೆ ಒಳ್ಳೆಯ ಅಭ್ಯಾಸಕ್ಕೆ ಅಲ್ಪ ಸ್ವಲ್ಪ ದುಡ್ಡು ಸಿಗುತ್ತಿದ್ದ ಬಂಗಾರದ ದಿನಗಳವು.  ಅಪ್ಪನ ಕಲರ್ ಮೊಬೈಲ್ ನಲ್ಲಿ ಆಟ ಆಡೋದು, ಹಾಡು ಕೇಳೋದು, ವಾಲ್ ಪೇಪರ್ ಚೇಂಜ್ ಮಾಡೋದು ನನಗೆ ಹೆಮ್ಮೆಯ ವಿಷಯವಾಗಿತ್ತು. ಆಗಾಗ ಈ ಮೊಬೈಲ್ ನನ್ನ ಹತ್ತಿರವೂ ಎರಡು ಮೂರು ದಿನದ ಮಟ್ಟಿಗೆ ಇರುತ್ತಿತ್ತು; ಅಪ್ಪ ನನ್ನನ್ನು ನೋಡಲು ಬಂದಾಗ ಅಥವಾ ನಾನೇ ಊರಿಗೆ ಹೋದಾಗ ಈ ಮೊಬೈಲ್ ಮತ್ತೆ ಅಪ್ಪಂದು.

ಆಗ ಅಪ್ಪ ಕೇವಲ ದುಡ್ಡು ಕೊಡುವುದಕ್ಕೆ ಮಾತ್ರ ನನಗೆ ಬೇಕಾದ. ಬೇಜಾರಾದಾಗ, ಅಳಲೇ ಬೇಕು ಎನಿಸಿದಾಗ, ತಬ್ಬಿ ಸಮಾಧಾನ ಮಾಡಲು ಆ ಶಾಲೆಯಲ್ಲಿ ಇರುವಂಥಹ ಹುಡುಗಿಯರು ಇಲ್ಲಿ ಇರದೇ ಇದ್ದಾಗ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ದೂರವಿರುತ್ತಿದ್ದ ಕಾರಣ ಯಾವತ್ತಿನಂತೆಯೇ ಒಬ್ಬನೇ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದೆ.
ಅಮ್ಮ ಫೋನ್ ಮಾಡುತ್ತಿದ್ದಳು. ಅಪ್ಪ ದುಡ್ಡು ಹಾಕುತ್ತಿದ್ದ. ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಆಕಾಶ ನೋಡಿಕೊಂಡು ಒಬ್ಬನೇ ಧೋ ಎಂದು ಅಳುತ್ತಿದ್ದೆ.
ಅಮ್ಮ ಊಟ ಮಾಡು ಮಗನೇ ಎನ್ನುತ್ತಿದ್ದಳು. ಅಪ್ಪ ಮಾರ್ಕ್ಸ್ ಶೀಟ್ ಗೆ ಸಹಿ ಹಾಕುತ್ತಿದ್ದ.  ತಮ್ಮ ಚೆನ್ನಾಗಿ ಓದುತ್ತಿದ್ದ. ನಾನು ಒಬ್ಬನೇ ಬಸ್ಸಿನ ಕಿಟಕಿಯ ಪಕ್ಕ ಕೂತು ಕಣ್ಣಲ್ಲೇ ನೀರಾಗುತ್ತಿದ್ದೆ.

ಮತ್ತೆ ಧುತ್ತನೇ ಎದುರಾದದ್ದು ಪೂರ್ತಿ ಬಣ್ಣಗಳ ಲೋಕ. ಎಲ್ಲೆಲ್ಲೂ ಚಿಟ್ಟೆಗಳ ಸಂಗೀತ. ಇದೇನಾ ಸ್ವರ್ಗ? ಕಾಲೇಜ್ ಲೈಫ್ ಇಷ್ಟು ಸುಂದರಾನಾ? ಇನ್ನು ಡಿಗ್ರಿ ಕಾಲೇಜ್ ಹೆಂಗಿರಬಹುದಪ್ಪಾ ಎಂಬ ಕಲ್ಪನೆಯಲ್ಲೇ ಅರ್ಧ ಈ ಚಿಕ್ಕ ಕಾಲೇಜು ಮುಗಿದುಹೋಯ್ತು. ನನಗೆ ಈಗ ನನ್ನದೇ ಸ್ವಂತ ಮೊಬೈಲ್ ಬಂದಿತ್ತು. ಹುಡುಗಿಯರ ನಂಬರ್ ನಿಧಾನವಾಗಿ ಸೇವ್ ಆಗುತ್ತಿತ್ತು ; ಟೆಕ್ಸ್ಟ್ ಮೆಸೇಜ್ ಗಳು ಬೇಕಾಬಿಟ್ಟಿ ಹರಿದಾಡುತ್ತಿದ್ದವು.
ಅಪ್ಪ ಅಮ್ಮ ಇಬ್ಬರೂ ಫೋನ್ ಮಾಡುತ್ತಿದ್ದರು. ತಮ್ಮ ಮತ್ತೂ ಚೆನ್ನಾಗಿ ಓದುತ್ತಿದ್ದ. ನಾನು ರೂಮಿನಲ್ಲಿ ಕತ್ತಲೆಯಲ್ಲಿ ಒಬ್ಬನೇ ಕೂತು ಅಳುತ್ತಿದ್ದೆ ಮತ್ತು ಆಗಾಗ ನಗುತ್ತಿದ್ದೆ.

ಹಾಯ್ ಫೋಕ್ಸ್ ಡ್ಯೂಡ್ ; ದಿಸ್ ಈಸ್ ರಿಯಲ್ಲಿ ಹೆವೆನ್ ; ಏನ್ ಕಲರ್ಸೊ, ಆ ಚೂಡಿ ನೋಡೋ, ಜೀನ್ಸು ಸ್ಕರ್ಟು ನೋಡೋ - ಆಹ್ ; ಡಿಗ್ರಿ -
ಕೈ ನಲ್ಲಿ ಮೊದಲಿಗಿಂತಾ ಹೆಚ್ಚು ದುಡ್ಡು, ಮೊಬೈಲ್, ದೊಡ್ಡ ಪಟ್ಟಣ; ಹೆಂಗೆ ಅಷ್ಟೂ ದಿನಗಳು ವ್ಯಥಾ ಪೋಲಿಯಾಗಿ ಕಳೆದು ಹೋದವು? ನಿದ್ದೆಯಲ್ಲೇ ಕಳೆದು ಬಿಟ್ಟೆನಾ?
ಅಮ್ಮ ಅಪ್ಪ ಫೋನ್ ಮಾಡಿದ್ದರಾ? ತಮ್ಮ ಚೆನ್ನಾಗಿ ಓದುತ್ತಿದ್ದನಾ? ನಾನು ಅಳುತ್ತಿದ್ದೆನಾ, ನಗು , ಸಿನಿಮಾ , ಹುಡುಗಿ, ಕುಡಿತ , ಸಿಗರೇಟು ? ಉಹುಂ , ಒಂದೂ ಗೊತ್ತಿಲ್ಲ. ನೆನಪಿಲ್ಲಾ... ನೆನೆಸಿಕೊಳ್ಳಲೂ ಇಷ್ಟವಿಲ್ಲ... ಹರುಕು ಜೀನ್ಸ್ ಉದ್ದ ಗಡ್ಡ ಒಂದು ದೊಗಲೆ ಅಂಗಿ ಹಸಿವಾದಾಗ ಒಂದು ಹಿಡಿ ಅನ್ನ ಅದಕ್ಕೆ ಒಂದಷ್ಟು ತಿಳಿ ಸಾರು ಮೊಸರು, ಕೇಳಲು ನನ್ನದೇ ಆದ ಒಂದಿಷ್ಟು ಹಾಡುಗಳು; ಜೀವ ಸೋತಾಗ ತಲೆ ಕೊಟ್ಟು ಮಲಗಲು ಒಂದು ಚಿಕ್ಕ ಸೂರು. ಇಷ್ಟೇ ನನಗೆ ನೆನಪು ಇರುವಂತಹ ಕಲೆಗಳು.
ನನಗೇ ಅಂತಾ ಮಾಡಿಕೊಟ್ಟ ಸೂರಿಗೆ ಹೋಗುತ್ತಿದ್ದೆನಾ? ಉಹೂಂ ಅದೂ ಗೊತ್ತಿಲ್ಲ. ಏನೇ ಮಾಡಿಕೊಂಡರೂ ಇವತ್ತಿನ ತನಕ ಜೀವ ಗಟ್ಟಿಯಾಗಿ ಹಿಡಿದುಕೊಂಡು ಬದುಕಿದ್ದೇನೆ ಅಷ್ಟೇ.


