Wednesday, April 29, 2020

ಇರ್ಫಾನ್ ಖಾನ್ : ಮಿನುಗುವುದನ್ನು ಅರ್ಧಕ್ಕೇ ನಿಲ್ಲಿಸಿದ ನಕ್ಷತ್ರ!

Irrfan Khan :) 


ಒಬ್ಬ
ಒಳ್ಳೆಯ ನಟನಾಗಲು, ಅಧ್ಬುತ ಕಲಾವಿದನಾಗಲು ನೂರು ಸಿನಿಮಾಗಳನ್ನೇ ಮಾಡಬೇಕೆಂದೇನಿಲ್ಲ. ಮಾಡಿದ ಸೂಪರ್ ಹಿಟ್ ಬೆರಳೆಣಿಕೆಯ ಸಿನಿಮಾಗಳಲ್ಲಿ ತನ್ನ ತಾಕತ್ತು, ಅಭಿನಯ ಸಾಮರ್ಥ್ಯ ಏನೆಂಬುದನ್ನು ತೋರಿಸಿದ ಕೆಲವೇ ನಟರುಗಳಲ್ಲಿ ಒಬ್ಬ ''ಇರ್ಫಾನ್ ಖಾನ್''

ಇರ್ಫಾನ್ ರಾಜಸ್ಥಾನದ ಜೈಪುರದಲ್ಲಿ ಖಜೂರಿಯ ಎಂಬ ಹಳ್ಳಿಯಲ್ಲಿ 1967 ಜನವರಿ 7 ರಂದು ದಂಪತಿಗಳಾದ ಬೇಗಂ ಖಾನ್ ಮತ್ತು ಜಗೀರ್ದಾರ್ ಖಾನ್ ಗೆ ಜನಿಸುತ್ತಾರೆ. ಇರ್ಫಾನ್ ಖಾನ್ ತಂದೆ ಒಂದು ಸಣ್ಣ ಟೈರ್ ಅಂಗಡಿಯನ್ನು ಹೊಂದಿರುತ್ತಾರೆ.

ಬಾಲ್ಯದಲ್ಲಿ ಸಿ.ಕೆ ನಾಯುಡು ಕ್ರಿಕೆಟ್ ಟೂರ್ನ್ಮೆಂಟ್ ಗೆ ಆಯ್ಕೆಯಾದರೂ ಅದರಲ್ಲೇ ಮುಂದೆ ಸಾಗಲು ಹಣದ ಕೊರತೆಯಿರುವುದರಿಂದ ಖಾನ್ ಗೆ ಕ್ರಿಕೆಟ್ ಜಗತ್ತಲ್ಲಿ ಮುಂದೆ ಸಾಗಲು ಆಗುವುದೇ ಇಲ್ಲ. ಮೊದಲಿಂದಲೂ ಅಭಿನಯದ ಹುಚ್ಚು ಇದ್ದ ಖಾನ್ 1984 ರಲ್ಲಿ ನವ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಲ್ಲಿ ಎಂ. ಮಾಡಲು ಸೇರುತ್ತಾರೆ ಹಾಗೂ ವಿದ್ಯಾರ್ಥಿ ವೇತನವನ್ನೂ ಗಳಿಸುತ್ತಾರೆ.

ಅಲ್ಲಿಂದ ಮುಂದೆ ಮುಂಬೈ ಗೆ ಬಂದ ಖಾನ್ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಲು ಶುರು ಮಾಡುತ್ತಾರೆ. 1985-1986 ಸಮಯದಲ್ಲಿ ಶ್ರೀಕಾಂತ್, ಭಾರತ್ ಏಕ್ ಖೋಜ್, ಚಾಣಕ್ಯ, ಚಂದ್ರಕಾಂತ, ಡರ್ , ಟೋಕಿಯೋ ಟ್ರಯಲ್ ಮುಂತಾದ ಸೀರಿಯಲ್ ಗಳಲ್ಲಿ ನಟನೆ ಮಾಡಿ ಹೆಸರು ಮಾಡುತ್ತಾರೆ. 1988 ರಲ್ಲೇ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದರೂ ಟಿವಿ ಗಳಲ್ಲಿ ಅಭಿನಯ 2016 ವರೆಗೂ ಮುಂದುವರೆಯಿತ್ತದೆ.

