Wednesday, July 06, 2016

ಈ ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.



ಜಗತ್ತು ನಮಗೆ ಕೊಟ್ಟಿರುವ ಕುತೂಹಲ ಮತ್ತು ಕ್ರೌರ್ಯಕ್ಕೆ ನಾನು ಹಲವು ಸಲ ಮೌನಿಯಾಗಿದ್ದೇನೆ.
ಇವತ್ತೂ ಸಹ ಹಾಗೆಯೇ ಆಯಿತು.
ನಾನು ಮಾಮೂಲಿಯಾಗಿ ಒಂದ್ ಟೀ ಷರ್ಟ್, ಒಂದ್ ಥ್ರೀ ಫೋರ್ಥ್ ಹಾಕ್ಕೊಂಡು ಕಿವೀಲೀ ಈಯರ್ ಫೋನ್ಸ್ ಇಟ್ಕೊಂಡು ಹಾಡು ಕೇಳ್ಕೊಂಡು ಹೋಗ್ತಾ ಇದ್ದೆ. ತಿಂಡಿ ತಿನ್ನೋಣ ಅಂತನಿಸಿ ಒಂದು ಚಿಕ್ ಕ್ಯಾಂಟೀನ್ ಒಳಗೆ ಹೋದೆ. ಅಲ್ಲಿ ಒಬ್ಬ ಸುಮಾರು ಮೂವತ್ತು ಮೂವತ್ತೆರಡು ಪ್ರಾಯದ ಗಂಡಸಿದ್ದ. ಸುಕ್ಕು ಸುಕ್ಕಾದ ಬಟ್ಟೆ, ಸರಿಯಾದ ಬಣ್ಣ, ಇಸ್ತ್ರಿ ಕೂಡ ಇಲ್ಲದೇ ಮಂಕಾಗಿದ್ದ ಬಿಳೀ ಷರ್ಟು ಕಪ್ಪು ಬಣ್ಣದ ಸಾಧಾರಣ ಪ್ಯಾಂಟ್ ಹಾಕ್ಕೊಂಡು ಹಲ್ ಕಿಸ್ಕೊಂಡ್ ಸಾರ್... ಏನ್ ಕೊಡ್ಲೀ ಅಂದ...
ನಾನ್ ಏನೇನಿದೆ ಅಂದೆ..
ಇಡ್ಲೀ ವಡೆ ಪುಲಾವ್ ಫಡ್ಡು .. ದೋಸೆ ಖಾಲಿ ಸಾರ್ ಅಂದ.
ನಂಗ್ ಫೋನ್ ಬಂತು.. ನಾನ್ ಆಚೆ ಬಂದು ಇಂಗ್ಲೀಷಿನಲ್ಲಿ ಮಾತಾಡಿ ಮುಗಸ್ದೆ. ಇವನು ಅದ್ಯಾವ ಮಾಯದಲ್ಲಿ ನಾನು ಮಾತಾಡಿದ್ದು ಕೇಳಿಸಿಕೊಂಡನೋ ಗೊತ್ತಿಲ್ಲ. ನಾನ್ ವಾಪಾಸ್ ಬರೋದ್ರೊಳ್ಗೆ ಸಾರ್ ಯು ಹ್ಯಾವಂಟ್ ಗಿವನ್ ಯುವರ್ ಆರ್ಡರ್ ಯೆಟ್, ವಾಟ್ ವುಡ್ ಯು ಲೈಕ್ ಟು ಹ್ಯಾವ್ ಸರ್ ಅಂದ...
ನಾನು ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ.
ನಿಂತುಕೊಂಡ ಮೆಟ್ಟಿಲುಗಳಿಂದ ಜಾರಿ ಬಿದ್ದಿಲ್ಲವಷ್ಟೇ.