ಮೊದಲಿಂದಾನೂ ಹಳ್ಳಿ ಪೇಟೆ ಎರಡರಲ್ಲೂ ಬೆಳೆದ ನನಗೆ ; ಎರಡರ ವಾತಾವರಣ ಎರಡೂ ಕಡೆಯ ನಡೆ ನುಡಿ; ಒಳಗು ಹೊರಗು ಗೊತ್ತಿರುವುದರಿಂದ ನನಗೆ ಪೇಟೆ ಜೀವನ ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದರೆ ಇದು ಹಳೆಯ ಪೇಟೆಗಿಂತ ಕೊಂಚ ದೊಡ್ದದಾದುದರಿಂದ ಇಲ್ಲಿಯ ಜನರ ವೇಷ ಭೂಷಣ, ಹಾವ ಭಾವ, ಆಹಾರ ಪಧ್ಧತಿ, ಜೀವನವನ್ನು ಅನುಭವಿಸುವ ಅನುಭೋಗಿಸುವ, ಅದನ್ನು ಬದುಕುವ ರೀತಿಯ ಜೀವನ ಶೈಲಿಗೆ ಅಚ್ಚರಿ ಪಟ್ಟಿದ್ದೆ.

ದಿನಗಳು ಹೀಗೆಯೇ ಸಾಗುತ್ತಿತ್ತು.

ಆಮೆಲಿಂದಾ ಬಂದಿದ್ದೇ ಹೊಟ್ಟೆಗೆ ಬಟ್ಟೆಗೆ ದಾರಿ ಕಂಡುಕೊಳ್ಳುವ ಯೋಚನೆ ಮತ್ತು ಯೋಜನೆ. ರೆಸ್ಯೂಮ್ ಮಾಡಿ ಪ್ರಿಂಟ್ ಔಟ್ ತೆಗೆದು ಸಿಕ್ಕ ಮಿಕ್ಕ ವೆಬ್ಸೈಟ್ ಗಳಿಗೆಲ್ಲಾ ಅಪ್ಲೋಡ್ ಮಾಡಿಯಾಯ್ತು. ಬರೀ ಸಿಂಗಲ್ಲೋ ಡಬಲ್ಲೋ ಡಿಗ್ರಿಯಿದ್ದರೆ ಸಾಲಲ್ಲಾ ಅಂತಾ ಬೇರೆ ಹಾಳು ಮೂಳು ಅಡಿಷನಲ್ ಕೋರ್ಸ್ ಕೂಡ ಮಾಡಿದ್ದಾಯ್ತು, ಲಕ್ಷಗಟ್ಟಲೆ ಸುರಿದಿದ್ದೂ ಆಯ್ತು.
ಬಂಡವಾಳ ಹೋಯ್ತು, ಲಾಭಾ ?!
ಉಹುಂ , ಅವನ್ನೆಲ್ಲಾ ಕೇಳಬಾರ್ದು , ನಮ್ ಕನ್ನಡ ಕಮರ್ಷಿಯಲ್ ಪಿಚ್ಚರ್ ಥರಾ, ಕಥೆಗೂ ಲೋಕೇಶನ್ ಗೂ, ಹೀರೋ ಹೀರೋಯಿನ್ ಗೂ ಸಂಬಂಧಾ ಇದೆ ಇಲ್ಲಾ ಅನ್ನೋ ತರಹ....

ಆಹಾ ಜೀವನದ ಮೊದಲ ಜಾಬ್ ಅನ್ನೋ ಕೆಲಸ ಸಿಕ್ತು. ಹೇಳಿಕೊಳ್ಳೋಕೆ ನನ್ನ ಹೆಸರೂ ಇಲ್ಲದ, ಕನಿಷ್ಠ ನನ್ನ ಮುಖವನ್ನು ಅಂಟಿಸಿ ಅದರ ಕೆಳಗೆ ನನ್ನ ಹೆಸರನ್ನು ಕೈನಲ್ಲಿ ಬರೆದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕತ್ತಿನ ಪಟ್ಟಿಗೆ ಹಾಕಿಕೊಳ್ಳೋ ದಾರವೂ ಇಲ್ಲದ ಕಂಪನಿಯಲ್ಲಿ ಕೆಲಸ, ಸಂಬಳ ಕೈಗೆ , ಹಾರ್ಡ್ ಕ್ಯಾಶ್. ಅರ್ಧ ಮಾತ್ರವೇ.  ಮಿಕ್ಕಿದ ಅರ್ಧ ಸಂಬಳ ಮತ್ತೆ ಎರಡು ತಿಂಗಳಾದಮೇಲೆ, ಆ ತಿಂಗಳ ಸಂಬಳವೂ ಮತ್ತೆ ಮುಂದಿನ ತಿಂಗಳಿಗೆ. ಕೆಲಸ ಮಾತ್ರ ದಿನಕ್ಕೆ ಬರೋಬ್ಬರಿ ಹದಿಮೂರು ಹದಿನಾಲ್ಕು ಘಂಟೆಗಳು ಅಷ್ಟೇ.
ದಿನಕ್ಕೆ ಎಂಟರಿಂದ ಹತ್ತು BMTC ಬಸ್ ಗಳನ್ನು ಹತ್ತಿ ಇಳಿದು, ಪ್ರಯಾಣಿಸಿ ಆಫೀಸ್ ಅನ್ನೋ ನರಕಕ್ಕೆ ಹೋಗಬೇಕಾದ ಸ್ಥಿತಿ!!

ಆಮೇಲಾಮೇಲೆ ಜೀವನ ನನಗೇ ಆಶ್ಚರ್ಯವಾಗುವಂತೆ ಬದಲಾಯ್ತು, ಸಣ್ಣ ಬೋರ್ಡೆ ಇಲ್ಲದ ಕಂಪನಿಯಿಂದ ಎಂ ಎನ್ ಸೀ ಗಳೆಂದು ಕರೆಸಿಕೊಳ್ಳುವ ಊಟಕ್ಕೂ ನಿದ್ರೆಗೂ ಸಮಯವಿಲ್ಲದ ಸಮಯ ಕೊಡದ ಗಾಜಿನ, ಹವಾನಿಯಂತ್ರಿತ ನರಕದೊಳಕ್ಕೆ ಜೀವನ ಶುರುವಾಯ್ತು; ನಾನು ಬಂದು ಹೋಗಿ ಮಾಡುತ್ತಿದ್ದ BMTC ಬಸ್ಸುಗಳು ಪಾಪ ನನ್ನ ಆಫೀಸಿನ ಏಸೀ ಕಾರಿನ ಧೂಳಿನ ಹಿಂದೆಯೇ ಮರೀಚಿಕೆಯಾಗಿ ಬಿಡುತ್ತಿದ್ದವು; ನಾನು ಬಸ್ಸುಗಳಿಗೆ ಹತ್ತಿ ಯಾವುದೋ ಕಾಲವಾಗುತ್ತಾ ಬಂದಿತ್ತು.

ಹೈ ಫೈ ಐ ಡೀ ಕಾರ್ಡು, ಸ್ವೈಪ್ ಮಾಡದೇ ಒಳಗಡೆ ಹೋಗುವ ಹಾಗಿಲ್ಲ, ಮೊದಲ ದಿನ ಕಾರ್ಡ್ ಕೈಗೆ ಬಂದಾಗ ಆಶ್ಚರ್ಯ ಪಟ್ಟಿದ್ದೆ, ನನಗೂ ಇಂತಹ ಸೌಭಾಗ್ಯ ಬಂತಲ್ಲ ಎಂದು. ಸಂಬಳಕ್ಕೆ ಹಳೆಯ ಕಂಪನಿಯ ತರಹ ಕೇಳುವ ಪ್ರಮೇಯವೂ ಇಲ್ಲ, ನಿಗದಿತ ದಿನಾಂಕಕ್ಕೆ ನಮ್ಮದೇ ಆದ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು, ದುಡ್ಡು ತೆಗೆಯುವ ಪ್ರಸಂಗವೂ ಇಲ್ಲ, ಮನೆಯಲ್ಲೇ ನೆಟ್ ಬ್ಯಾಂಕಿಂಗ್ ವ್ಯವಹಾರ ಶುರು ಆಯ್ತು; ಅಂಗಡಿಗೆ ಹೋದರೂ ಕಾರ್ಡನ್ನು ನೀಡಿ ಸಹಿಯನ್ನು ಮಾಡಿ ಅಭ್ಯಾಸ ಆಯ್ತು. .
ಕ್ರೆಡಿಟ್ಟು , ಡೆಬಿಟ್ಟು , ಫ್ಯೂಯೆಲ್ಲು, ಡಿನ್ನರ್ ಎಲ್ಲಾ ಕಾರ್ಡುಗಳನ್ನು ತೆಗೆದುಕೊಂಡು ಕೊಟ್ಟು ಕ್ಲೋಸ್ ಮಾಡಿಸಿ ಎಲ್ಲಾ ಆಯ್ತು..
ಮೊದ ಮೊದಲು ಹಳೆ ಕಂಪನಿಯಲ್ಲಿದ್ದ ಕಾಲದಲ್ಲಿ ಬರೀ ಕನಸೇ ಆಗಿದ್ದ ದೊಡ್ಡ ಫೋನುಗಳು, ಟ್ಯಾಬ್ಲೆಟ್ಟುಗಳು, ಒಳ್ಳೆಯ ಬಟ್ಟೆ ಎಲ್ಲವೂ ಈಗ ಬೇಜಾರು, ಐ ಫೋನ್ ಕೂಡ ಮನೆಯಲ್ಲಿ ಎಲ್ಲೋ ಬಿದ್ದಿರುತ್ತದೆ. ಲಿವೈಸ್, ಅಡಿಡಾಸ್ , ನೈಕಿ, ರೀಬಾಕ್,  ಲೂಯಿ ಫಿಲಿಪ್, ಪ್ಯಾನ್ ಅಮೇರಿಕಾ, ಜಾನ್ಸ್ ಪ್ಲೇಯರ್, ಫ್ಲೈಯಿಂಗ್ ಮಶೀನ್ ಗಳು ಕೂಡ ಬೇಜಾರು.  ಚಿಕ್ಕವನಾಗಿದ್ದಾಗ ಅಪ್ಪ ಹೊಲಿಸಿ ಕೊಡುತ್ತಿದ್ದ ನೀಲಿ ಬಿಳಿಯ ಪ್ಯಾಂಟು ಅದರ ಮೇಲೊಂದು ಮ್ಯಾಚಿಂಗೇ ಆಗದ ಬಣ್ಣದ ಶರ್ಟು, ಅದೇ ಈಗ ಪ್ರೀತಿಯಾಗಿ ಆಪ್ತವೆನಿಸುತ್ತದೆ. ಅದರನ್ನು ಹಾಕಿಕೊಂಡರೆ ಕೆಲವರಿಗೆ ಅದು ಈಗ ಹುಚ್ಚು, ಅಥವಾ ಹೊಸಾ ಫ್ಯಾಶನ್!