ಕೆಲವು ಬ್ರಿಟಿಷ್ ಸಿನಿಮಾ ಮತ್ತು ಇಂಗ್ಲಿಷ್ ಸಿನಿಮಾ, ಹಲವು ಹಿಂದಿ ಸಿನಿಮಾಗಳಲ್ಲಿನ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ನಟನಿಗೆ ಸಂದಿವೆ. ಎಲ್ಲ ಪ್ರಶಸ್ತಿಗಳಿಗೂ ನಟ ಖಂಡಿತ ಅರ್ಹ.

1988 ರಲ್ಲಿ ಮೊದಲು ಸಲಾಂ ಬಾಂಬೆ ಇಂದ ಆರಂಭವಾದ ಸಿನಿಮಾ ಜಗತ್ತು ಇತ್ತೀಚಿನ (2020) ಅಂಗ್ರೇಜಿ ಮೀಡಿಯಂ ವರೆಗೂ ನಿಲ್ಲದೇ ಸಾಗುತ್ತ ಬರುತ್ತದೆ. 2002 ರಲ್ಲಿ ಬಂದ ಬೋಕ್ಷು ದಿ ಮಿಥ್ ಎಂಬ ಇಂಡಿಯನ್ ಇಂಗ್ಲಿಷ್ ಸಿನಿಮಾ (ಅದರಲ್ಲಿನ ತಾಂತ್ರಿಕ ಪಾತ್ರ), 2007 ರಲ್ಲಿನ ಲೈಫ್ ಇನ್ ಮೆಟ್ರೋ, 2008 ರಲ್ಲಿನ ಸ್ಲಂ ಡಾಗ್ ಮಿಲ್ಲೇನಿಯರ್ (ಪೊಲೀಸ್ ಪಾತ್ರ ) 2012 ಪಾನ್ ಸಿಂಗ್ ತೋಮರ್ ಹಾಗೂ ಲೈಫ್ ಆಫ್ ಪೈ 2013 ಡೀ ಡೇ ಮತ್ತು ಲಂಚ್ ಬಾಕ್ಸ್ 2015 ಪೀಕು 2017 ರಲ್ಲಿ ಬಂದ ಹಿಂದಿ ಮೀಡಿಯಂ ಹಾಗೂ ವರ್ಷದ ಅಂಗ್ರೇಜಿ ಮೀಡಿಯಂ ವರೆಗಿನ ಖಾನ್ ಅಭಿನಯವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ ? ಕೋಟಿಗಟ್ಟಲೆ ಹೃದಯಗಳನ್ನು ನಗಿಸಿ ಅಳಿಸಿ ಹೋದ ಅಭಿನಯ ಚತುರನಿಗೆ ಶೃದ್ಧಾಂಜಲಿಗಳನ್ನು ಅರ್ಪಿಸುತ್ತೇನೆ.

2005 ರಲ್ಲಿ ಬಂದ ಖಾನ್ ಲೀಡ್ ರೋಲ್ ನಲ್ಲಿ ಮಾಡಿದ ರೋಗ್ ಕ್ರಿಟಿಕ್ಸ್ ನಲ್ಲಿ ಬಹಳ ಹೆಸರು ಮಾಡುತ್ತದೆ. ಖಾನ್ ಅಭಿನಯಕ್ಕೆ ಸಾಕ್ಷಿ ಕ್ರಿಟಿಕ್ಸ್ ಅವರು ಬರೆದ ಒಂದು ಸಾಲು : ''ಇರ್ಫಾನ್ ಕಣ್ಣುಗಳು ಆತನ ಮಾತಿಗಿಂತ ಹೆಚ್ಚು ಮಾತನಾಡುತ್ತವೆ'' ಆತ ಫ್ರೇಮ್ ನಲ್ಲಿದ್ದರೆ ಆತನನ್ನು ನೋಡುವುದು ಹಾಗೂ ಕೇಳುವುದೇ ಒಂದು ಖುಷಿ.