ಮನಸಲ್ಲೇ ಲೆಕ್ಕಾಚಾರ ಹಾಕ್ತಾ ಇದ್ದೆ. ಮನೆ ಬಿಟ್ಟು ಓಡಿ ಬಂದಿರ್ತಾನೆ, ಹೆಚ್ಚು ಅಂದ್ರೆ ಹತ್ತನೇ ತರಗತಿ ಓದಿರ್ತಾನೆ. ಸ್ವಲ್ಪ ಇಂಗ್ಲೀಷ್ ಟಚ್ ಇರತ್ತೆ. ಅದ್ಕೆ ಮಾತಾಡ್ದಾ ಅಂದ್ಕೊಂಡೆ. ಅದ್ರೆ ಇಷ್ಟೊಂದು ವ್ಯಾಕರಣಬದ್ಧವಾಗಿ.. ಉಹೂಂ..!!
ಸರಿ ತಿಂಡಿ ತಿಂತಾ ತಿಂತಾ ತಡ್ಕೊಳ್ಳೋಕಾಗ್ದೇ ಕೇಳೇಬಿಟ್ಟೆ.
ಅವ್ನು ಚಟ್ನಿ ಖಾಲಿ ಆಗಿದೆ ಅಂತಾ ರುಬ್ತಾ ಇದ್ದಾ.
ಏನ್ ಓದಿರೋದು ನೀವು ಅಂದೆ. ಅವ್ನಿಗೆ ಕೇಳ್ಸಿಲ್ಲಾ.
ಮತ್ತೆ ಏನ್ ಓದಿದೀರಾ ನೀವು ಅಂದೆ.
ಅವ್ನು ಮಿಕ್ಸಿ ಆಫ್ ಮಾಡಿ ಯಾಕ್ಸಾರ್ ಅಂದಾ..
ನಾನ್ ಹಿಹಿಹಿ ಯಾಕೂ ಅಲ್ಲಾ ಸುಮ್ನೇ ಅಂದೇ..
ಚಟ್ನೀನಾ ಹಾಕ್ಬುಟ್ಟು ಈಗ್ ಮಾಡಿದ್ದು ಹೆಂಗಿದೆ ಹೇಳಿ ಅಂದಾ.. ಸೂಪರ್ ಅಂದೆ.
ಅವನೇ ಮುಂದುವರೆದು ಸಾರ್ ನಾನು ರೆಗ್ಯೂಲರ್ ಎಂಬೀಏ ಇನ್ ಫಿನಾನ್ಸ್ ಅಂದಾ.
ನಾನ್ ಷಾಕ್ ಆದೆ.
ಮತ್ತೆ ಇಲ್ಲಿ ಹೆಂಗೆ ಥರಾ ಅಂದೆ.
ಸಾರ್ ನಮ್ಮಪ್ಪಂದೇ ಹೊಟೆಲ್ ಹೆಲ್ಪ್ ಮಾಡೋದ್ರಲ್ಲೇನು ತಪ್ಪು ಅಂದಾ.
ನಾನು ಮೂಕನಾಗಿ ನಿಂತಿದ್ದೆ.
ನೀವ್ ಬೇರೆ ಎಲ್ಲೂ ಕೆಲ್ಸಾ ಮಾಡಲ್ವಾ ಅಂದೆ.
ಯಾಕ್ ಸಾರ್ ಮಾಡ್ತೀನಲ್ಲಾ..
ನಾನು ವಿಪ್ರೋದಲ್ಲಿ ಟೀಂ ಲೀಡ್ ಅಂದ.
ನಾನು ಉಗುಳು ನುಂಗಿಕೊಂಡೆ.
ಪ್ಯಾಕೇಜ್ ಚೆನ್ನಾಗಿರ್ಬೇಕಲ್ವಾ ಅಂದೆ. ಟೇಕ್ ಹೋಂ ಸ್ಯಾಲರಿ ಕೂಡಾ ಹೇಳ್ದಾ. ನಂಗೆ ಅಬ್ಬಾ ಅನಿಸ್ತು.