ಅದಾದ ಮೇಲೆ ಎಷ್ಟೋ ಕಂಪನಿಗಳು ಬದಲಾದವು; ಎಷ್ಟೋ ಜನರ ಪರಿಚಯವಾಯ್ತು; ಮೊದಲು ಖಾತೆ ತೆರೆದ ಬ್ಯಾಂಕ್ ಅಕೌಂಟ್ ಎಲ್ಲೋ ಸತ್ತು ಹೋಗಿತ್ತು, ಅದಕ್ಕೂ ನೆಟ್ ಬ್ಯಾಂಕಿಂಗ್ ಬಂದು ಜೀವ ಬಂತು, ಈಗ ಇರೋ ಕಾರ್ಡ್ ಗಳಿಗೆ ಬೇರೆ ಬೇರೆ ಕಡೆ ಫೋನಿನ ಪಾಸ್ಬುಕ್ಕಲ್ಲೋ, NFC ಯಲ್ಲೋ ಹಾಕಿಡಬೇಕಾದ ಪರಿಸ್ಥಿತಿ.
ಇಷ್ಟಪಟ್ಟು ಮಾತನಾಡುತ್ತಿದ್ದ ಗೆಳೆಯರೆಲ್ಲಾ ದೂರವಾದರು, ಈ ಕೆಲಸದ ಒತ್ತಡದ ಮಧ್ಯೆ ಬರೀ ಫೇಸ್ಬುಕ್ ಚ್ಯಾಟ್ ಗಳಿಗಷ್ಟೇ ಸೀಮಿತವಾದರು, ಅವರ ಮುಖಗಳೆಲ್ಲಾ ಮರೆಯುತ್ತ ಬಂದಿದ್ದವು. ಇವನ್ನೆಲ್ಲಾ ನೆನೆಸಿಕೊಂಡರೆ ಹಳೆಯ ಆ ಕಂಪನಿ ಆ ಸುಖದ ದಿನಗಳೇ ಬೇಕೆನಿಸುತ್ತವೆ.

ಊರಿಗೆ ಹೋಗಿ ಬರುವುದೂ ಕಡಿಮೆಯಾಗುತ್ತಾ ಬಂದಿತ್ತು, ಅಮ್ಮನ ಅಡುಗೆಯ ರುಚಿ ಇಲ್ಲದೆ ನಾಲಿಗೆಯೂ ಸತ್ತಿತ್ತು ; ಹಬ್ಬ ಹರಿದಿನಗಳು ಆಫೀಸಿನ ಇಂಗ್ಲೀಶ್ ಕ್ಯಾಲೆಂಡರಿನಲ್ಲಿ ಮರೆಯಾಗಿದ್ದವು. ಸೋಶಿಯಲ್ ಸೈಟ್ ನಲ್ಲಿ ಹಬ್ಬದ ಬಗ್ಗೆ ಬಂದಾಗ ಕಣ್ಣುಗಳು ಮಾತ್ರ ಅಳುತ್ತಿದ್ದವು, ಹೃದಯ ಮಾತ್ರ ಗಟ್ಟಿ ಗಟ್ಟಿ. ಹೃದಯವೂ ನೀರಾದರೆ ಬದುಕುವ ಶಕ್ತಿ ಜೀವಕ್ಕೆಲ್ಲಿತ್ತು?

ಇಷ್ಟೆಲ್ಲಾ ಈಗ ಅರ್ಧ ಮರ್ಧ ನೆನಪಾಗಲು ಕಾರಣ ಏನೋ ಕ್ಲೀನ್ ಮಾಡಿ ಏನೋ ಹುಡುಕುತ್ತಿದ್ದೆ, ಆಗ ಹಳೆಯ ವ್ಯಾಲೆಟ್ ನಲ್ಲಿ ಐನೂರರ ಒಂದು ನೋಟು, ನೂರರ ಮೂರು, ಐವತ್ತರ ಎರಡು, ಇಪ್ಪತ್ತರ ನಾಲ್ಕು, ಐದರ ಎರಡು, ಹತ್ತರ ಒಂದು ನೋಟುಗಳು ಮುದುಡಿ ಈಗಲೋ ಆಗಲೋ ಎಂದು ಅಳುತ್ತಾ ನಡುಗುತ್ತಾ ಕೂತಿವೆ, ಯಾವ ಕಾಲದಲ್ಲಿ ಯಾವಾಗ ನಾನೇ ಇಟ್ಟಿದ್ದೆನೋ ನನಗಂತೂ ನೆನಪಿಲ್ಲ; ಅದನ್ನು ನೋಡಿ ನನ್ನ ಕಣ್ಣೆಲ್ಲಾ ಫಳ ಫಳ ಹೊಳೆಯಲು ಶುರು ಮಾಡಿಬಿಟ್ಟಿತ್ತು!!

ಏನೇ ಮಾಡಿದರೂ ಎಷ್ಟೇ ದುಡಿದರೂ ಆ ದುಡ್ಡಿಗೆ ಸಮನಾದ ದುಡ್ಡಿಲ್ಲ, ಅದೇ ಪ್ರೀತಿಯಲ್ಲಿ ಅದನ್ನು ಖರ್ಚು ಮಾಡಲು ಮನಸೇ ಬರುತ್ತಿಲ್ಲ, ಆದರೂ ಅದರಿಂದ ನೂರೈವತ್ತು ರೂಪಾಯಿ ತೆಗೆದು ಈಗಷ್ಟೇ ತಣ್ಣಗೆ ಐಸ್ ಕ್ರೀಂ ತಿಂದು ಬಂದೆ :)

ದುಡ್ಡು ತಣ್ಣಗೆ ಐಬ್ಯಾಕೊ ದಲ್ಲಿನ ಕ್ಯಾಶ್ ಬಾಕ್ಸ್ ನಲ್ಲಿ ನಗುತ್ತಿದ್ದರೆ ಯಾವಾಗಲೂ ಸಪ್ಪೆಯಿಂದಿರುತ್ತಿದ್ದ ನನ್ನ ಹೃದಯ ಮತ್ತು ಮುಖದಲ್ಲಿ ಏನೋ ಗೆದ್ದ, ಸಾಧಿಸಿಧ ಧನ್ಯತಾಭಾವದ ಮುಗುಳ್ನಗೆ ತೇಲುತ್ತಿತ್ತು.

Monday, July 14, 2014

ದೂರದಲ್ಲೆಲ್ಲೋ ಹಕ್ಕಿಯು ಮತ್ತೊಂದು ಹಕ್ಕಿಗೆ ನಿನ್ನ ಹೆಸರ ಪ್ರೀತಿಯಿಂದ ಕರೆದಂತೆ ನನಗೆ ಕೇಳಿಸಿತ್ತು!

Jepee Bhat

ನಿಶ್ಚಲವಾಗಿ ನಿಂತಿರುವ ಬೆಟ್ಟ ಗುಡ್ಡದ ತುತ್ತ ತುದಿಯ ಮೊನಚುಗಳ ತಪ್ಪಲಲ್ಲಿ,
ದೇವಸ್ಥಾನದ ಎಲ್ಲ ಮೆಟ್ಟಿಲುಗಳಲ್ಲಿ, ದೇವರ ಹಣೆಯ ಕುಂಕುಮದ ಮಧ್ಯದಲ್ಲಿ,
ಪುಸ್ತಕಗಳ ಪ್ರತೀ ಹಾಳೆಯ ಇಂಚಿಂಚಿನ ಅಕ್ಷರಗಳಲ್ಲಿ, ಕೆಂಪು ಕಪ್ಪನೆಯ ಬಣ್ಣಗಳಲಿ,
ಹಾದಿ ಬದಿಯ ಭಿಕ್ಷುಕರ ಮಕ್ಕಳ ಸಭ್ಯತೆಯ ಹಸಿವಿನ ಮುಖದಲ್ಲಿ, ಮತ್ತು ಎಲ್ಲೆಡೆಯಲ್ಲಿ,
ನಿನ್ನನ್ನೇ ಕಂಡು, ನಿನ್ನ ಧ್ವನಿಯನ್ನೇ ಕೇಳಿ, ನಿನ್ನರಸುತ ನಡೆದೆ.
ನೊಂದೆ, ಬೆಂದೆ, ಅದೇ ಗುಂಗಿನಲ್ಲಿ, ಕಣ್ಣೀರಿನ ಬಿಸಿಯುಸಿರಲ್ಲಿ,
ಮತ್ತು ಕೃತಕ ವಿಕಾರದ ಮುಖವಾಡದ ನಗುವಿನ ಸೋಗಿನಲ್ಲಿ, ವಿಫಲತೆಯಲ್ಲಿ.

ನಿನ್ನರಸುವಿಕೆಯೇ ನನ್ನ ಜೀವನದ ಅಮೂಲ್ಯ ಅಂಗವಾದ ಸಂಗತಿಯಾದ ಕಾಲವೊಂದಿತ್ತು.
ಆಗ ವರುಷಗಳು ಬರೀ ನಿಮಿಷಗಳಾಗಿದ್ದವು, ಆಗ ಅದೇ ವಿರುದ್ಧ ದಿಕ್ಕು ಅಷ್ಟೇ.
ಹಕ್ಕಿಗಳ ಚಿಲಿಪಿಲಿ ರಾಗದಲ್ಲಿ ಯಾವಾಗಲೂ ನೀನಿರುತ್ತಿದ್ದೆ, ಈಗ ಹಾಗಲ್ಲವೇ ಅಲ್ಲ.
ದೇವಸ್ಥಾನದ ಘಂಟೆಯ ಮಾರ್ದನಿಯಲ್ಲಿ ನಿನ್ನದೇ ರಾಗ ನುಲಿಯುತ್ತಿದ್ದರೆ,
ಇಲ್ಲಿ ನನ್ನಲ್ಲಿ ನನ್ನದೇ ಸ್ವಂತ ಕನಸುಗಳು ಬಸಿರಾಗಿ ವಿಕಾರವಾಗಿ ಹಡೆಯಲು ನನ್ನನ್ನೇ ಕೊಲ್ಲುತ್ತಿವೆ.
ನಿನಗೆ ಇದರ ಪರಿವೇ ಇಲ್ಲ ; ನಿನ್ನ ತಪ್ಪಂತೂ ಅಲ್ಲವೇ ಅಲ್ಲ ಬಿಡು.

ಕಾಲವೇನೋ ಬದಲಾಗಿದೆ, ನೀನೂ ಬದಲಾಗಿದ್ದೀಯಾ, ಮತ್ತು ನಿನ್ನವೂ ಕೂಡ.
ದಿನಬೆಳಿಗ್ಗೆ ನಿನ್ನ ಸಿಹಿದನಿಯ ಕೇಳಿಸಿಕೊಳ್ಳಲಾರದ ಪಾಪಿಯು ನಾನಾಗಿದ್ದೇನೆ ಈಗ,
ಮತ್ತದೇ ಬೆಳಗು ಎದುರು ಮನೆಯ ಹೆಂಗಸಿನ ರಂಗೋಲಿಯ ಜೊತೆಗೆ,
ನನ್ನದೇ ಮನೆಯಲ್ಲಿ ನೀನಿರಬೇಕಾದ ಹಾಸಿಗೆಯಲ್ಲಿ ನನ್ನ ಪಕ್ಕದಲ್ಲಿ ಇನ್ಯಾರೋ ; ಅಷ್ಟೇ ವ್ಯತ್ಯಾಸ.
ನಿನ್ನ ಉಸಿರಿಗೆ, ಮುತ್ತಿಗೆ, ನುಣುಪಿನ ಮೈಯ ಬಿಳುಪಿಗೆ, ಮತ್ತು ಅಪ್ಪುಗೆಗೆ ಇಲ್ಲೀಗ ತೀರದ ದಾಹ ಮತ್ತು ಬರಗಾಲ.
ಈ ಮತ್ತೊಂದು ಬರಗೆಟ್ಟ ಬೆಳಗಿಗೆ ನನ್ನ ಉಸಿರು ಕೊನೆಯಾದರೆ ಸಾಕಿತ್ತು, ಆದರೆ ಹಾಗಾಗಲಿಲ್ಲ.
ದೂರದಲ್ಲೆಲ್ಲೋ ಹಕ್ಕಿಯು ಮತ್ತೊಂದು ಹಕ್ಕಿಗೆ ನಿನ್ನ ಹೆಸರ ಪ್ರೀತಿಯಿಂದ ಕರೆದಂತೆ ನನಗೆ ಕೇಳಿಸಿತ್ತು.


Sunday, May 11, 2014

ನಿನ್ನ ಧ್ವನಿ ಕೇಳಿ ನಿಂಗೆ ವಿಶ್ ಮಾಡೋ ಭರದಲ್ಲಿ ನಿನ್ನ ಮಗ!Jepee Bhat @Ammaಅಮ್ಮಂದಿರ ಬಗ್ಗೆ ಎಷ್ಟು ಹೇಳೋಣ?
ಅಮ್ಮನ ಬಗ್ಗೆ ಹೇಳಿದಷ್ಟೂ ಕಡಿಮೆಯೇ!
ಅಮ್ಮನಿಗೆ ಸಹಾಯ ಮಾಡಿದಷ್ಟೂ ಗೌಣವೇ!
ಅಮ್ಮನ ಬಗ್ಗೆ ಹೊಗಳಿದಷ್ಟೂ ಸಣ್ಣದೇ!
ಎಷ್ಟು ಜನುಮ ಎತ್ತಿ ಬಂದರೂ ಅಮ್ಮನಿಗೆ ಮಾಡೋ ಸೇವೆ ಚಿಕ್ಕದೇ!ಎಲ್ಲರ ಅಮ್ಮಂದಿರೂ ಅವರವರಿಗೆ ಗ್ರೇಟ್, ಪ್ರೀತಿಯ ಅಮ್ಮ, ಹೊಡ್ಯೋ ಅಪ್ಪಾ! ಅಮ್ಮನ್ ಕಂಡ್ರೆ ಸಿಕ್ಕಾಪಟ್ಟೆ ಲವ್ವು; ಅಪ್ಪನ್ ಕಂಡ್ರೆ ಭಯಾ!
ಅಮ್ಮಾ ಪ್ರೀತಿ ಮಾಡ್ತಾಳೆ, ಅಪ್ಪಾ ಹೊಡೀತಾನೆ, ಬೈತಾನೆ, ಗದರ್ತಾನೆ, ಸಿಟ್ಟು ಮಾಡ್ಕೋತಾನೆ!
ಅಮ್ಮ ಪ್ರೀತಿಯ, ಪ್ರೀತಿ ಮಾಡೋ, ಪ್ರೀತಿಯ ಹೊಳೆ ಸುರ್ಸೋ ಮಹಾನದಿ.

ಅಮ್ಮನ ಮುಂದೆ ಅಪ್ಪ ಯಾವಾಗಲೂ  ಮೌನವಾಗಿ ಸರಿಯೋ ವಿಷಯವಾಗಿ ಹೋಗ್ತಾನೆ ಯಾಕೆ?!
ನಂಗೆ ಅಪ್ಪ ಅಮ್ಮ ಇಬ್ರೂ ಒಂದೇ :) ಇಬ್ರೂ ಒಂದೇ ಥರಾ ಪ್ರೀತಿ ಮಾಡಿ ನನ್ನ ಬೆಳ್ಸಿದಾರೆ! ಓದ್ಸಿದಾರೆ! ಮುದ್ದು ಮಾಡಿ ಇಷ್ಟು ಇರೋವ್ನಾ ಇಷ್ಟುದ್ದಾ ಮಾಡಿದಾರೆ!
ಇಬ್ರಿಗೂ ನನ್ನದೊಂದು ಥ್ಯಾಂಕ್ಸ್ :) ಇಲ್ಲಿಂದಾನೇ ಐನೂರು ಕಿಲೋ ಮೀಟರ್ ದೂರ ಇರೋ ನಿಮ್ಗೆ ನನ್ನ ಪ್ರೀತಿಯ ಅಪ್ಪುಗೆ!
ಎಲ್ರೂ ಹೇಳೋ ಥರಾ ಎಷ್ಟೇ ಜನುಮ ಎತ್ತಿದರೂ ನೀವೇ ಅಪ್ಪ ಅಮ್ಮಾ ಆಗಿ ಸಿಗ್ಲೀ ಅಂತಾ ಬೇಡ್ಕೊತೀನಿ; ಆದ್ರೆ ಒಂದು ಸಣ್ಣ ಸ್ಮಾಲ್ ಚೇಂಜ್!

ಅಪ್ಪಾ ನಂಗೆ ಪ್ಲೀಸ್ ಮುಂದಿನ ಜನ್ಮದಲ್ಲಿ ಹೊಡ್ಯೋದು ಸ್ವಲ್ಪಾ ಕಡ್ಮೆ ಮಾಡು [ನಾನು ಅಪ್ಪನ ಹತ್ತಿರ ಎಷ್ಟು ಏಟು ತಿಂದಿದೀನಿ ಅಂತಾ ನಂಗೆ ಮತ್ತೆ ನನ್ನ ಅಪ್ಪಂಗೆ ಯಾರಿಗೂ ಲೆಕ್ಕ ಇಲ್ಲ]
ಅಮ್ಮಾ ನೀನು ಮಾಡೋ ಪ್ರೀತೀನಾ ಒಂಚೂರೂ ಕಡ್ಮೆ ಮಾಡ್ಬೇಡಾ, ಇನ್ನೂ ಇನ್ನೂ ಜಾಸ್ತಿ ಮಾಡು [ಇನ್ಮುಂದೆ ಬರೋ ಸೊಸೆ ಮೊಮ್ಮಕ್ಕಳಿಗೂ ಸೇರಿಸಿ]ಅಮ್ಮನ ಬಗ್ಗೆ ಏನು ನೆನ್ಪು ಮಾಡ್ಲೀ? ಏನು ಅಂತಾ ಹೇಳ್ಲೀ?

ಮೊದಲಿಂದಾ ನಂಗೆ ನೆನ್ಪಿದ್ದಂಗೆ ನೀನು ಹೇಳೋ ಕಥೆ ಎಲ್ಲಾ ನೆನ್ಪು ಮಾಡ್ಕೊಂಡ್ರೆ ನಂಗೆ ನೆನ್ಪಿರೋವಂಗೆ ನಾನ್ ಹುಟ್ಟಿದ್ದು ರಾತ್ರಿ ಹನ್ನೆರಡು ಮೂವತ್ತೆರಡಕ್ಕೆ!

ಪಾಪಾ ನಿಂಗೂ ನಿದ್ದೆ ಇಲ್ಲಾ; ನಂಗೆ ಹೊರ ಬಾರೋ ; ಜಗತ್ತು ನೋಡೋ ತವಕ; ನಿಂಗೆ ಅಲ್ಲಿ ಜೀವಾ ಹೋಗೋ ಥರಾ ಹೆರಿಗೆ ನೋವು!

ಆದ್ರೂ ನಾನು ಹುಟ್ಟಿದ್ಮೇಲೆ ಅಲ್ವಾ ನೀನು ಅಮ್ಮಾ ಆಗಿದ್ದು? ಅದ್ಕೆ ನೀನು ನಂಗೊಂದು ಚಿಕ್ ಥ್ಯಾಂಕ್ಸ್ ಹೇಳ್ಲೇಬೇಕು :p :D

ನಂಗೆ ಹಾಕೋ ಬಟ್ಟೆ ಟೊಪ್ಪಿ ಪೌಡರ್ ಸ್ನೋ ಎಲ್ಲಾ ಮೊದ್ಲೇ ರೆಡಿ ಮಾಡ್ಕೊಂಡಿದ್ದೆ ಅನ್ಸತ್ತೆ ಅಲ್ವೇನೆ ಅಮ್ಮಾ?!

ಆದ್ರೆ ನರ್ಸು ಅಳುತ್ತಿರೋ ನನ್ನಾ ಸುತ್ತಿದ್ದು ಮಾತ್ರಾ ಬಿಳೀ ಬಟ್ಟೆಲೀ ಅನ್ಕೋತೀನಿ!

ಆರು ತಿಂಗ್ಳು ಇರ್ಬೋದಾ? ಅಂಬೆಗಾಲಿಕ್ತಾ; ತೊದಲ್ತಾ; ಎಂಜಲು ಸುರಿಸ್ತಾ; ನಡ್ಯೋಕೆ ಕಲೀತಾ ಇರೋ ದಿನಗಳಿರಬಹುದು :) ನೀನು ನನ್ನ ಎಷ್ಟು ಖುಷಿಂದಾ ನೋಡ್ತಾ ಇದ್ದೆ ಅಲ್ವಾ?

ನಾನು ಚಡ್ಡಿಯಲ್ಲೇ ಹಾಕಿದ ಬಟ್ಟೆಯಲ್ಲೇ ಎಷ್ಟು ಗಲೀಜು ಮಾಡ್ಕೊಂಡಿಲ್ಲಾ, ನೀನು ರಾತ್ರಿ ಮಲ್ಕೊಂಡಿರಬೇಕಾದ್ರೆ ಎಷ್ಟು ಸಾವಿರ ಸಲ ಹಸಿವು ಅಂತಾ ಅತ್ತಿಲ್ಲಾ? ನೀನು ಎಲ್ಲೇ ಹೋದ್ರೂ ಪರಿಸ್ಥಿತಿ ಹೆಂಗೇ ಇದ್ರೂ ನಿನ್ನ ಎದೆಗೆ ನನ್ನ ಅವುಚಿಕೊಂಡು ಎಷ್ಟು ಸಾವಿರ ಮೈಲಿ ನನ್ನ ಜೊತೆ ಹೆಜ್ಜೆ ಹಾಕಿಲ್ಲ? ಬೇಸಿಗೆ ಮಳೆ ಚಳಿ ಕಾಲವೆನ್ನದೆ ; ಬಿಸಿಲಲ್ಲಿ ನನ್ನ ನೆರಳಾಗಿ, ಮಳೆಗಾಲದಲ್ಲಿ ನೀನು ಒದ್ದೆಯಾದ್ರೂ ನನ್ನ ಶರೀರಕ್ಕೆ ಕೊಡೆ ಹಿಡಿದುಚಳಿ ಗಾಲದಲ್ಲಿ ನೀನು ನಡುಗಿದರೂ ನನ್ನ ಬೆಚ್ಚಗೆ ಇಟ್ಟು, ನೀನು ಮಾಡಿದ ಪ್ರೀತಿ, ಒಂಚೂರೂ ಬೇಜಾರು ಮಾಡಿಕೊಳ್ಳದೆ ಮಾಡಿದ ಕೆಲಸಗಳು ಅವೆಷ್ಟು ಸಾವಿರವೋ, ಲಕ್ಷ ಕೋಟಿಯೋ? ಇವಕ್ಕೆಲ್ಲಾ ನಾನು ನಿನಗೆ ಏನನ್ನಾ ತಿರುಗಿಸಿ ಕೊಡಲೀ? ಅಥ್ವಾ ಏನು ಮಾಡಿದರೆ ಅದಕ್ಕೆ ಸಮ ಅಂತಾದರೂ ಹೇಳು! ಥ್ಯಾಂಕ್ಸ್ ಇಂದಾ ಮುಗ್ಯೋವಂಥದ್ದಾ ಇದು? ಉಹುಂ; ಇದ್ಕೆ ನನ್ನಲ್ಲಿ ಉತ್ತರವಿಲ್ಲಾ! ಮೌನದ ಪ್ರೀತಿಯ ಮುಗುಳ್ನಗೆಯಷ್ಟೇ ನನ್ನ ನಿರುಪಾಯದ ನಿಟ್ಟುಸಿರಷ್ಟೇ!

ಒಂಭತ್ತು ತಿಂಗಳುಗಳ ಕಾಲ ನಿನಗೆ ಎಷ್ಟು ನೋವು ಕಷ್ಟಾ ಕೊಟ್ಟಿಲ್ಲ? ಅದ್ಕೆ ನೀನು ಒಂಚೂರೂ ಬೇಜಾರು ಮಾಡಿಕೊಳ್ಳದೇ ಎಲ್ಲವನ್ನೂ ಅದು ಹೇಗೆ ಸಹಿಸಿಕೊಂಡೆ ಅಮ್ಮಾ? ನನಗೆ; ನಾನು ಈಗ ಇಲ್ಲಿ ಬಿದ್ದರೂ ನಿನಗೆ ಅಲ್ಲಿ ನೋವಾಗಿ ಎದ್ದು ಕೂರುವಂತೆ, ಬಾಧೆ ಪಡುವಂತೆ! ಇವೆಲ್ಲಾ ಅಮ್ಮಂದಿರಿಗೆ ಮಾತ್ರಾ ಸಾಧ್ಯಾ ಅಲ್ವಾ?

ಅದ್ಕೆ ನಿಂಗೆ ಮತ್ತೊಂದು ಥ್ಯಾಂಕ್ಸ್ :)

ನಂಗೆ ಇನ್ನೂ ಚೆನ್ನಾಗಿ ನೆನ್ಪಿದೆ!

ಆಗ ಮಳೆಗಾಲ, ಬೆಂಗಳೂರಿನ ಥರಹ ಎಲ್ಲ ಸೌಕರ್ಯವಿರೋ, ಮುಖ್ಯವಾಗಿ ಬೆಳಕಿರೋ ಹಳ್ಳಿಯಲ್ಲ. ಆಗ ನಂಗೆ ಎಷ್ಟು ವರ್ಷಾ? ನಾನು ಆಗ ಊರಲ್ಲಿ ಇದ್ದೆ. (ನನ್ನ ಹುಟ್ಟೂರಾದ ಹಳ್ಳಿ!!)  ಮಳೆಗಾಲದಲ್ಲಿ ಪವರ್ ಕಟ್ಟು! ಮಳೆಗಾಲದ ಐದು ತಿಂಗಳಲ್ಲಿ ಐದು ದಿನ ಕರೆಂಟ್ ಇದ್ರೆ ಹೆಚ್ಚು! ಪರಿಸ್ಥಿತಿ!!

ನಾನು ಊಟಕ್ಕೆ ಕೂತಿದ್ದೆ. ಕರೆಂಟ್ ಬೇರೆ ಇಲ್ಲಾ, ನಂಗೆ ಆಗ ಇದ್ದಕ್ಕಿದ್ದಂಗೆ ತುಪ್ಪಾ ನೆನ್ಪಾಗೋಯ್ತು, ನಂಗೆ ಊಟಕ್ಕೆ ಈಗ ತುಪ್ಪಾ ಬೇಕು! ನೀನು ಇವತ್ತು ಇಲ್ಲಪ್ಪಾ ನಾಳೆ ಮಾಡಿ ಕೊಡ್ತೀನಿ ಈಗ ಇರೋದ್ರಲ್ಲಿ ಊಟ ಮಾಡು ಅಂತಾ ಎಷ್ಟು ಸಮಾಧಾನ ಮಾಡಿಲ್ಲಾ? ನಾನು ಯಾವ್ದಕ್ಕೂ ಬಗ್ದೇ ಇದ್ದಾಗಾ ಕತ್ತಲೆಯಲ್ಲೇ ಚಿಮಣಿ ಬುರುಡೆ [ಸೀಮೆಎಣ್ಣೆಯನ್ನು ಉಪಯೋಗಿಸಿ ಈಗಲೂ ಹಳ್ಳಿ ಕಡೆ ಬಳಸೋ ದೀಪಗಳು] ಅದ್ನೇ ಹಚ್ಕೊಂಡು ಬೆಣ್ಣೆ ಕಾಯಿಸಿ ಮಧ್ಯರಾತ್ರಿ ಹೊಡ್ಯೋ ಸಿಡಿಲು ಗುಡುಗುಗಳ ಮಧ್ಯೆ, ಹಂಚಿನ ಮನೆಯ ಮೇಲಿಂದ ಮಧ್ಯೆ ತೊಟ್ಟಿಕ್ಕೋ ನೀರಿನ ನಡುವೆಯೇ ತುಪ್ಪ ಮಾಡಿ ಬಿಸಿ ಬಿಸಿ ಅನ್ನಕ್ಕೆ ಉಪ್ಪು ತುಪ್ಪ ಜೀರಿಗೆ  ನಿಂಬೆಹಣ್ಣು ಹಾಕಿ ಕಲಸಿ ತಿನ್ಸಿದ್ದು ಇವತ್ತಿಗೂ ನೆನಪಿದೆ; ಅಲ್ಲೀ ತನಕಾ ನಾನು ಮರದ ಮಣೆಯ ಮೇಲೆ ಚಕ್ಲೀ ಪಟ್ಟೆ [ಬೆಂಗ್ಳೂರಿನ ಭಾಷೇಲೀ ಚಕ್ಳಂ ಬಕ್ಳ ಅಂತಾ ಏನೋ ಹೇಳ್ತಾರೆ- ನೆಲದ ಮೇಲೆ ಎರಡೂ ಕಾಲನ್ನ ಒಂದರೊಳಗೊಂದನ್ನು ಸಿಕ್ಕಿಸಿ ಕುಳಿತುಕೊಳ್ಳೋದು] ಹಾಕ್ಕೊಂಡು ಕೂತಿಲ್ಲಾ?! ಈಗ ನೆನೆಸಿಕೊಂಡರೆ ಎಷ್ಟು ಖುಶೀ ಆಗತ್ತೆ ಗೊತ್ತಾ? ಅದ್ರ್ ಮಧ್ಯೇನೆ ಪಾಪಾ ಅಮ್ಮಂಗೆ ಇಷ್ಟೆಲ್ಲಾ ಕಷ್ಟಾ ಕೊಟ್ನಾ ಅಂತಾನೂ ಅನ್ಸತ್ತೆ! ಈಗ ಎಲ್ಲೋ ಮೂಲೇಲೀ ಆಂಧ್ರಾ ಸ್ಟೈಲ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋದಾಗಾ ದಾಲ್ ಮೇಲೆ ಎರಡು ಚಮಚಾ ತುಪ್ಪಾನಾ ಭಿಕ್ಷೆಗೆ ಹಾಕೋ ಥರಾ ಹುಯ್ತಾರಲ್ಲಾ ಆಗೆಲ್ಲಾ ನಂಗೆ ಘಟನೆ ನೆನ್ಪಿಗೆ ಬಂದು ನಾನು ಕಾಲಕ್ಕೆ ಓಡಿ ಹೋಗ್ತೀನಿ! ಆಗ ಕೇವಲ ಕಣ್ಣಲ್ಲಿ ಸಣ್ಣ ಪೊರೆಯ ನೀರು ಬಿಟ್ಟು ಮತ್ತೇನೂ ಉತ್ತರವಿರಲ್ಲ ನನ್ನ ಹತ್ತಿರ!