ಇವೆಲ್ಲವುಗಳ ಮಧ್ಯ 1995 ಫೆಬ್ರವರಿ 23 ರಂದು  ಇರ್ಫಾನ್ ಗೆ ಸುತಪಾ ಸಿಕ್ದರ್ ಎನ್ನುವವರ ಜೊತೆ ವಿವಾಹವಾಗುತ್ತದೆ. ಅವರಿಗೆ ಬಬಿಲ್ ಮತ್ತು ಅಯನ್ ಎಂಬ ಇಬ್ಬರು ಮಕ್ಕಳು.

ಲೈಫ್ ಇನ್ ಮೆಟ್ರೋ ಗೆ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ , ಬೆಸ್ಟ್ ಕಮೇಡಿಯನ್, ಸ್ಲಂ ಡಾಗ್ ಮಿಲೇನಿಯರ್ ಗೆ ಬೆಸ್ಟ್ ಔಟ್ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್ , 2011 ರಲ್ಲಿ ಭಾರತದ ನಾಲ್ಕನೇ ದೊಡ್ಡ ಪ್ರಶಸ್ತಿಯಾದ ''ಪದ್ಮ ಶ್ರೀ'' , ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್, CNN-IBN ಇಂಡಿಯನ್ ಆಫ್ ದಿ ಇಯರ್ , ಪಾನ್ ಸಿಂಗ್ ತೋಮರ್ ಗೆ ನ್ಯಾಷನಲ್ ಫಿಲಂ ಅವಾರ್ಡ್, ಲಂಚ್ ಬಾಕ್ಸ್ ಗೆ ಬೆಸ್ಟ್ ಆಕ್ಟರ್ ಅವಾರ್ಡ್ , ಪೀಕು ಗೆ ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋರ್ನ್ ಬೆಸ್ಟ್ ಆಕ್ಟರ್ ಅವಾರ್ಡ್ ಹೀಗೆ ಸಾಕಷ್ಟು ಅವಾರ್ಡ್ ಗಳನ್ನು ಪಡೆದ ಪ್ರಸಿದ್ಧ ಅಪ್ರತಿಮ ನಟ ಬಹುಬೇಗ ತನ್ನ ಜೀವನಕ್ಕೆ ಶುಭಂ ಹೇಳಿದ್ದು ಮಾತ್ರ ವಿಪರ್ಯಾಸ.

2018 ಫೆಬ್ರವರಿ ಯಲ್ಲೇ ಹಲವು ಮಾಧ್ಯಮಗಳು ಈತನಿಗೆ ಬ್ರೈನ್ ಕ್ಯಾನ್ಸರ್ ಇದೆಯೆಂದು ಹೇಳಿದ್ದರು ಆದರೆ ಖಾನ್ ತನ್ನ ಟ್ವಿಟ್ಟರ್ ನಲ್ಲಿ ಎಲ್ಲ ಕಥೆಯನ್ನೂ ಸಂಪೂರ್ಣವಾಗಿ ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಬರೆದುಕೊಳ್ಳುತ್ತಾರೆ. ಮಾರ್ಚ್ 16 2018 ರಲ್ಲಿ ಖಾನ್ ಖುದ್ದಾಗಿ ತನಗೆ ನ್ಯೂರೋಎಂಡೋಕ್ರಯ್ನ್ ಕ್ಯಾನ್ಸರ್ ಎಂಬ ವಿಚಿತ್ರ ಕ್ಯಾನ್ಸರ್ ಇರುವುದಾಗಿಯೂ ಇದು ದೇಹದ ಎಲ್ಲ ಭಾಗಗಳಿಗೂ ಹಬ್ಬುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆಯುತ್ತಾರೆ, ಇದರ ಸಲುವಾಗಿ ಲಂಡನ್ ಗೂ ಹೋಗಿ ಡಾಕ್ಟರ್ ಬಳಿ ಸಲಹೆ ತೆಗೆದುಕೊಳ್ಳುತ್ತಾರೆ.