ಮುಂದಿನ ಹತ್ತು ನಿಮಿಷದಲ್ಲಿ ಸರ್ವರ್ ಡೇಟಾಬೇಸ್ ಷೇರ್ ಮಾರ್ಕೇಟ್, ರಿಮೋಟ್ ಸೆಸ್ಷನ್ಸ್ ಸಾಫ್ಟ್ವೇರ್ ಡೆವಲಪಿಂಗ್, ನೆಟ್ವರ್ಕಿಂಗ್, ಜಾವಾ ಕೋರ್ ವಿಂಡೋಸ್ ಎಲ್ಲದರ ಎಲ್ಲ ವಿಷಯಗಳ ಟೆಕ್ನಿಕಲ್ ಥಿಂಗ್ಸ್ ಬಗ್ಗೆ ಮಾತಾಡಿದ್ವಿ.
ನೀವ್ ಎಲ್ಲಿ ಕೆಲ್ಸಾ ಮಾಡೋದು ಅಂದಾ..
ಸಾರ್ ವಿಪ್ರೋಗ್ ಬರ್ತೀರಾ ಅಂದ್ರೆ ಹೇಳಿ ಪಕ್ಕಾ ರೆಫರ್ ಮಾಡ್ತೀನಿ ಅಂದಾ...
ಸರಿ ಲೇಟಾಯ್ತು, ಈಗ್ ಕ್ಯಾಬ್ ಬರತ್ತೆ ಮನೆಗೆ ಹೋಗಿ ಡ್ರೆಸ್ ಛೇಂಜ್ ಮಾಡಿ ಹೊರಡ್ಬೇಕು ಸಾರ್ ಆಫೀಸಿಗೆ, ಇಟ್ಸ್ ನೈಸ್ ಟು ಮೀಟ್ ಯು ಸಾರ್ ಅಂತಾ ಹೇಳಿ ಹೊಂಟೋದ ಆಸಾಮಿ....
ಆಗಷ್ಟೇ ಹೊಟೆಲ್ಗೆ ಬಂದ ಅವರ ಅಪ್ಪ ಅಮ್ಮ ನಮ್ ಮಗಾ ಸಾರ್ ಅಂದ್ರು, ಅವರ ಕಣ್ಣಲ್ಲಿ ಮಗನ ಬಗೆಗಿದ್ದ ಹೆಮ್ಮೆ ಹೊಳೆಯುತ್ತಿತ್ತು.
ಇಡ್ಲೀ ಚಟ್ನೀ ಹಾಕ್ಕೊಟ್ಟ, ಶಾಲೆಗೆ ಹೋಗಿರದ ಮುಖವನ್ನು ಹೊಂದಿದ ಒಬ್ಬ ವ್ಯಕ್ತಿಯ ಹಿಂದೆ ಮತ್ತು ಒಳಗೆ ಇಷ್ಟೊಂದು ಗುಟ್ಟಿವೆಯಾ ಅಂತಾ ತಲೆ ಕೆರ್ಕೊಂಡು ನನ್ ಹಳೇ ಥ್ರೀ ಫೋರ್ಥ್ ಗೆ ಕೈ ಉಜ್ಕೊಂಡ್ ಮನೆ ಕಡೆ ಬಂದೆ..
ಜಗತ್ತು ನಮ್ಮೆದೆರು ಪ್ರತೀ ಕ್ಷಣವೂ ವಿಸ್ಮಯಗಳನ್ನು ಎಸೆಯುತ್ತಿರುತ್ತೆ.
ನಮಗದನ್ನು ಸೂಕ್ಷ್ಮ ಕಣ್ಣುಗಳಿಂದ ನೋಡುವ, ಪ್ರೀತಿಯಿಂದ ಅಪ್ಪಿಕೊಳ್ಳುವ, ಸ್ವೀಕರಿಸುವ ಮನೋಭಾವವಿರಬೇಕಷ್ಟೇ 😊