ಮತ್ತೊಂದನ್ನಾ ನೆನಪಿಸಿಕೊಳ್ಳಲೇ ಬೇಕು! ಆಗ ನಾನು ನಾಲ್ಕನೇ ಕ್ಲಾಸು ಇರ್ಬೋದು; ನಮ್ಮೂರಿನ ಮಳೆಗಾಲಕ್ಕೆ ಟೀ ವೀ; ಫೋನು ಫ್ಯಾನು ಲೈಟು ಹಾಳಾಗೋದೇನೂ ಹೊಸಾ ವಿಷ್ಯಾ ಅಲ್ಲಾ, ಆಗ ನಂದು ಒಂದು ಅಪ್ಪಾ ತೆಗೆಸಿಕೊಟ್ಟಿರೋ ಕ್ಯೂಟ್ ಕ್ಯಾಸಿಯೋ ವೈಟ್ ಡಯಲ್ ವಾಚು ಕೆಲ್ಸಾ ಮಾಡ್ದೆ ನಿಂತೋಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಅಪ್ಪಾ ಕರೆಂಟ್ ಇದ್ದಾಗ್ಲೇ ಇಸ್ತ್ರಿ ಮಾಡೋಕೆ ಅಂತಾ ಎಲ್ಲಾ ಬಟ್ಟೆ ರಾಶಿ ಹಾಕಿ ಇಸ್ತ್ರಿ ಪೆಟ್ಟಿಗೆ ನಾ ಪ್ಲಗ್ ಗೆ ಸಿಕ್ಸಿ ಎಲ್ಲೋ ಹೋಗಿದ್ರು. ನಾನು ನನ್ ಮಾಸ್ಟರ್ ಮೈಂಡ್ ಉಪಯೋಗಿಸಿ ವಾಚನ್ನಾ ಹೆಂಗೆಲ್ಲಾ ನಾನಾಗೇ ಸರೀ ಮಾಡ್ಕೊಂಡು ನಿಮ್ಮತ್ರ ಹೊಗಳಿಸಿಕೊಳ್ಬೋದು ಅಂತಾ ಸ್ಕೆಚ್ ಹಾಕ್ತಾ ಇದ್ದೆ. ಆಗ ತಲೆಗೆ ಬಂದಿದ್ದೇ ಇಸ್ತ್ರಿ ಪೆಟ್ಟಿಗೆಯ ಬ್ಯಾಕ್ ಗೆ ನನ್ ಹಾಳಾದ ವಾಚ್ ಬ್ಯಾಕ್ ತಾಗಿಸಿ ಹಿಡ್ಕೊಂಡ್ರೆ ಅದು ಬಿಸಿ ಆಗಿ ವಾಚ್ ದು ಬ್ಯಾಟರಿ ಏನಾದ್ರೂ ನೀರಿಗೆ ಶೀತ ಆಗಿದ್ರೆ ಸರಿ ಹೋಗ್ಬೋದು ಅನ್ನೋ ನನ್ನ ವಿಚಾರಾ, ಸರೀ ಏನ್ಮಾಡೋದು? ಹಂಗೆ ಮಾಡ್ದೆ! ಸ್ವಲ್ಪಾ ತಾಗಿಸಿ ಹಿಡ್ಕೊಂಡು ನೋಡ್ದೆ, ಸಾಕಪ್ಪಾ ಹಾಳಾದ್ರೆ ಕಷ್ಟಾ ಅಂತಾ ಚೂರು ಕೈಗೆ ತಾಗ್ಸಿ ನೋಡ್ದೆ, ಚೂರು ಬಿಸಿ ಬಿಸಿಯಾಗಿ ನಂಗೆ ಮಜಾ ಕೊಡ್ತು, ಮತ್ತೆ ಹಂಗೆ ಮಾಡೋದು, ಕೈ ಗೆ ಹಿಡ್ಯೋದು, ಮತ್ತೆ ಬಿಸಿ ಮತ್ತೆ ಕೈ, ಅದೇ ನಂಗೆ ಆಟ ಆಗೋಯ್ತು, ಒಂದೈದು ನಿಮಿಷಾ ಹಂಗೆ ಮಾಡ್ದೆ! ಅಷ್ಟೊತ್ತಿಗೆ ಅಮ್ಮಾ ನನ್ನಾ ಹುಡುಕ್ಕೊಂಡು ಬಂದ್ರು! ಅದೇ ಟೈಮ್ ಗೆ ಸರಿಯಾಗಿ ಹಾಳಾದ ಹಾಳು ದರಿದ್ರ ವಾಚು ಬೇರೆ ಸರಿಯಾಗಿ ಕೆಲ್ಸಾ ಮಾಡೋಕೆ ಶುರು ಆಯ್ತು! ಸೆಕೆಂಡ್ ಮುಳ್ಳಿನ ಜೊತೆಗೆ ನನ್ ಮುಖದಲ್ಲಿ ಸ್ಮೈಲ್ ಕೂಡಾ ಓಡೋಕೆ ಶುರು ಆಯ್ತು! ಅಮ್ಮನ ಹತ್ತಿರ ನನ್ನ ಸಾಧನೆ ಹೇಳ್ಕೊಳ್ಳೋದು ಬ್ಯಾಡ್ವಾ? ಸರೀ ಮೊದ್ಲು ಅಮ್ಮಂಗೆ ಮಜಾ ಬಿಸಿ ಬಿಸಿಯಾಗೋ ಆಟ ತೋರ್ಸೋಣಾ; ಆಮೇಲೆ ವಾಚ್ ನಾ ನಾನೇ ಸರೀ ಮಾಡ್ಕೊಂಡೆ ಅಂತಾ ಹೊಗಳಿಸಿಕೊಳ್ಳೋಣಾ ಅನ್ಕೊಂಡು ವಾಚ್ ನಾ ತೆಗ್ದು ನಿನ್ ಕೈ ಮೇಲೆ ಇಟ್ಟೆ ನೋಡು, ಹಾಳಾದ ವಾಚು ಅದ್ಕೂ ಮಜಾ ಬಂದಿರ್ಬೇಕು ಸರಿಯಾಗಿ ಬಿಸಿ ಆಗಿತ್ತು, ನಿನ್ ಕೈ ಅವತ್ತು ಹೆಂಗೆ ಸುಟ್ಟಿತ್ತು ಅಲ್ವಾ ಅಮ್ಮಾ?? ನೀನು ಆಹ್ ಅಂದೆ ಅಷ್ಟೇ ಬಿಟ್ರೆ ಮತ್ತೆ ಏನಾದ್ರೂ ಮಾತು ಆಡಿದ್ಯಾ? ನನ್ ಮುಖದಲ್ಲಿರೋ ನಗು ಗಮನಿಸಿ ನನ್ ತಲೆ ಸವರಿ ವಾಚು ಸರೀ ಹೋಯ್ತಾ ಅಂದೆ; ಅಷ್ಟೇ!! ನನ್ನ ನಗುವಲ್ಲೇ ನಿನ್ನ ನಗು; ನಾನು ಅತ್ರೆ ನೀನೂ ಅಳ್ತಿದ್ದೆ! ಸುಮ್ ಸುಮ್ನೆ ಗಾದೆ ಮಾಡಿದಾರಾ? ಊರಿಗೆ ಅರಸನಾದ್ರೂ ತಾಯಿಗೆ ಮಗಾ ಅಂತಾ?! ಆಗ ಅವತ್ತು ನಾನು ನಿಂಗೆ ಸುಟ್ಟಿದ್ದು ಕಲೆ ಎಷ್ಟು ದಿನಾ ಇತ್ತು ಅಲ್ವಾ? ಈಗ್ಲಾದ್ರೂ ಅದು ಹೋಗಿದ್ಯಾ? ನಾನು ಇಷ್ಟು ವರ್ಷಾ ಆದ್ರೂ ಕೇಳೋಕೇ ಮರ್ತು ಹೋಗಿದ್ದೆ ನೋಡು, ಈಗ ಹೇಳು ಉರಿ ಹೆಂಗಿದೆ? ಕಲೆ ಹೋಯ್ತಾ?

ಥರ ನಾನು ನಿಂಗೆ ಎಷ್ಟು ಗೋಳು ಹುಯ್ಕೊಂಡಿಲ್ಲಾ? ಎಷ್ಟು ಕಾಟಾ ಕೊಟ್ಟಿಲ್ಲಾ? ಉತ್ರ ಹೇಳೇ ಅಮ್ಮಾ!! ಈಗ ಇಷ್ಟು ದೊಡ್ಡೋನು ಆದ್ರೂ ಈಗ ನಾನು ಊರಿಗೆ ಬಂದಾಗ್ಲೂ ನನ್ನ ಬಟ್ಟೆ ತೊಳ್ಯೋದು, ಅದ್ನಾ ಒಣಗಿಸಿ ಇಸ್ತ್ರಿ ಮಾಡಿ ಮಡಚಿಟ್ಟು ಬ್ಯಾಗಿಗೆ ತುಂಬಿ ಮತ್ತೆ ನಂಗೆ ಬಟ್ಟೆ ಹಾಕ್ಕೊಳೋಕ್ಕೆ ಮನಸು ಬರಲ್ಲಾ ಹಂಗೆ ಮಾಡಿ ಇಡ್ತೀಯಲ್ಲಾ; ಚೆಂದ ಅನುಭವಕ್ಕೆ ಪ್ರೀತಿಗೆ ನಾನು ಏನಂತಾ ಹೆಸರಿಡ್ಲೀ, ನಿಂಗೆ ವಾಪಾಸ್ ಏನು ಕೊಡ್ಲೀ?!

ಮನೆಯೇ ಮೊದಲ ಪಾಠ ಶಾಲೆ ; ತಾಯಿಯೇ ಮೊದಲ ಗುರು, ಎಷ್ಟು ಸತ್ಯ!! ನೀನ್ ನಂಗೆ ಏನೇನ್ ಹೇಳ್ ಕೊಟ್ಟಿಲ್ಲ ಜೀವನಕ್ಕೆ, ಬದುಕಿಗೆ ಬೇಕಾಗಿರೋವಂಥದ್ದು, ತಿನ್ನೋ ಅಡಿಗೆಯಿಂದ ಹಿಡಿದು, ಹಾಕೋ ಬಟ್ಟೆಯ ತನಕ, ಬೆಳಿಗ್ಗೆ ಎದ್ದು ಹಲ್ಲು ಉಜ್ಜೋದ್ರಿಂದಾ, ಸ್ನಾನಾ ಮಾಡೋ ತನಕ, ಮಾತು ಆಡೋದು, ನಡ್ಯೋದು, ಬರ್ಯೋದು ಓದೋದು, ಆಟ ಆಡೋದು, ಸಮಾಜಕ್ಕೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗೋಕೆ ಬೇಕಾದ ಗುಣಗಳು! ಇನ್ನು ಏನೇನು ಅಂತಾ ಪಟ್ಟಿ ಮಾಡ್ತಾ ಹೋಗ್ಲೀ ಅಲ್ವಾ?

ನಿಂಗೆ ಫೇಸ್ಬುಕ್ಕು, ಫೇಸ್ಬುಕ್ಕನ್ನಾ ಉಪಯೋಗಿಸೋರ್ನಾ ಕಂಡ್ರೆ ಆಗಲ್ಲಾ ಅಂತಾ ಗೊತ್ತು, ನಿನ್ನ ಫೋಟೋ ಹಾಕಿರೋದಕ್ಕೂ ನಂಗೆ ಬೈತೀಯಾ ಅಂತಾನೂ ಗೊತ್ತು, ಸುಮ್ನೆ ತಲೆ ತಗ್ಸಿ ಬೈಸ್ಕೊತೀನಿ ಅಷ್ಟೇ :)

ಆದ್ರೆ ನಂಗೆ ನಿನ್ಮೇಲೆ ಪ್ರೀತಿ ಜಾಸ್ತಿ ಅಲ್ವಾ? ಅದ್ಕೆ ನಾಲ್ಕು ಅಕ್ಷರಾ, ನಿನ್ ಫೋಟೋದ್ ಜೊತೆ!

ನಿನ್ನ ಕೆಲಸದಲ್ಲಿ ಯಾವತ್ತಿನ ತರಹ ಇವತ್ತೂ ಬ್ಯೂಸಿ ಆಗ್ಬೇಡಾ!! ಎಂಜಾಯ್ ಮಾಡು, ಇವತ್ತು ನಿನ್ ದಿನಾ, ನಿನ್ನ ಥರಾ ಇರೋ ಎಲ್ಲ ಅಮ್ಮಂದಿರ ದಿನಾ! :)ಬಾಟಮ್ ಲೈನ್ : ಅಮ್ಮಂದಿರ ದಿನದ ಶುಭಾಶಯಗಳು! ಇಡೀ ಜಗತ್ತಿನ ಎಲ್ಲ ಅಮ್ಮಂದಿರಿಗೆ! ಕೆಟ್ಟ ಮಕ್ಕಳಿರಬಹುದು, ಕೆಟ್ಟ ಅಮ್ಮಂದಿರಿರೋಕೆ ಸಾಧ್ಯಾ ಇಲ್ಲ!

ಎಲ್ಲ ಅಮ್ಮಂದಿರಿಗೂ ಇವತ್ತು ಕೆಲ್ಸಕ್ಕೆ ರಜಾ ಕೊಡಿ; ಹೋಟೆಲ್ ಗೆ ಕರ್ಕೊಂಡು ಹೋಗಿ ಅವಳಿಗಿಷ್ಟಾ ಇರೋ ಊಟ ಕೊಡ್ಸಿ, ಒಂದ್ ಸರ್ಪ್ರೈಸ್ ಗಿಫ್ಟ್ ಕೊಡಿ, ಒಂದು ಒಳ್ಳೆ ಥೀಯೇಟರ್ ಗೆ ಮೂವೀ ಗೆ ಕರ್ಕೊಂಡು ಹೋಗಿ ಅಮ್ಮಂಗೆ ಇಷ್ಟಾ ಆಗೋ ಹೀರೋ ನೋ, ಹೀರೋಯಿನ್ನೋ ಇರೋ ಥರದ್ದು, ಶಾಪಿಂಗ್ ಮಾಡ್ಸಿ, ಒಟ್ನಲ್ ನಿಮ್ಮನ್ನಾ ಇಷ್ಟು ವರ್ಷಾ ಖುಶಿಯಾಗ್ ಇಟ್ಟಿರೋ, ಇನ್ಮುಂದೂ ಖುಷಿಯಾಗಿ ಇಡೋ ನಿಮ್ಮ ಅಮ್ಮಂದಿರನ್ನ ಇವತ್ತಾದ್ರೂ ಖುಷಿಯಾಗಿಡಿ, ಮನೆ ಕೆಲ್ಸಕ್ಕೆ ರಜೆ ಕೊಡಿ, ಫ್ರೆಂಡ್ಸು ಮೂವೀ ಔಟಿಂಗು ಅಡ್ಡಾ ಯಾವಾಗ್ಲೂ ಇರತ್ತೆ, ಇವತ್ತು ಒಂದಿನಾ ಅಮ್ಮಂಗೆ ಟೈಮ್ ಕೊಟ್ಟು ಇಡೀ ದಿನಾ ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡಿ ಅವ್ಳ್ ಮುಖದಲ್ಲಿ ಬರೋ ನಗು ನೋಡೋದ್ಕಿಂತಾ ಹೆಚ್ಗೆ ನಿಮ್ಗೆ ಇನ್ನೇನ್ ಬೇಕು?! ನನ್ ಅಮ್ಮನ್ ಥರಾ ಹೊರ್ಗಡೆ ಬರೋಲ್ಲಾ ಆಗಲ್ಲಾ ಅಂದ್ರೆ ಅವ್ಳಿನ್ನಾ ಒಂದ್ ಕಡೆ ಕೂರ್ಸಿ ನೀವೇ ಅಡಿಗೆ ಮಾಡಿ ಊಟ ಬಡ್ಸಿ ನೋಡಿ, ಮನೆ ಕ್ಲೀನಿಂಗು, ಪಾತ್ರಾ ಬಟ್ಟೆ ಎಲ್ಲಾ ಕೆಲಸಾನೂ ಇವತ್ತು ಒಂದಿನಾ ಮಾಡಿ ನೋಡಿ :)ಇನ್ನು ನನ್ನಮ್ಮಾ: ಈಗಿನ ಪ್ರಪಂಚದ ಯಾವ ಹೊಸಾ ವಸ್ತುಗಳಿಗೂ ಒಗ್ಗದ, ಬೇಸಿಕ್ ಮೊಬೈಲ್ ಹ್ಯಾಂಡ್ ಸೆಟ್ಟನ್ನೂ ಉಪಯೋಗಿಸೋಕೆ ಬಾರದ, ಫೇಸ್ಬುಕ್ ಅಕೌಂಟ್ ಇಲ್ಲದ, ಥಿಯೇಟರ್ ಸಾಯ್ಲೀ, ಟೀ ವೀ ಲೀ ಬರೋ ಧಾರಾವಾಹಿ, ಸೀರಿಯಲ್ಲೂ, ರಿಯಾಲಿಟಿ ಶೋ, ಪಿಚ್ಚರ್ ಕೂಡ ನೋಡದ, ಹಳೆ ರೇಡಿಯೋ ದಲ್ಲಿ ಬರೋ ಗೊರ್ ಗೊರ್ ಅನ್ನೋ ದೂರದ ಧಾರವಾಡದ ಸ್ಟೇಷನ್ ಯಾರದೋ ಶಾಸ್ತ್ರೀಯ ಸಂಗೀತವನ್ನು ಕೇಳ್ಕೊಂಡು ನಿನ್ನ ಲೋಕದ ರಂಗೋಲಿ, ಹಳೇ ಹಾಡು [ಶುಭ ಕಾರ್ಯದಲ್ಲಿ/ ಕಾರ್ಯಕ್ರಮದಲ್ಲಿ ಹೆಂಗಸರು ಯಾವುದೇ ವಾದ್ಯ ಹಿಮ್ಮೇಳಗಳಿಲ್ಲದೆ ಹಾಡೋ ಹಾಡು - ಉತ್ತರ ಕನ್ನಡದ ಕಡೆ ಜಾಸ್ತಿ, ನಾನು ನೋಡಿದ ಹಾಗೆ] ಹಾಡ್ಕೊಂಡು ಬರ್ಕೊಂಡು, ನಿನ್ನದೇ ಮಕ್ಕಳ ಥರಾ ಇರೋ ನಿಂಬೆ ಗಿಡ, ಸೇವಂತಿಗೆ, ಗುಲಾಬಿ ಗಿಡಕ್ಕೆ ನೀರು ಗೊಬ್ಬರ ಹಾಕ್ಕೊಂಡು, ಮನೆಯವರಿಗೆಲ್ಲಾ ಅಡಿಗೆ, ಊಟ ಮತ್ತದೇ ಮಾಮೂಲಿ ಕೆಲಸವಾ? ನಾನ್ ಅಲ್ಲಿ ಇದ್ರೆ ಇಲ್ಲಿ ಇಷ್ಟೊಂದು ಹೇಳಿದ ಹಾಗೆ / ಹೇಳಿದ್ರಲ್ಲಿ ಒಂದಾದ್ರೂ ಕೆಲ್ಸಾ ಮಾಡ್ ಕೊಡ್ತಿದ್ದೆ!! ಆದ್ರೆ ಏನ್ ಮಾಡ್ಲೀ, ನೀನ್ ಅಲ್ಲಿ ನಾನ್ ಇಲ್ಲಿ :) ಇಲ್ಲಿಂದಾನೇ ನಿಂಗೆ ಮತ್ತೊಮ್ಮೆ ನನ್ನ ಪ್ರೀತಿಯ ಅಪ್ಪುಗೆ - ಅಮ್ಮಂದಿರ ದಿನದ ಶುಭಾಶಯಗಳು ಅಮ್ಮಾ -- ಅಟ್ಲೀಸ್ಟ್ ಫೋನ್ ಮಾಡಿ ಆದ್ರೂ ವಿಶ್ ಮಾಡೋಣ ಅಂದ್ರೆ ಮನೆ ಲ್ಯಾಂಡ್ ಲೈನ್ ಹಾಳಾಗಿ ಹದಿನೈದು ದಿನಾ ಆಯ್ತು, ಅಪ್ಪನ ಮೊಬೈಲ್ ಗೆ ಮೊದ್ಲೇ ಮನೆಲ್ಲಿ ನೆಟ್ವರ್ಕ್ ಬರಲ್ಲಾ!!! ಆಹಾ ಏನ್ ಕಾಂಬಿನೇಷನ್ನು, ಸರೀ ಹೋಯ್ತು! ಟೆಲಿ ಪತಿ ಇಂದಾ ಆದ್ರೂ ಮನೆ ಲ್ಯಾಂಡ್ ಫೋನು ಸರೀ ಆಗ್ಲೀ, ಇಲ್ಲಾ ಅಂದ್ರೆ ನೀನೇ ನೆಟ್ವರ್ಕ್ ಇರೋ ಏರಿಯಾ ಗೆ ಬಾ :) ನಿನ್ನ ಧ್ವನಿ ಕೇಳಿ ನಿಂಗೆ ವಿಶ್ ಮಾಡೋ ಭರದಲ್ಲಿ ನಿನ್ನ ಮಗ!