ಮುಂಬೈ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಕೊಂಡರೂ, ಚಿಕಿತ್ಸೆ ಫಲಕಾರಿಯಾಗದೆ 29 ಏಪ್ರಿಲ್ 2020 ರಂದು 53 ವರ್ಷಗಳ ಜೀವನ, 32 ವರ್ಷಗಳ ಕಲಾ ಜೀವನ ಮುಗಿಸಿ ಲೆಕ್ಕವಿಲ್ಲದಷ್ಟು ಅವಾರ್ಡ್ ಗಳನ್ನೂ ತನ್ನ ಖಾತೆಗೆ ಸೇರಿಸಿ ನೆಮ್ಮದಿಯಾಗಿ ಕಣ್ಣು ಮುಚ್ಚಿದ್ದಾರೆ.

ಮತ್ತೊಂದು ದುಃಖದ ಸಂಗತಿಯೆಂದರೆ ಕೇವಲ ನಾಲ್ಕು ದಿನದ ಹಿಂದೆಯಷ್ಟೇ ಅವರು ಅವರ ಅಮ್ಮನನ್ನು ಕಳೆದುಕೊಂಡಿದ್ದರು. ಅಮ್ಮನ ಹಿಂದೆಯೇ ಮಗ ಹೋಗಿದ್ದು ಮತ್ತೊಂದು ಸೋಜಿಗದ ಹಾಗೂ ಆಶ್ಚರ್ಯದ ವಿಷಯವೇ ಸರಿ.

ಇಷ್ಟು ಅದ್ಭುತವಾದ ನಟ ಕೇವಲ 32  ವರ್ಷಕ್ಕೆ ಇಷ್ಟು ಸಾಧನೆ ಮಾಡಿ, ಇನ್ನು ಹಲವು ವರ್ಷಗಳು ಬದುಕಿದ್ದರೆ ನಮಗೆ ಇನ್ನೂ ಎಂತೆಂಥ ಸಿನಿಮಾಗಳನ್ನು ಕೊಡುತ್ತಿದ್ದರು ಎಂದು ನೆನೆಸಿಕೊಂಡರೇನೇ ದುಃಖವಾಗುತ್ತದೆ.

ಇನ್ನೂ ಯಾರೂ ಇರ್ಫಾನ್ ಖಾನ್ ಗೆ ಲೈಟ್ಸ್ ಕ್ಯಾಮೆರಾ ಆಕ್ಷನ್ ರೋಲಿಂಗ್ ಎಂದು ಹೇಳುವವರಿಲ್ಲ, ಆತನ ಜೀವನದ ಸಿನಿಮಾ ಅರ್ಧಕ್ಕೆ ನಿಂತು ಇಂಟರ್ವಲ್ ಗೆ ಹಾಗೆ ಸುಮ್ಮನೇ  ಎದ್ದು ಹೋದ ನಟನನ್ನು ಕಳೆದುಕೊಂಡ ಬೇಜಾರು ನನ್ನಂಥ ಸಿನಿಮಾ ಪ್ರೇಮಿಗೆ ಯಾವತ್ತೂ ಇದ್ದೆ ಇರುತ್ತದೆ.

ಆತನ ಆತ್ಮ ತಣ್ಣಗಿರಲಿ. ಖಾನ್ ಅಭಿನಯಿಸಿದ ಸಿನಿಮಾಗಳಿಂದ ನಮ್ಮನ್ನೂ ಯಾವತ್ತೂ ಹೀಗೆಯೇ ರಂಜಿಸುತ್ತಿರಲಿ...

#JepeeBhat
#IrrfanKhan

No comments: